ಹಾಸನ, ಫೆ.೨೩- ಸಾಹಸೋತ್ಸವ ಕಾರ್ಯಕ್ರಮದ ಅಂಗವಾಗಿ ಹಾಸನದ ಬೂವನಹಳ್ಳಿಯ ಉದ್ದೇಶಿತ ವಿಮಾನ ನಿಲ್ದಾಣ ಪ್ರದೇಶದಲ್ಲಿ ಮಂಗಳವಾರ ನಡೆದ ಪ್ಯಾರಾ ಸೈಲಿಂಗ್ ಸಾಹಸ ತರಬೇತಿ ಶಿಬಿರ ಗಮನ ಸೆಳೆಯಿತು.
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಮತ್ತು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಕ್ರೀಡಾ ಅಕಾಡೆಮಿ ಸಹಯೋಗದಲ್ಲಿ ಹಮ್ಮಿಕೊಂಡಿರುವ ಪ್ಯಾರಾ ಸೈಲಿಂಗ್ಗೆ ಉತ್ಸಹಿ ಸಾಹಸಿಗರ ದಂಡೆ ಹರಿದು ಬಂದಿತ್ತು.
ಶಿಬಿರದ ಆರಂಭದ ದಿನವಾದ ಮಂಗಳವಾರ ಸುಮಾರು ೬೦೦ಕ್ಕೂ ಹೆಚ್ಚು ಮಂದಿ ಶಿಬಿರಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡು ಪ್ಯಾರಾ ಸೈಲಿಂಗ್ನ ವಿಶೇಷ ಅನುಭವ ಪಡೆದು ತೃಪ್ತರಾದರು.
ಶಾಸಕ ಹೆಚ್.ಎಸ್.ಪ್ರಕಾಶ್ ಶಿಬಿರಕ್ಕೆ ಚಾಲನೆ ನೀಡಿ ಪ್ಯಾರಾ ಸೈಲಿಂಗ್ ಏರಿ ಅನುಭವ ಪಡೆದರು. ಅಲ್ಲದೇ ಉಪವಿಭಾಗಾಧಿಕಾರಿ ಕರೀಗೌಡ, ಯುವಜನ ಸೇವೆ ಮತ್ತು ಕ್ರೀಡಾಧಿಕಾರಿ ಜಯರಾಮ್ ಸೇರಿದಂತೆ ಜಿಲ್ಲೆಯ ಇಲಾಖೆಯ ಅಧಿಕಾರಿಗಳು ಮತ್ತು ಸಾಹಸಾಸಕ್ತರು ಶಿಬಿರದಲ್ಲಿ ಪಾಲ್ಗೊಂಡು ಪ್ಯಾರಾ ಸೈಲಿಂಗ್ ಏರಿ ಹಾರಾಡಿ ಅನುಭವ ಹಂಚಿಕೊಂಡರು.
ಎರಡು ದಿನಗಳ ಕಾಲ ಪ್ಯಾರಾ ಸೈಲಿಂಗ್ ಶಿಬಿರ ನಡೆಯಲಿದ್ದು, ಜನರು ಸದ್ಬಳಕೆ ಮಾಡಿಕೊಳ್ಳುವಂತೆ ಯುವಜನ ಸೇವೆ ಮತ್ತು ಕ್ರೀಡಾಧಿಕಾರಿ ಜಯರಾಮ್ ಮನವಿ ಮಾಡಿದರು.
ಹಳೇಬೀಡಿನ ದ್ವಾರಸಮುದ್ರ ಕೆರೆಯಲ್ಲಿ ಜಲ ಸಾಹಸ ಶಿಬಿರ ಮತ್ತು ಮಾವಿನ ಕೆರೆ ರಂಗನಾಥ ಬೆಟ್ಟದಲ್ಲಿ ರಾಕ್ ಕ್ಲೈಂಬಿಂಗ್ ತರಬೇತಿ ಶಿಬಿರ ಬರುವ ೨೮ರವರೆಗೆ ನಡೆಯಲಿದೆ ಎಂದು ತಿಳಿಸಿದರು.