ಕಾರವಾರ,೨೫- ಜಿಲ್ಲೆಯಲ್ಲಿ ಗೋಹತ್ಯೆಯು ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿ ಹಿಂದು ಪರ ಸಂಘಟನೆಗಳು ಇಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಜಿಲ್ಲೆಯಲ್ಲಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಆಗ್ರಹಿಸಿವೆ.
ಬೆಳಿಗ್ಗೆ ೧೧ ಗಂಟೆಯ ಸುಮಾರಿಗೆ ಅಪರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ವಿಶ್ವ ಹಿಂದು ಪರಿಷತ್ನ ಮುಖಂಡರು, ಭಟ್ಕಳದಲ್ಲಿ ಭಕ್ರೀದ್ ದಿನದಂದು ಹತ್ಯೆ ಮಾಡಲು ತಂದಿರುವ ಗೋವುಗಳನ್ನು ವಶಪಡಿಸಿಕೊಳ್ಳುವಂತೆ ಆದೇಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಭಟ್ಕಳದಲ್ಲಿ ಸುಮಾರು ೧೦೦೦ ಗೋವುಗಳನ್ನು ಹತ್ಯೆ ಮಾಡಲು ಕಟ್ಟಿಡಲಾಗಿದೆ. ನಗರದ ನವಾಯತ್ ಕಾಲೋನಿ, ಫಾರುಕ್ ಮಸೀದಿ ಹತ್ತಿರ, ಸಿದ್ದಿಕ್ ಸ್ಟ್ರೀಟ್, ಡಾರಾಂಟಾ, ಮುಗ್ದಂ ಕಾಲೋನಿಗಳಲ್ಲಿ ಗೋವುಗಳನ್ನು ಕಟ್ಟಿಡಲಾಗಿದೆ. ಭಟ್ಕಳದಲ್ಲಿ ಒಂದೇ ಒಂದು ಕಸಾಯಿಖಾನೆಗೆ ಪರವಾನಿಗೆ ಇಲ್ಲ. ಹೀಗಿರುವಾಗ ಹಬ್ಬದ ನೆಪದಲ್ಲಿ ಸಾವಿರಾರು ಗೋವುಗಳನ್ನು ಮಾರಣ ಹೋಮ ಮಾಡಿ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದು ಕೋಮುಭಾವನೆಯನ್ನು ಪ್ರಚೋದಿಸುತ್ತಿದ್ದಾರೆ. ಇದೊಂದು ಅನಧಿಕೃತ ಸುಮಾರು ೫ ಕೋಟಿ ರೂ.ಗಳ ದೊಡ್ಡ ಧಂದೆಯಾಗಿದ್ದು, ತಂಜೀಮ್ ಸಂಸ್ಥೆಯ ಕೆಲವು ಸದಸ್ಯರು ಮತ್ತು ಕೆಲವು ಮತಾಂಧ ಮುಸ್ಲಿಂ ನಾಯಕರು ಹಬ್ಬದ ನೆಪದಲ್ಲಿ ಸ್ಥಳೀಯ ಮುಸ್ಲಿಮರ ಭಾವನೆಗಳನ್ನು ಕೆರಳಿಸಿ ಈ ಧಂದೆಯಲ್ಲಿ ತೊಡಗಿದ್ದಾರೆ ಎಂದು ವಿಶ್ವ ಹಿಂದು ಪರಿಷತ್ ಮನವಿಯಲ್ಲಿ ತಿಳಿಸಿದೆ.
ಸ್ಥಳೀಯ ಹಿರಿಯ ಪೊಲೀಸ್ ಅಧಿಕಾರಿಗಳನ್ನು ತಮ್ಮ ಪ್ರಭಾರ ಬಳಸಿಕೊಂಡು ಹಿಂದು ಕಾರ್ಯಕರ್ತರ ಮೇಲೆ ವಿನಾಕಾರಣ ಕ್ರಿಮಿನಲ್ ಕೇಸ್ ಹಾಕಲಾಗುತ್ತಿದ್ದು, ಇಲ್ಲಿಯ ಹಿರಿಯ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ಪರಿಣಾಮಗಳಿಗೆ ಸರಕಾರ ಹಾಗೂ ಭಟ್ಕಳದ ತಂಜೀಮ್ ಸಂಸ್ಥೆ ನೇರವಾಗಿ ಹೊಣೆಗಾರರಾಗಬೇಕಾಗುತ್ತದೆ ಎಂದು ವಿ.ಹಿಂ.ಪ. ಆಗ್ರಹಿಸಿದೆ.
ಈ ಸಂದರ್ಭದಲ್ಲಿ ವಿ.ಹಿಂ.ಪ. ಜಿಲ್ಲಾ ಸಹ ಕಾರ್ಯದರ್ಶಿ ಪ್ರಸಾದ ಕಾಮತ, ತಾಲೂಕು ಕಾರ್ಯದರ್ಶಿ ಅಶೋಕ ವರ್ಣೇಕರ, ನಂದಿನಿ ಪೊಕಳೆ, ಜಯಶ್ರೀ ಕೃಷ್ಣಮೂರ್ತಿ, ಸುಧಾ ಐಗಳ, ಹಿಂದು ಜನಜಾಗೃತಿ ಸಮಿತಿಯ ಸಾಗರ ಕುರ್ಡೇಕರ, ವಿಷ್ಣು ಸಮಾಜದ ನರಸಿಂಗ ಪಟೇಲ, ಮಾಂಗಿಲಾಲ ಪಟೇಲ್ ಇತರರು ಇದ್ದರು.
* ಶ್ರೀರಾಮ ಸೇನೆ ಪ್ರತಿಭಟನೆ
ಗೋ ಹತ್ಯೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶ್ರೀರಾಮ ಸೇನೆಯು ರಾಜ್ಯಾಧ್ಯಕ್ಷ ಪ್ರಮೋದ ಮುತಾಲಿಕ್ ನೇತೃತ್ವದಲ್ಲಿ ಇಂದು ಇಲ್ಲಿನ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿತು.
ಮಿನಿ ವಿಧಾನಸೌಧದ ಎದುರು ಜಮಾಯಿಸಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪ್ರಮೋದ ಮುತಾಲಿಕ್, ಜಿಲ್ಲೆಯಲ್ಲಿರುವ ಅನಧಿಕೃತ ಕಸಾಯಿಖಾನೆಗಳನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮುಚ್ಚಿಸದಿದ್ದಲ್ಲೇ ಸೇನೆಯ ಕಾರ್ಯಕರ್ತರೇ ಕಸಾಯಿಖಾನೆಗಳನ್ನು ಸುಟ್ಟು ಭಸ್ಮಮಾಡುತ್ತಾರೆ. ಮುಂದಿನ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಕ್ರೀದ್ ಹಬ್ಬದ ನಿಮಿತ್ತ ಭಟ್ಕಳವೂ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಸುಮಾರು ೫ ಸಾವಿರ ಗೋವುಗಳನ್ನು ದೇವರ ಹೆಸರಿನಲ್ಲಿ ಬಲಿಕೊಡಲು ಗುಪ್ತ ಸ್ಥಳಗಳಲ್ಲಿ ಅಡಗಿಸಿ ದಾಸ್ತಾನು ಮಾಡಿಟ್ಟಿದ್ದಾರೆ. ಹಬ್ಬದ ದಿನಗಳ ಸಂದರ್ಭದಲ್ಲಿ ಯಾವುದೇ ಪ್ರಾಣಿಗಳನ್ನು ಬಲಿ ಕೊಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರೂ ಪೊಲೀಸ್ ಇಲಾಖೆ ರಾಜಕೀಯ ಒತ್ತಡ, ಸಂಖ್ಯಾ ಬಲಕ್ಕೆ ಹೆದರಿ ಕಾನೂನನ್ನು ಗಾಳಿಗೆ ತೂರುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿಗಳಿಗೆ ಪ್ರಮೋದ ಮುತಾಲಿಕ್ ಮನವಿ ಪತ್ರವನ್ನು ನೀಡಿದರು. ಪ್ರತಿಭಟನೆಯಲ್ಲಿ ಸೇನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವರಾಜ ಅಂಬಾರಿ, ಭಟ್ಕಳ ತಾಲೂಕು ಸಂಚಾಲಕ ಜಟ್ಟಪ್ಪ ನಾಯ್ಕ, ಕುಮಾರ ನಾಯ್ಕ, ಶಂಕರ ನಾಯ್ಕ, ಸತೀಶ ನಾಯ್ಕ, ಜಯಂತ ನಾಯ್ಕ ಇತರರು ಪಾಲ್ಗೊಂಡಿದ್ದರು.