ಭಟ್ಕಳ, ಅಕ್ಟೋಬರ್ 14: ಇಲ್ಲಿಯ ಸರಕಾರಿ ಕಾಲೇಜು ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿಯೋರ್ವಳು ನಿಗೂಢವಾಗಿ ಸಾವನ್ನಪ್ಪಿದ್ದು, ಆಕೆಯ ಶವ ಬುಧವಾರ ಸಂಜೆ ೩ ಗಂಟೆಯ ಸುಮಾರಿಗೆ ವೆಂಕಟಾಪುರ ಹೊಳೆಯಲ್ಲಿ ಪತ್ತೆಯಾಗಿದೆ.
ಮೃತ ವಿದ್ಯಾರ್ಥಿನಿಯನ್ನು ರವಿಕಲಾ ಅಣ್ಣಪ್ಪ ನಾಯ್ಕ, ಕುಕನೀರ ಎಂದು ಗುರುತಿಸಲಾಗಿದೆ. ಮಂಗಳವಾರ ಕಾಲೇಜಿಗೆ ತೆರಳಿದ ಈಕೆ ಮರಳಿ ಮನೆಗೆ ಬಂದಿರಲಿಲ್ಲ ಎಂದು ಹೇಳಲಾಗಿದೆ. ಮೃತಳು ಮೂವರು ಸಹೋದರರು ಹಾಗೂ ತಂದೆ ತಾಯಿಗಳನ್ನು ಅಗಲಿದ್ದಾಳೆ. ರೈತ ಕುಟುಂಬಕ್ಕೆ ಸೇರಿದ್ದ ಈಕೆ ಮನೆಯ ಸಾಕಷ್ಟು ಕೆಲಸ ಮುಗಿಸಿ ಕಾಲೇಜಿಗೆ ಬರುತ್ತಿದ್ದ ಬಗ್ಗೆ ಮೂಲಗಳು ಮಾಧ್ಯಮಗಳಿಗೆ ಮಾಹಿತಿಯನ್ನು ಒದಗಿಸಿವೆ. ಇಲ್ಲಿಯ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ವರದಿ ಬಂದ ನಂತರವಷ್ಟೇ ಏನನ್ನಾದರೂ ಹೇಳಲು ಸಾಧ್ಯ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತಳ ಅಂತಿಮ ದರ್ಶನ ಪಡೆದಿದ್ದಾರೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸೈ ಪಟೇದ್ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.