ಮಂಗಳೂರು, ಎ.29: ಬರ್ಕೆ ಠಾಣಾ ವ್ಯಾಪ್ತಿಯ ಮಣ್ಣಗುಡ್ಡ ವೇರ್ ಹೌಸ್ ಬಳಿಯ ಜಾನ್ ಪಿಂಟೋ (43) ಎಂಬಾತನನ್ನು ಗುರುವಾರ ರಾತ್ರಿ ಥಳಿಸಿ ಕೊಲೆ ಮಾಡಿದ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ನಗರ ಡಿವೈಎಸ್ಪಿ ಬಿ.ಜೆ.ಭಂಡಾರಿ ತಿಳಿಸಿದ್ದಾರೆ.
ಬಂಧಿತರನ್ನು ರಾಜೇಶ್, ಅವಿನಾಶ್, ಸುಶಾಂತ್, ಚರಣ್, ವಿಕ್ಕಿ, ಮಹೇಂದ್ರ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ವೇರ್ ಹೌಸ್ ಬಳಿ ಕಳ್ಳತನ ನಡೆದಿತ್ತು. ಇದನ್ನು ಜಾನ್ ಪಿಂಟೊ ಮಾಡಿದ್ದಾನೆ ಎಂದು ಶಂಕಿಸಿದ ಆರೋಪಿಗಳು ಹಲ್ಲೆ ನಡೆಸಿದ್ದಾರಲ್ಲದೆ, ಬೈಕ್ನಲ್ಲಿ ಅಡ್ಡಾಡಿಸಿ ಹಿಂಸಿಸಿದ್ದಾರೆ ಎನ್ನಲಾಗಿದ್ದು, ಹಲ್ಲೆಯಿಂದ ತತ್ತರಿಸಿದ ಜಾನ್ ಪಿಂಟೋ ತೀವ್ರ ಅಸ್ವಸ್ಥ ಗೊಂಡು ಸಾವಿಗೀಡಾಗಿದ್ದಾನೆ ಎಂದು ತಿಳಿದು ಬಂದಿದೆ.
ಜಾನ್ ಪಿಂಟೋನ ಮೇಲೆ ಬರ್ಕೆ, ಕದ್ರಿ ಠಾಣೆಯಲ್ಲಿ ನಾಲ್ಕೈದು ಕಳವು ಪ್ರಕರಣ ದಾಖಲಾಗಿತ್ತು. ಮನೆಯವರು ಕೂಡ ಈತನಿಂದ ದೂರ ಸರಿದಿದ್ದು, ಈತ ಮನೆ ಬಿಟ್ಟು ಸುಮಾರು 25 ವರ್ಷಗಳು ಸಂದಿವೆ. ಗುರುವಾರ ರಾತ್ರಿ 10:30ಕ್ಕೆ ಹಿಂಸೆ ನೀಡಲು ಆರಂಭಿಸಿದ ಆರೋಪಿಗಳು ತಡರಾತ್ರಿ 2:30ರ ವೇಳೆಗೆ ಬೈಕ್ನಲ್ಲಿ ತಂದು ರಸ್ತೆ ಬದಿ ಎಸೆದು ಹೋಗಿದ್ದರು. ಜಾನ್ ಪಿಂಟೊ ತೆವಳಿಕೊಂಡು ಮನೆಯೊಂದರ ಗೇಟ್ ಅಲ್ಲಾಡಿಸಿದಾಗ ಮನೆಯವರು ಹೆದರಿ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದರು. ಅದರಂತೆ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ತೆರಳಿದಾಗ ಜಾನ್ ಪಿಂಟೋ ಶವವಾಗಿ ಬಿದ್ದಿದ್ದ. ದೇಹದಲ್ಲಿ ಗಾಯ ಕಂಡು ಬಂದ ಕಾರಣ ತಕ್ಷಣ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಆರೋಪಿಗಳ ಶೋಧ ಕಾರ್ಯ ಮುಂದುವರಿಸಿದ್ದರು. ಪೊಲೀಸರು ಆರು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ದೀಕ್ಷಿತ್ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.