ದಾಂಡೇಲಿ : ದಾಂಡೇಲಿಯ ಆಜಾದ್ ನಗರದ ನಿವಾಸಿ ಪಕ್ರುಸಾಬ್ ಮೋಹಿದ್ದೀನ್ ಸಾಬ್ ನದೀಮುಲ್ಲಾ ಅವರ ಮಗಳು ಸಭಾನಾ ಸಿರಾಜ್ ಸರ್ಕಾವಾಸ್ ಎಂಬಾಕೆಯ ಮೇಲೆ ಗಂಡನೇ ತೀವ್ರ ಹಲ್ಲೆ ಮಾಡಿದ್ದಾನೆ.
ಬೆಳಗಾವಿ ಜಿಲ್ಲೆಯ ಎಂ.ಕೆ.ಹುಬ್ಬಳ್ಳಿಯಲ್ಲಿರುವ ಗಂಡನ ಮನೆಯಲ್ಲಿ ಹಲ್ಲೆಗೊಳಗಾಗಿದ್ದಳು. ಇದೀಗ ಚಿಕಿತ್ಸೆಗಾಗಿ ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾಳೆ.
12 ವರ್ಷಗಳ ಹಿಂದೆ ಸಬನಾಳನ್ನ ಬೆಳಗಾವಿ ಜಿಲ್ಲೆಯ ಎಂ.ಕೆ ಹುಬ್ಬಳ್ಳಿಯ ನಿವಾಸಿ ಸಿರಾಜ್ ಸರ್ಕಾವಾಸ್ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ಈಕೆಗೆ ಇಬ್ಬರು ಮಕ್ಕಳಿದ್ದಾರೆ. ಗಂಡ ಸಿರಾಜ್ ಕುಡಿದು ಬಂದು ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿದ್ದ. ಗುರುವಾರ ಎಂ.ಕೆ ಹುಬ್ಬಳ್ಳಿಯಲ್ಲಿರುವ ಗಂಡನ ಮನೆಯಲ್ಲಿ ಪಾತ್ರೆ ತೊಳೆಯುತ್ತಿರುವಾಗ ಕುಡಿದು ಬಂದ ಗಂಡ ಸಿರಾಜ್ ಸರ್ಕಾವಾಸ್ ಹಲ್ಲೆ ಮಾಡಿದ್ದಾನೆ. ಕಾಲಿನಿಂದ ತುಳಿದು ಕೆಳಕ್ಕೆ ದೂಡಿದ್ದಾನೆ. ಗಂಡನಿಂದ ಹಲ್ಲೆಗೊಳಗಾದ ಸಭಾನಾಳ ಕಣ್ಣಿಗೆ ಮತ್ತು ತಲೆಗೆ ತೀವ್ರ ಗಾಯವಾಗಿದೆ. ಗಾಯಗೊಂಡ ಸಭಾನಾ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಗೆ ಬಂದಿದ್ದಾಳೆ. ಗಂಡನಿಂದ ಹಲ್ಲೆಗೊಳಗಾದ ಸಭಾನಾ ಅಲ್ಲಿನ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾಳೆ. ಆದರೆ ಅವಳಿಗೆ ಸರಿಯಾದ ನೆರವು ಸಿಗದಿರೋದ್ರಿಂದ ತಂದೆಗೆ ವಿಷಯ ತಿಳಿಸಿದ್ದಳು.
ತಂದೆ ಸಭಾನಾ ಮತ್ತು ಆಕೆಯ ಇಬ್ಬರು ಮಕ್ಕಳನ್ನು ದಾಂಡೇಲಿಗೆ ಕರೆದುಕೊಂಡು ಬಂದಿದ್ದಾರೆ. ಅಲ್ಲದೇ , ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ದಾಂಡೇಲಿ ನಗರ ಠಾಣೆಯ ಪೊಲೀಸರು, ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.