ಭಟ್ಕಳ: ಅಜೀಮ್ ಪ್ರೇಮ್ ಜಿ ಫೌಂಡೇಶನ್ (APF) ಅನುದಾನದಡಿ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ನಾಲ್ಕು ದಿನ ಪೂರಕ ಪೌಷ್ಟಿಕಾಂಶ ವಿತರಣೆ ಮಾಡುವ ಯೋಜನೆಯ ಉದ್ಘಾಟನಾ ಕಾರ್ಯಕ್ರಮ ಭಟ್ಕಳ ತಾಲೂಕಿನ ಕರ್ನಟಕ ಪಬ್ಲಿಕ್ ಸ್ಕೂಲ್, ತೆರ್ಮನಕ್ಕಿಯಲ್ಲಿ ಬುಧವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕಾಯ್ಕಿಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜು ನಾಗಪ್ಪ ನಾಯ್ಕ, ವಿದ್ಯಾರ್ಥಿಗಳು ಈ ಪೂರಕ ಪೌಷ್ಟಿಕಾಂಶ ಯೋಜನೆಯ ಸದುಪಯೋಗ ಪಡೆದು, ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಶಾಲೆಯ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ನಾಗೇಶ ನಾಯ್ಕ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆದು ತಮ್ಮ ಕಲಿಕೆಯಲ್ಲಿ ಉತ್ತಮ ಪ್ರಗತಿಗೆ ತಲುಪಬೇಕು ಎಂದು ಪ್ರೋತ್ಸಾಹಿಸಿದರು.
ಅತಿಥಿಗಳಾಗಿ ಹಾಜರಿದ್ದ ಗ್ರಾಮ ಪಂಚಾಯಿತಿ ಸದಸ್ಯ ಭಾಸ್ಕರ್ ನಾಯ್ಕ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರ ಹಮ್ಮಿಕೊಂಡಿರುವ ಹಲವಾರು ಯೋಜನೆಗಳಲ್ಲಿ ಪೂರಕ ಪೌಷ್ಟಿಕಾಂಶ ವಿತರಣೆಯೂ ಒಂದಾಗಿದ್ದು, ಈ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಶಿಕ್ಷಕರು, ಎಸ್.ಡಿ.ಎಂ.ಸಿ, ಹಾಗೂ ಪೋಷಕರು ಸಹಕಾರ ನೀಡಬೇಕು ಎಂದು ಕರೆ ನೀಡಿದರು.
ಶ್ರೀಮತಿ ಪದ್ಮ ನಾಯ್ಕ, ಗ್ರಾಮ ಪಂಚಾಯಿತಿ ಸದಸ್ಯರು, ಸರ್ಕಾರದ ಈ ಯೋಜನೆ ಮುಂದುವರೆಯಬೇಕೆಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಉಪನಿರ್ದೇಶಕಿ ಲತಾ ನಾಯಕ, ವಿ.ಟಿ. ನಾಯಕ್ (ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ), ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ನಾಯಕ್, ರಾಘವೇಂದ್ರ ಎಂ. ನಾಯ್ಕ (ಸಹಾಯಕ ನಿರ್ದೇಶಕ, ಪಿ.ಎಂ. ಪೋಷಣ ಶಕ್ತಿ ನಿರ್ಮಾಣ), ತೆರ್ಮನಕ್ಕಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಪ್ರಶಾಂತ್ ಪಟಗಾರ್, ಮತ್ತು ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಸ್ಥರಾದ ಶಂಕರ್ ಉಪ್ಪರಗಿಮನಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರು, ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ, ಯೋಜನೆಯ ಯಶಸ್ವಿ ಪ್ರಾರಂಭಕ್ಕೆ ಸಾಕ್ಷಿಯಾದರು.