ದಕ್ಷಿಣ ಕನ್ನಡ ಜಿಲ್ಲೆಯು ಕಳೆದ ಒಂದು ವರ್ಷದಲ್ಲಿ ಹಲವು ಆತಂಕಗಳನ್ನು ಎದುರಿಸಿದೆ. ಹಿಂದಿನ ಕೆಲವು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಮಾನವ ಹಕ್ಕುಗಳ ಉಲ್ಲಂಘನೆಯ ಘಟನೆಗಳು ಕರಾವಳಿಯಲ್ಲಿ ಕೋಮುವಾದಿಗಳ ದಾಂಧಲೆಗೆ ಇನ್ನಷ್ಟು ಅವಕಾಶಗಳನ್ನು ಮಾಡಿಕೊಟ್ಟಿದೆ.
ಮಂಗಳೂರಿನಲ್ಲಿ ಕಳೆದ ವರ್ಷ ಚರ್ಚ್ಗಳ ಮೇಲೆ ದಾಂಧಲೆ ನಡೆಸಿದ ಸಂಘಪರಿವಾರದ ಇನ್ನೊಂದು ಗುಂಪು ಪಬ್ ಒಂದರಲ್ಲಿ ದಾಳಿ ನಡೆಸಿ ಅಲ್ಲಿ ಬಂದಿದ್ದ ಯುವತಿಯರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ರಾಷ್ಟ್ರೀಯ ಸುದ್ದಿವಾಹಿನಿಗಳ ಮೂಲಕ ಪ್ರಸಾರಗೊಂಡು ದೇಶಾದ್ಯಂತ ಆಕ್ರೋಶ ವನ್ನು ಸೃಷ್ಟಿಸಿತು. ಮಂಗಳೂರಿನ ನ್ಯಾಯ ವಾದಿ ನೌಶಾದ್ ಖಾಶಿಂಜಿಯನ್ನು ಅವರಿದ್ದ ಮಂಗಳೂರು ನಗರದ ಕೇಂದ್ರ ಭಾಗದಲ್ಲಿ ದುಷ್ಕರ್ಮಿಗಳು ಕೊಲೆ ಮಾಡಿದ ಘಟನೆ ಜಿಲ್ಲೆಯಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆಗೆ ಸಾಕ್ಷಿಯಾಯಿತು.
ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಸದಾ ಧ್ವನಿಯೆತ್ತಿದ್ದ ನೌಶಾದ್ ಖಾಶಿಂಜಿ ಕೊಲೆ ಯಲ್ಲಿ ಕೆಲವು ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳು ನೇರವಾಗಿ ಭಾಗಿಯಾಗಿದ್ದಾರೆ ಎಂದು ನಗರದ ಹಿರಿಯ ನ್ಯಾಯವಾದಿ ಪುರುಷೋತ್ತಮ ಪೂಜಾರಿ ನ್ಯಾಯಾಲಯದ ಮೂಲಕ ನಡೆಸುತ್ತಿರುವ ಹೋರಾಟ ಇನ್ನೂ ಮುಂದುವರಿದಿದೆ.
೧೯ ಯುವತಿಯರ ಕೊಲೆ ಆರೋಪಿಯ ಬಂಧನ: ಬುದ್ಧಿವಂತರ ಜಿಲ್ಲೆಯೆಂದು ಬೀಗುತ್ತಿದ್ದ ದಕ್ಷಿಣ ಕನ್ನಡದ ಜನತೆ ಬೆಚ್ಚಿ ಬಿದ್ದ ಇನ್ನೊಂದು ಘಟನೆ ೧೯ ಯುವತಿಯರ ಕೊಲೆ ಆರೋಪಿ ಸಯನೈಡ್ ಹಂತಕ ಮೋಹನನ ಬಂಧನ.
ತಮಗಿರಿವಿಲ್ಲದಂತೆ ೧೯ ಯುವತಿಯರು (ಪೊಲೀಸರ ಪ್ರಕಾರ) ಮೋಹನನ ಮೋಹಕ ಜಾಲಕ್ಕೆ ಬಿದ್ದು ಸಯನೈಡ್ ಸೇವಿಸಿ ಜೀವ ಕಳೆದುಕೊಂಡ ವರದಿ ಸರಕಾರಿ ಶಿಕ್ಷಕ ಮೋಹನನ ಬಂಧನದಿಂದ ಬೆಳಕಿಗೆ ಬಂದಾಗ ಇಡೀ ಜಿಲ್ಲೆಯ ಜನತೆ ಒಂದು ಕ್ಷಣ ದಂಗಾಯಿತು. ಈ ಪ್ರಕರಣವನ್ನು ಪೊಲೀಸರು ಬೇಧಿಸುವುದರ ಜೊತೆಗೆ ಜಿಲ್ಲೆ ಯಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿ ಸಿಕೊಂಡು ತೀವ್ರ ಆತಂಕಕ್ಕೆ ಎಡೆಮಾಡಿಕೊಟ್ಟಿದ್ದ ಸಂಘಪರಿವಾರದ ಪೂರ್ವನಿಯೋಜಿತ ಷಡ್ಯಂತ್ರ ವಾದ ‘ಲವ್ಜಿಹಾದ್’ ಎನ್ನುವ ಪಿತೂರಿಗೆ ತೆರೆ ಎಳೆಯಲಾಗಿತ್ತು. ಜಿಲ್ಲೆಯ ಹಲವೆಡೆ ನಾಪತ್ತೆಯಾ ಗಿದ್ದ ಯುವತಿಯರು ‘ಲವ್ಜಿಹಾದ್’ಗೊಳಪಟ್ಟಿ ದ್ದಾರೆಂದು ಹೇಳಿಕೊಂಡು ಸಂಘಪರಿವಾರದ ನೇತೃತ್ವದಲ್ಲಿ ಜಿಲ್ಲೆಯ ಕೆಲವು ಕಡೆ ಪ್ರತಿಭಟನೆಗಳನ್ನು ನಡೆಸಲಾಯಿತು. ಆದರೆ, ಆರೋಪಿ ಮೋಹನನ ಬಂಧನದಿಂದ ನಾಪತ್ತೆಯಾಗಿದ್ದ ಯುವತಿಯರಲ್ಲಿ ಬಹುತೇಕರು ಮೋಹನನ ಜಾಲಕ್ಕೆ ಸಿಲುಕಿ ಪ್ರಾಣವನ್ನೇ ಕಳೆದುಕೊಂಡಿರುವುದು ಬೆಳಕಿಗೆ ಬಂದಿತ್ತು.
ಹಡಗು ಮುಳುಗಿತು.... ರೈಲು ಹೊರಟಿತು...
ಬಹುದಿನಗಳ ಜಿಲ್ಲೆಯ ಜನರ ಬೇಡಿಕೆಯಾದ ಮಂಗಳೂರು- ಬೆಂಗಳೂರು ನಡುವಿನ ಹಗಲು ರೈಲು ಕೊನೆಗೂ ಕೇಂದ್ರ ಸಹಾಯಕ ರೈಲ್ವೆ ಸಚಿವರಾಗಿದ್ದ ಕೆ.ಎಚ್. ಮುನಿಯಪ್ಪರಿಂದ ಚಾಲನೆ ಪಡೆಯಿತು.
ಮಂಗಳೂರು ಕಡಲ ಕಿನಾರೆ ಅಪಾಯಕಾರಿ ಎನ್ನುವ ಮಾತಿಗೆ ಪೂರಕವಾಗಿ ಈ ಬಾರಿಯೂ ಏಶಿಯನ್ ಫಾರೆಸ್ಟ್ ಎಂಬ ಚೀನಾ ದೇಶದ ಹಡಗು ಅದಿರು ಸರಕನ್ನು ತುಂಬಿಕೊಂಡು ಕೆಲವು ನಾವಿಕ ಮೈಲು ದೂರಕ್ಕೆ ತೆರಳಿದಾಗ ಮುಳುಗಲಾರಂಭಿಸಿತ್ತು. ಡೆನ್ಡೆನ್ ಹಡಗು ಮುಳುಗಿ ಹಲವು ವರ್ಷಗಳೇ ಕಳೆದರೂ ಅದರ ಬಿಡಿಭಾಗ ಮೇಲೆತ್ತುವ ಕಾರ್ಯಾಚರಣೆ ಇನ್ನೂ ನಡೆದಿಲ್ಲ. ಇದೀಗ ಆ ಬೃಹತ್ ಹಡಗಿನೊಂದಿಗೆ ಏಶಿಯನ್ ಫಾರೆಸ್ಟ್ ಕೂಡಾ ಸಮುದ್ರ ಗರ್ಭದಲ್ಲಿ ಸೇರಿದೆ.
ಮುಗಿದ ಚುನಾವಣೆ: ಬಿಜೆಪಿಗೆ ಹೊಸ ಮುಖ
ಕರಾವಳಿಯಲ್ಲಿ ಈ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯೆ ಮಂಗಳೂರಿಗೆ ಬಂದು ಚುನಾವಣಾ ಪ್ರಚಾರ ನಡೆಸಿದರೂ ಜಿಲ್ಲೆಯಲ್ಲಿ ಕಾಂಗ್ರೆಸ್ಸನ್ನು ಗೆಲ್ಲಿಸಲಾಗಲಿಲ್ಲ. ಬಿಜೆಪಿಯ ಕೊನೆಯ ಕ್ಷಣದ ಚುನಾವಣಾ ತಂತ್ರ ಫಲಿಸಿ ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಬಿಜೆಪಿಯ ಹೊಸ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಎದುರು ಪರಾಭ ಗೊಂಡರು. ವರ್ಷದ ಕೊನೆ ಯಲ್ಲಿ ರಾಜ್ಯದ ಸ್ಥಳೀಯಾ ಡಳಿತ ಸಂಸ್ಥೆಗಳ ಪ್ರತಿನಿಧಿಗಳ ವಿಧಾನ ಪರಿಷತ್ ಸ್ಥಾನಕ್ಕೆ ಕಾಂಗ್ರೆಸ್ನ ಪ್ರತಾಪಚಂದ್ರ ಶೆಟ್ಟಿ ಮತ್ತು ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಅವಿರೋಧವಾಗಿ ಆಯ್ಕೆ ಗೊಂಡರು.
ಹರಿದು ಬಂದ ನೆರವಿನ ಹಸ್ತ : ಉತ್ತರ ಕರ್ನಾಟಕದಲ್ಲಿ ಜನ ನೆರೆಯಿಂದ ಮನೆ ಮಠಗಳನ್ನು ಕಳೆದುಕೊಂಡಾಗ ರಾಜ್ಯದಲ್ಲಿ ಉಂಟಾದ ಅನುಕಂಪದ ಅಲೆಯಿಂದ ಎಲ್ಲ ಕಡೆ ಜನಸಾಮಾನ್ಯರು ತಮ್ಮ ಕಷ್ಟಗಳನ್ನು ಮರೆತು ನೆರವಿಗೆ ಮುಂದಾದರು. ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಪಾದಯಾತ್ರೆ ಹಾಗೂ ಜಿಲ್ಲೆಯ ವಿವಿಧ ಸಂಘಟನೆಗಳು ಜನಸಾಮಾನ್ಯರು ಕೋಟ್ಯಂತರ ರೂಪಾಯಿ ದೇಣಿಗೆಯನ್ನು ನೀಡಿದರು.
ನಿಲ್ಲದ ಸಂತ್ರಸ್ತರ ಗೋಳು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಕೈಗಾರಿಕೆಗಳು ವಿಶೇಷ ಆರ್ಥಿಕ ವಲಯದ ಹೆಸರಿನಲ್ಲಿ ರೈತರ ಕೃಷಿ ಭೂಮಿಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ಈ ವರ್ಷವೂ ನಡೆದಿದೆ. ಇದರಿಂದ ಸಂತ್ರಸ್ತರಾದವರಿಗೆ ನೀಡಿದ ಭರವಸೆ ಈಡೇರಿಸದೆ ಕಂಪೆನಿಗಳ ಅಧಿಕಾರಿಗಳು ತಪ್ಪಿಸಿಕೊಂಡಾಗ ಜನಸಾಮಾನ್ಯರು ಬೀದಿಪಾಲಾದ ಘಟನೆ ಈ ಹಿಂದೆಯೂ ನಡೆದಿದೆ. ಈ ವರ್ಷವೂ ನಡೆಯುತ್ತಿದೆ. ಇದರ ವಿರುದ್ಧ ಪ್ರತಿಭಟನೆ ನಡೆಸುವ ವರಿಗೆ ಬೆಂಬಲ ನೀಡಲು ಖ್ಯಾತ ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್ ಜಿಲ್ಲೆಗೆ ಆಗಮಿಸಿದ್ದರು.
ಹಜ್ಜ್ಗೆ ನೇರ ವಿಮಾನ ಯಾನ
ಈ ಹಿಂದೆ ಬೆಂಗಳೂರು ಅಥವಾ ಮುಂಬೈಯ ಮೂಲಕ ಹಜ್ಜ್ ಯಾತ್ರೆಗೆ ತೆರಳುತ್ತಿದ್ದವರು ನೇರವಾಗಿ ಮಂಗಳೂರಿನಿಂದಲೇ ಹಜ್ಜ್ ಯಾತ್ರೆ ಕೈಗೊಳ್ಳಲು ಯಾತ್ರಾ ಶಿಬಿರವನ್ನು ಬಜಪೆಯಲ್ಲಿ ಆರಂಭಿಸಲಾಯಿತು. ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಹಜ್ಜ್ ಯಾತ್ರೆಯ ಪ್ರಥಮ ತಂಡವನ್ನು ಮಂಗಳೂರಿನಿಂದ ಬೀಳ್ಕೊಟ್ಟರು.
ರಾಜ್ಯ ಬ್ಯಾರಿ ಸಾಹಿತ್ಯ ಅಕಾಡಮಿ ಅಧಿಕಾರಕ್ಕೆ
ರಾಜ್ಯ ಸರಕಾರ ಕೊನೆಗೂ ರಾಜ್ಯ ಬ್ಯಾರಿ ಸಾಹಿತ್ಯ ಅಕಾಡಮಿಗೆ ಚಾಲನೆ ನೀಡಿ ಡಾ.ಎಂ.ಬಿ.ಅಬ್ದುಲ್ ರಹ್ಮಾನ್ ನೇತೃತ್ವದ ಸಮಿತಿ ರಚಿಸಿತು.
ತುಳು ಸಮ್ಮೇಳನ
ಉಜಿರೆಯಲ್ಲಿ ಡಾ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಅದ್ದೂರಿಯಾಗಿ ವಿಶ್ವ ತುಳು ಸಮ್ಮೇಳನ ನಡೆಯಿತು. ನೇತ್ರಾವತಿ ನದಿ ತಿರುವು ಪ್ರಸ್ತಾಪ ಕೈಬಿಡಬೇಕು. ತುಳು ಭಾಷೆಗೆ ಸಂವಿಧಾನದ ಎಂಟನೆ ಪರಿಚ್ಛೇದದಲ್ಲಿ ಅವಕಾಶ ಕಲ್ಪಿಸಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು. ಬೃಹತ್ ಸಂಖ್ಯೆಯ ಜನರು ತುಳು ಗ್ರಾಮ, ಸಮ್ಮೇಳನ ಕ್ಷಿಸಲು ಉಜಿರೆಯಲ್ಲಿ ಸೇರಿದ್ದರು.
ಮರೆಯಾದ ಐಕ್ಯಗಾನದ ಕವಿ
ತಮ್ಮ ಕೊನೆಯ ದಿನಗಳವರೆಗೂ ಐಕ್ಯಗಾನ ಹಾಡುತ್ತಲೇ ಉಳ್ಳಾಲದ ಸೌಹಾರ್ದ ಕೊಂಡಿಯಾಗಿದ್ದ ಸ್ವಾತಂತ್ರ ಹೋರಾಟಗಾರ, ಕವಿ, ಬರಹಗಾರ, ರಾಜಕಾರಣಿ, ಉಳ್ಳಾಲದ ಬಿ.ಎಂ.ಇದಿನಬ್ಬ ಈ ವರ್ಷ ನಮ್ಮಿಂದ ಮರೆಯಾದುದು ಕನ್ನಡ ನಾಡಿಗೆ ತುಂಬಲಾರದ ನಷ್ಟವನ್ನುಂಟುಮಾಡಿದೆ.
ಈ ವರ್ಷವೂ ಮಳೆಗಾಲ ಹಾಗೂ ಅಕಾಲಿಕ ಮಳೆಯ ಸಂದರ್ಭದಲ್ಲಿ ಜಿಲ್ಲೆಯ ಜನಸಾಮಾನ್ಯರ ಆಸ್ತಿಪಾಸ್ತಿಯೂ ಸೇರಿ ಕೋಟ್ಯಂತರ ರೂಪಾಯಿಯ ಸೊತ್ತು ನಷ್ಟವಾಯಿತು.
ಮಂಗಳೂರಿನಲ್ಲಿದ್ದ ಅನಿವಾಸಿ ವಿದೇಶಿ ವಿದ್ಯಾರ್ಥಿಗಳಿಗೆ ಎಚ್೧ ಎನ್೧ ಸೋಂಕು ತಗುಲಿ ಕೆಲವು ದಿನಗಳವರೆಗೆ ಜಿಲ್ಲೆಯಲ್ಲೂ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ನಿಲ್ಲದ ಕೋಮುವಾದಿಗಳ ದಾಂಧಲೆ
ಜಿಲ್ಲೆಯಲ್ಲಿ ಕೋಮುವಾದಿಗಳ ದಾಂಧಲೆ ಈ ವರ್ಷವೂ ಹಲವಾರು ಅಮಾಯಕರ ಬದುಕಿಗೆ ಕೊಳ್ಳಿ ಇಟ್ಟಿದೆ. ಕಾಲೇಜಿನಲ್ಲಿ ಸ್ಕಾರ್ಫ್ ಧರಿಸುವುದು, ಯುವತಿ- ಯುವಕ ಜೊತೆಯಾಗಿ ಮಾತನಾಡುವುದನ್ನು ಸಹಿಸದೆ ಅಲ್ಲಲ್ಲಿ ದುಷ್ಕರ್ಮಿಗಳ ದಾಂಧಲೆಯ ಹಲವು ಪ್ರಕರಣಗಳು ನಿರಂತರವಾಗಿ ವರ್ಷದುದಕ್ಕೂ ಮುಂದುವರಿಯಿತು.
ಮಂಗಳೂರು ರೈಲ್ವೆ ನಿಲ್ದಾಣ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಏರಿಸುವ ಪ್ರಸ್ತಾಪ, ಮಂಗಳೂರು ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ನಿಲ್ದಾಣವನ್ನಾಗಿಸುವ ಕುರಿತು ನೀಡಲಾದ ಹಳೆ ಭರವಸೆ ಈ ಬಾರಿಯೂ ಈಡೇರಲಿಲ್ಲ. ಸುಸಜ್ಜಿತ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಾ ಮುಂದುವರಿದಿದೆ. ದಕ್ಷಿಣ ಕನ್ನಡದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಎಲ್ಲರಿಗೂ ಕುಡಿಯುವ ನೀರಿನ ಯೋಜನೆ ಇನ್ನೂ ಸಂಪೂರ್ಣವಾಗಿಲ್ಲ. ಜಿಲ್ಲೆಯ ಸೌಹಾರ್ದತೆಯ ವಾತಾವರಣಕ್ಕೆ ತೊಡಕಾಗುವ ಶಕ್ತಿಗಳನ್ನು ನಿಯಂತ್ರಿಸುವ ಇಚ್ಛಾಶಕ್ತಿ ಆಡಳಿತ ನಡೆಸುವ ಪಕ್ಷಗಳಿಂದ ವ್ಯಕ್ತವಾಗಲಿಲ್ಲ. ವರ್ಷದ ಕೊನೆಗೆ ಬಡಜನರು ದಿನನಿತ್ಯದ ವಸ್ತುಗಳಿಗೂ ದುಪ್ಪಟ್ಟು ಬೆಲೆ ನೀಡಿ ಪಡೆಯಬೇಕಾದ ಬೆಲೆ ಏರಿಕೆಯ ವಾತಾವರಣ ನಿರ್ಮಾಣವಾಗಿದೆ