ಭಟ್ಕಳ, ಮಾರ್ಚ್ 11: ಈ ಬಾರಿ ತಾಲೂಕಿನ ಎಸ್ ಎಸ್ ಎಲ್ಸಿ ಫಲಿತಾಂಶವನ್ನು ಉತ್ತಮವಾಗಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ, ಪ್ರೌಢಶಾಲಾ ಶಿಕ್ಷಕರ ಸಂಘ ನೂತನ ಯೋಜನೆಯೊಂದನ್ನು ರೂಪಿಸಿದೆ. ಯೋಜನೆಯಂತೆ ಕಲಿಕೆಯಲ್ಲಿ ಹಿಂದುಳಿದಿರುವ ತಾಲೂಕಿನ ವಿವಿಧ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ ಹಾಗೂ ಇಂಗ್ಲೀಷ್ ವಿಷಯಕ್ಕೆ ಸಂಬಂಧಿಸಿದಂತೆ ಪರಿಣಿತಿಯುಳ್ಳ ಶಿಕ್ಷಕರಿಂದ ವಿಶೇಷ ತರಗತಿಯನ್ನು ಆರಂಭಿಸಲಾಗಿದೆ.
ಈ ವಿಶೇಷ ತರಗತಿಯನ್ನು ನ್ಯೂ ಇಂಗ್ಲೀಷ್ ಸ್ಕೂಲ, ಜನತಾ ಹೈಸ್ಕೂಲ ಶಿರಾಲಿ ಹಾಗೂ ಜನತಾ ಹೈಸ್ಕೂಲ ಮುರ್ಡೇಶ್ವರದಲ್ಲಿ ಆರಂಭಿಸಲಾಗಿದ್ದು, ಇದು ನಾಲ್ಕು ದಿನಗಳ ಕಾಲ ನಡೆಯಲಿದೆ. ಈ ಸಲ ಎಸ್ ಎಸ್ ಎಲ್ ಪರೀಕ್ಷಾ ಪದ್ದತಿ ಬದಲಾವಣೆಯಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಬರೆಯಲು ಅನುಕೂಲವಾಗಲು ಈ ವಿಶೇಷ ತರಗತಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ಎಸ್ ಎಸ್ ಎಲ್ ಸಿಯಲ್ಲಿ ತಾಲೂಕಿನಲ್ಲಿ ಉತ್ತಮ ಫಲಿತಾಂಶ ಬರಬೇಕು ಎಂಬ ಆಶಯವನ್ನಿಟ್ಟುಕೊಂಡು ನಾಲ್ಕು ದಿನಗಳ ಈ ವಿಶೇಷ ತರಗತಿಯನ್ನು ಭಟ್ಕಳ, ಶಿರಾಲಿ, ಮುರ್ಡೇಶ್ವರದಲ್ಲಿ ಏರ್ಪಡಿಸಲಾಗಿದೆ. ಇದರ ಪ್ರಯೋಜನವನ್ನು ತಾಲೂಕಿನ ೨೯ ಪ್ರೌಢಶಾಲೆಗಳ ೭೫೦ ಕ್ಕೂ ಅಧಿಕ ವಿದ್ಯಾರ್ಥಿಗಳು ಪಡೆಯಲಿದ್ದಾರೆ. ವಿಶೇಷವಾಗಿ ಏರ್ಪಡಿಸಲಾದ ತರಗತಿಯಲ್ಲಿ ಪರಿಣಿತಿಯುಳ್ಳ ಶಿಕ್ಷಕರಿಂದ ಎರಡು ದಿನ ಗಣಿತ, ಒಂದು ದಿನ ವಿಜ್ಞಾನ ಹಾಗೂ ಒಂದು ದಿನ ಇಂಗ್ಲೀಷ ವಿಷಯದ ಕುರಿತು ಪಾಠ ಮಾಡಲಾಗುತ್ತದೆ. ಶಿಕ್ಷಕರು ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಬೀಳುವ ಸಂಭಾವ್ಯ ಪ್ರಶ್ನೆಗಳ ಬಗ್ಗೆ ವಿವರಿಸಿ, ಅದನ್ನು ಸುಲಭವಾಗಿ ಬರೆಯುವ ಪದ್ದತಿಯನ್ನು ತಿಳಿಸಿಕೊಡುತ್ತಿದ್ದಾರೆ. ವಿಶೇಷ ತರಗತಿಯ ಸಂದರ್ಭದಲ್ಲಿ ಪ್ರತಿ ದಿನ ಪರೀಕ್ಷೆ ನಡೆಸಲಾಗುತ್ತಿದೆ. ಇದರಿಂದ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಬರೆಯಲು ಅನುಕೂಲವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದ ಮೊಗೇರ ಈ ಪದ್ದತಿ ಜಿಲ್ಲೆಯಲ್ಲೇ ವಿನೂತನವಾಗಿದೆ. ಹಿಂದಿನ ವರ್ಷ ಶಿರಸಿಯಲ್ಲೂ ಸಹ ಇಂತಹ ವಿಶೇಷ ತರಗತಿಯನ್ನು ನಡೆಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಪಡೆಯಲು ಅನುಕೂಲ ಮಾಡಿಕೊಡಲಾಗಿತ್ತು. ಅದೇ ಕ್ರಮವನ್ನು ಈ ಸಲ ಭಟ್ಕಳದಲ್ಲೂ ಸಹ ಪ್ರೌಢಶಾಲಾ ಶಿಕ್ಷಕರ ಸಂಘ ಹಾಗೂ ಡೆಕ್ಕನ್ ವೆಲ್ಪೇರ್ ಅಸೋಶಿಯೇಶನ್ ಸಹಯೋಗದಲ್ಲಿ ನಡೆಸಲಾಗುತ್ತಿದೆ. ಇಂತಹ ತರಗತಿ ನಡೆಸುವುದರಿಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಹೆಚ್ಚಿನ ಫಲಿತಾಂಶ ಪಡೆಯುವ ಆಶಯ ನಮ್ಮದಾಗಿದೆ. ಈ ಸಲ ತಾಲೂಕಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.೮೦ ರಷ್ಟು ಗುರಿ ಸಾಧಿಸಬೇಕು ಎಂಬ ಉದ್ದೇಶ ಹೊಂದಲಾಗಿದೆ. ಇದಕ್ಕೆ ತಾಲೂಕಿನ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರೌಢಶಾಲೆಗಳು ಉತ್ತಮವಾಗಿ ಸ್ಪಂದಿಸುತ್ತಿವೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಸರಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ, ಅನುದಾನಿತ ಪ್ರೌಢಶಾಲಾಶಿಕ್ಷಕರ ಸಂಘದ ಅಧ್ಯಕ್ಷ ದೇವರಾಜ, ನ್ಯೂ ಇಂಗ್ಲೀಷ ಮುಖ್ಯಾಧ್ಯಾಪಕ ವಿ ಜಿ ನಾಯ್ಕ, ಕೆ ಜಿ ಹೆಗಡೆ,ಡೆಕ್ಕನ್ ವೆಲ್ಪೇರ ಅಸೋಶಿಯೇಶನ್ನ ಅಧ್ಯಕ್ಷ ಎ ಎಂ ಖಾನ್, ಪಾರೂಕ ಮಾಸ್ಟರ ಮುಂತಾದವರು ಉಪಸ್ಥಿತರಿದ್ದರು.