ಹೈದರಾಬಾದ್, ಡಿ.11: ಪ್ರತ್ಯೇಕ ತೆಲಂಗಾಣ ರಾಜ್ಯದ ಬೇಡಿಕೆಗೆ ಕೇಂದ್ರ ಸರಕಾರ ಮಣಿದ ಬೆನ್ನಿಗೇ, ಗುರುವಾರ ಆಂಧ್ರಪ್ರದೇಶದಲ್ಲಿ ಹೊಸ ರಾಜಕೀಯ ಬಿಕ್ಕಟ್ಟೊಂದು ಉದ್ಭವಗೊಂಡಿದೆ. ಕರಾವಳಿ ಆಂಧ್ರ ಮತ್ತು ರಾಯಲಸೀಮೆ ವಲಯದ ಕಾಂಗ್ರೆಸ್, ಪ್ರಜಾರಾಜ್ಯಂ ಪಕ್ಷ (ಪಿಆರ್‌ಪಿ) ಮತ್ತು ತೆಲುಗು ದೇಶಂ ಪಕ್ಷ (ಟಿಡಿಪಿ)ಗಳಿಗೆ ಸೇರಿದ ೯೨ ಶಾಸಕರು ಪ್ರತ್ಯೇಕ ತೆಲಂಗಾಣ ರಾಜ್ಯವನ್ನು ರಚಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸಿ ರಾಜೀನಾಮೆ ನೀಡಿದ್ದಾರೆ. ಅದೇ ವೇಳೆ, ಈ ವಲಯದ ಹಲವು ಸಂಸದರೂ ರಾಜೀನಾಮೆ ನೀಡಿದ್ದಾರೆ ಅಥವಾ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ.
ಈ ಶಾಸಕರು ತಮ್ಮ ರಾಜೀನಾಮೆ ಪತ್ರಗಳನ್ನು ವಿಧಾನಸಭೆಯ ಸ್ಪೀಕರ್ ಕಿರಣ್‌ಕುಮಾರ್ ರೆಡ್ಡಿಗೆ ಹಸ್ತಾಂತರಿಸಿದ್ದಾರೆ.
ಆದಾಗ್ಯೂ, ಶಾಸಕರ ರಾಜೀನಾಮೆಗಳು ಅಂಗೀಕೃತವಾಗಿರುವ ಬಗ್ಗೆ ಸ್ಪೀಕರ್ ಏನೂ ಹೇಳಿಲ್ಲ.
ರಾಜೀನಾಮೆ ನೀಡಿದ ಶಾಸಕರ ಪೈಕಿ ೩೯ ಮಂದಿ ಕಾಂಗ್ರೆಸ್‌ಗೆ ಸೇರಿದವರು, ೩೮ ಮಂದಿ ತೆಲುಗು ದೇಶಂಗೆ ಮತ್ತು ೧೫ ಮಂದಿ ಪಿಆರ್‌ಪಿಗೆ ಸೇರಿದವರು.
ಹೊಸದಿಲ್ಲಿಯಲ್ಲಿ ವಿಜಯವಾಡದ ಕಾಂಗ್ರೆಸ್ ಸಂಸದ ಲಗಡಪತಿ ರಾಜಗೋಪಾಲ್ ಲೋಕಸಭಾ ಸ್ಪೀಕರ್ ಮೀರಾ ಕುಮಾರ್‌ಗೆ ಮೊದಲು ತನ್ನ ರಾಜೀನಾಮೆ ಸಲ್ಲಿಸಿದರು.
ಬಳಿಕ ಇದೇ ಹಾದಿಯನ್ನು ಇನ್ನೋರ್ವ ಸಂಸದ ಆರ್. ಸಾಂಬಶಿವರಾವ್ ತುಳಿದರು. ಕನಿಷ್ಠ ಇತರ ಇಬ್ಬರು ಕಾಂಗ್ರೆಸ್ ಸಂಸದರು ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಕೇಂದ್ರದ ನಿರ್ಧಾರವನ್ನು ಪ್ರತಿಭಟಿಸಿ ಆಂಧ್ರ ವಲಯದ ಹೆಚ್ಚಿನ ಸಂಸದರು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ಸುದ್ದಿ ಬರುತ್ತಿರುವಂತೆಯೇ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಈ ವಿಷಯದ ಬಗ್ಗೆ ಚರ್ಚಿಸಲು ಹೊಸದಿಲ್ಲಿಯಲ್ಲಿ ಪಕ್ಷದ ಸಂಸದರ ಸಭೆಯೊಂದನ್ನು ಕರೆದಿದ್ದಾರೆ.
ಆಂಧ್ರಪ್ರದೇಶವನ್ನು ವಿಭಜಿಸುವ ಪ್ರಕ್ರಿಯೆಯನ್ನು ಆರಂಭಿಸುವ ಕಾಂಗ್ರೆಸ್ ಹೈಕಮಾಂಡ್‌ನ “ಏಕಪಕ್ಷೀಯ ನಿರ್ಧಾರ”ಕ್ಕೆ ಶಾಸಕರು ಬಲವಾದ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.
“ನಿರ್ಧಾರವು ನಮಗೆ ಅತೀವ ನೋವು ತಂದಿದೆ. ರಾಜ್ಯದ ಇತರ ಪ್ರದೇಶಗಳಿಂದ ಜೀವನೋಪಾಯವನ್ನು ಅರಸುತ್ತಾ ಲಕ್ಷಾಂತರ ಮಂದಿ ಹೈದರಾಬಾದ್‌ಗೆ ಬಂದಿದ್ದಾರೆ. ರಾಜ್ಯವು ವಿಭಜನೆಗೊಂಡರೆ ಅವರ ಭವಿಷ್ಯವೇನು” ಎಂದು ಕೃಷ್ಣಾ ಜಿಲ್ಲೆಯ ಕಾಂಗ್ರೆಸ್ ಶಾಸಕ ಪಿ. ವೆಂಕಟರಾಮಯ್ಯ ವಿಧಾನಸಭೆಯಲ್ಲಿ ಪ್ರಶ್ನಿಸಿದರು.
ಪ್ರತ್ಯೇಕ ತೆಲಂಗಾಣ ರಾಜ್ಯವನ್ನು ನಿರ್ಮಿಸುವ ಘೋಷಣೆಯು ಆಂಧ್ರಪ್ರದೇಶದ ಇತರ ವಲಯಗಳಲ್ಲಿ ಪ್ರತಿಕೂಲ ಅಭಿಪ್ರಾಯವನ್ನು ಸೃಷ್ಟಿಸಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ಸಂಜೆ ಪಕ್ಷದ ಸಂಸದರ ಸಭೆಯೊಂದನ್ನು ಕರೆದಿದ್ದಾರೆ.
ಆಂಧ್ರಪ್ರದೇಶದ ೨೯೪ ವಿಧಾನಸಭಾ ಸ್ಥಾನಗಳ ಪೈಕಿ, ತೆಲಂಗಾಣ ವಲಯವು ೧೧೯ ಸ್ಥಾನಗಳನ್ನು ಹಾಗೂ ೧೭ ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಆಂಧ್ರಪ್ರದೇಶದ ಇತರ ಭಾಗವು ೧೭೫ ವಿಧಾನಸಭಾ ಕ್ಷೇತ್ರಗಳು ಮತ್ತು ೨೫ ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ.
೧೫೮ ಕಾಂಗ್ರೆಸ್ ಶಾಸಕರ ಪೈಕಿ ೫೧ ಮಂದಿ ತೆಲಂಗಾಣ ವಲಯಕ್ಕೆ ಸೇರಿದವರು ಹಾಗೂ ಇತರ ೧೦೭ ಮಂದಿ ಕರಾವಳಿ ಮತ್ತು ರಾಯಲಸೀಮೆ ವಲಯಗಳಿಗೆ ಸೇರಿದವರು.
ಬಹುಮತದ ಬೆಂಬಲವಿದ್ದರೆ ಮಾತ್ರ ನಿರ್ಣಯ: ರೋಸಯ್ಯ
ಹೈದರಾಬಾದ್, ಡಿ.೧೦: ಆಂಧ್ರ ಮತ್ತು ರಾಯಲಸೀಮೆ ವಲಯಗಳ ಕಾಂಗ್ರೆಸ್ ಶಾಸಕರು ಮತ್ತು ಸಂಸದರ ರಾಜೀನಾಮೆಗಳ ಮಹಾಪೂರದಿಂದ ಗುರುವಾರ ಎಚ್ಚೆತ್ತುಕೊಂಡಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಕೆ. ರೋಸಯ್ಯ, ಸಮಾಲೋಚನೆಗಳ ಬಳಿಕವೇ ಪ್ರತ್ಯೇಕ ತೆಲಂಗಾಣ ರಾಜ್ಯವನ್ನು ರಚಿಸುವ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸುವುದಾಗಿ ಹೇಳಿದ್ದಾರೆ.
ನಿರ್ಣಯವನ್ನು ಮಂಡಿಸುವ ಪ್ರಕ್ರಿಯೆಯು ಇನ್ನೂ ಆರಂಭವೇ ಆಗಿಲ್ಲ. ಹಾಗಿರುವಾಗ ಈ ವಿಷಯದ ಬಗ್ಗೆ ಉದ್ರಿಕ್ತಗೊಳ್ಳಬಾರದು ಹಾಗೂ ರಾಜೀನಾಮೆ ನೀಡಲು ಮುಂದಾಗಬಾರದು ಎಂದು ರೋಸಯ್ಯ ಸಂಸದರು ಮತ್ತು ಶಾಸಕರಿಗೆ ಮನವಿ ಮಾಡಿದರು.
“ಅಗತ್ಯವಿದ್ದರೆ, ವಿಧಾನಸಭೆಯಲ್ಲಿ ನಿರ್ಣಯವನ್ನು ಮಂಡಿಸಲಾಗುವುದು. ಅಂಥ ಪರಿಸ್ಥಿತಿ ಬಂದರೂ ಬಹುಮತದ ಬೆಂಬಲ ಪಡೆದೇ ಅದನ್ನು ಮಂಡಿಸಲಾಗುವುದು” ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ನುಡಿದರು.
“ನಿರ್ಣಯವನ್ನು ಮಂಡಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಹೇಳಿದ್ದಾರೆ. ಅದರ ಅರ್ಥ ನಿರ್ಣಯವನ್ನು ಕೂಡಲೇ ಮಂಡಿಸಲಾಗುವುದು ಎಂದು ಅರ್ಥವಲ್ಲ. ಯಾಕೆಂದರೆ, ಇದಕ್ಕೊಂದು ಪ್ರಕ್ರಿಯೆಯಿದೆ ಹಾಗೂ ಪ್ರಕ್ರಿಯೆಯಲ್ಲಿ ಹಲವಾರು ಹಂತಗಳಿವೆ. ಇತರ ವಲಯಗಳ ಜನರೊಂದಿಗೂ ನಾವು ಮಾತನಾಡಬೇಕಾಗಿದೆ” ಎಂದರು.
ಮಾತುಕತೆಗೆ ರಾವ್‌ಗೆ ದಿಲ್ಲಿಗೆ ಆಹ್ವಾನ: ಚಿದಂಬರಂ
ಹೊಸದಿಲ್ಲಿ, ಡಿ.೧೦: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯ ಮುಂದಿನ ಹಂತದ ಬಗ್ಗೆ ಚರ್ಚಿಸಲು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್)ಯ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್‌ರನ್ನು ಇಲ್ಲಿಗೆ ತಾನು ಆಹ್ವಾನಿಸಿದ್ದೇನೆ ಎಂದು ಗೃಹ ಸಚಿವ ಪಿ. ಚಿದಂಬರಂ ಗುರುವಾರ ಹೇಳಿದ್ದಾರೆ.
“ಹೈದರಾಬಾದ್ ಒಟ್ಟಾರೆಯಾಗಿ ಸಾಮಾನ್ಯ ಸ್ಥಿತಿಗೆ ಮರಳಿದೆ ಎಂಬುದನ್ನು ಸದನಕ್ಕೆ ತಿಳಿಸಲು ನಾನು ಸಂತೋಷ ಪಡುತ್ತೇನೆ” ಎಂದು ಚಿದಂಬರಂ ರಾಜ್ಯಸಭೆಗೆ ತಿಳಿಸಿದರು.
ರಾವ್ ಇಂದು ಬೆಳಗ್ಗೆ ತನಗೆ ಫೋನ್ ಮಾಡಿ, ವಿವಾದವನ್ನು ಬಗೆಹರಿಸಿರುವುದಕ್ಕಾಗಿ ಸದನದ ಎಲ್ಲ ವಿಭಾಗಗಳಿಗೆ ಕೃತಜ್ಞತೆ ಹೇಳಿದ್ದಾರೆ ಎಂದರು.
ರಾವ್ ಇನ್ನೂ 3 ದಿನ ಆಸ್ಪತ್ರೆಯಲ್ಲಿ
ಹೈದರಾಬಾದ್, ಡಿ.೧೦: ತನ್ನ ಹನ್ನೊಂದು ದಿನಗಳ ಉಪವಾಸ ಸತ್ಯಾಗ್ರಹವನ್ನು ಬುಧವಾರ ರಾತ್ರಿ ಹಿಂದಕ್ಕೆ ಪಡೆದುಕೊಂಡಿರುವ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕೆ. ಚಂದ್ರಶೇಖರ ರಾವ್ ಕನಿಷ್ಠ ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿಯಲಿದ್ದಾರೆ. ಅವರು ಸದ್ಯ ಆಸ್ಪತ್ರೆಯಲ್ಲಿ ಬ್ಯಾಕ್ಟೀರಿಯ ಸೋಂಕಿಗೆ ಚಿಕಿತ್ಸೆ ಪಡೆಯಲಿದ್ದಾರೆ.
ವೈದ್ಯರುಗಳು ಅವರಿಗೆ ಬ್ಯಾಕ್ಟೀರಿಯ ಸೋಂಕಿಗೆ ಚಿಕಿತ್ಸೆ ನೀಡುತ್ತಿರುವುದರಿಂದ ಚಂದ್ರಶೇಖರ್ ರಾವ್ ಇನ್ನೂ ಆಸ್ಪತ್ರೆಯಲ್ಲೇ ಉಳಿದುಕೊಳ್ಳಬೇಕಾಗಿದೆ ಎಂದು ಅವರ ಖಾಸಗಿ ವೈದ್ಯ ಎಂ.ವಿ. ರಾವ್ ತಿಳಿಸಿದರು.
ಉಪವಾಸ ಸತ್ಯಾಗ್ರಹವನ್ನು ಮುಕ್ತಾಯಗೊಳಿಸಿದ ಬಳಿಕ ರಾವ್ ಈಗ ಎಳನೀರು ಮತ್ತು ಹಾಲು ಸೇವಿಸುತ್ತಿದ್ದಾರೆ. ಉಪವಾಸ ಆರಂಭಗೊಂಡ ಬಳಿಕ ಟಿಆರ್‌ಎಸ್ ಮುಖ್ಯಸ್ಥ ೮ ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದರು