ಭಟ್ಕಳ, ಮಾರ್ಚ್ 6: ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಬಾಗಿಲು ಮುರಿದು ಒಳ ಪ್ರವೇಶ ಪಡೆದ ಕಳ್ಳರು ಗೋದ್ರೇಜ್ ಕಪಾಟು ತೆರೆದು ಅಪಾರ ಪ್ರಮಾಣದ ಒಡವೆ ಹಾಗೂ ನಗದನ್ನು ದೋಚಿ ಪರಾರಿಯಾದ ಘಟನೆ ಗುರುವಾರ ರಾತ್ರಿ ಮುರುಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯಾಶನಲ್ ಕಾಲೋನಿಯಲ್ಲಿ ನಡೆದಿದೆ.
ಮನೆಯು ಅಬ್ದುಲ್ ರಹೀಸ್ ಅಹ್ಮದ್ ತಂದೆ ಅಬ್ದುಲ್ ರಹೀಮ್ ಗಂಜಾಮ್ ಎಂಬುವವರಿಗೆ ಸೇರಿದ್ದಾಗಿದ್ದು, ಅವರು ಕುಟುಂಬ ವರ್ಗದವರೊಂದಿಗೆ ಭಟ್ಕಳ ತೆಂಗಿನಗುಂಡಿಯ ನೆಂಟರ ಮನೆಗೆ ಬಂದ ಅವಧಿಯಲ್ಲಿ ಕಳ್ಳತನ ನಡೆದಿದೆ ಎಂದು ಹೇಳಲಾಗಿದೆ. ಎರಡು ಚಿನ್ನದ ನೆಕ್ಲೇಸ್, ಎರಡು ಜೊತೆ ಕಿವಿಯೋಲೆ, ಎರಡು ಉಂಗುರ ಹಾಗೂ ಎರಡು ವಾಚುಗಳು ಕಳುವಾದ ವಸ್ತುಗಳ ಪಟ್ಟಿಯಲ್ಲಿ ಸೇರಿವೆ. ಸುಮಾರು ಐದು ಸಾವಿರ ರೂಪಾಯಿಗೂ ಹೆಚ್ಚು ನಗದು ಹಣವನ್ನು ಕಳ್ಳರು ದೋಚಿದ್ದಾರೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸೈ ಸುಂದರೇಶ ಹೊಳ್ಳಣ್ಣನವರ್ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.