ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಕಾರವಾರ: ಕೈಗಾ ವಿಕಿರಣ ಸೋರಿಕೆ: 40ಕ್ಕೂ ಹೆಚ್ಚು ಜನ ಅಸ್ವಸ್ಥ

ಕಾರವಾರ: ಕೈಗಾ ವಿಕಿರಣ ಸೋರಿಕೆ: 40ಕ್ಕೂ ಹೆಚ್ಚು ಜನ ಅಸ್ವಸ್ಥ

Sat, 28 Nov 2009 03:01:00  Office Staff   S.O. News Service
ಕಾರವಾರ, ನವೆಂಬರ್ 28 : ಕೈಗಾ ಅಣು ವಿದ್ಯುತ್ ಘಟಕದ ನಿರ್ವಹಣೆ ಕಾರ್ಯದಲ್ಲಿ ತೊಡಗಿದ್ದ ಸುಮಾರು ೪೦ಕ್ಕೂ ಹೆಚ್ಚು ಜನರಲ್ಲಿ ಗುರುವಾರ ರಾತ್ರಿ ವಿಕಿರಣದ ಅಂಶ ಹೆಚ್ಚಿ, ಅಸ್ವಸ್ಥರಾಗಿ ತೀವ್ರ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಚಿಕಿತ್ಸೆ ಪಡೆದ ಎಲ್ಲರೂ ಶುಕ್ರವಾರ ಸಂಜೆ ವೇಳೆಗೆ ಮಾಮೂಲಿ ಸ್ಥಿತಿಗೆ ಮರಳಿದ್ದಾರೆ. 

ಇದರಿಂದ ಕೆಲ ಕಾಲ ಕೈಗಾ ಘಟಕದಲ್ಲಿ ವಿಕಿರಣ ಸೋರಿಕೆಯ ಭೀತಿ ಉಂಟಾಗಿತ್ತು. ತಕ್ಷಣ ಸರದಿಯ ಮೇಲೆ ನಿರ್ವಹಣೆ ಕೆಲಸದಲ್ಲಿ ತೊಡಗಿದ್ದವರನ್ನು ಘಟಕದಿಂದ ಹೊರಕ್ಕೆ ಕಳುಹಿಸಿ, ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಯಿತು. 
 
ನಿರ್ವಹಣೆಗಾಗಿ ಕೈಗಾದ ಒಂದನೇ ಘಟಕದಲ್ಲಿ ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತ್ತು. ಕೆಲ ದಿನಗಳಿಂದ ನಿರ್ವಹಣಾ ಕಾರ್ಯ ಆರಂಭವಾಗಿತ್ತು. ಗುರುವಾರ ಸಂಜೆ ಕೈಗಾದ ಸುಮಾರು ೩೦ರಷ್ಟು ಸಿಬ್ಬಂದಿ ಹಾಗೂ ೩೦ರಷ್ಟು ಗುತ್ತಿಗೆ ಕಾರ್ಮಿಕರು ರಿಯಾಕ್ಟರ್ ನಿರ್ವಹಣೆ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ರಿಯಾಕ್ಟರ್ ಪೈಪ್‌ನಿಂದ ಸ್ವಲ್ಪ ಪ್ರಮಾಣದ ಭಾರಜಲ ಹಾಗೂ ಹವೆಯನ್ನು ತೆಗೆಯಲಾಗಿತ್ತು. ಈ ಕಾರ್ಯದಲ್ಲಿ ತೊಡಗಿದ್ದ ಬಹುತೇಕ ಜನರು ಸಮೀಪದಲ್ಲಿದ್ದ ಕೂಲರ್‌ನಿಂದ ನೀರನ್ನು ಕುಡಿದಿದ್ದರು. 

ದೇಹದಲ್ಲಿ ವಿಕಿರಣ ಪತ್ತೆ:  ತರುವಾಯ ವಿಕಿರಣ ಮಾಪಕ ಯಂತ್ರದಲ್ಲಿ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಿದಾಗ ಸುಮಾರು ೪೦ರಷ್ಟು ಜನರ ದೇಹದಲ್ಲಿ ವಿಕಿರಣದ ಪ್ರಮಾಣ ಜಾಸ್ತಿಯಾಗಿರುವುದು ಕಂಡುಬಂತು. ಸ್ವಲ್ಪ ಮಟ್ಟಿಗೆ ಅಸ್ವಸ್ಥರೂ ಆದರು. ತಕ್ಷಣ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮಲ್ಲಾಪುರದಲ್ಲಿರುವ ಅಣು ವಿದ್ಯುತ್ ನಿಗಮದ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. 
ಚಿಕಿತ್ಸೆಗೆ ಸ್ಪಂದಿಸಿದ ಎಲ್ಲ ಸಿಬ್ಬಂದಿ, ಕಾರ್ಮಿಕರಲ್ಲಿ ವಿಕಿರಣದ ಅಂಶ ಕಡಿಮೆಯಾಗಿ ಎಲ್ಲರೂ ಮಾಮೂಲಿನಂತಾಗಿದ್ದು, ಆಸ್ಪತ್ರೆಯಿಂದ ಮರಳಿದ್ದಾರೆ. ಘಟನೆಯ ಮಾಹಿತಿ ತಿಳಿದೊಡನೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಕೈಗಾ ಅಧಿಕಾರಿಗಳು ಹಾಗೂ ಆಸ್ಪತ್ರೆಗೆ ದಾಖಲಾದವರಿಂದ ವಿವರಗಳನ್ನು ಪಡೆದುಕೊಂಡರು.

ಈ ಕುರಿತು ‘ಕನ್ನಡಪ್ರಭ’ಕೈಗಾ ಯೋಜನೆಯ ಅಧಿಕಾರಿಗಳಲ್ಲಿ ಪ್ರಶ್ನಿಸಿದಾಗ, ರಿಯಾಕ್ಟರ್ ನಿರ್ವಹಣೆ ಸಂದರ್ಭದಲ್ಲಿ ನೀರು ಕುಡಿದಿರುವುದರಿಂದ ಕೆಲಸದಲ್ಲಿ ತೊಡಗಿದ್ದವರಲ್ಲಿ ವಿಕಿರಣದ ಅಂಶ ಹೆಚ್ಚಿರಬೇಕು. ಆದರೆ ಭಯ ಪಡಬೇಕಾದ ಅಗತ್ಯವಿಲ್ಲ. ಯಾರಿಗೂ ಯಾವುದೇ ಅಪಾಯ ಉಂಟಾಗಿಲ್ಲ ಎಂದು ತಿಳಿಸಿದರು. 
ತನಿಖೆಗೆ ಆದೇಶ: ತುರ್ತು ಪರಿಸ್ಥಿತಿ ನಿರ್ವಹಣೆ ಸಮಿತಿ ಅಧ್ಯಕ್ಷ, ಜಿಲ್ಲಾಧಿಕಾರಿ ಚನ್ನಪ್ಪ ಗೌಡ ಅವರನ್ನು ‘ಕನ್ನಡಪ್ರಭ’ ಪ್ರಶ್ನಿಸಿದಾಗ, ಘಟನೆಯ ಬಗ್ಗೆ ಕೈಗಾದ ಅಧಿಕಾರಿಗಳು ತಮಗೆ ಮಾಹಿತಿ ನೀಡಿದ್ದಾರೆ. ರಿಯಾಕ್ಟರ್ ನಿರ್ವಹಣೆಯಲ್ಲಿ ತೊಡಗಿದ್ದಾಗ ಹವೆಯ ಒತ್ತಡ ಹೆಚ್ಚಿರುತ್ತದೆ ಹಾಗೂ ನೀರನ್ನು ಕುಡಿದಿರುವುದರಿಂದಲೂ ವಿಕಿರಣದ ಅಂಶ ಹೆಚ್ಚಿರುವ ಸಾಧ್ಯತೆ ಇದೆ. ಸದ್ಯ ಎಲ್ಲರೂ ಗುಣಮುಖರಾಗಿದ್ದಾರೆ. ಆದರೆ ಈ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿರುವುದಾಗಿ ಅವರು ಹೇಳಿದರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳ ಪ್ರಕಾರ ವಿಕಿರಣದ ಅಂಶ ಹೆಚ್ಚಿರುವ ಎಲ್ಲರೂ ಮಾತನಾಡುತ್ತಿದ್ದರು. ಹೊರನೋಟಕ್ಕೆ ಆರೋಗ್ಯವಂತರಾಗಿಯೇ ಕಾಣಿಸುತ್ತಿದ್ದರು‌ಎಂದಿದ್ದಾರೆ. 

ಸೋರಿಕೆಯಾಗಿತ್ತೇ?:  ಈ ಘಟನೆಯಿಂದ ಕೈಗಾ ಘಟಕದಿಂದ ಅಲ್ಪ ಪ್ರಮಾಣದಲ್ಲಿ ವಿಕಿರಣ ಸೋರಿಕೆಯಾಗಿತ್ತೇ ಎಂಬ ಪ್ರಶ್ನೆ ಉದ್ಭವಿಸಿದೆ. ನಿರ್ವಹಣೆ ಕಾಮಗಾರಿಯಲ್ಲಿ ತೊಡಗಿದ್ದ ಬಹುತೇಕ ಜನರಲ್ಲಿ ಏಕಾ‌ಏಕಿ ವಿಕಿರಣದ ಅಂಶ ಹೆಚ್ಚಳವಾಗಿರುವುದು ಇದಕ್ಕೆ ಪುಷ್ಟಿಯನ್ನು ನೀಡುತ್ತದೆ. ನಿರ್ವಹಣೆ ಕಾಮಗಾರಿಯಲ್ಲಿ ನಿರ್ಲಕ್ಷ್ಯ ವಹಿಸಲಾಗಿತ್ತೇ ಎನ್ನುವ ಅನುಮಾನವೂ ಕಾಡದೆ ಇರದು. ಕೈಗಾ ಘಟಕ ಅತ್ಯಂತ ಸೂಕ್ಷ್ಮವಾಗಿರುವುದರಿಂದ ರಿಯಾಕ್ಟರ್ ಹಾಗೂ ಪೈಪ್‌ಲೈನ್‌ಗಳ ಸುರಕ್ಷತೆಯ ಬಗ್ಗೆ ಸಮಗ್ರ ಪರಿಶೀಲನೆ ನಡೆಯಬೇಕು. ಈ ಘಟನೆಗೆ ಕಾರಣವೇನು ಎಂಬ ಬಗ್ಗೆ ತಜ್ಞರಿಂದ ತನಿಖೆಯೂ ನಡೆಯಬೇಕಾದ ಅಗತ್ಯವಿದೆ. ಇದರಿಂದ ಜನತೆಯಲ್ಲಿ ಉಂಟಾಗಿರುವ ಆತಂಕ ನಿವಾರಣೆಯೂ ಸಾಧ್ಯ. 

ಸೌಜನ್ಯ: ಕನ್ನಡಪ್ರಭ


Share: