ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಕೊಪ್ಪಳ: ಅವಾಚ್ಯ ನಿಂದನೆ : ಮೂವರು ಶಿಕ್ಷಕರ ಅಮಾನತು

ಕೊಪ್ಪಳ: ಅವಾಚ್ಯ ನಿಂದನೆ : ಮೂವರು ಶಿಕ್ಷಕರ ಅಮಾನತು

Sun, 25 Apr 2010 03:13:00  Office Staff   S.O. News Service

ಕೊಪ್ಪಳ ಏ. ೨೪ (ಕರ್ನಾಟಕ ವಾರ್ತೆ) : ಅವಾಚ್ಯ ಪದಗಳಿಂದ ನಿಂದಿಸಿ ಅನುಚಿತವಾಗಿ ವರ್ತಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲಬುರ್ಗಾ ತಾಲೂಕಿನ ಮೂವರು ಶಿಕ್ಷಕರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ವಿ. ರಾಜೇಂದ್ರ ಪ್ರಸಾದ್ ಅವರು ಅಮಾನತುಗೊಳಿಸಿದ್ದಾರೆ.

 

 

ದ್ಯಾಂಪುರದ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಮಹೇಶ್ ಸಬರದ, ಗೊರ್ಲೆಕೊಪ್ಪದ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ವೀರನಗೌಡ ಪಾಟೀಲ ಹಾಗೂ ತುಮ್ಮಲಗುದ್ದಿಯ ಹಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕ ಶರಣೇಗೌಡ ಪಾಟೀಲ ಇವರೆ ಅಮಾನತುಗೊಂಡಿರುವ ಶಿಕ್ಷಕರು. ಈ ಶಿಕ್ಷಕರು ಯಲಬುರ್ಗಾದ ಕ್ಷೇತ್ರ ಸಮನ್ವಯಾಧಿಕಾರಿ ತುಳಸಿರಾಮ ಕುಂಬಾರೆ, ಐ‌ಇ‌ಆರ್‌ಟಿ ಎಸ್.ಜಿ. ಹವಾಲ್ದಾರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎನ್. ಪೊಲೀಸ್ ಪಾಟೀಲ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಇವರ ವಿರುದ್ಧ ಶಿಸ್ತು ಕ್ರಮವನ್ನು ಜರುಗಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಡಿದ ಶಿಫಾರಸ್ಸಿನ ಅನ್ವಯ ಸರ್ಕಾರಿ ಸೇವಾ ನಿಯಂತ್ರಣ ನಿಯಮದ ಮೇರೆಗೆ ಮೂವರು ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

ಡಿ.ಸಿ. ಮತ್ತು ಎಸ್.ಪಿ. ಮಧ್ಯಸ್ಥಿಕೆಯಲ್ಲಿ ಆರೋಗ್ಯ ಕವಚ ಸಿಬ್ಬಂದಿ ಮುಷ್ಕರ ಸ್ಥಗಿತ

 

ಕೊಪ್ಪಳ ಏ. ೨೪ (ಕರ್ನಾಟಕ ವಾರ್ತೆ) : ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಮುಷ್ಕರ ನಿರತರಾಗಿದ್ದ ಆರೋಗ್ಯ ಕವಚ ೧೦೮ ಯೋಜನಾ ಕಾರ್ಮಿಕರ ಮನವೊಲಿಸಿ, ಪುನಃ ಕೆಲಸಕ್ಕೆ ಮರಳುವಂತೆ ಮಾಡುವಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ ಅವರು ಯಶಸ್ವಿಯಾಗಿದ್ದಾರೆ.

