ಕಾರವಾರ, ಎ. ೨೫ : ಇಲ್ಲಿನ ವಾಣಿಜ್ಯ ಬಂದರಿನ ಒಂದೊಂದೇ ಹಗರಣಗಳು ನಿಧಾನಕ್ಕೆ ಹೊರ ಬೀಳುತ್ತಿವೆ. ಈಗ ಬೈತಕೋಲ ಬಂದರಿನಲ್ಲಿ ಮೊದಲಿನಿಂದ ನಡೆಯುತ್ತಿರುವ ಅವ್ಯವಹಾರ ವೊಂದು ಹೊರ ಬಿದ್ದಿದೆ.
ಸರಕಾರಕ್ಕೆ ಪ್ರತಿದಿನ ಸಾವಿರಾರು ರೂ. ಪಂಗನಾಮ ಹಾಕಿ ಅಧಿಕಾರಿಗಳು ಸ್ವಾಹಾ ಮಾಡುವು ದು ಬಹಿರಂಗವಾಗಿದೆ. ಈ ಬಗ್ಗೆ ಬಂದರು ಇಲಾಖೆ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾಡಳಿತಕ್ಕೆ ಅರಿವಿದ್ದರೂ ಸುಮ್ಮನೇ ಇರುವುದು ಸಾರ್ವಜನಿಕರಿಗೆ ಅನುಮಾನ ಹುಟ್ಟಿಸಿದೆ.
ಕರ್ನಾಟಕದ ಭಾಗಶಃ ಅದಿರನ್ನು ರಫ್ತು ಮಾಡುವ ಬೈತಕೋಲ ಬಂದರಿಗೆ ಪ್ರತಿದಿನ ೪೦೦ ಲಾರಿಗಳು ಬರುತ್ತವೆ. (ಅದಕ್ಕಿಂತಲೂ ಹೆಚ್ಚು ಬರುತ್ತವೆ ಎಂಬುದು ಬಹಿರಂಗ ಸತ್ಯ) ಆ ಅದಿರು ಲಾರಿಗಳ ಪ್ರವೇಶಕ್ಕೆ ಆರು ರೂ. ಶುಲ್ಕವನ್ನು ಬಂದರು ಇಲಾಖೆಯಿಂದ ಆಕರಿಸಲಾಗುತ್ತದೆ. ಇದು ನ್ಯಾಯಯುತ. ಆದರೆ ಬಂದರಿನ ದ್ವಾರದಲ್ಲಿರುವ ಅಧಿಕಾರಿಗಳು ೨೦ರಿಂದ ಮೂವತ್ತು ರೂ. ಹಣ ಪಡೆದು ಯಾವುದೇ ರಶೀದಿ ನೀಡದೇ ಲಾರಿಗಳನ್ನು ಒಳಬಿಡುತ್ತಾರೆ.
ಈ ಕುರಿತು ಮಾಧ್ಯಮದ ಪ್ರತಿನಿಧಿಗಳು ಭಾನುವಾರ ಸ್ಥಳಕ್ಕೆ ಭೇಟಿ ನೀಡಿದಾಗ ಬಂದರು ಇಲಾ ಖೆ ಸಿಬಂದಿ ಬಹಿರಂಗವಾಗಿ ಪ್ರತಿ ಲಾರಿಗಳಿಂದ ೨೦ ರಿಂದ ೩೦ ರೂ. ಲಂಚ ಪಡೆಯುತ್ತಿರುವುದು ಬೆಳಕಿಗೆ ಬಂತು. ಈ ಬಗ್ಗೆ ದ್ವಾರದಲ್ಲಿದ್ದ ಎಂ.ಎಲ್.ನಾಯ್ಕ ಎಂಬವರನ್ನು ಪ್ರಶ್ನಿಸಿದಾಗ `ನಾವು ಪಡೆಯುವುದಿಲ್ಲ. ಅವರೇ ಪ್ರೀತಿಯಿಂದ ಕೊಡುತ್ತಾರೆ. ಹಲವರ ಬಳಿ ಅರಣ್ಯ ಇಲಾಖೆ ಪರವಾನಿಗೆ ಪತ್ರ ಇರುವುದಿಲ್ಲ' ಎಂದು ಹೇಳಿಕೆ ನೀಡುತ್ತಾರೆ.
ಮಾಧ್ಯಮದ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯಾವುದೇ ರಶೀದಿ ಪುಸ್ತಕ ಕೂಡ ದ್ವಾರದಲ್ಲಿ ಇರಲಿಲ್ಲ. ಪ್ರಶ್ನಿಸಿದಾಗ ಅದನ್ನು ಕಚೇರಿಗೆ ಜಮಾ ಮಾಡಲು ಕೊಂಡೊಯ್ಯ ಲಾಗಿದೆ ಎಂದು ಇಲಾಖೆ ಸಿಬಂದಿ ಸಬೂಬು ಹೇಳಿದರು.
ಎಲ್ಲ ಲಾರಿಗಳ ಮಾಲಕರೂ ಕೂಡ ಇದನ್ನು ಒಪ್ಪಿಕೊಳ್ಳುತ್ತಾರೆ. ನಮ್ಮಿಂದ ೨೦-೩೦ ರೂ. ಪಡೆ ಯುತ್ತಾರೆ. `ಇಲ್ರಿ ಬಿಡ್ರಿ' ಎಂದು ಅವರು ಹೆಚ್ಚಿನ ತಗಾದೆ ಮಾಡದೇ ಹೇಳಿದಷ್ಟು ಹಣ ನೀಡಿ ಕೊಂಡೊಯ್ಯುತ್ತಿದ್ದಾರೆ.
ಇದು ಇಂದು ನಿನ್ನೆಯದಲ್ಲ
ಬಂದರಿನಲ್ಲಿ ಈ ಭ್ರಷ್ಟಾಚಾರ ಇಂದು ನಿನ್ನೆಯದಲ್ಲ. ಈ ಬಗ್ಗೆ ಹಲವು ದಿನಗಳ ಹಿಂದಿನಿಂದಲೇ ಆರೋಪಗಳಿದ್ದವು. ಪ್ರತಿದಿನ ಕನಿಷ್ಠ ೪೦೦ ಲಾರಿಗಳು ಬಂದರೂ ಒಂದು ದಿನಕ್ಕೆ ಎಂಟು ಸಾವಿರ ರೂ. ಬಂದರು ಇಲಾಖೆ ಸಿಬಂದಿ ಜೇಬಿಗೆ ಹೋಗುತ್ತದೆ. ಇದನ್ನು ಕೇಳಿದರೆ ಎಂ.ಎಲ್.ನಾಯ್ಕ ಎಂಬುವವರು `ನಾವು ಯಾರ್ಯಾರನ್ನು ಸಂಭಾಳಿಸೋದು' ಎಂದು ಮರು ಪ್ರಶ್ನೆ ಹಾಕುತ್ತಾರೆ.
ಬಂದರಿನ ಈ ಅವ್ಯವಹಾರ ನಿರಂತರವಾಗಿ ನಡೆದೇ ಇದೆ. ಬಂದರು ಇಲಾಖೆಯ ಹಿರಿಯ ಅಧಿ ಕಾರಿಗಳಿಗೆ ಮತ್ತು ಜಿಲ್ಲಾಡಳಿತಕ್ಕೂ ಸಹ ಇದರ ಅರಿವಿದ್ದರೂ ಆ ಬಗ್ಗೆ ಯಾವುದೇ ಕ್ರಮ ಕೈಗೊ ಳ್ಳದೇ ಇರುವುದರಿಂದ ಎಲ್ಲರ ಮೇಲೆ ಅನುಮಾನ ಕಾಡುತ್ತಿದೆ.
ರಕ್ಷಣೆಯ ಕೊರತೆ
ಅಂತಾರಾಷ್ಟ್ರೀಯ ವಾಣಿಜ್ಯ ಬಂದರಾದರೂ ಈ ಬಂದರಿಗೆ ಯಾವುದೇ ರಕ್ಷಣೆ ಇಲ್ಲ. ಬಂದರಿನ ಹೊರಗೆ ಕೇವಲ `ನಿಷೇಧಿತ ಪ್ರದೇಶ' ಎಂದು ನಾಮಫಲಕ ಹಾಕಲಾಗಿದೆ. ಆದರೆ ಅಲ್ಲಿ ಕಾವಲು ಕಾಯಲೂ ಯಾರೊಬ್ಬ ಸಿಬಂದಿಯೂ ಇರುವುದಿಲ್ಲ. ಲಾರಿಗಳಿಂದ ಬಂದರು ಪ್ರವೇಶ ಶುಲ್ಕ ಪಡೆಯಲು ಇರುವ ಅಧಿಕಾರಿಗಳೇ ಇಲ್ಲಿ ರಕ್ಷಣಾ ಸಿಬಂದಿ. ಸಾರ್ವಜನಿಕರು ಒಳ ಹೋದರೆ ಇವರೇ ಬೆದರಿಸುತ್ತಾರೆ. ನೀವು ಯಾರು ಎಂದು ಹೊಡೆಯಲು ಬರುತ್ತಾರೆ.
ಸೌಜನ್ಯ: ಉದಯವಾಣಿ