ಚಿಕ್ಕಮಗಳೂರು ಏಪ್ರಿಲ್ ೧೯ :- ತೋಟಗಾರಿಕೆ ಇಲಾಖೆಯು ರೈತರ ಮಕ್ಕಳಿಗೆ ವಿವಿಧ ಯೋಜನೆಯಡಿ ಮೂಡಿಗೆರೆ ತಾಲ್ಲೂಕಿನಲ್ಲಿರುವ ಬೀಜುವಳ್ಳಿ ತೋಟಗಾರಿಕಾ ಕ್ಷೇತ್ರದಲ್ಲಿ ತರಬೇತಿಯನ್ನು ನೀಡಲಿದ್ದು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅಭ್ಯರ್ಥಿಗಳು ಕನ್ನಡ ವಿಷಯದೊಂದಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಎಸ್.ಎಸ್,ಎಲ್.ಸಿಯಲ್ಲಿ ಉತ್ತೀರ್ಣ ಅಥವಾ ಅನುತ್ತೀರ್ಣರಾಗಿದ್ದರೂ ಸಹ ಅರ್ಜಿ ಸಲ್ಲಿಸಬಹುದು. ವಯೋಮಿತಿ ೧೬ ರಿಂದ ೩೫ ವರ್ಷಗಳು. ಇತರರು ೩೦ ವರ್ಷದೊಳಗಿರಬೇಕು.
ಅಭ್ಯರ್ಥಿಗಳು ಕನ್ನಡ ಓದಲು ಬರೆಯಲು ಬಲ್ಲವರಾಗಿದ್ದು ರೈತರ ಮಕ್ಕಳಾಗಿರಬೇಕು. ತರಬೇತಿಗೆ ಆಯ್ಕೆಯಾದವರಿಗೆ ಪ್ರತಿ ತಿಂಗಳು ರೂ.೭೫೦ ಶಿಷ್ಯವೇತನ ನೀಡಲಾಗುತ್ತದೆ.
ತರಬೇತಿ ಪಡೆಯಲಿಚ್ಚಿಸುವವರು ನಿಗಧಿತ ಅರ್ಜಿಗಳನ್ನು ತೋಟಗಾರಿಕಾ ಉಪನಿರ್ದೇಶಕರ ಕಛೇರಿ (ಜಿಲ್ಲಾ ಪಂಚಾಯಿತಿ) ಚಿಕ್ಕಮಗಳೂರು ಅಥವಾ ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕರು(ರಾಜ್ಯ ವಲಯ) ಚಿಕ್ಕಮಗಳೂರು ಇವರಿಂದ ಪಡೆದು ಭರ್ತಿ ಮಾಡಿ ಏಪ್ರಿಲ್ ೨೪ರೊಳಗಾಗಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಎಲ್ಲ ಅಗತ್ಯ ದಾಖಲಾತಿಗಳೊಂದಿಗೆ ಏಪ್ರಿಲ್ ೨೬ರಂದು ಬೆಳಿಗ್ಗೆ ೧೧ಗಂಟೆಗೆ ತೋಟಗಾರಿಕಾ ಉಪನಿರ್ದೇಶಕರ ಕಛೇರಿ ಕೆ.ಎಂ.ರಸ್ತೆ ಬೋಳರಾಮೇಶ್ವರ ದೇವಸ್ಥಾನದ ಹತ್ತಿರ, ಚಿಕ್ಕಮಗಳೂರು ಇಲ್ಲಿ ನಡೆಸಲಾಗುವ ಸಂದರ್ಶನಕ್ಕೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ ಅಥವಾ ತೋಟಗಾರಿಕ ಉಪನಿರ್ದೇಶಕರ ಕಛೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.
ಬಳ್ಳಾರಿ ಗ್ರಾಮ ಪಂಚಾಯತ್ ಚುನಾವಣೆ ಅಧಿಸೂಚನೆ ಪ್ರಕಟ : ಶ್ರೀ ಬಿ. ಶಿವಪ್ಪ
ಬಳ್ಳಾರಿ. ಏ.೧೯ (ಕರ್ನಾಟಕ ವಾರ್ತೆ): ಜಿಲ್ಲೆಯ ೧೮೬ ಗ್ರಾಮ ಪಂಚಾಯತಿಗಳ ೩೩೭೩ ಸ್ಥಾನಗಳಿಗೆ ಚುನಾವಣೆ ನಡೆಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಶ್ರೀ ಬಿ. ಶಿವಪ್ಪ ಅವರು ಇಂದು ಅಧಿಸೂಚನೆ ಹೊರಡಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ನಾಮಪತ್ರಗಳನ್ನು ಸಲ್ಲಿಸಲು ಏಪ್ರಿಲ್ ೨೬ ರಂದು ಕೊನೆಯ ದಿನವಾಗಿದೆ. ಏಪ್ರಿಲ್ ೨೭ ರಂದು ನಾಮಪತ್ರಗಳನ್ನು ಪರಿಶೀಲಿಸಲಾಗುವುದು. ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಏಪ್ರಿಲ್ ೨೯ ರಂದು ಕೊನೆಯ ದಿನವಾಗಿದೆ. ಮತದಾನದ ಅವಶ್ಯಕತೆ ಇದ್ದರೆ ಮೇ ೫ ರಂದು ಮತದಾನವನ್ನು ನಡೆಸಲಾಗುವುದು. ಮೇ ೧೮ ರೊಳಗೆ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ. ಏಪ್ರಿಲ್ ೧೫ ರಿಂದ ಮೇ ೧೮ ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಅವರು ಪ್ರಕಟಿಸಿದರು.
ನೀತಿ ಸಂಹಿತೆಯು ಜಾರಿಲ್ಲಿರುವ ಅವಧಿಯಲ್ಲಿ ಭೂ ನ್ಯಾಯ ಮಂಡಳಿ ಸಭೆ, ಸಚಿವರು ಅಥವಾ ಶಾಸಕರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆಗಳನ್ನು ನಡೆಸುವಂತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಸಚಿವರು ಅಥವಾ ಶಾಸಕರು ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಿ ಮತದಾರರನ್ನು ಪ್ರಭಾವಿಸುವಂತಹ ಸಮಾರಂಭಗಳನ್ನು ಏರ್ಪಡಿಸಬಾರದು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಹೊಸ ಕಾಮಗಾರಿಗಳನ್ನು ಪ್ರಾರಂಭಿಸುವಂತಿಲ್ಲ. ಜನ ಸ್ಪಂದನ, ಪಡಿತರ ಚೀಟಿ ವಿತರಣೆ, ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಕುರಿತು ನಿರ್ಧಾರ ಕೈಗೊಳ್ಳುವಂತಹ ಸಭೆಗಳನ್ನು ನಡೆಸುವಂತಿಲ್ಲ. ಬರ ಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು ಅಥವಾ ಈ ಯೋಜನೆಯಡಿ ಇತರೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.
ಗ್ರಾಮ ಪಂಚಾಯತ್ ಚುನಾವಣೆಗಳು ಪಕ್ಷ ರಹಿತವಾಗಿರುವುದರಿಂದ ರಾಜಕೀಯ ಪಕ್ಷಗಳ ಚಿಹ್ನೆಗಳು ಮತ್ತು ರಾಜಕೀಯ ಮುಖಂಡರ ಭಾವಚಿತ್ರಗಳನ್ನು ಉಪಯೋಗಿಸಿ ಅಭ್ಯರ್ಥಿಗಳು ಪ್ರಚಾರ ಮಾಡುವಂತಿಲ್ಲ. ಇಂತಹ ಪ್ರಚಾರ ನಡೆಸಿದಲ್ಲಿ ಮುದ್ರಿಸಿರುವ ಪ್ರಚಾರ ಸಾಮಗ್ರಿಗಳನ್ನು ಮುಟ್ಟುಗೊಲು ಹಾಕಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ನಾಮಪತ್ರಗಳನ್ನು ಏಪ್ರಿಲ್ ೧೯ ರಿಂದ ೨೬ ರವರೆಗೆ ಬೆಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೩ ಗಂಟೆಯವರೆಗೆ ಚುನಾವಣಾಧಿಕಾರಿಗಳಿಗೆ ಸಲ್ಲಿಸಬಹುದು. ಅಭ್ಯರ್ಥಿಗಳು ೨೧ ವರ್ಷ ತುಂಬಿದ್ದು, ಸಂಬಂಧಿಸಿದ ಗ್ರಾಮ ಪಂಚಾಯತಿಯ ಮತದಾರರ ಪಟ್ಟಿಯಲ್ಲಿರಬೇಕು. ಯಾವುದೇ ಲಾಭದಾಯಕ ಹುದ್ದೆಯಲ್ಲಿರಬಾರದು. ಸಾಮಾನ್ಯ ಅಭ್ಯರ್ಥಿಗಳು ೨೦೦ ರೂ., ಪರಿಶಿಷ್ಟ ಜಾತಿ , ವರ್ಗ ಹಾಗೂ ಹಿಂದುಳಿದ ವರ್ಗ ಎ ಮತ್ತು ಬಿ ಹಾಗೂ ಮಹಿಳೆಯರು ೧೦೦ ರೂ. ಠೇವಣಿಯನ್ನು ಪಾವತಿಸಬೇಕು ಎಂದು ಅವರು ತಿಳಿಸಿದರು.
ಚುನಾವಣೆಯನ್ನು ನಿಷ್ಪಕ್ಷಪಾತ, ಮುಕ್ತ ಹಾಗೂ ನಿರ್ಭೀತಿಯಿಂದ ನಡೆಯುವಂತೆ ಕ್ರಮಕೈಗೊಳ್ಳಲಾಗುವುದು. ೧೮೬ ಗ್ರಾಮ ಪಂಚಾಯಿತಿಗಳ ೯೫೩ ಕ್ಷೇತ್ರಗಳ ೩೩೭೩ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಈ ಸ್ಥಾನಗಳಲ್ಲಿ ೧೩೫೮ ಸ್ಥಾನಗಳು ಮಹಿಳೆಯರಿಗೆ ಮೀಸಲಿವೆ. ಅನುಸೂಚಿತ ಜಾತಿ ಸ್ಥಾನಗಳ ಸಂಖ್ಯೆ ೬೮೮ ಅದರಲ್ಲಿ ಮಹಿಳೆಯರಿಗೆ ೨೮೫, ಅನುಸೂಚಿತ ಪಂಗಡಗಳ ಸ್ಥಾನ ೭೩೫ ಅದರಲ್ಲಿ ಮಹಿಳೆಯರಿಗೆ ೩೧೨ ಸ್ಥಾನ ಮೀಸಲಿವೆ. ಹಿಂದುಳಿದ ಅ ವರ್ಗ ಸ್ಥಾನಗಳ ಸಂಖ್ಯೆ ೯೦೩ ಅದರಲ್ಲಿ ೩೭೪ ಸ್ಥಾನಗಳು ಮಹಿಳೆಯರಿಗೆ ಮೀಸಲಿವೆ. ಹಿಂದುಳಿದ ಬ ವರ್ಗ ಸ್ಥಾನಗಳ ಸಂಖ್ಯೆ ೨೦೯ ಅದರಲ್ಲಿ ೫೫ ಸ್ಥಾನಗಳು ಮಹಿಳೆಯರಿಗೆ ಮೀಸಲಿವೆ. ಸಾಮಾನ್ಯ ವರ್ಗ ಸ್ಥಾನಗಳ ಸಂಖ್ಯೆ ೮೩೮ ಅದರಲ್ಲಿ ೩೩೨ ಸ್ಥಾನಗಳು ಮಹಿಳೆಯರಿಗೆ ಮೀಸಲಿವೆ ಎಂದರು.
ಈ ೧೮೬ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ೯,೪೯,೩೫೩ ಮತದಾರರಿದ್ದಾರೆ. ಅವರಲ್ಲಿ ೪,೭೨,೫೩೮ ಮಹಿಳಾ ಮತದಾರರು ಹಾಗೂ ೪,೭೬,೮೧೫ ಪುರುಷ ಮತದಾರರಿದ್ದಾರೆ. ಚುನಾವಣೆ ನಡೆಸಲು ಅನುಕೂಲವಾಗುವಂತೆ ೧೦೫೫ ಮತಗಟ್ಟೆಗಳು ಹಾಗೂ ೧೧೮ ಸಹಾಯಕ ಮತಗಟ್ಟೆಗಳು ಸೇರಿದಂತೆ ಒಟ್ಟು ೧೧೭೩ ಮತಗಟ್ಟೆಗಳನ್ನು ನಿರ್ಮಿಸಲಾಗುವುದು. ೧೮೬ ಚುನಾವಣಾಧಿಕಾರಿಗಳು ಹಾಗೂ ೧೯೮ ಸಹಾಯಕ ಚುನಾವಣಾಧಿಕಾರಿಗಳನ್ನು ನಿಯೋಜಿಸಲಾಗುವುದು. ಒಟ್ಟು ೪೯೬೪ ಸಿಬ್ಬಂದಿಯನ್ನು ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲಾಗುವುದು. ನಿಯೋಜಿತ ಸಿಬ್ಬಂಗೆ ಎರಡು ಬಾರಿ ತರಬೇತಿ ನೀಡಿ, ಯಾವುದೇ ನ್ಯೂನತೆಗಳಾಗದಂತೆ ಮುಂಜಾಗ್ರತೆ ವಹಿಸಲಾಗುವುದು. ಸೂಕ್ಷ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳ ವಿವರವನ್ನು ಶೀಘ್ರವಾಗಿ ಪಡೆದು ಅಗತ್ಯ ಬಂದೋಬಸ್ತ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.