ಬಿಜಾಪುರದ ಸಹದ್ಯೋಗಿಯೊಬ್ಬರಿಗೆ ಮಾನಸಿಕ ಹಿಂಸೆ ನೀಡಲಾಗಿದೆ ಎನ್ನುವ ಕಾರಣ ಮುಂದೊಡ್ಡಿ, ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಿನ್ನೆ ಸಂಜೆಯಿಂದ ರಾಜ್ಯಾದ್ಯಂತ ಆರೋಗ್ಯ ಕವಚ ೧೦೮ ಯೋಜನೆಯ ಕಾರ್ಮಿಕರು ಮುಷ್ಕರ ನಿರತರಾಗಿದ್ದರು. ಇದು ಅವಶ್ಯಕ ಸೇವೆಯಾಗಿರುವುದರಿಂದ ಜನ ಸಾಮಾನ್ಯರಿಗೆ ಇದರಿಂದ ತೊಂದರೆಯಾಗುವುದನ್ನು ಪರಿಗಣಿಸಿ, ಸರ್ಕಾರ ಕೂಡಲೆ ಮುಷ್ಕರ ನಿರತ ಸಿಬ್ಬಂದಿಯವರನ್ನು ಕರೆದು, ಅವರು ಪುನಃ ಕೆಲಸಕ್ಕೆ ಹಾಜರಾಗುವಂತೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿತ್ತು. ಅದರಂತೆ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ’೧೦೮’ ಯೋಜನೆಯ ೧೨ ಆಂಬುಲೆನ್ಸ್‌ಗಳಲ್ಲಿ ಕೆಲಸ ಮಾಡುವ ಸುಮಾರು ೪೮ ವಾಹನ ಚಾಲಕರು ಮತ್ತು ಆರೋಗ್ಯ ತಾಂತ್ರಿಕ ತಜ್ಞರು ಕೆಲಸ ಮಾಡುತ್ತಿದ್ದು, ಅವರೆಲ್ಲ ಮುಷ್ಕರ ನಿರತರಾಗಿದ್ದ ಕಾರಣ ಜನಸಾಮಾನ್ಯರಿಗೆ ತೊಂದರೆ ಉಂಟಾಗಿತ್ತು. ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ ಅವರು, ಮುಷ್ಕರ ನಿರತ ಸಿಬ್ಬಂದಿಯನ್ನು ಜಿಲ್ಲಾಡಳಿತದ ಸಭಾಂಗಣಕ್ಕೆ ಕರೆದು, ಅವರ ಮನವಿ, ಅಹವಾಲುಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಜಿಲ್ಲಾ ಮಟ್ಟದಲ್ಲಿ ಪರಿಹರಿಸಬೇಕಾಗಿರುವ ಸಮಸ್ಯೆಗಳನ್ನು ಇಲ್ಲಿಯೇ ಇತ್ಯರ್ಥಪಡಿಸಲಾಗುವುದು. ರಾಜ್ಯ ಮಟ್ಟದಲ್ಲಿ ಇತ್ಯರ್ಥಪಡಿಸಬೇಕಾದ ಬೇಡಿಕೆಗಳನ್ನು ರಾಜ್ಯ ಸರ್ಕಾರಕ್ಕೆ ಕ್ರಮ ಕುರಿತು ಕಳುಹಿಸಲಾಗುವುದು. ಆರೋಗ್ಯ ಕವಚ ಸೇವೆಯು ಅತ್ಯಾವಶ್ಯಕ ಸೇವೆಯಾಗಿರುವುದರಿಂದ, ಕೂಡಲೆ ಕೆಲಸಕ್ಕೆ ಹಿಂದಿರುಗಬೇಕು. ಇಲ್ಲದೆ ಹೋದಲ್ಲಿ ಕಾನೂನು ಅನ್ವಯ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲದೆ ಕಾರ್ಯ ನಿರ್ವಹಿಸುವಲ್ಲಿ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸಿಬ್ಬಂದಿಗಳಿಗೆ ರಕ್ಷಣೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಆಶ್ವಾಸನೆ ನೀಡಿದ ನಂತರ, ಮುಷ್ಕರ ನಿರತ ಸಿಬ್ಬಂದಿಗಳು ಮುಷ್ಕರವನ್ನು ತಕ್ಷಣದಿಂದ ಹಿಂತೆಗೆದುಕೊಂಡು, ಕೆಲಸಕ್ಕೆ ಹಾಜರಾಗಲು ಒಪ್ಪಿಕೊಂಡರು. ಕೆಲಸ ಮರಳುವುದಾಗಿ ಸಭೆಯಲ್ಲಿ ಮುಷ್ಕರ ನಿರತ ಸಿಬ್ಬಂದಿಯ ಪರವಾಗಿ ಮುಖಂಡರಾದ ಗುರುರಾಜ್ ಮತ್ತು ಚನ್ನವೀರಯ್ಯ ಆಶ್ವಾಸನೆ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಕೆ.ವಿ. ಕ್ಯಾಲಕೊಂಡ, ಡಿವೈ‌ಎಸ್‌ಪಿ ವಿಜಯ್ ಡಂಬಳ, ಜಿ.ವಿ.ಕೆ. ಆರೋಗ್ಯ ಕವಚ ಸಂಸ್ಥೆಯ ಕಿರಣ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

 

ಸಿ‌ಇಟಿ ಪರೀಕ್ಷೆ : ನಿಷೇಧಾಜ್ಞೆ ಜಾರಿ

 

ಕೊಪ್ಪಳ ಏ. ೨೪ (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಏ. ೨೮ ಮತ್ತು ೨೯ ರಂದು ಎರಡು ದಿನಗಳ ಕಾಲ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ ೨೦೦ ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಆದೇಶ ಹೊರಡಿಸಿದ್ದಾರೆ.

