ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಹಾಸನ: ವೀರ ಯೋಧ ಸಿ.ಎಸ್.ಶಿವಪ್ಪವರ ನಿವಾಸಕ್ಕೆ ಮಾಜಿ ಪ್ರಧಾನಿಗಳ ಭೇಟಿ

ಹಾಸನ: ವೀರ ಯೋಧ ಸಿ.ಎಸ್.ಶಿವಪ್ಪವರ ನಿವಾಸಕ್ಕೆ ಮಾಜಿ ಪ್ರಧಾನಿಗಳ ಭೇಟಿ

Tue, 20 Apr 2010 03:16:00  Office Staff   S.O. News Service

ಇತ್ತೀಚೆಗೆ ಛತ್ತೀಸ್‌ಘಡದ ದಂತೇವಾಢದಲ್ಲಿ ನಡೆದ ನಕ್ಸಲರ ದಾಳಿ ಸಮಯದಲ್ಲಿ ಮೃತಪಟ್ಟ ಹಾಸನ ಜಿಲ್ಲೆಯ ಚಿಕ್ಕಬಸವನಹಳ್ಳಿಯ ವೀರ ಯೋಧ ಸಿ.ಎಸ್.ಶಿವಪ್ಪ ಅವರ ನಿವಾಸಕ್ಕೆ ಮಾಜಿ ಪ್ರಧಾನಿಗಳು ಹಾಗೂ ಹಾಲಿ ಲೋಕಸಭಾ ಸದಸ್ಯರಾದ ಶ್ರೀ ಹೆಚ್.ಡಿ.ದೇವೇಗೌಡ ಅವರು ಇಂದು(ಏಪ್ರಿಲ್ ೧೯) ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಷ್ಟ್ರಕ್ಕಾಗಿ ಜೀವವನ್ನೇ ಮುಡಿಪಾಗಿಟ್ಟು, ದುಷ್ಟ ಶಕ್ತಿಗಳ ವಿರುದ್ದ ಹೋರಾಡುವ ೭೬ ಯೋಧರು ಒಟ್ಟಿಗೆ ಬಲಿಯಾಗಿರುವುದು ಅತ್ಯಂತ ಹೇಯ ಘಟನೆ ಎಂದು ಮನ ನೊಂದು ನುಡಿದರು. ಇದೊಂದು ಪೂರ್ವ ಯೋಜಿತ ಕೃತ್ಯ ಎಂದರಲ್ಲದೆ, ನಕ್ಸಲ್ ಸಮಸ್ಯೆಯನ್ನು ಮಾನವೀಯ ನೆಲೆಯಲ್ಲಿ ಪರಿಹರಿಸಿಕೊಳ್ಳಬೇಕು ಎಂದರು.

ಯೋಧ ಶಿವಪ್ಪನವರ ಪತ್ನಿಗೆ ಹಾಸನದಲ್ಲಿಯೇ ಸರ್ಕಾರಿ ಕೆಲಸ ಕೊಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.

ನಗರಸಭೆ ಅಧ್ಯಕ್ಷರಾದ ಶ್ರೀಮತಿ ಅಂಬಿಕಾ ರವಿಶಂಕರ್ ಉಪಸ್ಥಿತರಿದ್ದರು.

 

 

ಕ್ಯಾ. ಗಣೇಶ್ ಕಾರ್ಣಿಕ್ ಪ್ರವಾಸ

 

ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷ ಶ್ರೀ ಕ್ಯಾ. ಗಣೇಶ್ ಕಾರ್ಣಿಕ್‌ರವರು ಏಪ್ರಿಲ್ ೧೯ ರಂದು ರಾತ್ರಿ ೯.೦೦ ಗಂಟೆಗೆ ಶಿವಮೊಗ್ಗಕ್ಕೆ ಆಗಮಿಸಿ, ವಾಸ್ತವ್ಯ ಮಾಡುವರು.

ಏಪ್ರಿಲ್ ೨೦ ರಂದು ಬೆಳಿಗ್ಗೆ ೧೦ ಗಂಟೆಗೆ ನಗರದಲ್ಲಿನ ಮೌಲ್ಯಮಾಪನ ಕೇಂದ್ರಗಳಿಗೆ ಭೇಟಿ ನೀಡುವರು. ಅಂದು ಮಧ್ಯಾಹ್ನ ೩ ಗಂಟೆಗೆ ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುವರು.

ಸಹಾಯಧನಕ್ಕೆ ಅರ್ಜಿ ಆಹ್ವಾನ

 

ತೋಟಗಾರಿಕೆ ಇಲಾಖೆಯು ೨೦೧೦-೧೧ನೇ ಸಾಲಿನ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಬಾಳೆ, ಸಪೋಟ ಹಾಗೂ ಮಾವು ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ೨೦೦೯-೧೦ನೇ ಸಾಲಿನಲ್ಲಿ ಮೊದಲನೇ ಕಂತಿನ ಸಹಾಯಧನ ಪಡೆದಿರುವ ರೈತ ಫಲಾನುಭವಿಗಳು ೨೦೧೦-೧೧ನೇ ಸಾಲಿಗೆ ಎರಡನೇ ಕಂತಿನ ಸಹಾಯಧನ ಪಡೆಯಲು ಕ್ಷೇತ್ರದಲ್ಲಿರುವ ಬೆಳೆಯೊಂದಿಗೆ ಫಲಾನುಭವಿ ಫೋಟೋ ಮತ್ತು ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಮಾಹಿತಿಯೊಂದಿಗೆ ಅರ್ಜಿಯನ್ನು ಮೇ ೩೧ ರೊಳಗಾಗಿ ಸಲ್ಲಿಸಬೇಕು. ವಿವರಗಳಿಗಾಗಿ ಸಹಾಯಕ ತೋಟಗಾರಿಕಾ ನಿರ್ದೇಶಕರು,

ಜಿಲ್ಲಾ ಪಂಚಾಯಿತಿ, ಭದ್ರಾವತಿ ಇವರನ್ನು ಸಂಪರ್ಕಿಸಬಹುದು.

 

ಜಿಲ್ಲೆಯ ೯ ಗ್ರಾಮಗಳು ದತ್ತು

 

ಧಾರವಾಡ,ಏ,೧೯: ಪೊಲೀಸ್ ಇಲಾಖೆಯ ವಿನೂತನ ಕಾರ್ಯಕ್ರಮದಡಿ ಜಿಲ್ಲೆಯಲ್ಲಿರುವ ೯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಪ್ರತಿ ಠಾಣೆಗೆ ಒಂದರಂತೆ ೯ ಗ್ರಾಮಗಳನ್ನು ಸಮಗ್ರ ಅಭಿವೃದ್ಧಿಗೆ ದತ್ತು ತೆಗೆದುಕೊಳ್ಳಲಾಗುವುದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಡಿ. ಪ್ರಕಾಶ ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ದತ್ತು ತೆಗೆದುಕೊಂಡ ಗ್ರಾಮಗಳಲ್ಲಿ ಪೊಲೀಸ್ ಇಲಾಖೆಯ ಸಮಸ್ಯೆಗಳ ಜೊತೆಗೆ ಗ್ರಾಮದ ಇತರೆ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಒದಗಿಸಿಕೊಟ್ಟು ಪರಿಹಾರಕ್ಕೆ ಕ್ರಮ ಕೈಕೊಳ್ಳಲಾಗುವುದೆಂದು ಅವರು ಹೇಳಿದರು. ಗ್ರಾಮದ ಸಮಸ್ಯೆಯು ತೀವ್ರವಾಗಿದ್ದಲ್ಲಿ ಪಿ‌ಎಸ್‌ಐ ಇಲ್ಲವೆ ಪಿ‌ಐ ರವರಿಂದ ಪರಿಹರಿಸಲು ಸಾಧ್ಯವಾಗದಿದ್ದಲ್ಲಿ ಅದನ್ನು ಪೊಲೀಸ್ ನಿರೀಕ್ಷಕರು ಅಥವಾ ವೃತ್ತ ನಿರೀಕ್ಷಕರ ಬಳಿ ಇಲ್ಲವೆ ಡಿವೈ‌ಎಸ್‌ಪಿಗಳ ಬಳಿ ಚರ್ಚಿಸಿ ಸಮಸ್ಯೆ ಪರಿಹರಿಸಲು ಕ್ರಮ ಕೈಕೊಳ್ಳಲಾಗುವುದೆಂದು ಅವರು ಹೇಳಿದರು. ದತ್ತು ತೆಗೆದುಕೊಳ್ಳುವ ಗ್ರಾಮಗಳ ಗುರುತಿಸುವಿಕೆ ಪ್ರಕ್ರಿಯೆ ಆರಂಭವಾಗಿದ್ದು, ಈ ತಿಂಗಳ ಅಂತ್ಯಕ್ಕೆ ಪೂರ್ಣಗೊಳಿಸಲಾಗುವುದೆಂದರು.

 

ಪೊಲೀಸ್ ಇಲಾಖೆಯಿಂದ ದೊರಕುವ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಿಳಿಸಿಕೊಡಲು ಪ್ರತಿ ೧೫ ದಿನಗಳಿಗೊಮ್ಮೆ ಫೋನ್-ಇನ್ ಕಾರ್ಯಕ್ರಮ ಹಾಗೂ ಸ್ಥಳೀಯ ಚಾನೆಲ್‌ಗಳ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ಸಹ ಏರ್ಪಡಿಸಲು ಉದ್ದೇಶಿಸಲಾಗಿದೆಯೆಂದರು. ಮಹಿಳೆಯರ ಮೇಲಿನ ದೌರ್ಜನ್ಯ, ವರದಕ್ಷಿಣೆ ಕಿರುಕುಳ ಹಾಗೂ ಮಹಿಳೆಯರ ಹಕ್ಕಿನ ಕುರಿತು ಅರಿವು ಮೂಡಿಸಲು ಮಹಿಳಾ ಜಾಗೃತಿ ಸಂಚಾರಿ ದಳ ಎಂಬ ವಿನೂತನ ಕಾರ್ಯಕ್ರಮ ಪ್ರಾರಂಭಿಸಲಾಗಿದೆ. ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಸಾಂತ್ವನ ಕೇಂದ್ರದ ಮಹಿಳಾ ಎ‌ಎಸ್‌ಐ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು ಹಾಗೂ ಎನ್‌ಜಿ‌ಓಗಳ ಸಹಯೋಗದೊಂದಿಗೆ ಗ್ರಾಮಗಳಿಗೆ ಭೇಟಿ ನೀಡಿ ಮಹಿಳೆಯರ ಹಕ್ಕಿನ ಕುರಿತು ವಿವಿಧ ಕಾನೂನುಗಳ ಮಾಹಿತಿ ನೀಡಲಾಗುತ್ತದೆ. ಕಳೆದ ತಿಂಗಳಲ್ಲಿ ನರೇಂದ್ರ, ದಾಟನಾಳ, ಜೀರಿಗೆವಾಡ ಗ್ರಾಮಗಳಿಗೆ ಭೇಟಿ ನೀಡಿ ಕಾರ್ಯಕ್ರಮಗಳನ್ನು ನಡೆಸಲಾಗಿದೆಯೆಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇದರ ಜೊತೆಯಲ್ಲಿ ಹೊಸ ಬೀಟ್ ಪದ್ಧತಿ, ವಯೋವೃದ್ಧ, ಒಂಟಿ ಮಹಿಳೆಯರ ಮೇಲೆ ನಡೆಯಬಹುದಾದ ಅಪರಾಧಿಕ ಕೃತ್ಯಗಳನ್ನು ತಡೆಗಟ್ಟುವ ’ಆಸರೆ’ ಎಂಬ ಯೋಜನೆಯನ್ನು ಜಾರಿಗೆ ತರಲಾಗಿದೆ.

ಅಪರಾಧ ತಡೆಗಟ್ಟುವ ಕುರಿತು ಸಾರ್ವಜನಿಕರಿಗೆ ಬಿತ್ತಿ ಪತ್ರ ಜಾಹೀರಾತು ಫಲಕಗಳು, ಸಿಡಿ ವಿಡಿಯೋ ಕ್ಲಿಪಿಂಗ್‌ಗಳ ಮೂಲಕ ಬಿತ್ತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಪೊಲೀಸ್ ಠಾಣೆಗಳಲ್ಲಿ ದೂರುಗಳನ್ನು ದಾಖಲಿಸದೆ ತಿರಸ್ಕರಿಸಿದ ಸಂದರ್ಭದಲ್ಲಿ ಅಂತಹ ದೂರುಗಳನ್ನು ದಾಖಲಿಸುವ ಕುರಿತು ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ’ದೂರು ದಾಖಲಿಸುವ ಸೆಲ್ ನ್ನು ಸಹ ಆರಂಭಿಸಲಾಗಿದೆಯೆಂದು ಶ್ರೀ ಡಿ. ಪ್ರಕಾಶ್ ಹೇಳಿದರು. ಈ ಸೆಲ್ ನಲ್ಲಿ ಈಗಾಗಲೇ ೫ ದೂರುಗಳನ್ನು ಸ್ವೀಕರಿಸಲಾಗಿದೆ. ಅವುಗಳಲ್ಲಿ ಎರಡು ದೂರುಗಳನ್ನು ಗುನ್ನೆಯನ್ನಾಗಿ ದಾಖಲು ಮಾಡಿಕೊಳ್ಳಲಾಗಿದೆ. ೩ ದೂರುಗಳನ್ನು ತನಿಖೆಗೆ ಸಂಬಂಧಿಸಿದ ಪೊಲೀಸ್ ಠಾಣೆಗೆ ಕಳುಹಿಸಲಾಗಿದೆಯೆಂದರು.

 

ಕಳೆದ ಮೂರು ತಿಂಗಳ ಅವಧಿಯಲ್ಲಿ ಕಾಣೆಯಾದವರ ಬಗ್ಗೆ ಒಟ್ಟು ೧೮ ಪ್ರಕರಣಗಳು ದಾಖಲೆಯಾಗಿದ್ದು, ಅದರಲ್ಲಿ ೪ ಪ್ರಕರಣಗಳು ಪತ್ತೆಯಾಗಿದ್ದು ಇನ್ನುಳಿದ ೧೪ ಪ್ರಕರಣಗಳು ತನಿಖೆಯ ವಿವಿಧ ಹಂತದಲ್ಲಿವೆಯೆಂದು ಅವರು ಹೇಳಿದರು.

 

ಇದೇ ಅವಧಿಯಲ್ಲಿ ೩೨ ಪ್ರಕರಣಗಳಲ್ಲಿ ಸುಮಾರು ೩೭.೪ ಲಕ್ಷ ರೂ. ಮೊತ್ತದ ವಸ್ತುಗಳು ಕಳುವಾಗಿದ್ದು, ಆ ಪೈಕಿ ೧೧ ಪ್ರಕರಣಗಳಲ್ಲಿ ೨೧,೧೮,೫೫೦ ರೂ. ಮೊತ್ತದ ಮಾಲನ್ನು ವಶಪಡಿಸಿಕೊಂಡು ಫಿರ್ಯಾದುದಾರರಿಗೆ ನೀಡಲಾಗಿದೆಯೆಂದು ಅವರು ಹೇಳಿದರು. ಕಳೆದ ೩ ವರ್ಷಗಳ ಅಂಕಿಸಂಖ್ಯೆಗಳನ್ನು ಹೋಲಿಸಿದಾಗ ಡಕಾಯಿತ ಮತ್ತು ಮರಡರ್ ಪ್ರಕರಣಗಳಲ್ಲಿ ಇಳಿಮುಖ ಕಂಡುಬಂದಿದ್ದು, ರಬ್ಹರಿ, ಕಳುವು ಹಾಗೂ ಮರಣಾಂತಿಕ ಪ್ರಕರಣಗಳಲ್ಲಿ ಏರುಮುಖ ಕಂಡುಬಂದಿದೆಯೆಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಡಿ‌ಎಸ್‌ಪಿ ಶ್ರೀ ಜಿ.ಎಸ್. ಪಾಟೀಲ ಉಪಸ್ಥಿತರಿದ್ದರು. ---

 


Share: