ಭಟ್ಕಳ: ಜಿಲ್ಲೆಯ ಪ್ರಸಿದ್ಧ ಅಲ್ವೇಕೋಡಿ ದುರ್ಗಾಪರಮೇಶ್ವರಿ ದೇವರ ಪುನರ್ ಪ್ರತಿಷ್ಟಾ ಸುವರ್ಣ ಮಹೋತ್ಸವ ಕಾರ್ಯಕ್ರಮ ಜೂನ್ 29ರಿಂದ ಜುಲೈ 9 ರವರೆಗೆ ನಡೆಯಲಿದೆ ಎಂದು ಅಳ್ವೆಕೋಡಿ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ ಹೇಳಿದರು.
ದೇವಸ್ತಾನದ ಆವರಣದಲ್ಲಿ ಸುದ್ದಿಗೋಷ್ಟಿಯನ್ನ ಉದ್ದೇಶಿಸಿ ಮಾತನಾಡಿದ ದೇವಸ್ಥಾನಕ್ಕೆ ಸುಮಾರು 300 ವರ್ಷದ ಇತಿಹಾಸವಿದೆ. ಕೃಷಿಕರು, ಮೀನುಗಾರರು ಎಲ್ಲಾ ವರ್ಗದವರು ಈ ದೇವರ ಭಕ್ತರು ಎಲ್ಲರ ಸಹಯೋಗದಲ್ಲಿ ಜೂನ್ 29 ರಿಂದ ಕಾರ್ಯಕ್ರಮ ಮಾಡಲು ನಿರ್ಧರಿಸಿದ್ದೇವೆ ಎಂದರು.
ಜೂನ್ 29 ರಂದು ಜೇಷ್ಠ ಕೃಷ್ಣ ಅಷ್ಟಮಿ ದಿನದಂದು ಹೊರಕಾಣಿಕೆ ತರುವ ಮೂಲಕ ಸುವರ್ಣ ಮಹೋತ್ಸವ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಗೋಕರ್ಣದ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀ ಶ್ರೀ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಯಜ್ಞಮಂಟಪದ ಉದ್ಘಾಟನೆ ನಡೆಯಲಿದೆ.
ಗೋಪುರಕ್ಕೆ ತಾಮ್ರದ ಹೊದಿಕೆ, ಶಿಖರ ಕಲಶ ಪ್ರತಿಷ್ಠೆ, ಶ್ರೀ ಶತಚಂಡಿಯಾಗ, ಶ್ರೀ ಸೂಕ್ತ ಹವನ, ಶ್ರೀ ಪಂಚದುರ್ಗಾ ಹವನ, ಶ್ರೀ ಲಕ್ಷ ಕುಂಕುಮಾರ್ಚನೆ, ಶ್ರೀ ದುರ್ಗಾ ನಮಸ್ಕಾರ ಹಾಗೂ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಾ ಜನಪ್ರತಿನಿಧಿಗಳನ್ನ ಕರೆಯಲಾಗಿದೆ. ಜೂನ್ 30 ರಂದು ಶಿಖರ ಕಲಶ ಪ್ರತಿಷ್ಠಾಪನೆ, ಜುಲೈ 1 ರಿಂದ ಪ್ರತಿದಿನ ಬೆಳಿಗ್ಗೆ 9 ಘಂಟೆಗೆ ಲಕ್ಷ ಕುಂಕುಮಾರ್ಚನೆ ನಡೆಯಲಿದೆ. ಜುಲೈ 5 ರಂದು ಶ್ರೀ ದೇವಿಗೆ ಬೆಳ್ಳಿಯ ಕಲಶದಿಂದ ಶತಕಲಶಾಭಿಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜುಲೈ 7 ಹಾಗೂ 8 ರಂದು ಸಭಾ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ ಸಾವಿರಾರು ಭಕ್ತರು ದೇವಿಯ ಪುನರ್ ಪ್ರತಿಷ್ಟಾಪನ ಕಾರ್ಯಕ್ರಮಕ್ಕೆ ಆಗಮಿಸಲಿದ್ದು ಪ್ರತಿದಿನ ಅನ್ನಸಂತರ್ಪಣೆಯನ್ನ ಸಹ ಆಯೋಜಿಸ ಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಟ್ರಸ್ಟಿಗಳಾದ ನಾರಾಯಣ, ಬಾಬು ಮೊಗೇರ, ದೇವಪ್ಪ ಮೊಗೇರ, ಭಾಸ್ಕರ್ ಮೊಗೇರ, ರಾಮು ಮೊಗೇರ, ವಿಠಲ್ ದೈಮನೆ ಉಪಸ್ಥಿತರಿದ್ದರು.