ಭಟ್ಕಳ, ಡಿಸೆಂಬರ್ 30: ನಗರದ ಭಟ್ಕಲ್ ಮತ್ತು ಅಂಜುಮಾನ್ ಗಂಡುಮಕ್ಕಳ ಪ್ರೌಢಶಾಲೆ ಹಾಗೂ Islamia Anglo Urdu High School (IAUHS) Bhatkal ಶಾಲೆಗಳು ಜಂಟಿಯಾಗಿ ಆಯೋಜಿಸಿದ್ದ ವಾರ್ಷಿಕ ಸಮಾವೇಶ ಕಾರ್ಯಕ್ರಮವೊಂದರಲ್ಲಿ ಎರೆಡೂ ಶಾಲೆಗಳ ವಿದ್ಯಾರ್ಥಿಗಳು ನೆರೆದಿದ್ದರು.
ಈ ವರ್ಷದಲ್ಲಿ ಉತ್ತಮ ನಿರ್ವಹಣೆ ತೋರಿದ ಮೊಹಮ್ಮದ್ ಮಾಜ್ ರವರಿಗೆ ವರ್ಷದ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ (ವಕಾರ್ ಎ ಇಸ್ಲಾಮಿಯಾ) ಪ್ರಶಸ್ತಿಯನ್ನೂ ಅಂಜುಮನ್ ಶಾಲೆಯ ಮೊಹಮ್ಮದ್ ಮಾಶಾ ರವರಿಗೆ ಅಂಜುಮನ್ ಶಾಲಾ ಅತ್ಯುತ್ತಮ ವಿದ್ಯಾರ್ಥಿ (ವಕಾರ್ ಎ ಅಂಜುಮನ್) ಪ್ರಶಸ್ತಿಗಳನ್ನೂ ನೀಡಿ ಸನ್ಮಾನಿಸಲಾಯಿತು.



ಕಾರ್ಯಕ್ರಮ ಸೈಯದ್ ಅಭಾನ್ ಎಸ್.ಜೆ ಯವರ ಪವಿತ್ರ ಕುರಾನ್ ಪಠಣದೊಂದಿಗೆ ಪ್ರಾರಂಭಿಸಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಐಎಯುಹೆಚ್ ಎಸ್ ಶಾಲೆಯ ಮುಖ್ಯೋಪಾಧ್ಯಾಯರು ಶಾಲೆಯ ಚಟುವಟಿಕೆಗಳ ಹಾಗೂ ಕಳೆದ ವರ್ಷದ ಕ್ರೀಡಾ ಮತ್ತು ಶಿಕ್ಷಣ ಕ್ಷೇತ್ರದಲ್ಲಾದ ಪ್ರಗತಿಯನ್ನು ವಿಶದಪಡಿಸಿದರು. ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಪ್ರಾರಂಭಿಸಲಾದ ಎರೆಡು ಹೊಸ ಕೋರ್ಸುಗಳಾದ ಉರ್ದು ಅದೀಬ್-ಎ-ಕಾಮಿಲ್ ಹಾಗೂ ಉರ್ದು ಅದೀಬ್-ಎ-ಮಾಹಿರ್ ಗಳನ್ನು ಪ್ರಕಟಿಸಿದರು. ಈ ಕೋರ್ಸುಗಳು ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗಲಿವೆ. ಉರ್ದು ಭಾಷಾ ಅಭಿಮಾನಿಗಳು ಈ ಕೋರ್ಸುಗಳಲ್ಲಿ ಭಾಗಿಯಾಗಲು ಕರೆನೀಡಿದರು. ಅಂಜುಮನ್ ಶಾಲೆಯ ಮುಖ್ಯೋಪಾಧ್ಯಾಯರಾದ ಮೊಹಿದ್ದೀನ್ ಖತ್ತಾಲಿಯವರು ಶಾಲೆಯ ಪ್ರಗತಿಯನ್ನು ವಿವರಿಸಿದರು. ನೂರ್ ಮೊಹಮ್ಮದ್ ಕಾರ್ಯಕ್ರಮ ನಿರೂಪಿಸಿದರೆ ಅಲೀಂ ಖಾನ್ ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮೌಲಾನಾ ವಹೀದ್ ಅಹ್ಮದ್ ಅಝಾರಿಯವರು ಶಿಕ್ಷಣದ ಮಹತ್ವವನ್ನು ವಿವರಿಸಿದರು.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಡಾ. ಶೌಖತ್ ಅಜೀಂ ಮಾತನಾಡಿ ಭಾರತದ ಮುಸ್ಲಿಮರು ವಿಶ್ವದಲ್ಲಿಯೇ ಎರಡನೆಯ ಸ್ಥಾನದಲ್ಲಿದ್ದರೂ (ಪ್ರಥಮ ಸ್ಥಾನ ಇಂಡೋನೇಶಿಯಾ) ಶಿಕ್ಷಣದಲ್ಲಿ ಹಿಂದುಳಿದಿರುವುದು ಕಾಳಜಿಗೆ ಕಾರಣವಾಗಿದೆ ಎಂದು ತಿಳಿಸಿದರು. ಇದಕ್ಕೆ ಯಾವುದೇ ರಾಜಕೀಯ ಪಕ್ಷವೂ ಒಲವು ತೋರದೇ ಇರುವುದು ಪ್ರಮುಖ ಕಾರಣವಾಗಿದೆ, ಪ್ರಸ್ತುತ ಇಡಿಯ ಮುಸ್ಲಿಂ ಸಮಾಜ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ ಎಂದು ತಿಳಿಸಿದರು.



ಬಳಿಕ ಮಾತನಾಡಿದ ಅಂಜುಮನ್ ಹೈಸ್ಕೂಲ್ ಪ್ರಧಾನ ಕಾರ್ಯದರ್ಶಿ ಜುಕಾಕು ಶಂಸುದ್ದೀನ್ ಶಾಲೆಯಲ್ಲಿ ಅತ್ಯುತ್ತಮ ಶಿಕ್ಷಣ ನೀಡುವ ಸಲುವಾಗಿ ಹಲವು ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ, ಶಾಲೆಯಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೂ ಕಂಪ್ಯೂಟರ್ ಶಿಕ್ಷಣ ಒದಗಿಸಲು ನಿರ್ಧರಿಸಲಾಗಿದ್ದು ಸಮಾಜದ ಗಣ್ಯರಿಂದ ದೇಣಿಗೆ ಅಪೇಕ್ಷಿಸಲಾಗಿದೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್.ಎಂ. ಸೈಯದ್ ಖಲೀಲುರ್ರಹ್ಮಾನ್ ರವರು ಮಕ್ಕಳ ಶಿಕ್ಷಣದಲ್ಲಿ ಪಾಲಕರ ಪಾತ್ರ ಮಹತ್ತರವಾದುದು ಎಂದು ತಿಳಿಸಿದರು. ಮಗುವಿನ ಶಿಕ್ಷಣದ ವಿಷಯದಲ್ಲಿ ಕೊಂಚ ನಿರ್ಲಕ್ಷ್ಯ ತೋರಿದರೂ ಅದು ಮಗುವಿನ ಮುಂದಿನ ಜೀವನದಲ್ಲಿ ಪ್ರಭಾವ ಬೀರಬಹುದು ಎಂದು ಅವರು ತಿಳಿಸಿದರು. ಪ್ರಸ್ತುತ ದಿನಗಳಲ್ಲಿ ಪ್ರತಿ ಮನೆಗೊಂದು ಕಂಪ್ಯೂಟರ್ ಅಗತ್ಯವಾಗಿದ್ದು ಸಾಧ್ಯವಾದಷ್ಟು ಬೇಗನೇ ಕೊಂಡುಕೊಳ್ಳುವಂತೆ ಆಗ್ರಹಿಸಿದರು. ಮುಂದಿನ ದಿನಗಳಲ್ಲಿ ಕಂಪ್ಯೂಟರ್ ಬಗ್ಗೆ ಅರಿವಿರದ ಮಕ್ಕಳು ಅನಕ್ಷರಸ್ಥರಿಗೆ ಸಮನಾಗುವ ದಿನ ದೂರವಿಲ್ಲ, ಅಲ್ಲದೇ ಕಂಪ್ಯೂಟರ್ ಒದಗಿಸಿದ ಬಳಿಕ ಅದರ ದುರ್ಬಳಕೆಯಾಗದಂತೆ ನೋಡಿಕೊಳ್ಳುವುದೂ ಅಗತ್ಯ ಎಂದು ಅವರು ಎಚ್ಚರಿಸಿದರು.
ಶಾಲೆಯಲ್ಲಿ ನೀಡಲಾಗುತ್ತಿರುವ ಶಿಕ್ಷಣದ ಬಗ್ಗೆ ಯಾವುದೇ ಕುಂದುಕೊರತೆಗಳನ್ನು ಗಮನಿಸಿದರೆ ಪಾಲಕರು ಶಾಲಾ ಆಡಳಿತ ಮಂಡಳಿಯನ್ನು ಸಂಪರ್ಕಿಸುವಂತೆ ಅವರು ಕೋರಿದರು.



ಅಂತಿಮವಾಗಿ ಅಂಜುಮನ್ ಶಾಲೆಯ ವಿವಿಧ ವಿಭಾಗಗಳಲ್ಲಿ ಹೆಚ್ಚಿನ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿಪತ್ರಗಳ ಮೂಲಕ ಪ್ರೋತ್ಸಾಹಿಸಲಾಯಿತು.
ಚಿತ್ರ, ವರದಿ: ಸಾಹಿಲ್ ವರದಿಗಾರರು, ಭಟ್ಕಳ.