ಬಳ್ಳಾರಿ, ನ.1: ಅಂತಾರಾಜ್ಯ ಗಣಿ- ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಹಿರಿಯ ಐಎಫ್‌ಎಸ್ ಅಧಿಕಾರಿ ಹಾಗೂ ಈ ಹಿಂದೆ ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತರ ವರದಿ ನೀಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಡಾ. ಯು.ವಿ. ಸಿಂಗ್ ಅವರು, ಭಾನುವಾರ ಒಬಳಾಪುರಂ ಮೈನಿಂಗ್ ಕಂಪನಿಗೆ ಹೊಂದಿಕೊಂಡಿರುವ ರಾಜ್ಯದ ಗಡಿ ಭಾಗದಲ್ಲಿ ಸಂಚರಿಸಿ ಪ್ರಮುಖ ಮಾಹಿತಿಗಳನ್ನು ಪಡೆದಿದ್ದಾರೆ ಎನ್ನಲಾಗಿದೆ.
ಲಭ್ಯ ಮೂಲಗಳ ಪ್ರಕಾರ- ಡಾ. ಯು.ವಿ. ಸಿಂಗ್, ನೂತನ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿಸ್ವಜೀತ್ ಮಿಶ್ರಾ ಹಾಗೂ ಮತ್ತಿಬ್ಬರು ಅಧಿಕಾರಿಗಳನ್ನು ಒಳಗೊಂಡ ತಂಡ ಈ ಭಾಗಗಳಿಗೆ ಭೇಟಿ ನೀಡಿದೆ.
ಸಚಿವ ಜನಾರ್ದನ ರೆಡ್ಡಿ ಅವರಿಗೆ ಸಂಬಂಧಿತ ಆಂಧ್ರಪ್ರದೇಶದಲ್ಲಿನ ಅನಂತಪುರ ಮೈನಿಂಗ್ ಕಂಪನಿಯು ಅಕ್ರಮ ಗಣಿಗಾರಿಕೆ ನಡೆಸುತ್ತಿದೆ ಹಾಗೂ ಅಂತಾರಾಜ್ಯ ಗಡಿ ಗುರುತುಗಳನ್ನು ಉಲ್ಲಂಘಿಸಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಆಂಧ್ರಪ್ರದೇಶದ ಅನಂತಪುರ ಜಿಲ್ಲಾ ಅರಣ್ಯಾಧಿಕಾರಿ ಕಲ್ಲೋಳ್ ಬಿಸ್ವಾಸ್ ಅವರು ಕಾರಣ ಕೇಳಿ ಷೋಕಾಸ್ ನೋಟಿಸ್‌ಗಳನ್ನು ನೀಡಿದ್ದರಲ್ಲದೆ ಶನಿವಾರ ಗಣಿಗಾರಿಕೆ ಚಟುವಟಿಕೆ ಸ್ಥಗಿತಕ್ಕೆ ಆದೇಶಿಸಿದ್ದರು.
ಮಹತ್ವದ ದಾಖಲೆಗಳ ಸಂಗ್ರಹ: ಸದ್ಯ, ಅಂತಾರಾಜ್ಯ ಗಡಿ ಗುರುತುಗಳ ಉಲ್ಲಂಘನೆ ಕುರಿತ ಆರೋಪ ಆಂಧ್ರದ ಅಧಿಕಾರಿಗಳಿಂದಲೇ ಬಂದ ಹಿನ್ನೆಲೆಯಲ್ಲಿ, ಡಾ. ಯು.ವಿ. ಸಿಂಗ್ ಹಾಗೂ ತಂಡ, ರಾಜ್ಯ ಗಡಿ ಸರಿಯಾಗಿದೆಯೇ ಎಂಬ ಕುರಿತು ಗಣಿ- ಗುಡ್ಡಗಾಡು ಪ್ರದೇಶಗಳಲ್ಲಿ ರಹಸ್ಯ ಭೇಟಿ ನೀಡಿ ಪರಿಶೀಲಿಸಿದೆ. ಅಲ್ಲದೆ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದೆ ಎನ್ನಲಾಗಿದೆ. ಆಂಧ್ರದ ಅಧಿಕಾರಿಗಳು ನೀಡಿದ ಷೋಕಾಸ್ ನೋಟೀಸ್‌ನ ಅಂಶಗಳು ಹಾಗೂ ಈ ಹಿಂದೆ ತಾವು (ಡಾ. ಸಿಂಗ್) ಸಂಗ್ರಹಿಸಿದ್ದ ಮಾಹಿತಿಗಳು ತಾಳೆಯಾಗುತ್ತಿವೆಯೇ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ.
ವಿಶೇಷವೆಂದರೆ- ಪರಿಶೀಲನೆ ನಡೆಸಿದ ಬಳಿಕ ಯಾವ ರೀತಿ ವರದಿ ನೀಡಲಾಗುತ್ತಿದೆ ಎಂಬುದರ ಕುರಿತು ಡಿಎಫ್‌ಒ ಬಿಸ್ವಜೀತ್ ಮಿಶ್ರಾ ಅವರಿಗೂ ಡಾ. ಸಿಂಗ್ ತಿಳಿಸಿಲ್ಲ ಎನ್ನಲಾಗಿದ್ದು, ಇದು ನೇರವಾಗಿ ಲೋಕಾಯುಕ್ತರಿಗೆ ತಲುಪಲಿದೆ ಎಂದು ಮೂಲಗಳು ತಿಳಿಸಿವೆ.
ಕೋಲಾಹಲಕ್ಕೆ ಕಾರಣವಾಗಿತ್ತು: ಈ ಹಿಂದೆ ಡಾ. ಯು.ವಿ. ಸಿಂಗ್ ಲೋಕಾಯುಕ್ತರಿಗೆ ನೀಡಿದ್ದ ವರದಿಯಲ್ಲಿ ರಾಜ್ಯ ಗಡಿ ಗುರುತುಗಳು ಧ್ವಂಸಗೊಂಡ ಕುರಿತ ಮಾಹಿತಿ ನೀಡಲಾಗಿತ್ತು. ಈ ವಿಚಾರ ಗಣಿಧಣಿಗಳ ವಲಯದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತಲ್ಲದೆ, ಡಾ. ಸಿಂಗ್ ಅವರ ವರದಿ ಗಣಿಧಣಿಗಳಿಂದ ಟೀಕೆಗೆ ಒಳಗಾಗಿತ್ತು.
ಅಕ್ರಮ ಗಣಿಗಾರಿಕೆ ಕುರಿತ ವರದಿ ಹಾಗೂ ನಂತರದಲ್ಲಿ ರಾಜ್ಯ ಸರ್ಕಾರದ ಕಾರ್ಯ ವೈಖರಿಯ ಬಗ್ಗೆ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರೂ ಬೇಸರ ವ್ಯಕ್ತಪಡಿಸಿದ್ದರು.
ಆದರೆ, ಆ ಸಂದರ್ಭ (ಡಾ. ವೈಎಸ್ಸಾರ್ ಸರ್ಕಾರ)ದಲ್ಲಿ ಗಡಿ ವಿಚಾರವಾಗಿ ರಾಜ್ಯದೊಡನೆ ಸೂಕ್ತ ರೀತಿಯಲ್ಲಿ ಸಹಕರಿಸದಿದ್ದ ಆಂಧ್ರದ ಅಧಿಕಾರಿಗಳು, ಈಗ ರೋಸಯ್ಯ ಸರ್ಕಾರದಲ್ಲಿ ಕಾರ್ಯ ಪ್ರವೃತ್ತರಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಅಲ್ಲದೆ, ಮುಖ್ಯಮಂತ್ರಿ ವಿರುದ್ಧ ಬಂಡಾಯವೆದ್ದಿರುವ ಬಳ್ಳಾರಿ ಸಚಿವತ್ರಯರನ್ನು ಮಟ್ಟ ಹಾಕಲು ಆಂಧ್ರದ ರೋಸಯ್ಯ ಸರ್ಕಾರದೊಡನೆ ಯಡಿಯೂರಪ್ಪನವರು ಕೈ ಮಿಲಾಯಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಮಧ್ಯೆ, ಇದೀಗ ಗಡಿ ವಿವಾದ ಕುರಿತ ವಿಷಯಕ್ಕೆ ಸಂಬಂಧಿಸಿದಂತೆ ಡಾ. ಯು.ವಿ. ಸಿಂಗ್ ಭೇಟಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಸೌಜನ್ಯ: ಕನ್ನಡಪ್ರಭ