 

ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯು ಏ. ೨೮ ಮತ್ತು ೨೯ ರಂದು ಕೊಪ್ಪಳದ ಬಾಲಕರ ಸರ್ಕಾರಿ ಪ.ಪೂ. ಕಾಲೇಜು ಹಾಗೂ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ನಡೆಯಲಿದೆ. ಪರೀಕ್ಷೆಯನ್ನು ಸುಗಮವಾಗಿ ನಡೆಯಲು ಅನುಕೂಲವಾಗುವಂತೆ ಪರೀಕ್ಷಾ ದಿನದಂದು ಬೆಳಿಗ್ಗೆ ೯ ಗಂಟೆಯಿಂದ ಸಾಯಂಕಾಲ ೫-೩೦ ರವರೆಗೆ ಪರೀಕ್ಷಾ ಕೇಂದ್ರಗಳ ಸುತ್ತ ೨೦೦ ಮೀ. ವ್ಯಾಪ್ತಿಯಲ್ಲಿ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ ೧೪೪ ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಿಷೇಧಾಜ್ಞೆ ಅನ್ವಯ ಪರೀಕ್ಷಾ ಕೇಂದ್ರ ಸುತ್ತ ೨೦೦ ಮೀ. ವ್ಯಾಪ್ತಿಯಲ್ಲಿ ಯಾವುದೇ ಎಸ್.ಟಿ.ಡಿ., ಮೊಬೈಲ್, ಜೆರಾಕ್ಸ್, ಟೈಪಿಂಗ್ ನಿಷೇಧಿಸಲಾಗಿದೆ. ಅಲ್ಲದೆ ೫ ಜನಕ್ಕಿಂತ ಹೆಚ್ಚು ಜನರು ಒಟ್ಟಿಗೆ ಹಾಗೂ ಗುಂಪಾಗಿ ತಿರುಗಾಡುವುದನ್ನು ನಿಬಂಧಿಸಲಾಗಿದೆ ಎಂದು ನಿಷೇಧಾಜ್ಞೆಯಲ್ಲಿ ತಿಳಿಸಿದೆ.

 

ಗ್ರಾಮ ಪಂಚಾಯತ್ ಚುನಾವಣೆ : ಬ್ಯಾನರ್, ಕಟೌಟ್‌ಗಳಿಗೆ ನಿರ್ಬಂಧ

 

ಕೊಪ್ಪಳ ಏ. ೨೪ (ಕರ್ನಾಟಕ ವಾರ್ತೆ) : ಪ್ರಸಕ್ತ ಗ್ರಾಮ ಪಂಚಾಯತ್ ಚುನಾವಣೆ ಸಂಬಂಧ ಪ್ರಚಾರಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರಚಾರ ಫಲಕಗಳು, ಬ್ಯಾನರ್, ಕಟೌಟ್‌ಗಳನ್ನು ಉಪಯೋಗಿಸುವುದನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಆದೇಶ ಹೊರಡಿಸಿದ್ದಾರೆ.

 

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣೆ ಸಂಬಂಧ ಪ್ರಚಾರಕ್ಕಾಗಿ ಸಾರ್ವಜನಿಕ ಸ್ಥಳಗಳನ್ನು ಹಾಗೂ ಕಟ್ಟಡಗಳನ್ನು ವಿರೂಪಗೊಳಿಸುವುದನ್ನು ನಿಷೇಧಿಸಲಾಗಿದ್ದು, ಇದರನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಪ್ರಚಾರ ಫಲಕಗಳು, ಬ್ಯಾನರ್, ಕಟೌಟ್‌ಗಳನ್ನು ಉಪಯೋಗಿಸುವ ಮುನ್ನ ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳ ಪೂರ್ವಾನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಸಾರ್ವಜನಿಕ ಕಟ್ಟಡಗಳಾದ ಗ್ರಾಮ ಪಂಚಾಯತಿ, ಶಾಲೆಗಳು, ಅಂಗನವಾಡಿ ಕೇಂದ್ರಗಳು, ಆಸ್ಪತ್ರೆಗಳು ಹಾಗೂ ಇತರೆ ಕಟ್ಟಡ ಮತ್ತು ಆವರಣದ ಗೋಡೆಗಳ ಮೇಲೆ ಯಾವುದೇ ಪ್ರಚಾರ, ಜಾಹೀರಾತು, ಘೋಷಣೆಗಳನ್ನು ಬರೆಯುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

