ಭಟ್ಕಳ: ಭಟ್ಕಳ ತಾಲೂಕು ೩ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಡಾ.ಜಮಿರುಲ್ಲಾ ಷರೀಫ, ಸಂಸ್ಕೃತಿಯ ಉಳಿಯುವಿಕೆಯ ಹೆಸರಿನಲ್ಲಿ ಆಡಿದ ಮಾತುಗಳಿಗೆ ತೀವೃ ವಿರೋಧ ವ್ಯಕ್ತವಾಗಿದೆ.
ಈ ಕುರಿತು ಲಿಖಿತ ಪತ್ರಿಕಾ ಹೇಳಿಕೆ ನೀಡಿರುವ ಅರವಿಂದ ಕರ್ಕಿಕೋಡಿ, ಷರೀಫರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಗೊಂಡ ಸ್ತ್ರೀಯರಿಗೆ ಮೊದಲು ರವಿಕೆ ತೊಡುವುದು ನಿಷಿದ್ಧವಾಗಿತ್ತು. ಗೊಂಡ ಗಂಡು ಮಕ್ಕಳ ಮುಂದಲೆಯ ಮೇಲೆ ಕೂದಲು ಬಿಟ್ಟು ಹಿಂದಲೆಯನ್ನು ಬೋಳಿಸುತ್ತಿದ್ದರು. ನಾಗರಿಕತೆಯ ಪ್ರಭಾವದಿಂದಾಗಿ ಅವರನ್ನು ಇದೀಗ ಬುಡಕಟ್ಟು ಜನಾಂಗವೆಂದು ಗುರುತಿಸುವುದು ಕಷ್ಟಕರವಾಗಿದೆ. ನಂಬಿಕೆ, ಸಂಪ್ರದಾಯಗಳು ಕಳೆದು ಹೋಗಬಾರದು ಎಂದು ಹೇಳಿದ್ದಾರೆ. ಸಮ್ಮೇಳನಾಧ್ಯಕ್ಷರ ಇನ್ನಿತರ ವಿಚಾರಗಳು ಮೌಲ್ಯೀಕವಾಗಿದೆಯಾದರೂ ಈ ರೀತಿ ಬುಡಕಟ್ಟು ಜನಾಂಗ ಉಪಸಂಸ್ಕೃತಿಯ ಹೆಸರಿನಲ್ಲಿ ಹಳೆಯ ಪರಂಪರೆಯಂತೆ ಅನಿಷ್ಠ ಆಚರಣೆಗಳನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಕರೆ ಕೊಡುವುದು ಅನ್ಯಾಯವಾಗುತ್ತದೆ. ಆರೋಗ್ಯಕರ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗಬಹುದೇ ಹೊರತು ಅನಿಷ್ಠ ಆಚಣೆಗಳ ಮೂಲಕ ಹಳೆ ತಲೆ ಮಾರುಗಳನ್ನೇ ಹಿಂಬಾಲಿಸಿ ಎಂದು ಹೇಳುವುದು ಸಮಾಜದ ಸ್ವಾಸ್ಥ್ಯಕ್ಕೆ ಒಳ್ಳೆಯದಲ್ಲ. ಡಾ.ಷರೀಫರು ಗೊಂಡ ಜನಾಂಗ ಹಾಗೂ ಇತರೇ ಬುಡಕಟ್ಟು ಜನಾಂಗಗಳು ಸರಕಾರಿ ಸೌಲತ್ತುಗಳನ್ನು ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂಬ ಕಳಕಳಿಯ ಹಿನ್ನೆಲೆಯಲ್ಲಿ ಈ ರೀತಿ ಕರೆ ನೀಡಿರಬಹುದಾದರೂ ಅದು ಸಾಹಿತ್ಯಿಕ ವಲಯದಿಂದ ರವಾನಿಸಬಹುದಾದ ಸಂದೇಶವಲ್ಲ. ಸಾಹಿತಿಗಳಾದವರು ಇಂತಹ ಸೂಕ್ಷ್ಮ ವಿಚಾರದ ಬಗ್ಗೆ ಗಂಭೀರವಾಗಿ ಚಿಂತಿಸಿ, ನೈತಿಕ, ಬೌದ್ಧಿಕ ಬಲವನ್ನು ಅಶಕ್ತರಲ್ಲಿ ತುಂಬುವಂತಹ ಹೇಳಿಕೆ ನೀಡುವುದು ಒಳ್ಳೆಯದು ಎಂದು ಪ್ರತಿಕ್ರಿಯಿಸಿದ್ದಾರೆ.