ಮಂಗಳೂರು, ಡಿ.೧: ಏಡ್ಸ್ ರೋಗದ ಬಗ್ಗೆ ಪ್ರಸ್ತುತ ನಗರ ಪ್ರದೇಶಗಳಿಗಿಂತಲೂ ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದ್ದು, ಪ್ರಾಥಮಿಕ ಮಟ್ಟದಿಂದಲೇ ವಿದಎ;ಗ್ಣ್ಯಿಆರೋಗ್ಯ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವಂತಾದರೆ ಇಂತಹ ರೋಗಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅಭಿಪ್ರಾಯಿಸಿದ್ದಾರೆ.
ನಗರದ ಪುರಭವನದಲ್ಲಿ ಇಂದು ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಸಹ್ಯಾದ್ರಿ ಆರೋಗ್ಯ ವಿಜ್ಞಾನದ ಆಶ್ರಯದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಏಡ್ಸ್ ಪೀಡಿತರು ಅಸ್ಪಶ್ಯರಲ್ಲ ಎಂಬ ವಾಸ್ತವವನ್ನು ಅರಿಯಬೇಕಾಗಿದೆ. ಏಡ್ಸ್ ಜಾಗೃತಿ ಜೊತೆಗೆ ಪರಿಸರ ಜಾಗೃತಿಯೂ ಅಗತ್ಯ ಎಂದು ಹೇಳಿದ ಪಾಲೆಮಾರ್, ಏಡ್ಸ್ ರೋಗ ಹರಡುವಲ್ಲಿ ಯುವ ಜನಾಂಗದ ಮೊಬೈಲ್ ಬಳಕೆಯೂ ಕಾರಣ ಎಂದವರು ಅಭಿಪ್ರಾಯಿಸಿದರು.
ವೀಣಾಧರಿಯ ನೆನಪು
ಎಚ್ಐವಿ ಪೀಡಿತರಲ್ಲಿ ಆತ್ಮಸ್ಥೆರ್ಯ ತುಂಬುವ ಮೂಲಕ ಏಡ್ಸ್ ಪೀಡಿತರ ಮನೋಬಲವನ್ನು ಹೆಚ್ಚಿಸುವಲ್ಲಿ ಣಾಧರಿ ಅತ್ಯಂತ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದರು ಎಂದು ಹೇಳುವ ಮೂಲಕ ಸಚಿವ ಪಾಲೆಮಾರ್ರವರು ಕಾರ್ಯಕ್ರಮದಲ್ಲಿ ವೀಣಾಧರಿಯನ್ನು ನೆನಪಿಸಿಕೊಂಡರು.
ಆಸ್ಪತ್ರೆಗಳಲ್ಲಿ ಎಚ್ಐವಿ ಪೀಡಿತರ ಪ್ರತ್ಯೇಕ ವಾರ್ಡ್ ಅಗತ್ಯ
ಪ್ರತಿಯೊಂದು ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಲ್ಲಿಯೂ ಎಚ್ಐವಿ ಪೀಡಿತರ ಚಿಕಿತ್ಸೆಗಾಗಿ ಪ್ರತ್ಯೇಕ ವಿಭಾಗವನ್ನು ತೆರೆಯುವ ಬಗ್ಗೆ ಕಾನೂನು ಜಾರಿಯಾಗಬೇಕು ಎಂದು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಉಪಕುಲಪತಿ ಡಾ.ಎಸ್. ರಮಾನಂದ ಶೆಟ್ಟಿ ಹೇಳಿದರು.
ಎಚ್ಐವಿ ಬಗ್ಗೆ ವೈದ್ಯರು ಫೆಲೋಶಿಪ್ ಮಾಡಲು ಹಾಗೂ ನರ್ಸಿಂಗ್ ಕೋರ್ಸ್ನ್ನು ಅಳವಡಿಸುವ ಅಗತ್ಯವಿದೆ ಎಂದು ಹೇಳಿದ ಅವರು, ಎಚ್ಐವಿ ಪೀಡಿತರಿಗೆ ಗೌರವ ನೀಡುವುದನ್ನು ಸಮಾಜ ಕಲಿತರೆ ಶೇ. ೫೦ರಷ್ಟು ಅವರ ರೋಗ ನಿವಾರಣೆಯಾದಂತೆ. ಈ ಮೂಲಕ ಅವರಲ್ಲಿ ಆತ್ಮಸ್ಥೆರ್ಯವನ್ನು ತುಂಬಿಸುವ ಕೆಲಸವನ್ನು ಸಮಾಜ ಮಾಡಬೇಕು ಎಂದವರು ಹೇಳಿದರು.
ಕೇವಲ ನಗರ ಪ್ರದೇಶಗಳಿಗೆ ಸೀಮಿತಗೊಡಿದ್ದ ಏಡ್ಸ್ ರೋಗ ಈಗ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸಿದೆ. ಭಾರತದಲ್ಲಿ ೨೫.೫ ಲಕ್ಷ ಜನರು ಏಡ್ಸ್ ರೋಗದಿಂದ ಬಳಲುತ್ತಿದ್ದರೆ, ಈ ಪ್ರಮಾಣಕ್ಕೆ ಕರ್ನಾಟಕದ ಕೊಡುಗೆ ಶೇ. ೧೦ರಷ್ಟಿದೆ. ಕರ್ನಾಟಕದ ಸುಮಾರು ೨.೫ ಲಕ್ಷ ಜನರು ಏಡ್ಸ್ ರೋಗದಿಂದ ಬಳಲುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದವರು ಹೇಳಿದರು.
ಈ ನಿಟ್ಟಿನಲ್ಲಿ ರೋಗವನ್ನು ನಿಯಂತ್ರಿಸುವಲ್ಲಿ ರಾಜ್ಯ ಸರಕಾರ ಬಹಳಷ್ಟು ಮುತುವರ್ಜಿಯಿಂದ ಕೆಲಸ ನಿರ್ವಹಿಸಬೇಕೆಂದು ಕರೆ ನೀಡಿದ ಅವರು, ರೋಗ ನಿಯಂತ್ರಣದಲ್ಲಿ ನರ್ಸಿಂಗ್ ಕಾಲೇಜುಗಳು, ವೈದ್ಯಕೀಯ ಕಾಲೇಜುಗಳ ಜೊತೆಗೆ ಎನ್ಜಿಓಗಳ ಪಾತ್ರವೂ ಮಹತ್ತರವಾದುದು ಎಂದರು.
ಎಚ್ಐವಿ ಪೀಡಿತರಿಗೆ ಮಾನಸಿಕ ಧೈರ್ಯ ನೀಡಿ
ಎಚ್ಐವಿ ಪೀಡಿತರ ಪರವಾಗಿ ಮಾತನಾಡಿ ಆತ್ಮಸ್ಥೆರ್ಯ ತುಂಬಿದ ಸುರೇಶ್ ಸಾಲ್ಯಾನ್, ಎಚ್ಐವಿ ಪೀಡಿತರಿಗೆ ಔಷಧಿಗಿಂತಲೂ ಮುಖ್ಯವಾಗಿ ಮಾನಸಿಕವಾಗಿ ಧೈರ್ಯ ತುಂಬುವುದು ಅತ್ಯಗತ್ಯ ಎಂದರು.
ಎಚ್ಐವಿ ಎಂಬುದು ಸೋಂಕು ಪೀಡಿತ ವ್ಯಕ್ತಿಯ ಜೀವನ ಪರ್ಯಂತದವರೆಗೆ ಕಾಡುವ ಕಾಯಿಲೆಯಾಗಿದ್ದರೂ ಈ ಬಗ್ಗೆ ಸರಕಾರ ಇತರ ಸಾಂಕ್ರಾಮಿಕ ರೋಗಗಳ ಬಗ್ಗೆ ತೋರುವ ಕಾಳಜಿಯನ್ನು ತೋರದಿರುವುದು ವಿಷಾದನೀಯ ಎಂದು ಹೇಳಿದ ಸುರೇಶ್ ಸಾಲ್ಯಾನ್, ಕೇವಲ ವರ್ಷಕ್ಕೊಮ್ಮೆ ಈ ದಿನವನ್ನು ಆಚರಿಸಿದರೆ ಸಾಲದು, ಮುಖ್ಯವಾಗಿ ಸೋಂಕು ಪೀಡಿತರ ಬಗ್ಗೆ ಕಾಳಜಿ, ಧೈರ್ಯ ತುಂಬುವ ಕೆಲಸ ಮಾಡಿ ಎಂದು ಮನವಿ ಮಾಡಿದರು.
ಸಿಂಡಿಕೇಟ್ ಸದಸ್ಯ ಡಾ. ಜಯಕರ ಶೆಟ್ಟಿ, ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಐರಿನ್ ವೇಗಸ್, ಪ್ರೊ. ಜೆಸಿಂತಾ, ಬಾಲಚಂದ್ರ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಭಂಡಾರಿ ಪ್ರತಿಷ್ಠಾನದ ಅಧ್ಯಕ್ಷ ಮಂಜುನಾಥ ಭಂಡಾರಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ವಿಶ್ವನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.