ಬೆಂಗಳೂರು,ಫೆಬ್ರವರಿ 23:ಕೈಗಾರಿಕೆಗಳಿಗಾಗಿ ವಶಪಡಿಸಿಕೊಂಡ ಭೂಮಿಯನ್ನು ಕೋಟ್ಯಾಂತರ ರೂ ಲಂಚ ಪಡೆದು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಧಂದೆಗೆ ಸರ್ಕಾರ ಇಳಿದಿದೆ ಎಂದು ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ರೇವಣ್ಣ ಇಂದಿಲ್ಲಿ ಆರೋಪಿಸಿದ್ದಾರೆ.
ರಾಜ್ಯದ ವಿವಿಧ ಭಾಗಗಳಲ್ಲಿ ಸರ್ಕಾರ ಕೈಗಾರಿಕೆಗಳಿಗಾಗಿ ಭೂಸ್ವಾಧೀನ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದ್ದರೂ ಹಲವು ಪ್ರಕರಣಗಳಲ್ಲಿ ಎಕರೆಗೆ ಐದು ಹತ್ತು ಲಕ್ಷ ರೂಗಳಂತೆ ಹಣ ಪಡೆದು ಸಾವಿರಾರು ಎಕರೆ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಟ್ಟಿದೆ ಎಂದು ದೂರಿದರು.
ಬೆಂಗಳೂರಿನ ಬೆಳ್ಳಂದೂರು ಬಳಿ ಇರುವ ಅಮಾನಿ ಕೆರೆ ಪ್ರದೇಶದಲ್ಲಿ ಹಿಂದೆ ೧೪೬ ಎಕರೆ ಭೂಮಿಯನ್ನು ವಶಪಡಿಸಿಕೊಳ್ಳುವ ಸಲುವಾಗಿ ಅಧಿಸೂಚನೆ ಹೊರಡಿಸಲಾಗಿತ್ತು.ಆದರೆ ಇದೀಗ ಇದ್ದಕ್ಕಿದ್ದಂತೆ ಆ ಪೈಕಿ ಎಂಭತ್ತು ಎಕರೆ ಭೂಮಿಯನ್ನು ಸ್ವಾಧೀನಪ್ರಕ್ರಿಯೆಯಿಂದ ಕೈ ಬಿಡಲು ನಿರ್ಧರಿಸಲಾಗಿದೆ ಎಂದು ಆರೋಪಿಸಿದರು.
ಒಂದು ಕಡೆ ಭೂಸ್ವಾಧೀನ ಮಾಡಿಕೊಳ್ಳುವುದಾಗಿ ರೈತರನ್ನು ಬ್ಲಾಕ್‌ಮೇಲ್ ಮಾಡುವುದು,ನಂತರ ಮಧ್ಯಮರ್ತಿಗಳ ಮೂಲಕ ಆ ಭೂಮಿಯನ್ನು ಎಕರೆಗೆ ಐದು ಆರು ಲಕ್ಷ ರೂಗಳಂತೆ ಖರೀದಿ ಮಾಡುವುದು,ನಂತರ ಕೈಗಾರಿಕಾ ಇಲಾಖೆಯಿಂದ ಆ ಭೂಮಿಗೆ ಮೂವತ್ತು ನಲವತ್ತು ಲಕ್ಷ ರೂ ಪರಿಹಾರ ನೀಡಿಸುವುದೂ ಈ ಧಂದೆಯ ಒಂದು ಭಾಗವಾಗಿದೆ ಎಂದು ದೂರಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕೈಗಾರಿಕಾ ಮಂತ್ರಿ ಮುರುಗೇಶ್ ನಿರಾಣಿ ಅವರೇ ಈ ಧಂದೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು,ಯಾವ ಕಾರಣಕ್ಕಾಗಿ ಭೂಸ್ವಾಧೀನಪಡಿಸಿಕೊಳ್ಳುವ ಅಧಿಸೂಚನೆಯನ್ನು ರದ್ದು ಮಾಡುವ ಕೆಲಸಕ್ಕೆ ಸರ್ಕಾರ ಕೈ ಹಾಕಿತು ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದೀಗ ಕೈಗಾರಿಕೆಗಳಿಗಾಗಿ ಒಂದು ಲಕ್ಷ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದ್ದು ಈ ವಿಷಯದಲ್ಲೂ ರೈತರನ್ನು ಬ್ಲಾಕ್‌ಮೇಲ್ ಮಾಡುವ ಕೆಲಸ ನಡೆಯುತ್ತದೆ ಎಂದು ಆರೋಪಿಸಿದರು.
ರಾಜ್ಯದ ವಿವಿಧ ಭಾಗಗಳಲ್ಲಿ ಇವತ್ತು ಡಿನೋಟಿಫಿಕೇಷನ್ ಧಂದೆ ನಡೆಯುತ್ತಿದ್ದು ವಿಧಾನಮಂಡಲ ಅಧಿವೇಶನದಲ್ಲಿ ಇದನ್ನು ಎಳೆ ಎಳೆಯಾಗಿ ಬಹಿರಂಗ ಪಡಿಸುವುದಾಗಿ ಅವರು ಸ್ಪಷ್ಟ ಪಡಿಸಿದರು.
ನಮ್ಮ ಕಾಲದಲ್ಲಿ ಈ ರೀತಿ ಭೂಮಿ ವಶಪಡಿಸಿಕೊಳ್ಳಲು ಹೋಗುವುದು,ಧಂದೆ ಮಾಡಿ ಅದನ್ನು ಸ್ವಾಧೀನಪ್ರಕ್ರಿಯೆಯಿಂದ ಕೈ ಬಿಡುವುದು ಮಾಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟ ಪಡಿಸಿದ ಅವರು,ನಾವು ಅಧಿಕಾರದಲ್ಲಿದ್ದಾಗ ಹಾಸನದಲ್ಲಿ ಮೂರು ಸಾವಿರ ಎಕರೆಯಷ್ಟು ರೈತರ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದೆವು ಎಂಬುದು ಸುಳ್ಳು ಆರೋಪ ಎಂದರು.
ನಾವು ರಾಜ್ಯದ ಹಿತಕ್ಕಾಗಿ ಹಾಕಿಕೊಳ್ಳುವ ಯೋಜನೆಗಳಿಗಾಗಿ ಭೂಮಿಯನ್ನು ವಶಪಡಿಸಿಕೊಳ್ಳುತ್ತಿದ್ದೆವು.ಆದರೆ ಇವರು ಹಾಗೆ ಭೂಮಿಯನ್ನು ವಶಪಡಿಸಿಕೊಳ್ಳುವ ನೆಪದಲ್ಲಿ ಏಕ ಕಾಲಕ್ಕೆ ರೈತರನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ.ಹಾಗೆಯೇ ಭೂಸ್ವಾಧೀನ ಪ್ರಕ್ರಿಯೆಯಿಂದ ಹಿಂದೆ ಸರಿಯಲು ಕೋಟ್ಯಾಂತರ ರೂ ವಸೂಲು ಮಾಡುವ ಧಂದೆಗಿಳಿದಿದ್ದಾರೆ ಎಂದು ಆರೋಪಿಸಿದರು.
ಯಡಿಯೂರಪ್ ಅವರ ಸರ್ಕಾರದ ಈ ಹಗರಣಗಳ ವಿರುದ್ಧ ಮಾಜೀ ಪ್ರಧಾನಿ ದೇವೇಗೌಡರು ಹಮ್ಮಿಕೊಂಡಿರುವ ಹೋರಾಟ ಮುಂದುವರಿಯಲಿದ್ದು ಎರಡನೇ ಹಂತದಲ್ಲೂ ನಡೆಯಲಿದೆ.ಈ ಸರ್ಕಾರಕ್ಕೆ ಸೂಕ್ತ ಕಾಲದಲ್ಲಿ ಸೂಕ್ತ ಉತ್ತರ ನೀಡುತ್ತೇವೆ.ನೈಸ್ ವಿಷಯದಲ್ಲಿ ಇವರು ನೈಸ್ ಆಗಿ ಹೇಗೆ ತಿಂದರು ಎಂಬುದನ್ನು ಸದನದಲ್ಲೇ ಬಹಿರಂಗಪಡಿಸುತ್ತೇವೆ ಎಂದು ನುಡಿದರು.