ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಹೈದರಾಬಾದ್:ರಾಜೀನಾಮೆ ನೀಡಲು ಮುಂದಾದ 20 ಸಚಿರು: ಜಟಿಲಗೊಳ್ಳುತ್ತಿರುವ ಪ್ರತ್ಯೇಕ ತೆಲಂಗಾಣ ವಿವಾದ; ಪ್ರತಿಭಟನೆ 2ನೆ ದಿನಕ್ಕೆ

ಹೈದರಾಬಾದ್:ರಾಜೀನಾಮೆ ನೀಡಲು ಮುಂದಾದ 20 ಸಚಿರು: ಜಟಿಲಗೊಳ್ಳುತ್ತಿರುವ ಪ್ರತ್ಯೇಕ ತೆಲಂಗಾಣ ವಿವಾದ; ಪ್ರತಿಭಟನೆ 2ನೆ ದಿನಕ್ಕೆ

Sun, 13 Dec 2009 02:55:00  Office Staff   S.O. News Service
ಹೈದರಾಬಾದ್, ಡಿ.೧೨: ಕರಾವಳಿ ಆಂಧ್ರ ಮತ್ತು ರಾಯಲಸೀಮೆ ವಲಯಗಳ 20 ಸಚಿವರು ತಮ್ಮ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸುವುದರೊಂದಿಗೆ ಆಂಧ್ರಪ್ರದೇಶದಲ್ಲಿ ತೆಲಂಗಾಣಕ್ಕೆ  ಸಂಬಂಧಿಸಿದ ರಾಜಕೀಯ ಚದುರಂಗದಾಟವು ಶನಿವಾರ ಮತ್ತೊಂದು ತಿರುವನ್ನು ಪಡೆದುಕೊಂಡಿದೆ.

ಆಂಧ್ರಪ್ರದೇಶವನ್ನು ವಿಭಜಿಸಲು ಕೇಂದ್ರ ಸರಕಾರವು ತೆಗೆದುಕೊಂಡಿರುವ ನಿರ್ಧಾರದ ಹಿನ್ನೆಲೆಯಲ್ಲಿ ತಮ್ಮ ಹುದ್ದೆಗಳನ್ನು ತೊರೆಯುವಂತೆ ಮತದಾರರಿಂದ ಅಗಾಧ ಒತ್ತಡಕ್ಕೆ ಒಳಗಾಗಿರುವ ಸಚಿವರು ಇಂದು ಮಧ್ಯಾಹ್ನ ಇಲ್ಲಿನ ತಾರಾ ಹೊಟೇಲೊಂದರಲ್ಲಿ ಸಭೆ ಸೇರಿದರು ಹಾಗೂ ಸಾಮೂಹಿಕ ರಾಜೀನಾಮೆಗಳನ್ನು ಸಲ್ಲಿಸಲು ನಿರ್ಧರಿಸಿದರು.

“ನಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಲು ನಾವು ನಿರ್ಧರಿಸಿದ್ದೇವೆ. ನಮ್ಮ ನಿರ್ಧಾರವನ್ನು ಮುಖ್ಯಮಂತ್ರಿ ಕೆ. ರೋಸಯ್ಯರಿಗೆ ತಿಳಿಸುವಂತೆ ನಮ್ಮ ಮೂವರು ಸಹೋದ್ಯೋಗಿಗಳಾದ ಧರ್ಮನ ಪ್ರಸಾದ ರಾವ್, ಗದೆ ವೆಂಕಟ ರೆಡ್ಡಿ ಮತ್ತು ಸಿ. ಸಿಲ್ಪ ಮೋಹನ್‌ರನ್ನು ಕೇಳಿದ್ದೇವೆ” ಎಂದು ರಾಜ್ಯದ ಪುರಸಭೆ ಆಡಳಿತ ಸಚಿವ ಆನಾಮ್ ರಾಮನಾರಾಯಣ ರೆಡ್ಡಿ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಧರ್ಮನ, ಗದೆ ಮತ್ತು ಸಿಲ್ಪ ಮೋಹನ್ ತಕ್ಷಣ ಮುಖ್ಯಮಂತ್ರಿಯನ್ನು ಭೇಟಿಯಾಗುವುದಕ್ಕಾಗಿ ಮುಖ್ಯಮಂತ್ರಿ ಕಾರ್ಯಾಲಯಕ್ಕೆ ಧಾವಿಸಿದರು.

ಆದಾಗ್ಯೂ, ತಾವು ಮುಖ್ಯಮಂತ್ರಿಯೊಂದಿಗೆ ರಾಜೀನಾಮೆಯ ವಿಷಯವನ್ನು ಇನ್ನೂ ಪ್ರಸ್ತಾಪಿಸಿಲ್ಲ ಎಂದು ಆ ಸಚಿವರು ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು. “ನಾವು ಅವರನ್ನು ಸಂಜಮತ್ತೆ ಭೇಟಿಯಾಗಿ ವಿಷಯದ ಬಗ್ಗೆ ಅವರೊಂದಿಗೆ ಚರ್ಚಿಸುತ್ತೇವೆ” ಎಂದು ಧರ್ಮನ ಮತ್ತು ಗದೆ ಸುದ್ದಿಗಾರರಿಗೆ ತಿಳಿಸಿದರು.

ಈ ನಡುವೆ, ಸುದ್ದಿಗಾರರೊಂದಿಗೆ ಮಾತನಾಡಲು ನಿರಾಕರಿಸಿದ ಮುಖ್ಯಮಂತ್ರಿ ಮನೆಗೆ ತೆರಳಿದರು.

ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಕೆಸಿ‌ಆರ್

ಹೊಸದಿಲ್ಲಿ: ಪ್ರತ್ಯೇಕ ತೆಲಂಗಾಣ ರಾಜ್ಯದ ರಚನೆಗೆ ಸಂಬಂಧಿಸಿದ ಚೆಂಡನ್ನು ತೆಲಂಗಾಣ ರಾಷ್ಟ್ರ ಸಮಿತಿ (ಟಿ‌ಆರ್‌ಎಸ್) ಅಧ್ಯಕ್ಷ ಕೆ. ಚಂದ್ರಶೇಖರ ರಾವ್ ಇಂದು ಕೇಂದ್ರದ ಅಂಗಳಕ್ಕೆ ತಳ್ಳಿದ್ದಾರೆ ಹಾಗೂ ಪ್ರಸ್ತಾಪಿತ ರಾಜ್ಯದ ರಾಜಧಾನಿ ಹೈದರಾಬಾದ್ ಆಗಿರುತ್ತದೆ ಎಂದಿದ್ದಾರೆ.

ಚಂಡೀಗಢವನ್ನು ಹರ್ಯಾಣ ಮತ್ತು ಪಂಜಾಬ್‌ಗಳು ಹಂಚಿಕೊಂಡಿರುವ ಮಾದರಿಯಲ್ಲಿ ಹೈದರಾಬಾದ್‌ಅನ್ನು ಆಂಧ್ರಪ್ರದೇಶದೊಂದಿಗೆ ಹಂಚಿಕೊಳ್ಳುವುದನ್ನು ರಾವ್ ತಳ್ಳಿಹಾಕಿದರು. “ಚಂಡೀಗಢ ಮತ್ತು ಹೈದರಾಬಾದ್‌ಗಳನ್ನು ತುಲನೆ ಮಾಡಲಾಗದು” ಎಂದು ಅವರು ಹೇಳಿದರು.

“ಘೋಷಣೆಯನ್ನು ಮಾಡಿರುವುದರಿಂದ, ಈ ವಿಷಯದ ಬಗ್ಗೆ ಉಂಟಾಗಿರುವ ವಿವಾದವನ್ನು ಪರಿಹರಿಸುವುದು ಅವರಿಗೆ (ಕೇಂದ್ರ) ಸೇರಿದ್ದು. ಅವರು ಅದನ್ನು ಮಾಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ” ಎಂದು ೧೧ ದಿನಗಳ ಉಪವಾಸ ಪ್ರತಿಭಟನೆಯ ಬಳಿಕ ಮನೆಯಲ್ಲಿ ಚೇತರಿಸಿಕೊಳ್ಳುತ್ತಿರುವ ರಾವ್ ಖಾಸಗಿ ವಾರ್ತಾ ಚಾನೆಲೊಂದಕ್ಕೆ ಹೇಳಿದರು.

ಆಂಧ್ರಪ್ರದೇಶದ ಇತರ ಭಾಗಗಳಲ್ಲಿ ಈಗ ತಲೆದೋರಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ  ತಾವು ತೆಲಂಗಾಣ ವಿಷಯದಿಂದ ಹಿಂದೆ ಸರಿಯುವಿರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಈ ಪ್ರಶ್ನೆ ಏಳುವುದಿಲ್ಲ. ಬಾಣವು ಬಿಲ್ಲಿನಿಂದ ಒಮ್ಮೆ ಹೊರ ಹೊರಟ ಬಳಿಕ ಅದನ್ನು ಹಿಂದಕ್ಕೆ ತರಲು ಸಾಧ್ಯವಾಗುವುದಿಲ್ಲ” ಎಂದು ರಾವ್ ನುಡಿದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಮೇಲೆ ಪ್ರಶಂಸೆಯ ಸುರಿಮಳೆಯನ್ನೇ ಹರಿಸಿದ ಅವರು, ತೆಲಂಗಾಣದ ಜನರ ಇಡೀ ಆಶೋತ್ತರಗಳ ಭಾರ ಆಕೆಯ ಹೆಗಲ ಮೇಲಿದೆ ಎಂದರು. “ನಾನು ಅವರಿಗೆ ಆಭಾರಿಯಾಗಿದ್ದೇನೆ. ಅವರ ಉಮೇದು ಹಾಗೂ ದಯೆಯಿಂದ ಇಂದು ನಮ್ಮ ಕನಸು ನನಸಾಗಿದೆ” ಎಂದು ಟಿ‌ಆರ್‌ಎಸ್ ಮುಖ್ಯಸ್ಥ ಹೇಳಿದರು.

ತನಗೆ ಸೋನಿಯಾ ಹಾಗೂ “ಒಳ್ಳೆಯ ಮನುಷ್ಯ” ಮನಮೋಹನ್ ಸಿಂಗ್‌ರ ಮೇಲೆ “ತುಂಬಾ ವಿಶ್ವಾಸವಿದೆ” ಎಂದರು. ಆಂಧ್ರಪ್ರದೇಶದ ನಾಯಕರು ಸೋನಿಯಾರ ಮಾತಿಗೆ ಕಿವಿಗೊಡುವುದು ಒಳ್ಳೆಯದು ಎಂದು ನುಡಿದರು.

ತೆಲಂಗಾಣ ವಿರೋಧಿ ಚಳವಳಿಯು “ಕೃತಕ”ವಾಗಿದೆ ಹಾಗೂ ಅದಕ್ಕೆ ಸ್ಥಾಪಿತ ಹಿತಾಸಕ್ತಿಗಳು ಚಾಲನೆ ನೀಡಿ ಹಣಕಾಸು ಒದಗಿಸುತ್ತಿವೆ” ಎಂದು ಆರೋಪಿಸಿದರು.

ಈ ಹಿತಾಸಕ್ತಿಗಳು ಹೈದರಾಬಾದ್‌ನಲ್ಲಿ ಹೂಡಿಕೆಗಳನ್ನು ಹೊಂದಿವೆ ಹಾಗೂ ಬೇನಾಮಿ ಭೂಮಿಗಳನ್ನು ಹೊಂದಿವೆ ಎಂದು ಅವರು ಆರೋಪಿಸಿದರು.

ಪ್ರತಿಭಟನೆ 2ನೆ ದಿನಕ್ಕೆ

ಹೈದರಾಬಾದ್: ಪ್ರತ್ಯೇಕ ತೆಲಂಗಾಣ ರಾಜ್ಯದ ಬೇಡಿಕೆಗೆ ಅಂUಕಾರ ನೀಡಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಪ್ರತಿಭಟಿಸಿ ಕರಾವಳಿ ಆಂಧ್ರ ಮತ್ತು ರಾಯಲಸೀಮೆ ವಲಯಗಳಲ್ಲಿ ನಡೆಯುತ್ತಿರುವ ಬಂದ್ ಮತ್ತು ಪ್ರತಿಭಟನೆಗಳು ಶನಿವಾರ ಎರಡನೆ ದಿನಕ್ಕೆ ಕಾಲಿರಿಸಿವೆ.

ಚಳವಳಿಯ ಅಂಗವಾಗಿ ರೈಲುಗಳನ್ನು ತಡೆದು ನಿಲ್ಲಿಸಿದ ವರದಿಗಳು ಬಂದಿವೆ.

ಆಂಧ್ರದಲ್ಲಿ ನಡೆಯುತ್ತಿರುವ ತೆಲಂಗಾಣ ವಿರೋಧಿ ಪ್ರತಿಭಟನೆಗಳ ಕೇಂದ್ರವಾಗಿರುವ ರಾಯಲಸೀಮೆಯ ಅನಂತಪುರದಲ್ಲಿ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆಗಳು ಜರಗಿವೆ. ಇಲ್ಲಿ ಎಸ್.ಕೆ. ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಕೇಬಲ್‌ಗಳಿದ್ದ ಬಿ‌ಎಸ್‌ಎನ್‌ಎಲ್  ಗೋದಾಮಿಗೆ ಬೆಂಕಿ ಹಚ್ಚಿದರು.

ಆಂಧ್ರಪ್ರದೇಶದ ಈ ಎರಡು ವಲಯಗಳಲ್ಲಿ ಆಂಧ್ರಪ್ರದೇಶ ಸಾರಿಗೆ ಸಂಸ್ಥೆಯ ಬಸ್ಸುಗಳು ಓಡಲಿಲ್ಲ. ಹಾಗಾಗಿ, ಸಾವಿರಾರು ಪ್ರಯಾಣಿಕರು ತೊಂದರೆಗೊಳಗಾದರು. ಶಾಲೆಗಳು, ಕಾಲೇಜುಗಳು, ಅಂಗಡಿಗಳು ಹಾಗೂ ಇತರ ವಾಣಿಜ್ಯ ಸಂಸ್ಥೆಗಳು ಮುಚ್ಚಿದ್ದವು.
ವಿಶಾಖಪಟ್ಟಣದಲ್ಲಿ ವಿದ್ಯಾರ್ಥಿಗಳು ಆಮರಣಾಂತ ಉಪವಾಸ ಹಾಗೂ ಸರದಿ ಉಪವಾಸ ನಡೆಸುತ್ತಿದ್ದಾರೆ.

Share: