ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು:ಗಣಿರೆಡ್ಡಿಗಳು ಆಕ್ರಮ ಗಣಿಗಾರಿಕೆ ಮಾಡುತ್ತಿರುವುದು ಸಾಬೀತಾದರೆ ಯಾವ ಮುಲಾಜೂ ನೋಡದೇ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಲಾಗುವುದು - ಕೆ.ಎಸ್.ಈಶ್ವರಪ್ಪ

ಬೆಂಗಳೂರು:ಗಣಿರೆಡ್ಡಿಗಳು ಆಕ್ರಮ ಗಣಿಗಾರಿಕೆ ಮಾಡುತ್ತಿರುವುದು ಸಾಬೀತಾದರೆ ಯಾವ ಮುಲಾಜೂ ನೋಡದೇ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಲಾಗುವುದು - ಕೆ.ಎಸ್.ಈಶ್ವರಪ್ಪ

Wed, 21 Apr 2010 02:44:00  Office Staff   S.O. News Service

ಬೆಂಗಳೂರು,ಏ,೨೦-ಗಣಿರೆಡ್ಡಿಗಳು ಆಕ್ರಮ ಗಣಿಗಾರಿಕೆ ಮಾಡುತ್ತಿರುವುದು ಸಾಬೀತಾದರೆ ಯಾವ ಮುಲಾಜೂ ನೋಡದೇ ಅವರನ್ನು ಸಚಿವ ಸಂಪುಟದಿಂದ ಕೈ ಬಿಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ಹೇಳಿದ್ದಾರೆ.

 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣಿರೆಡ್ಡಿಗಳು ಆಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬುದು ಸುಪ್ರೀಂಕೋರ್ಟ್‌ನಲ್ಲಿ ಸಾಬೀತಾದರೆ ಅವರನ್ನು ಸಂಪುಟದಿಂದ ಕೈ ಬಿಡುವುದು ಗ್ಯಾರೆಂಟಿ. ಆದರೆ ಈಗ ಪ್ರಕರಣ ಕೋರ್ಟ್ ಮೆಟ್ಟಿಲೇರಿರುವುದರಿಂದ ಗಣಿರೆಡ್ಡಿ ಸಚಿವರನ್ನು ಸಂಪುಟದಿಂದ ಕೈ ಬಿಡುವ ಪ್ರಶ್ನೆಯೇ ಏಳುವುದಿಲ್ಲ ಎಂದು ಈಶ್ವರಪ್ಪ ಸ್ಪಷ್ಟ ಪಡಿಸಿದರು.

ಶಶಿ ತರೂರ್ ಪ್ರಕರಣವೇ ಬೇರೆ.ಗಣಿರಡ್ಡಿಗಳ ಪ್ರಕರಣವೇ ಬೇರೆ.ಇವೆರಡನ್ನೂ ಒಂದಕ್ಕೊಂದು ತಳುಕು ಹಾಕುವುದು ಸರಿಯಲ್ಲ. ಆದರೆ ಶಶಿ ತರೂರ್ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ನವರು ಗಣಿರೆಡ್ಡಿಗಳ ರಾಜೀನಾಮೆ ಕೇಳುವುದು ಸರಿಯಲ್ಲ. ಈ ರೀತಿ ಕೇಳಲು ಕಾಂಗ್ರೆಸ್‌ನವರಿಗೆ ನೈತಿಕ ಹಕ್ಕಿಲ್ಲ ಎಂದು ಹೇಳಿದರು.

 

ರಾಜಕಾರಣದಲ್ಲಿರುವವರ ಪೈಕಿ ನಾನೂ ಸೇರಿದಂತೆ ಎಲ್ಲರೂ ವ್ಯಾಪಾರ ಮಾಡಿಕೊಂಡು ಬಂದಿರುವವರೇ. ಕಾಂಗ್ರೆಸ್‌ನ ಅನೇಕ ನಾಯಕರೂ ಸಹಾ ಗಣಿಗಾರಿಕೆ ನಡೆಸುತ್ತಿದ್ದಾರೆ. ಇವತ್ತು ರೆಡ್ಡಿಗಳ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿ ಆಕ್ರಮ ಗಣಿಗಾರಿಕೆ ನಡೆಸಿದೆ ಎಂದಾದರೆ ಗಣಿರೆಡ್ಡಿ ಸಚಿವರನ್ನು ಸಂಪುಟದಿಂದ ಕೈ ಬಿಡುವುದರ ಜತೆಗೆ ಶಿಸ್ತುಕ್ರಮವನ್ನೂ ಜರುಗಿಸಲಾಗುವುದು ಎಂದು ಹೇಳಿದರು.

 

ಆದರೆ ಈಗಾಗಲೇ ಪ್ರಕರಣ ಸುಪ್ರೀಂಕೋರ್ಟ್‌ನ ಮೆಟ್ಟಿಲೇರಿದೆ, ಸಿಬಿ‌ಐ ತನಿಖೆ ನಡೆಯುತ್ತಿದೆ, ಕೇಂದ್ರದ ಸರ್ವೇ ಇಲಾಖೆ ಅಧಿಕಾರಿಗಳೂ ತನಿಖೆ ನಡೆಸುತ್ತಿದ್ದಾರೆ. ಅವೆಲ್ಲ ಒಂದು ಹಂತಕ್ಕೆ ಬರಲಿ, ರೆಡ್ಡಿ ಸಚಿವರು ತಪ್ಪಿತಸ್ಥರು ಎಂಬುದನ್ನು ಸಾಬೀತು ಪಡಿಸಲಿ ಎಂದು ಹೇಳಿದರು.

 

ಕಾಂಗ್ರೆಸ್ ನಾಯಕರು ಎಲ್ಲಾ ಚುನಾವಣೆಗಳಲ್ಲಿ ಸೋಲುಂಡು ಹತಾಶರಾಗಿರುವುದರಿಂದ ವಿನಾ ಕಾರಣ ಗಣಿರೆಡ್ಡಿಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ಯಾರೆಷ್ಟೇ ಪ್ರಭಾವಿಗಳಾದರೂ ಜನತೆಗೆ ಮೋಸ ಮಾಡಿದ್ದಾರೆಂಬುದು ಸಾಬೀತಾದರೆ ಅಂತವರನ್ನು ಸಚಿವ ಸಂಪುಟದಲ್ಲಿ ಮುಂದುವರಿಸಲು ಸಾಧ್ಯವಿಲ್ಲ ಎಂದು ಹೇಳಿದರು.

 


Share: