ಬೆಂಗಳೂರು, ಡಿ.೧೨: ಶಿಷ್ಠಾಚಾರ ಪಾಲಿಸದೆ ರಾಷ್ಟ್ರಗೀತೆಗೆ ಅವಮಾನ ಹಾಗೂ ನಾಡಗೀತೆಗೆ ಅಗೌರವ ತೋರಿದ ಪ್ರಸಂಗವೊಂದು ನಗರದಲ್ಲಿ ಶನಿವಾರ ನಡೆದ ಸಮಾರಂಭವೊಂದರಲ್ಲಿ ನಡೆದಿದೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಪರ್ಯಾಯ ವ್ಯಾಜ್ಯ ಪರಿಹಾರ ಅಂತರಾಷ್ಟ್ರೀಯ ಕೇಂದ್ರದ ವತಿಯಿಂದ ‘ಸಂಧಾನ ಮತ್ತು ಮಧ್ಯಸ್ಥಿಕೆ’ ಕುರಿತ ಸಮಾವೇಶವನ್ನು ಏರ್ಪಡಿಸಲಾಗಿತ್ತು.
ಸಮಾವೇಶವನ್ನು ಉದ್ಘಾಟನೆ ಮಾಡಲು ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಆಗಮಿಸಿದ್ದರು. ಅಲ್ಲದೆ ರಾಜ್ಯಪಾಲ ಎಚ್.ಆರ್.ಭಾರದ್ವಾಜ್, ಕೇಂದ್ರ ಕಾನೂನು ಸಚಿವ ರಪ್ಪ ಮೊಯ್ಲಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸುಪ್ರಿಂಕೋರ್ಟ್ ನ್ಯಾಯಮೂರ್ತಿ ಪಿ.ಸಥಾಸಿವಂ, ದಲ್ರ್ ಭಂಡಾರಿ, ಮುಂತಾದವರು ಮುಖ್ಯ ಅತಿಥಿಯಾಗಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ವೇದಿಕೆಯಲ್ಲಿದ್ದ ಎಲ್ಲ ಗಣ್ಯರ ಸಮ್ಮುಖದಲ್ಲಿ ಸಮಾವೇಶದ ಸಂಘಟಕರು ಶಿಷ್ಟಾಚಾರದ ಅರಿವಿಲ್ಲದೆ ಮೊದಲು ರಾಷ್ಟ್ರಗೀತೆಯನ್ನು ಹಾಡುವುದನ್ನು ಬಿಟ್ಟು, ನಾಡಗೀತೆ ಹಾಡಿಸಲು ಮುಂದಾದರು.
ಯಡಿಯೂರಪ್ಪ, ನ್ಯಾ.ಕೆ.ಜಿ.ಬಾಲಕೃಷ್ಣನ್ ಸೇರಿದಂತೆ ವೇದಿಕೆಯಲ್ಲಿದ್ದ ಎಲ್ಲ ಗಣ್ಯರು ನಾಡಗೀತೆ ಪ್ರಾರಂಭವಾಗುತ್ತಿದ್ದಂತೆ ಗೌರವ ಸೂಚಿಸಲು ನಿಂತರು. ಆದರೆ ನಾಡಗೀತೆಯನ್ನು ಹಾಡಲು ಪ್ರಾರಂಭಿಸುತ್ತಿದ್ದಂತೆ ಆಕ್ರೋಶ ಭರಿತ ಧ್ವನಿಯಲ್ಲಿ ಮಧ್ಯಪ್ರವೇಶಿಸಿದ ಎಚ್.ಆರ್.ಭಾರದ್ವಾಜ್, ಸಂಘಟಕರ ಮೇಲೆ ಹರಿಹಾಯ್ದರು. ಅಲ್ಲದೆ ನಾಡಗೀತೆಯನ್ನು ಕೂಡಲೆ ನಿಲ್ಲಿಸಿ, ಮೊದಲು ರಾಷ್ಟ್ರಗೀತೆಯನ್ನು ಹಾಡಬೇಕೆಂದು ಸೂಚಿಸಿದರು. ಇದರಿಂದ ಸಮಾರಂಭದಲ್ಲಿ ಭಾಗವಹಿಸಿದ್ದ ಸಭಿಕರಿಗೆಲ್ಲ ಕೆಲಕಾಲ ಕಕ್ಕಾಬಿಕ್ಕಿಯಾದರು.
ರಾಷ್ಟ್ರಪತಿ ಹಾಗೂ ಸುಪ್ರಿಂಕೋರ್ಟ್ ನ್ಯಾಯಮೂರ್ತಿಗಳು ಹಾಜರಿರುವ ಸಮಾರಂಭಗಳಲ್ಲಿ ಶಿಷ್ಟಾಚಾರದ ಪ್ರಕಾರ ಮೊದಲು ರಾಷ್ಟ್ರಗೀತೆಯನ್ನು ಹಾಡಬೇಕು. ನಂತರ ನಾಡಗೀತೆಯನ್ನು ಹಾಡಬೇಕೆಂದು ಹೇಳುವ ಮೂಲಕ ಸಮಾರಂಭದ ಸಂಘಟಕರಿಗೆ ಭಾರದ್ವಾಜ್ ಪಾಠ ಹೇಳಿದರು.
ನಂತರ ಶಿಷ್ಟಾಚಾರದಂತೆ ರಾಷ್ಟ್ರಗೀತೆಯ ನಂತರ ನಾಡಗಿತೆ ಹಾಡಲಾಯಿತು. ಅಲ್ಲದೆ ಸಮಾರಂಭ ಕೂಡ ಸುಗಮವಾಗಿ ನೆರವೇರಿತು.
ಸಂಘಟಕರ ಸಣ್ಣ ತಪ್ಪಿನಿಂದ ಮೊದಲು ರಾಷ್ಟ್ರಗೀತೆಯನ್ನು ಹಾಡದೆ, ರಾಷ್ಟ್ರಗೀತೆಗೆ ಅವಮಾನ ಮಾಡಿದಂತಾಗಿದೆ. ಅಲ್ಲದೆ ಹಾಡಲು ಪ್ರಾರಂಭಿಸಿದ್ದ ನಾಡಗೀತೆಯನ್ನು ನಿಲ್ಲಿಸುವ ಮೂಲಕ, ನಾಡಗೀತೆಗೂ ಅಗೌರವ ಸೂಚಿಸಿದಂತಾಗಿದೆ ಎಂದು ಸಮಾರಂಭದಲ್ಲಿ ಭಾಗವಹಿಸಿದ್ದ ಕೆಲ ಸಭಿಕರು ವಿಷಾದ ವ್ಯಕ್ತಪಡಿಸಿದರು