ಬೆಂಗಳೂರು,ಜ,೩೧-ಭಿನ್ನಮತದಿಂದ ತಲ್ಲಣಿಸಿರುವ ರಾಜ್ಯ ಬಿಜೆಪಿಯನ್ನು ಲಕ್ಷ್ಮಣರೇಖೆಯ ವ್ಯಾಪ್ತಿಗೆ ತರಲು ಮುಂದಾಗಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ,ಇನ್ನು ಮುಂದೆ ಪಕ್ಷದಲ್ಲಿ ಶಿಸ್ತನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಗುಡುಗಿದ್ದಾರೆ.
ಇಂದಿಲ್ಲಿ ಸುದ್ಧಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು,ಪಕ್ಷದ ವಿಚಾರಗಳನ್ನು ಇನ್ನು ಮುಂದೆ ಪಕ್ಷದ ವೇದಿಕೆಯಲ್ಲಿ ಚರ್ಚೆಗೊಳಪಡಿಸಬೇಕು.ಬಹಿರಂಗವಾಗಿ ಮಾತನಾಡಿದರೆ ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ.ದೇಶದ ಅತ್ಯುತ್ತಮ ಮುಖ್ಯಮಂತ್ರಿಗಳ ಪೈಕಿ ಅವರೂ ಒಬ್ಬರು ಎಂದು ಸರ್ಟಿಫಿಕೇಟ್ ನೀಡಿದ ಅವರು,ಅಭಿವೃದ್ಧಿಯ ವಿಚಾರದಲ್ಲಿ ಈ ಸರ್ಕಾರದ ಕಾರ್ಯಕ್ರಮಗಳು ತಮಗೆ ತೃಪ್ತಿ ನೀಡಿವೆ ಎಂದು ಹೇಳಿದರು.
ಇಡೀ ಪಕ್ಷ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹಿಂದಿದೆ.ಅಭಿವೃದ್ಧಿಯ ವಿಚಾರದಲ್ಲಿ ಪಕ್ಷದ ನಾಯಕತ್ವ ಯಾವತ್ತೂ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು.
ಬೆಲೆಏರಿಕೆಗೆ ಯುಪಿಎ ಕಾರಣ
ದೇಶದಲ್ಲಿ ಆಹಾರ ಧಾನ್ಯಗಳ ಬೆಲೆ ಏರಿಕೆ ಹಾಗೂ ಹಣದುಬ್ಬರ ಏರಿಕೆಗೆ ಯುಪಿಎ ಹಾಗೂ ಕಾಂಗ್ರೆಸ್ ಸರ್ಕಾರದ ತಪ್ಪು ನೀತಿಗಳೇ ಕಾರಣ ಎಂದು ಇದೇ ಸಂಧರ್ಭದಲ್ಲಿ ನಿತಿನ್ ಗಡ್ಕರಿ ಆರೋಪಿಸಿದರು.ಆಹಾರ ಧಾನ್ಯಗಳ ಬೆಲೆ ಏರಿಕೆಯಿಂದ ಹಾಗೂ ಹಣದುಬ್ಬರದ ಕಾರಣದಿಂದ ದೇಶದಲ್ಲಿ ಬಡತನದ ಪ್ರಮಾಣ ಶೇಕಡಾ ಹನ್ನೆರಡರಷ್ಟು ಏರಿಕೆಯಾಗಿದೆ ಎಂದೂ ಅವರು ವಿಷಾದಿಸಿದರು. ಕೇಂದ್ರದಲ್ಲಿ ಕಾಂಗ್ರೆಸ್ ಮತ್ತು ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಬಂದಾಗಲೆಲ್ಲ ಆಹಾರಧಾನ್ಯಗಳ ಬೆಲೆ ಏರಿಕೆಯಾಗಿದೆ ಎಂದ ಅವರು,ಈಗಂತೂ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗಿದೆ ಎಂದು ಹೇಳಿದರು. ಕೇಂದ್ರ ಸರ್ಕಾರ ಆಹಾರ ಭದ್ರತೆಯ ವಿಷಯದಲ್ಲಿ ನಿರ್ಲಕ್ಷ್ಯ ತೋರಿದ್ದು ಹದಿನೇಳು ಅಗತ್ಯ ವಸ್ತುಗಳನ್ನು ವಿನಿಮಯ ಮಾಡಿಕೊಳ್ಳುವ ಕಾಯಿದೆ ಹಾಗೂ ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಪದೇ ಪದೇ ಕಾನೂನುಗಳನ್ನು ತಿದ್ದುಪಡಿ ಮಾಡಿರುವುದು ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿದೆ ಎಂದರು.
ಸಕ್ಕರೆಯ ಮುಕ್ತ ರಫ್ತಿಗೆ ಉತ್ತೇಜನ ನೀಡಿ ಕೆಜಿಗೆ ೧೨.೫೦ ರೂಗಳಂತೆ ೪೮ ಲಕ್ಷ ಟನ್ ಸಕ್ಕರೆಯನ್ನು ರಫ್ತು ಮಾಡಲಾಗಿದೆ.ಈ ಸಕ್ಕರೆ ದೇಶದಲ್ಲೇ ಉಳಿದಿದ್ದರೆ ಬೆಲೆ ಈ ಪ್ರಮಾಣದಲ್ಲಿ ಏರುತ್ತಿರಲಿಲ್ಲ ಎಂದು ಅಭಿಪ್ರಾಯ ಪಟ್ಟರು. ಇಂತಹ ಕೆಲಸ ಮಾಡಿದ ಪರಿಣಾಮವಾಗಿ ಈಗ ನಾವೇ ಹೊರದೇಶಗಳಿಂದ ದುಬಾರಿ ಬೆಲೆ ತೆತ್ತು ಸಕ್ಕರೆ ಖರೀದಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್ನ ಆಹಾರ ನೀತಿಯ ಪರಿಣಾಮವಾಗಿ ರೈತ ಬೆಳೆದ ಬೆಳೆಗೆ ಕಡಿಮೆ ಬೆಲೆ ಸಿಗುತ್ತಿದೆ.ಕಾಳಸಂತೆಕೋರರಿಗೆ ಹಬ್ಬವಾಗುತ್ತಿದೆ.ಗ್ರಾಹಕರು ಲೂಟಿಗೆ ಒಳಗಾಗಬೇಕಿದೆ.
ಪ್ರಧಾನಿಯಾಗಿರುವ ಮನ್ಮೋಹನ್ಸಿಂಗ್ ಆರ್ಥಿಕ ತಜ್ಞರಾಗಿರುವುದರಿಂದ ದೇಶಕ್ಕೆ ಒಳ್ಳೆಯದಾಗುತ್ತದೆ ಎಂಬ ಭಾವನೆ ವ್ಯಕ್ತವಾಗಿತ್ತು.ಆದರೆ ಅದೀಗ ಅಂತಹ ನಿರೀಕ್ಷೆ ಹುಸಿಯಾಗಿದೆ ಎಂದು ಟೀಕಿಸಿದರು.ಇಂತಹ ಕಾರಣಗಳಿಂದ ಇವತ್ತು ದೇಶದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದ ಅವರು,ಕೇಂದ್ರ ಸರ್ಕಾರ ಇನ್ನಾದರೂ ತನ್ನ ರಫ್ತು ನೀತಿಯನ್ನು ಬದಲಿಸಿಕೊಂಡು ಆಹಾರಧಾನ್ಯಗಳ ಬೆಲೆ ಇಳಿಸಲು ಅಗತ್ಯದ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಬೆಲೆ ಏರಿಕೆ ವಿರುದ್ಧ ಬಿಜೆಪಿ ದೇಶಾದ್ಯಂತ ಆಂದೋಲನ ನಡೆಸಲಿದೆ ಎಂದ ಅವರು,ಇವತ್ತು ಆಹಾರ ಪದಾರ್ಥಗಳ ಬೆಲೆ ಈ ಪ್ರಮಾಣದಲ್ಲಿ ಏರಿದ್ದರೂ ಮುಂಬರುವ ದಿನಗಳಲ್ಲಿ ಬಿಜೆಪಿಯ ಬಲ ಎರಡಂಕಿಗೆ ಇಳಿಯಲಿದೆ ಎಂದು ಪ್ರಧಾನಿ ಮನ್ಮೋಹನ್ಸಿಂಗ್ ಹಾಸ್ಯಾಸ್ಪದವಾಗಿ ಮಾತನಾಡುತ್ತಿದ್ದಾರೆ ಎಂದರು.ಪತ್ರಿಕಾಗೋಷ್ಟಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ,ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ,ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್,ಗೃಹ ಸಚಿವ ಡಾ||ವಿ.ಎಸ್.ಆಚಾರ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.