 

ಗ್ರಾ.ಪಂ. ಚುನಾವಣೆ : ಮದ್ಯಪಾನ ನಿಷೇಧಾಜ್ಞೆ ಜಾರಿ

 

ಕೊಪ್ಪಳ ಏ. ೨೪ (ಕರ್ನಾಟಕ ವಾರ್ತೆ) : ಗ್ರಾಮ ಪಂಚಾಯತಿ ಚುನಾವಣೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಹಾಗೂ ಶಾಂತಿ, ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮೇ. ೭ ರಿಂದ ೯ ರವರೆಗೆ ಮೂರು ದಿನಗಳ ಕಾಲ ಜಿಲ್ಲಾದ್ಯಂತ ಮದ್ಯಪಾನ ನಿಷೇಧಾಜ್ಞೆಯನ್ನು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಜಾರಿಗೊಳಿಸಿದ್ದಾರೆ.

ಗ್ರಾಮ ಪಂಚಾಯತ್ ಚುನಾವಣೆ ಅಂಗವಾಗಿ ಮೇ. ೦೮ ರಂದು ಮತದಾನ ನಡೆಯಲಿದ್ದು, ಮತದಾನ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಕಾನೂನು ಸುವ್ಯವಸ್ಥೆ ಪಾಲನೆಗಾಗಿ ಮೇ. ೦೭ ರಂದು ಬೆಳಿಗ್ಗೆ ೬ ಗಂಟೆಯಿಂದ ಮೇ. ೯ ರಂದು ಬೆಳಿಗ್ಗೆ ೬ ಗಂಟೆಯವರೆಗೆ ಮದ್ಯಪಾನ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಇದರನ್ವಯ ನಿಷೇಧಿತ ಅವಧಿಯಲ್ಲಿ ಜಿಲ್ಲೆಯಾದ್ಯಂತ ಎಲ್ಲಾ ವೈನ್‌ಶಾಪ್, ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಸಗಟು ಮತ್ತು ಚಿಲ್ಲರೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ನಿಷೇಧಾಜ್ಞೆಯಲ್ಲಿ ತಿಳಿಸಿದೆ.

 

ಗ್ರಾಮ ಪಂಚಾಯತ್ ಚುನಾವಣೆ : ಶಸ್ತ್ರಾಸ್ತ್ರಗಳನ್ನು ಒಪ್ಪಿಸಲು ಸೂಚನೆ

 

ಕೊಪ್ಪಳ ಏ. ೨೪ (ಕರ್ನಾಟಕ ವಾರ್ತೆ) : ಪ್ರಸಕ್ತ ಗ್ರಾಮ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ, ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಜಿಲ್ಲೆಯ ಸಾರ್ವಜನಿಕರು ತಾವು ಹೊಂದಿರುವ ಗನ್, ರಿವಾಲ್ವಾರ್ ಮುಂತಾದ ಶಸ್ತ್ರಾಸ್ತ್ರಗಳನ್ನು ಪೊಲೀಸ್ ಇಲಾಖೆಯ ಸುಪರ್ದಿಗೆ ಒಪ್ಪಿಸುವಂತೆ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಆದೇಶಿಸಿದ್ದಾರೆ.

ಗ್ರಾಮ ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಸಾರ್ವಜನಿಕರು ತಾವು ಹೊಂದಿರುವ ಗನ್, ರಿವಾಲ್ವಾರ್ ಮುಂತಾದ ಶಸ್ತ್ರಾಸ್ತ್ರಗಳನ್ನು ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೂ ಪೊಲೀಸ್ ಇಲಾಖೆಯ ವಶಕ್ಕೆ ಒಪ್ಪಿಸುವಂತೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

 

ಸಚಿವ ಶಿವರಾಜ್ ತಂಗಡಗಿ ಅವರ ಪ್ರವಾಸ ಕಾರ್ಯಕ್ರಮ

 

ಕೊಪ್ಪಳ ಏ. ೨೪ (ಕರ್ನಾಟಕ ವಾರ್ತೆ) : ರಾಜ್ಯ ಕೃಷಿ ಮಾರುಕಟ್ಟೆ ಹಾಗೂ ಸಕ್ಕರೆ ಖಾತೆ ಸಚಿವ ಶಿವರಾಜ ಎಸ್. ತಂಗಡಗಿ ಅವರು ಏ. ೨೪ ರಿಂದ ೨೬ ರವರೆಗೆ ಮೂರು ದಿನಗಳ ಕಾಲ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

 

ಸಚಿವರು ಏ. ೨೪ ರಂದು ಕಾರಟಗಿಗೆ ಆಗಮಿಸಿ ವಾಸ್ತವ್ಯ ಮಾಡುವರು. ಏ. ೨೫ ರಂದು ಕನಕಗಿರಿಯಲ್ಲಿ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ, ಕನಕಗಿರಿಯಲ್ಲಿ ವಾಸ್ತವ್ಯ ಮಾಡುವರು. ಏ. ೨೬ ರಂದು ರಾತ್ರಿ ೭-೩೦ ಗಂಟೆಗೆ ಹೊಸಪೇಟೆಗೆ ಆಗಮಿಸಿ ಹಂಪಿ ಎಕ್ಸ್‌ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

 

 

ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ರಾಷ್ಟ್ರ ಪ್ರಶಸ್ತಿ : ಅರ್ಜಿ ಆಹ್ವಾನ

 

ಕೊಪ್ಪಳ ಏ. ೨೪ (ಕ.ವಾ): ಭಾರತ ಸರ್ಕಾರವು ಶಿಕ್ಷಣ, ಕಲೆ, ಸಾಂಸ್ಕೃತಿಕ ಚಟುವಟಿಕೆ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವಂತಹ ೦೪ ರಿಂದ ೧೫ ವರ್ಷದೊಳಗಿನ ಮಕ್ಕಳಿಗೆ ರಾಷ್ಟ್ರ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವ ಉದ್ದೇಶದಿಂದ ಅರ್ಜಿ ಆಹ್ವಾನಿಸಿದೆ.

 

ಶಿಕ್ಷಣ, ಕಲೆ, ಸಾಂಸ್ಕೃತಿಕ ಚಟುವಟಿಕೆ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವಂತಹ ೦೪ ರಿಂದ ೧೫ ವರ್ಷದೊಳಗಿನ ಮಕ್ಕಳು ಅಂದರೆ ದಿ: ೦೧-೦೧-೧೯೯೫ ಹಾಗೂ ನಂತರ ಹುಟ್ಟಿದ ಮಕ್ಕಳನ್ನು ಪ್ರಸಕ್ತ ವರ್ಷದ ಪ್ರಶಸ್ತಿಗೆ ಪರಿಗಣಿಸಲಾಗುವುದು. ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸುವಂತಹ ಮಕ್ಕಳು ಅಪ್ರತಿಮ ಪ್ರತಿಭೆಯುಳ್ಳವರಾಗಿದ್ದು, ಮೇಲೆ ತಿಳಿಸಿದ ಕ್ಷೇತ್ರಗಳಲ್ಲಿ ಸಾಧನೆಯನ್ನು ಅಸಾಧಾರಣವೆಂದು ಗುರುತಿಸಲು ಅವರು ಸಾಧಿಸಿದ ಸಾಧನೆ ಬಗ್ಗೆ ವೃತ್ತ ಪತ್ರಿಕೆಗಳಲ್ಲಿ ವರದಿಯಾಗಿರಬೇಕು. ಅಥವಾ ಸಂಬಂಧಪಟ್ಟ ಕ್ಷೇತ್ರದ ತಜ್ಞರಿಂದ ಪರೀಕ್ಷಿಸಿರಬೇಕು. ಮಕ್ಕಳ ವಯಸ್ಸಿನ ಪ್ರಮಾಣ ಪತ್ರವನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು. ಈ ರಾಷ್ಟ್ರಮಟ್ಟದ ಪ್ರಶಸ್ತಿಯು ಒಂದು ಚಿನ್ನದ ಪದಕ, ರೂ. ೨೦೦೦೦ ಗಳ ನಗದು ಮತ್ತು ಪ್ರಶಸ್ತಿ ಪತ್ರ ಹಾಗೂ ೩೫ ಬೆಳ್ಳಿ ಪದಕ (ಪ್ರತಿ ರಾಜ್ಯಕ್ಕೆ ಒಂದು ಬೆಳ್ಳಿ ಪದಕ) ರೂ. ೧೦೦೦೦ ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ರಾಜ್ಯ ಸರ್ಕಾರದಿಂದ ರಚಿಸಲ್ಪಟ್ಟಿರುವ ಸಮಿತಿಯು ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳನ್ನು ಆಯ್ಕೆ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತದೆ. ಪ್ರಸಕ್ತ ವರ್ಷದ ಪ್ರಶಸ್ತಿಗಾಗಿ ನಿಗದಿಪಡಿಸಿದ ಅರ್ಜಿ ನಮೂನೆಯನ್ನು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಪ್ಪಳ ಇವರಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಏ. ೩೦ ರೊಳಗಾಗಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.

 

 

ನಿರ್ಮಲ ಗ್ರಾಮ ಪುರಸ್ಕಾರ : ಬಹುಮಾನ ಮೊತ್ತ ಬಿಡುಗಡೆ

ಕೊಪ್ಪಳ ಏ. ೨೪ (ಕರ್ನಾಟಕ ವಾರ್ತೆ) : ಸಂಪೂರ್ಣ ಸ್ವಚ್ಛತಾ ಆಂದೋಲನ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದಕ್ಕಾಗಿ ಗಂಗಾವತಿ ತಾಲೂಕು ವಡ್ಡರಹಟ್ಟಿ ಗ್ರಾಮ ಪಂಚಾಯತಿಯು ೨೦೦೯ ನೇ ಸಾಲಿನ ನಿರ್ಮಲ ಗ್ರಾಮ ಪುರಸ್ಕಾರವನ್ನು ಪಡೆದಿದ್ದು, ಇದೀಗ ಬಹುಮಾನದ ಮೊತ್ತವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್. ಮೂರ್ತಿ ಅವರು ತಿಳಿಸಿದ್ದಾರೆ.

 

ಸಂಪೂರ್ಣ ನೈರ್ಮಲ್ಯ ಶೌಚಾಲಯ ಹಾಗೂ ಅಂಗನವಾಡಿ ಶೌಚಾಲಯಗಳ ನೈರ್ಮಲ್ಯದ ಸುಸ್ಥಿರತೆಯನ್ನು ಕಾಪಾಡಿಕೊಂಡು ಹೋಗುವ ಸಲುವಾಗಿ, ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಗ್ರಾಮ ಪಂಚಾಯತಿಗಳಿಗೆ ಕೇಂದ್ರ ಸರ್ಕಾರದ ವತಿಯಿಂದ ಕೊಡಮಾಡುವ ೨೦೦೯ ನೇ ಸಾಲಿನ ನಿರ್ಮಲ ಗ್ರಾಮ ಪುರಸ್ಕಾರವನ್ನು ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯತಿಯು ಪಡೆದುಕೊಂಡಿದ್ದು, ಇದೀಗ ಬಹುಮಾನ ಮೊತ್ತವಾದ ೫ ಲಕ್ಷ ರೂ.ಗಳ ಪೈಕಿ ೨. ೫ ಲಕ್ಷ ರೂ.ಗಳನ್ನು ಕೇಂದ್ರ ಸರ್ಕಾರವು ಕೊಪ್ಪಳ ಜಿಲ್ಲಾ ಪಂಚಾಯತಿಗೆ ಬಿಡುಗಡೆ ಮಾಡಿದೆ. ಬಹುಮಾನದ ಮೊತ್ತವನ್ನು ನಿರ್ಮಲ ಗ್ರಾಮ ಪುರಸ್ಕಾರದ ಮಾರ್ಗಸೂಚಿಯಂತೆ ವಡ್ಡರಹಟ್ಟಿ ಗ್ರಾಮ ಪಂಚಾಯತಿಯ ಅಭಿವೃದ್ಧಿಗೆ ಬಳಸಲಾಗುವುದು. ಪುರಸ್ಕಾರದ ಉಳಿದ ಮೊತ್ತವನ್ನು ಗ್ರಾಮ ಪಂಚಾಯತಿಯು ನಿರಂತರ ಶುಚಿತ್ವವನ್ನು ಕಾಯ್ದುಕೊಂಡು ಬರುವುದನ್ನು ಪರಿಗಣಿಸಿ ಆರು ತಿಂಗಳ ಬಳಿಕ ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿದೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳು ನಿರ್ಮಲ ಗ್ರಾಮ ಪುರಸ್ಕಾರ ಪಡೆಯುವಂತಾಗಬೇಕು. ಇದಕ್ಕಾಗಿ ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಜನಪ್ರತಿನಿಧಿಗಳು, ಸಾರ್ವಜನಿಕರು ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್. ಮೂರ್ತಿ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

 


Share: