ಹಾಸನ, ಫೆ.೨೩- ರಾಜ್ಯದಲ್ಲಿ ಸುಮಾರು ೧.೭೩ ಲಕ್ಷ ಎಕರೆ ಕೃಷಿಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಬಿಜೆಪಿ ಸರಕಾರದ ಕ್ರಮ ಖಂಡಿಸಿ ಜಿಲ್ಲಾ ಜೆಡಿಎಸ್ ಕಾರ್ಯಕರ್ತರು ಹಾಸನದಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿದರು.
ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ನೂರಾರು ಕಾರ್ಯಕರ್ತರು, ರೈತರ ಬದುಕನ್ನು ಅತಂತ್ರಗೊಳಿಸಲು ಹೊರಟಿರುವ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಪ್ರಭಾವಿಗಳೊಂದಿಗೆ ಶಾಮೀಲಾಗಿ ನೈಸ್ರಸ್ತೆ, ಗಣಿಗಾರಿಕೆ, ಕೈಗಾರಿಕೆ ಅಭಿವೃದ್ಧಿ ಮತ್ತು ನಿವೇಶನ ಹೆಸರಿನಲ್ಲಿ ಲಕ್ಷಾಂತರ ಎಕರೆ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಕೂಡಲೇ ಹಿಂಪಡೆಯಬೇಕು.
ಅಲ್ಲದೇ ಸಾವಿರಾರು ಕೃಷಿಕರನ್ನು ಬೀದಿಪಾಲು ಮಾಡುವುದನ್ನು ನಿಲ್ಲಿಸಬೇಕು.ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.
ಸ್ವಾಧೀನಪಡಿಸಿಕೊಳ್ಳಲು ಹೊರಟಿರುವ ಭೂಮಿಯಲ್ಲಿ ಶೇ.೧೦ ರಷ್ಟು ಮಾತ್ರ ಅಭಿವೃದ್ಧಿಗೆ ಬಳಕೆಯಾಗಲಿದ್ದು, ಉಳಿದ ಭೂಮಿ ಭೂ ಮಾಫಿಯಾಕ್ಕೆ ಬಳಸುವ ದುರುದ್ದೇಶ ಅಡಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹೆಚ್.ಕೆ.ಜವರೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಸರ್ಕಾರ ಅನಗತ್ಯ ಭೂಸ್ವಾಧೀನವನ್ನು ಪ್ರಕ್ರಿಯೆಯನ್ನು ಕೈಬಿಟ್ಟು ರೈತರಿಗೆ ಹಿಂದಿರುಗಿಸಬೇಕು. ಇಲ್ಲದಿದ್ದರೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಹೆಚ್.ಎಸ್.ಪ್ರಕಾಶ್, ಹಾಸನ ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಹಿಂದಿನ ಎಲ್ಲಾ ಸರ್ಕಾರಗಳ ಅವಧಿಯಲ್ಲಿ ನಡೆದಿದೆ. ಈಗ ನಡೆದಿರುವ ಭೂಸ್ವಾಧೀನದ ಬಗ್ಗೆ ಜಾತಿ ಬಣ್ಣ ಕಟ್ಟುವುದು ಸರಿಯಲ್ಲ. ಹಾಸನ ಹೊರ ವಲಯದಲ್ಲಿರುವ ದಾಸರಕೊಪ್ಪಲು ಸೇರಿದಂತೆ ಕೆಲವು ಹಳ್ಳಿಗಳ ಭೂಮಿಯನ್ನು ವಸತಿ ಉದ್ದೇಶಕ್ಕೆ ಗೃಹ ಮಂಡಳಿ ಸ್ವಾಧೀನಪಡಿಸಿಕೊಳ್ಳಲು ನಡೆಸಿರುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಶಾಸಕರುಗಳಾದ ಹೆಚ್.ಕೆ.ಕುಮಾರಸ್ವಾಮಿ, ಪಟೇಲ್ ಶಿವರಾಂ, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ನಗರಸಭೆ ಅಧ್ಯಕ್ಷೆ ಅಂಬಿಕಾ ರವಿಶಂಕರ್, ನಗರಸಭೆ ಉಪಾಧ್ಯಕ್ಷ ಸಿ.ಆರ್.ಶಂಕರ್, ಮುಖಂಡರಾದ ಕೆ.ಎಂ.ರಾಜೇಗೌಡ, ಚನ್ನವೀರಪ್ಪ, ಯುವ ಮುಖಂಡ ಸಚ್ಚಿನ್ ಕೃಷ್ಣಪ್ರಸಾದ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.