ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಚರ್ಚ್ ಧಾಳಿ - ಭಜರಂಗದಳದ ಕೈವಾಡ, ಜೊತೆಗೆ ಪೋಲೀಸ್ ಅಧಿಕಾರಿಗಳ ವೈಫಲ್ಯ

ಬೆಂಗಳೂರು: ಚರ್ಚ್ ಧಾಳಿ - ಭಜರಂಗದಳದ ಕೈವಾಡ, ಜೊತೆಗೆ ಪೋಲೀಸ್ ಅಧಿಕಾರಿಗಳ ವೈಫಲ್ಯ

Wed, 03 Feb 2010 03:08:00  Office Staff   S.O. News Service

ಬೆಂಗಳೂರು,ಫೆಬ್ರವರಿ೨:ರಾಜ್ಯದಲ್ಲಿ ಸಂಭವಿಸಿದ ಸರಣಿ ಚರ್ಚ್ ಸ್ಫೋಟ ಪ್ರಕರಣಗಳ ಹಿಂದೆ ಭಜರಂಗದಳದ ಕೈವಾಡದ ಜೊತೆಗೆ ಪೊಲೀಸ್ ಅಧಿಕಾರಿಗಳ ವೈಫಲ್ಯವಿದೆ ಎಂದು ನ್ಯಾಯಮೂರ್ತಿ ಬಿ.ಕೆ. ಸೋಮಶೇಖರ್ ನೇತೃತ್ವದ ವಿಚಾರಣಾ ಆಯೋಗ ನೀಡಿರುವ ವರದಿ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಪೂರ್ಣ ವರದಿ ಸಲ್ಲಿಕೆಯಾದ ನಂತರ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ಹೇಳಿದ್ದಾರೆ.

 

 

ತಮ್ಮ ಅಧಿಕೃತ ನಿವಾಸ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಂತರ ವರದಿ ಕೈಸೇರಿದೆ. ಆದರೆ ಪೂರ್ಣವರದಿ ಬರುವವರೆವಿಗೆ ಯಾವುದೇ ಕ್ರಮ ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

 

 

ಅಂತಿಮ ವರದಿ ಸಲ್ಲಿಸಿದ ನಂತರ ವಿವಿಧ ವಿಧಾನಗಳಂತೆ ಸರ್ಕಾರ ಪರಿಶೀಲನೆ ನಡೆಸಿ ವಿಧಾನಮಂಡಲದಲ್ಲಿ ಮಂಡಿಸಲಿದೆ. ನಂತರ ಸದನದಲ್ಲೂ ಈ ಕುರಿತು ಚರ್ಚೆಯಾಗಬೇಕಾಗುತ್ತದೆ. ಆಮೇಲೆ ಸರ್ಕಾರ ವರದಿಯಲ್ಲಿನ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

 

ಸಾಮಾನ್ಯವಾಗಿ ಸರ್ಕಾರಕ್ಕೆ ವರದಿ ಸಲ್ಲಿಕೆಯಾದ ನಂತರ ನಡೆಯುವ ವಿಧಿವಿಧಾನಗಳಂತೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಇದರಲ್ಲಿ ಯಾವುದೇ ವಿವಾದವಿಲ್ಲ. ಆದರೆ ಸದ್ಯದ ಪರಿಸ್ಧಿತಿಯಲ್ಲಿ ತಾವು ಏನನ್ನೂ ಹೇಳಲು ಬಯಸುವುದಿಲ್ಲ ಎಂದರು.

 

 

ರಾಜ್ಯದಲ್ಲಿ ಮತೀಯ ಅಲ್ಪಸಂಖ್ಯಾತರ ರಕ್ಷಣೆಗೆ ಸರ್ಕಾರ ಮೊದಲ ಆದ್ಯತೆ ನೀಡುತ್ತದೆ. ಅಲ್ಪಸಂಖ್ಯಾತರ ಸಮುದಾಯದ ಮೇಲೆ ನಡೆಯುವ ದಾಳಿಯನ್ನು ಸರ್ಕಾರ ಹಗುರವಾಗಿ ಪರಿಗಣಿಸುವುದಿಲ್ಲ. ಅಂತಹ ಶಕ್ತಿಗಳನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲಾಗುವುದು ಎಂದು ಎಚ್ಚರಿಕೆ ನೀಡಿದರು.

 

 

ಪ್ರತಿಕ್ರಿಯೆ ಇಲ್ಲ:ರಾಜ್ಯ ಸರ್ಕಾರದ ಆಡಳಿತ ವೈಖರಿಯ ಬಗ್ಗೆ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ಪ್ರತಿನಿತ್ಯ ಆರೋಪ ಮಾಡುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಯಿಸಲು ಯಡಿಯೂರಪ್ಪ ನಿರಾಕರಿಸಿದರು.

 

 

ರಾಜ್ಯಪಾಲರು, ರಾಷ್ಟ್ರಪತಿಯವರು, ಕೇಂದ್ರ ಸಚಿವರು ಮಾಡುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಬಾರದು ಎಂದು ನಿರ್ಧರಿಸಿದ್ದೇನೆ. ಅವರ ಹೇಳಿಕೆಗಳ ಬಗ್ಗೆ ಏನನ್ನೂ ಹೇಳುವುದಿಲ್ಲ ಎಂದರು. 

 


Share: