ಹುಬ್ಬಳ್ಳಿ: ( ಕರ್ನಾಟಕ ವಾರ್ತೆ ) ಏ ೧೯ : ನಿಸರ್ಗದ ಸಂಪತ್ತು ಹಾಳುಮಾಡದೆ ಅಭಿವೃಧ್ಧಿಯ ಜೀವನವನ್ನು ನಾವು ಕಂಡುಕೊಳ್ಳಬೇಕಿದೆ . ಪ್ರಕೃತಿಯನ್ನು ಪೂಜಿಸುವ ಸಂಸ್ಕೃತಿಯ ಹಿನ್ನೆಲೆಯ ನಾವು ಅದನ್ನು ಗೌರವಿಸೋದು ಬಿಟ್ಟಿದ್ದೇವೆ ಇಂತಹ ಮನಸ್ಸಿನ ಮಾಲಿನ್ಯವನ್ನು ತೊರೆದು ಪರಿಸರ ಸಂರಕ್ಷಣೆಯ ಭಾವ ನಮ್ಮ ಜೀವನದ ಒಂದು ಭಾಗವಾಗಬೇಕು ಎಂದು ರಾಜ್ಯದ ನಗರಾಭಿವೃಧ್ಧಿ , ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಎಸ್. ಸುರೇಶಕುಮಾರ್ ನುಡಿದರು .
ಅವರು ಹುಬ್ಬಳ್ಳಿಯಲ್ಲಿಂದು ರಾಜ್ಯ ಸರ್ಕಾರದ ಪಶ್ಚಿಮ ಘಟ್ಟಗಳ ಕಾರ್ಯಪಡೆ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆ ಇವುಗಳ ಆಶ್ರಯದಲ್ಲಿ ಜರುಗಿದ ಪಶ್ಚಿಮ ಘಟ್ಟಗಳ ಸಂರಕ್ಷಣೆ - ಕಾನೂನಿನ ದೃಷ್ಟಿ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು . ದೇಶದ ಹಾಗೂ ಬಹುಮುಖ್ಯವಾಗಿ ರಾಜ್ಯದ ಜೀವನಾಡಿಯಾದ ಪಶ್ಚಿಮ ಘಟ್ಟದ ಸಂರಕ್ಷಣೆ ಕುರಿತು ಇಂದು ಅತ್ಯಂತ ಜೀವಂತ ಹಾಗೂ ಜ್ವಲಂತ ಚರ್ಚೆಯಾಗಬೇಕಿದೆ . ಗುಜರಾತದಿಂದ ಕನ್ಯಾಕುಮಾರಿಯವರೆಗಿನ ೧೬೦೦ ಕಿ. ಮೀ. ಉದ್ದದ ಈ ಪಶ್ಚಿಮ ಘಟ್ಟ ದೇಶದ ಶೇ. ೪೦ ರಷ್ಟು ಜಲಾನಯನ ಪ್ರದೇಶವನ್ನು ಆವರಿಸಿದೆ . ಅತ್ಯಂತ ವೈವಿದ್ಯಮಯ ಜೀವಸಂಕುಲ , ೭೦೦೦ ಕ್ಕೂ ಹೆಚ್ಚಿನ ಜೀವಪ್ರಭೇಧ , ೧೩೭ ವರ್ಗದ ಸಸ್ತನಿಗಳನ್ನು ೧೩ ರಾಷ್ಟ್ರೀಯ ಉದ್ಯಾನವನ , ೨ ಕಾಯ್ದಿರಿಸಿದ ಹಾಗೂ ಅನೇಕ ಅಭಯಾರಣ್ಯಗಳು ಇಲ್ಲಿವೆ . ಹಾಗಾಗಿ ಅದರ ಸಂರಕ್ಷಣೆಯ ಸಮಸ್ಯೆಗಳ ಸ್ವರೂಪವು ಭಿನ್ನವಾಗಿದೆ . ಪರಿಸರ ಸಂರಕ್ಷಣೆ ಪ್ರಗತಿಯ ವಿರೋಧಿ ಎನ್ನುವ ವಿಪರೀತವಾದ ತೊಲಗಿ ನಿರಂತರವಾಗಿ ನಾಶಕ್ಕೊಳಗಾಗುತ್ತಿರುವ ಪ್ರಕೃತಿಯ ರಕ್ಷಣೆಗೆ ಸರ್ಕಾರಗಳು ಇನ್ನೂ ಹಲವಾರು ಕ್ರಮಕೈಕೊಳ್ಳಬೇಕು ಅಲ್ಲದೇ ಈಗಾಗಲೇ ರಚಿಸಿದ ಅರಣ್ಯ ಸಂರಕ್ಷಣೆ ಶಾಸನಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಾದ ಅಗತ್ಯ ಇದೆ ಎಂದು ಸಚಿವ ಶ್ರೀ ಎಸ್. ಸುರೇಶಕುಮಾರ್ ಪ್ರತಿಪಾದಿಸಿದರು .
ಕಾರ್ಯಾಗಾರದ ದಿಕ್ಸೂಚಿ ಭಾಷಣ ಮಾಡಿದ ಬೆಂಗಳೂರಿನ ಭಾರತ ವಿಶ್ವವಿದ್ಯಾಲಯ ರಾಷ್ಟ್ರೀಯ ಕಾನೂನು ಶಾಲೆ ಕುಲಪತಿಗಳಾದ ಡಾ|| ಆರ್. ವೆಂಕಟರಾವ್ ಅವರು ನಿಸರ್ಗದ ಸಂಪನ್ಮೂಲ ಬಳಸುತ್ತಿರುವ ನಮ್ಮ ಈ ವೇಗ ಅತೀ ಬೇಗನೆ ನಮ್ಮನ್ನು ಜೀವಿಸುವುದಕ್ಕಾಗಿ ಹೋರಾಟ ನಡೆಸಬೇಕಾದ ಸ್ಥಿತಿಗೆ ತರುವುದು ನಿಶ್ಚಿತ ಎಂದು ಎಚ್ಚರಿಸಿದರು . ಹರಿವ ನದಿ , ಹಸಿರುಕಾಡು , ಅದರಿಂದ ಸಾಧ್ಯವಾಗಿರುವ ಮಾನವ ಜೀವನ ನಿಸರ್ಗದ ಕೊಡುಗೆ ಇದನ್ನು ಮತ್ತೆ ಮಾನವ ನಿರ್ಮಿಸಲು ಸಾಧ್ಯವಿಲ್ಲ . ಹಾಗಿದ್ದಾಗ ಅದನ್ನು ಕೆಡಿಸುವುದು , ಬಳಸಿ ಹಾಳು ಮಾಡುವ ಯೋಗ್ಯತೆಯೂ ನಮಗಿಲ್ಲ . ಕಾನೂನು ನಮ್ಮ ಜೀವನ ಕ್ರಮಬದ್ದಗೊಳಿಸಲು ಇರುವ ಸಾಧನ ಹಾಗೇನೆ ನಿಸರ್ಗ ಸಂಪತ್ತಿನ ಸೂಕ್ತ ಹಾಗೂ ಸಮರ್ಪಕ ಬಳಕೆಗೆ ಕಾನೂನುಗಳ ಅವಶ್ಯಕತೆ ಇದೆ . ಅತಂಹ ಕಾನೂನುಗಳ ಪರಿಣಾಮಕಾರಿಯಾದ ಜಾರಿ ಹಾಗೂ ಜನರಿಗೆ ಇಂತಹ ಜೀವನರಕ್ಷಕ ಕಾನೂನುಗಳ ಕುರಿತು ಗೌರವ ಇರಬೇಕು . ಅತ್ಯಂತ ಸೂಕ್ಷ್ಮ ಹಾಗೂ ಪರಸ್ಪರ ಅವಲಂಬನೆ ಚಕ್ರಗಳ ಮೇಲೆ ನಿಂತಿರುವ ನಿಸರ್ಗದ ಸಂಪತ್ತನ್ನು ಕಾಯ್ದಿಡುವ ಕಾರ್ಯಕ್ಕೆ ನಾವೆಲ್ಲ ಪಣತೊಡಬೇಕು ಎಂದು ಪ್ರೊ.
ವೆಂಕಟರಾವ್ ನುಡಿದರು .
ಧಾರವಾಡ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ವಿಜಯಕುಮಾರ ಗೋಗಿ ಅವರು ಮಾತನಾಡಿ , ಜೀವನಕ್ಕೆ ಒತ್ತಾಸೆಯಾಗಿರುವ ವಿಷಯಗಳ ಕುರಿತು ಒತ್ತು ನೀಡುವುದನ್ನು ಮರೆತು ನಾವು ನಾಗರಿಕತೆ ಅಭಿವೃಧ್ಧಿಗೆ ಹೆಚ್ಚಿನ ಗಮನ ನೀಡುತ್ತಿದ್ದೇವೆ . ಇದರಿಂದಾಗಿಯೇ ಹಿಂದೆ ವಿಜಯನಗರ , ಚಾಲುಕ್ಯರು , ಹಾಗೂ ರಾಷ್ಟ್ರಕೂಟರ ಕಾಲದಲ್ಲಿ ಅತ್ಯಂತ ಸುಭಿಕ್ಷೆಯ ನಾಡಾಗಿದ್ದುದು ಇಂದು ಬರದ ಪ್ರದೇಶಗಳಾಗಿ ಪರಿವರ್ತಿಗೊಂಡಿವೆ ಎಂಬ ಐತಿಹಾಸಿಕ ಎಚ್ಚರಿಕೆಯನ್ನು ನಾವು ಮರೆಯಬಾರದು . ಮರಗಳು ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯ ಕಾರ್ಯ ಎಂಬ ಭಾವನೆ ಸಲ್ಲದು . ನಗರಗಳಲ್ಲಿನ ಸಮುದಾಯ ನಿವೇಶನಗಳು , ರಸ್ತೆಯ ಇಕ್ಕೆಲಗಳು ಬಹುಪಯೋಗಿ ಪ್ರದೇಶಗಳಾಗಿ ಪರಿವರ್ತಿಗೊಂಡಿವೆ . ಇದರಿಂದಾಗಿ ಪರಿಸರ ಕಾರ್ಯ ಜಟಿಲಗೊಂಡಿದೆ . ಅರಣ್ಯ ಸಂರಕ್ಷಣೆಯಲ್ಲಿ ಪ್ರಾಯೋಗಿಕವಾಗಿ ಏನು ಮಾಡಬಹುದು ಎಂಬುದು ಬಹು ಮುಖ್ಯವಾದ ಸಂಗತಿ ಎಂದು ಶ್ರೀ ಗೋಗಿ ನುಡಿದರು .
ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ಣಾಟಕ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ|| ಜೆ. ಎಸ್. ಪಾಟೀಲ ಅವರು ಮಾತನಾಡಿ , ಪಶ್ಚಿಮ ಘಟ್ಟಗಳ ಹಾಗೂ ರಾಜ್ಯದ ಅರಣ್ಯ ಸಂರಕ್ಷಣೆ ವಿಷಯದಲ್ಲಿ ಸರ್ಕಾರದ ಪಶ್ಚಿಮ ಘಟ್ಟಗಳ ಕಾರ್ಯಪಡೆ , ಕಾನೂನು ವಿಶ್ವವಿದ್ಯಾಲಯ ಹಾಗೂ ಭಾರತ ವಿಶ್ವವಿದ್ಯಾಲಯ ರಾಷ್ಟ್ರೀಯ ಕಾನೂನು ಶಾಲೆಯ ನಡುವೆ ತಿಳುವಳಿಕೆ ಪತ್ರ (ಒಔU) ಮಾಡಿಕೊಂಡು ಒಂದು ಪ್ರಯೋಗಾತ್ಮಕ ಕಾರ್ಯಕ್ಕೆ ಮುಂದಡಿ ಇಡಲು ಸಲಹೆ ಮಾಡಿದರು . ಇದರಿಂದ ಕಾನೂನು ವಿಶ್ವವಿದ್ಯಾಲಯದ ೮೭ ಕಾಲೇಜುಗಳ ೩೫ ಸಾವಿರ ವಿದ್ಯಾಥಿಗಳ ಯುವಪಡೆ , ರಾಜ್ಯ ಸರ್ಕಾರದ ಅವಶ್ಯಕ ಅನುದಾನ ಹಾಗೂ ಸಂರಕ್ಷಣೆ ಕುರಿತ ಕಾನೂನು ಹೋರಾಟ ಮತ್ತು ಪ್ರತಿ ಹಳ್ಳಿಗಳಲ್ಲಿ ಈ ಕುರಿತ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬಹುದಾಗಿದೆ ಎಂದರು . ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಎಂಟು ವಿಷಯಗಳನ್ನು ಒಳಗೊಂಡಂತೆ ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಒಟ್ಟು ೩೦ ವಿವಿಧ ವಿಷಯಗಳ ಕೇಂದ್ರಗಳನ್ನು ಪ್ರಾರಂಭಿಸುವುದಾಗಿ ಈ ಸಂದರ್ಭದಲ್ಲಿ ಕುಲಪತಿ ಡಾ|| ಪಾಟೀಲ ಹೇಳಿದರು .
ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷ ಶ್ರೀ ಅನಂತ ಹೆಗಡೆ ಆಶೀಸರ ಅವರು ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ , ದಕ್ಷಿಣ ಭಾರತದ ಆಹಾರ ಸುರಕ್ಷಣೆಯ ಸಹ್ಯಾದ್ರಿಸಾಲು ಇಂದು ತನ್ನ ವಿಶಿಷ್ಟ ಜೀವ ಸಂಕುಲದಿಂದಾಗಿ ಜಗತ್ತಿನ ಗಮನ ಸೆಳೆದಿದೆ . ಇಂತಹ ನಿಸರ್ಗ ಸಂಪತ್ತಿನ ರಕ್ಷಣೆ ಕುರಿತಂತೆ ಬೇಡ್ಥಿ ನದಿಗೆ ಕಟ್ಟಲು ಹೊರಟ್ಟಿದ ದೊಡ್ಡ ಅಣೆಕಟ್ಟು ವಿರೋಧಿಸಿ ನಡೆದ ಬೇಡ್ತಿ ಚಳುವಳಿಯಿಂದ ಪ್ರಾರಂಭಗೊಂಡು ಇದೀಗ ಪಶ್ಚಿಮ ಘಟ್ಟ ಉಳಿಸಿ ಆಂದೋಲನವಾಗಿ ಬೆಳೆದು ಬಂದ ಬಗೆಯನ್ನು ವಿವರಿಸಿದರು . ೨೫ ವರ್ಷಗಳ ಹಿಂದೆ ಇಂದಿನಷ್ಟು ಪರಿಸರ ರಕ್ಷಣೆ ಕಾಯ್ದೆಗಳು ಇರಲಿಲ್ಲ . ಆದರೆ ಇತ್ತಿಚೆಗೆ ಆ ಕುರಿತ ನ ಜಾಗೃತಿ ಹೆಚ್ಚುತ್ತಿದೆ . ಸ್ಥಾನಿಕವಾಗಿ ನಡೆಯುವ ಪರಿಸರ ಕುರಿತ ಮೊಕ್ದದಮೆಗಳಲ್ಲಿ ಸಂರಕ್ಷಣೆಗೆ ಆದ್ಯತೆ ನೀಡಿದ ತೀರ್ಮಾನಗಳು ಹೊರಬರುತ್ತಿವೆ . ಆದರೆ ಅದರ ಜೊತೆಗೆ ಪರಿಸರ ನಾಶಕೂಡಾ ಅಷ್ಟೇ ತೀವೃತೆ ಪಡೆದಿದೆ ಎಂದು ಶ್ರೀ ಹೆಗಡೆ ಆಶೀಸರ ನುಡಿದರು . ನದಿ , ಕೆರೆ , ಹೊಳೆ , ಕಣಿವೆ , ವನ್ಯ ಜೀವಿಗಳನ್ನು ನಮಗರಿವಿಲ್ಲದೇ ನಾವು ಕಳೆದುಕೊಳ್ಳುತ್ತಿದ್ದೇವೆ . ಪರಿಸರ ಕಾಯ್ದೆಗಳಲ್ಲಿ ಗೊಂದಲ ಸಂದಿಗ್ದತೆ , ವಿವಿಧ ಇಲಾಖೆಗಳ ನಡುವೆ ಸಾಮರಸ್ಯ ಹಾಗೂ ಮಾಹಿತಿ ಸಂವಹನ ಕೊರತೆ ಇದಕ್ಕೆ ಕಾರಣವಾಗಿದೆ . ಇತ್ತಿಚೆಗೆ ಪಶ್ಚಿಮ ಘಟ್ಟಗಳಲ್ಲಿನ ಔಷಧೀಯ ಸಸ್ಯಗಳ ಕಳ್ಳತನ ಪ್ರಾರಂಭಗೊಂಡಿದ್ದು ಇದರ ವಿರುದ್ಧ ವಿಶೇಷ ಅಭಿಯಾನ ಆರಂಭಿಸಲಾಗಿದೆ . ಒಟ್ಟಾರೆಯಾಗಿ ಪ್ರತಿ ಜಿಲ್ಲೆ , ತಾಲೂಕ ಹಾಗೂ ಗ್ರಾಮ ಮಟ್ಟದಲ್ಲಿ ಅರಣ್ಯ ಕಾಯ್ದೆಗಳ ಕುರಿತು ಹಾಗೂ ನಿಸರ್ಗ ಸಂರಕ್ಷಣೆ ಅಗತ್ಯ ಕುರಿತು ಜಾಗೃತಿ ಆಗಬೇಕಿದೆ . ಇದಕ್ಕೆ ಪೂರಕವಾಗಿ ಸರ್ಕಾರವು ತನ್ನ ಜನಪ್ರತಿನಿಧಿಗಳಿಗೂ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಶ್ರೀ ಆಶೀಸರ ಅಭಿಪ್ರಾಯ ಪಟ್ಟರು .
ಪ್ರಾರಂಭದಲ್ಲಿ ಕುಮಾರಿ ಮೈತ್ರೆಯಿ ಹೆಗಡೆ ಸರ್ವರನ್ನು ಸ್ವಾಗತಿಸಿದರು . ಶ್ರೀ ರಾಜೇಂಧ್ರ ಸ್ವಾಮಿ ಕೊನೆಯಲ್ಲಿ ವಂದಿಸಿದರು .
ಕಾರ್ಯಾಗಾರದ ಅಂಗವಾಗಿ ಪಶ್ಚಿಮ ಘಟ್ಟಗಳಲ್ಲಿ ಸಾಮಾಜಿಕ ಆರ್ಥಿಕ ಸಮಸ್ಯೆಗಳ ಕುರಿತು ಶ್ರೀ ಶಿವಾನಂದ ಕಳವೆ , ಹಾಗೂ ಅರಣ್ಯ ಸಂರಕ್ಷಣೆ ಕಾನೂನು ಅಡೆ ತಡೆಗಳ ಕುರಿತು ಬೆಂಗಳೂರಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಯು. ವಿ. ಸಿಂಗ್ ತಮ್ಮ ಅಭಿಪ್ರಾಯ ಮಂಡಿಸಿದರು . ತದನಂತರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಮತಿ ಮಧುಶರ್ಮ , ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಆಡಳಿತ ತರಬೇತಿ ಸಂಸ್ಥೆಯ ಶ್ರೀ ವೆಂಕಟಸುಬ್ಯಯ್ಯ ಹಾಗೂ ವಿಷಯ ತಜ್ಷರು ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತಂತೆ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು .