ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣ: ಮೂರನೆ ಶಂಕಿತನ ಬಂಧನ
ಹೊಸದಿಲ್ಲಿ, ಮೇ 2: ಮೂವರ ಸಾವಿಗೆ ಕಾರಣವಾಗಿದ್ದ 2007ರ ಅಜ್ಮೀರ್ ದರ್ಗಾ ಶರೀಫ್ ಸ್ಫೋಟ ಪ್ರಕರಣದ ಮೂರನೆಯ ಶಂಕಿತನನ್ನು ಮಧ್ಯಪ್ರದೇಶ ದಲ್ಲಿ ಬಂಧಿಸಲಾಗಿದ್ದು, ರಾಜಸ್ಥಾನಕ್ಕೆ ಕರೆತರಲಾಗಿದೆಯೆಂದು ಪೊಲೀಸ್ ಮೂಲಗಳು ಜೈಪುರದಲ್ಲಿಂದು ಹೇಳಿವೆ.
ವಿಷ್ಣುಪ್ರಸಾದ್ ಎಂದು ಗುರುತಿಸ ಲಾಗಿರುವ ಈ ಶಂಕಿತನನ್ನು ರಾಜ ಸ್ಥಾನದ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಶನಿವಾರ ರಾತ್ರಿ ಮಧ್ಯ ಪ್ರದೇಶದ ಶಾಹಜಹಾನ್ಪುರ ದಿಂದ ಬಂಧಿಸಿದ್ದು, ವಿಚಾರಣೆಗಾಗಿ ಜೈಪುರಕ್ಕೆ ಕರೆತಂದಿದೆಯೆಂದು ಅವು ತಿಳಿಸಿವೆ.
ಭಯೋತ್ಪಾದನೆ ದಾಳಿಯಲ್ಲಿ ಬಳಸ ಲಾಗಿದ್ದ ಸಿಮ್ ಕಾರ್ಡ್ ಹಾಗೂ ಮೊಬೈಲ್ ಫೋನ್ ಖರೀದಿಯಲ್ಲಿ ಪ್ರಸಾದ್ನ ಪಾತ್ರವಿದೆಯೆಂಬ ಶಂಕೆಯ ಮೇರೆಗೆ ಆತನನ್ನು ಬಂಧಿಸಲಾಗಿದೆ.ಆತ, ಇದೇ ಪ್ರಕರಣದಲ್ಲಿ ಶುಕ್ರವಾರ ಶಾಹಜಹಾನ್ ಪುರದಲ್ಲಿ ಬಂಧಿಸಲ್ಪಟ್ಟಿ ರುವ ಹಿಂದೂ ಬಲಪಂಥೀಯ ಗುಂಪಿನ ಸದಸ್ಯ ಚಂದ್ರಶೇಖರ್ ಎಂಬಾತನ ನಿಕಟವರ್ತಿಯೆಂದು ಶಂಕಿಸಲಾಗಿದೆ. ಅಜ್ಮೀರ್ನಲ್ಲಿ ಬುಧವಾರ ದೇವೇಂದ್ರ ಗುಪ್ತಾ ಎಂಬಾತನ ಬಂಧನದ ಬೆನ್ನಿಗೇ ಈ ಬಂಧನಗಳೂ ನಡೆದಿವೆ.
ಅಜ್ಮೀರ್ನ ಹೆಚ್ಚುವರಿ ಮುಖ್ಯ ದಂಡಾಧಿಕಾರಿಯವರು ಚಂದ್ರ ಶೇಖರ್ನಿಗೆ 12 ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದ್ದಾರೆ.
ಬಂಧಿತರು ಯಾವ ಸಂಘಟನೆಗೆ ಸೇರಿದವರೆಂಬುದನ್ನು ಬಹಿರಂಗಪಡಿಸಲು ಪೊಲೀಸರು ನಿರಾಕರಿಸಿದ್ದಾರೆ. ದರ್ಗಾ ಸ್ಫೋಟಕ್ಕೆ ಉಪಯೋಗಿಸಲಾಗಿದ್ದ ಮೊಬೈಲ್ ಫೋನನ್ನು ಎಟಿಎಸ್ ವಶಪಡಿಸಿ ಕೊಂಡಿದೆಯೆಂದು ಮೂಲಗಳು ತಿಳಿಸಿವೆ.
ಮೊದಲನೆಯ ಆರೋಪಿ ದೇವೇಂದ್ರ ಗುಪ್ತಾ, ಜಾರ್ಖಂಡ್ ನಲ್ಲಿ ವಾಸಿಸುತ್ತಿದ್ದು, ಕಾಯಿಲೆ ಪೀಡಿತ ತಾಯಿಯ ಭೇಟಿಗಾಗಿ ಅಜ್ಮೀರ್ಗೆ ಬಂದ ವೇಳೆ ಬಂಧನಕ್ಕೊಳಗಾಗಿದ್ದಾನೆ. ಆತನ ವಿಚಾರಣೆಯಿಂದ ಹೊಸ ಮಾಹಿತಿ ದೊರೆತಿದ್ದು, ಸ್ಫೋಟದ ರೂವಾರಿ ಗುಜರಾತ್ನವನಾಗಿರಬಹುದೆಂದು ಶಂಕಿಸಲಾಗಿದೆ. ಗುಪ್ತಾನಿಗೂ ಶುಕ್ರವಾರ 12 ದಿನಗಳ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.
ಅಜ್ಮೀರ್ ಸ್ಫೋಟ ಆರೋಪಿಯ ಮಂಪರು ಪರೀಕ್ಷೆಗೆ ಎಟಿಎಸ್ ಮನವಿ
ಹೊಸದಿಲ್ಲಿ, ಮೇ 2: ಅಜ್ಮೀರ್ ದರ್ಗಾ ಶರೀಫ್ ಸ್ಫೋಟ ಪ್ರಕರಣದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ದೇವೇಂದ್ರ ಗುಪ್ತಾ ಎಂಬಾತನ ಮಂಪರು ಪರೀಕ್ಷೆಗೆ ಅವಕಾಶ ಕೋರಿ ರಾಜಸ್ಥಾನದ ಎಟಿಎಸ್ ಅಜ್ಮೀರ್ನ ನ್ಯಾಯಾಲಯವೊಂದನ್ನು ಸಮೀಪಿಸಿದೆ.
ಸ್ಫೋಟಕ್ಕೆ ಬಳಸಲಾಗಿದ್ದ ಸಿಮ್ ಕಾರ್ಡ್ ಆತನ ಬಳಿಯಿದ್ದುದನ್ನು ತನಿಖೆದಾರರು ಪತ್ತೆಹಚ್ಚಿದ್ದಾರೆ. ಗುಪ್ತಾನಿಗೆ ಅಭಿನವ ಭಾರತ್ ಸಂಘಟನೆಯೊಂದಿಗೆ ಸಂಬಂಧವಿದೆ ಯೆನ್ನಲಾಗಿದೆ.ಇದೇ ವೇಳೆ, ಅಜ್ಮೀರ್ ದರ್ಗಾ ಹಾಗೂ ಮಾಲೆಗಾಂವ್ ಮಸೀದಿ ಸ್ಫೋಟಗಳಲ್ಲಿ ಬಳಸಲಾದ ಸ್ಫೋಟಕ ಹಾಗೂ ತಂತ್ರಗಾರಿಕೆಯಲ್ಲಿ ಸಾಮ್ಯವಿದೆಯೆಂದು ಸಿಬಿಐ ಮೂಲಗಳು ತಿಳಿಸಿವೆ.
ಗುಪ್ತಾ ಹಾಗೂ ಮಾಲೆಗಾಂವ್ ಸ್ಫೋಟ ಆರೋಪಿ ಪ್ರಜ್ಞಾಸಿಂಗ್ ಠಾಕೂರ್ರ ವಿಚಾರಣೆಗೆ ರಾಜಸ್ಥಾನದ ಎಟಿಎಸ್ ಹಾಗೂ ಸಿಬಿಐಯ ಜಂಟಿ ತಂಡ ರಚಿಸಬೇಕೆಂದು ಸಿಬಿಐ ಬಯಸಿದೆ. ಗುಪ್ತಾನ ವಿಚಾರಣೆಯಲ್ಲಿ ಇತರ ಕೆಲವು ಮಸೀದಿ ಸ್ಫೋಟಗಳ ಸುಳಿವು ಸಿಕ್ಕಿದೆಯೆಂದು ಅವು ಹೇಳಿವೆ.
ಇದೇ ವೇಳೆ, ಅಜ್ಮೀರ್, ಮಕ್ಕಾ ಮಸೀದಿ ಹಾಗೂ ಸಮಜೋತಾ ಎಕ್ಸ್ಪ್ರೆಸ್ ಸ್ಫೋಟಗಳಲ್ಲಿ ಆರೆಸ್ಸೆಸ್ನ ಕೈವಾಡವಿದೆಯೆಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಆರೋಪಿಸಿದ್ದಾರೆ