ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಪುತ್ತೂರು: ಕಾಲದ ಕರೆಗೆ ಓಗೊಡಲು ಉಲೆಮಾಗಳಿಗೆ ಎಂ.ಟಿ. ದಾರಿಮಿ ಕರೆ

ಪುತ್ತೂರು: ಕಾಲದ ಕರೆಗೆ ಓಗೊಡಲು ಉಲೆಮಾಗಳಿಗೆ ಎಂ.ಟಿ. ದಾರಿಮಿ ಕರೆ

Tue, 24 Nov 2009 02:24:00  Office Staff   S.O. News Service
ಪುತ್ತೂರು, ನವೆಂಬರ್ ೨೨:  ಜಗತ್ತು ಇಂದು ನಾಗರೀಕತೆಯೆಡೆಗೆ ನಾಗಾಲೋಟದೊಂದ ಮುಂದುವರೆದಿದ್ದು ಸರ್ವಕ್ಷೇತ್ರದಲ್ಲಿ ಕ್ಷಿಪ್ರಗತಿಯ ಬದಲಾವಣೆಗಳನ್ನು ಕಾಣಬಹುದು. ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಮಾರ್ಗದರ್ಶಿಗಳಾದ ಉಲೆಮಾಗಳು ಕಾಲದ ಕರೆಗೆ ಓಗೊಟ್ಟು ಸುಮುದಾಯಕ್ಕೆ  ಸರ್ವಕ್ಷೇತ್ರದಲ್ಲೂ ಸ್ಪಂದಿಸಬಹುದಾದ ಸಮರ್ಥ ನಾಯಕತ್ವವನ್ನು ಮೈಗೂಡಿಸಿಕೊಳ್ಳುವಂತೆ ಕೇರಳದ ಪ್ರಖ್ಯಾತ ವಾಗ್ಮಿ ಎಂ.ಟಿ. ಅಬೂಬಕ್ಕರ್ ದಾರಿಮಿ ಮಲಪ್ಪುರಂ ಕರೆ ನೀಡಿದರು.
 
ಅವರು ಕುಂಬ್ರ ಬಹುಮುಖ ವಿದ್ಯಾಸಂಸ್ಥೆಯಾದ ಕೆ.ಐ.ಸಿ. ಸಭಾಂಗಣದಲ್ಲಿ ದ.ಕ. ಜಿಲ್ಲಾ ದಾರಿಮೀಸ್ ಅಸೋಸಿಯೇಶನ್ ಸಂಘಟನೆಯ ಜಿಲ್ಲಾ ಸಮ್ಮೇಳನಾ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ದಾರಿಮಿ ಸಂಘಟನೆಯ ರಾಜ್ಯಾಧ್ಯಕ್ಷ ಹಜಿ ಎಸ್. ಬಿ. ದಾರಿಮಿಯವರು ಸಮುದಾಯದ ಏಳ್ಗೆಗಾಗಿ ವಿಶ್ವೋತ್ತರ ವಿದ್ವಾಂಸರಾದ ಶೈಖುನಾ, ಶಂಸುಲ್ ಉಲೆಮಾ ರವರು ಕಟ್ಟಿ ಬೆಳೆಸಿದ ಸಮಸ್ತವನ್ನೂ ಬಲಪಡಿಸುವಲ್ಲಿ ಸರ್ವರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮವನ್ನು ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದ್ ಉದ್ಘಾಟಿಸಿದರು. ಸಮಾರಂಭದಲ್ಲಿ ಕೆ.ಐ.ಸಿ. ಅಧ್ಯಕ್ಷರಾದ ಕೆ.ಪಿ.ಅಬ್ದುಲ್ ಹಾಜಿ, ವ್ಯವಸ್ಥಾಪಕ ಕೆ. ಆರ್. ಹುಸೇನ್ ದಾರಿಮಿ, ಪ್ರಾಂಶುಪಾಲರಾದ ಡಾ. ಬಶೀರುದ್ದೀನ್ ನಫ್ಕಾತಿ, ಅಲ್ ಅಹ್ಸಾನ್ ಮಾಸಿಕ ಪತ್ರಿಕೆಯ ಗೌರವ ಸಂಪಾದಕರಾದ ಅಜೀಂ ದಾರಿಮಿ ಕಲ್ಲೆಗ, ಕಿಕ್ಕಿಂಜೆ ಮೂಸಾ ದಾರಿಮಿ, ಸಾಲ್ಮರ ಉಮರ್ ದಾರಿಮಿ, ಕೆ.ಬಿ. ಅಬ್ದುಲ್ ಖಾದರ್ ದಾರಿಮಿ, ಅಬ್ದುಲ್ ರಹಮಾನ್ ಆಜಾದ್, ಅನೀಸ್ ಕೆ.ಐ.ಸಿ. ಮೊದಲಾದವರು ಮಾತನಾಡಿದರು.

ಈ ಸಂದರ್ಭದಲ್ಲಿ ತೌಹೀದ್ ಮತ್ತು ಶಿರ್ಕ್ ಎಂಬ ವಿಷಯದ ಕುರಿತು ಎಂ.ಟಿ. ಅಬೂಬಕ್ಕರ್ ದಾರಿಮಿಯವರಿಂದ ಅಧ್ಯಯನ ಶಿಬಿರ, ಸಂಶಯನಿವಾರಣೆ ಹಾಗೂ ಶಂಸುಲ್ ಉಲೇಮಾ ಮೌಲೀದ್ ಮುಂತಾದ ಕಾರ್ಯಕ್ರಮಗಳೂ ನಡೆದವು.

ಕಾರ್ಯಕ್ರಮವನ್ನು ಸಮಿತಿ ಕಾರ್ಯದರ್ಶಿ ರೆಂಜಾಡಿ ಅಬ್ದುಲ್ ಲತೀಫ್ ದಾರಿಮಿ ಸ್ವಾಗತಿಸಿ ಶಂಸುದ್ದೀನ್ ದಾರಿಮಿ, ಅಬ್ಬಾಸ್ ದಾರಿಮಿ ಕೆಲಿಂಜ ವಂದಿಸಿದರು.  ಅಲ್ ಅಹ್ಸಾನ್ ಸಂಪಾದಕ ಕೆ.ಎಮ್. ಎ. ಕೊಡುಂಗಾಯಿ, ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.

ಚಿತ್ರ, ವರದಿ: ಎಸ್. ಬಿ. ದಾರಿಮಿ.

Share: