ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು:ರಾಜ್ಯದ ಪೊಲೀಸ್ ಠಾಣೆಗಳು ಸಂಘಪರಿವಾರದ ನಿಯಂತ್ರಣದಲ್ಲಿ: ಹಿರಿಯ ನ್ಯಾಯವಾದಿ ಎ.ಕೆ. ಸುಬ್ಬಯ್ಯ ಆರೋಪ

ಬೆಂಗಳೂರು:ರಾಜ್ಯದ ಪೊಲೀಸ್ ಠಾಣೆಗಳು ಸಂಘಪರಿವಾರದ ನಿಯಂತ್ರಣದಲ್ಲಿ: ಹಿರಿಯ ನ್ಯಾಯವಾದಿ ಎ.ಕೆ. ಸುಬ್ಬಯ್ಯ ಆರೋಪ

Fri, 09 Oct 2009 04:47:00  Office Staff   S.O. News Service
ಬೆಂಗಳೂರು, ಅ.೮: ಬಿಜೆಪಿ ಆಡಳಿತದಲ್ಲಿ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳು ಸಂಪೂರ್ಣವಾಗಿ ಸಂಘ ಪರಿವಾರದ ನಿಯಂತ್ರಣದಲ್ಲಿವೆ. ಪ್ರತಿ ಪೊಲೀಸ್ ಠಾಣೆಗೆ ಒಬ್ಬ ಭಜರಂಗದಳದ ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ. ಅವರ ಆದೇಶವನ್ನು ಪೊಲೀಸ್ ಇಲಾಖೆ ಪಾಲಿಸುತ್ತಿದೆ ಎಂದು ಮಾಜಿ ಶಾಸಕ, ಹಿರಿಯ ನ್ಯಾಯವಾದಿ ಎ.ಕೆ. ಸುಬ್ಬಯ್ಯ ಗಂಭೀರ ಆರೋಪ ಮಾಡಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೊಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ದೊಡ್ಡ ಗಂಡಾಂತರ ಎದುರಾಗಿದೆ. ಅಲ್ಪಸಂಖ್ಯಾತರ ಪ್ರಾರ್ಥನಾ ಸ್ಥಳಗಳ ಮೇಲೆ ದಾಳಿ ಮಾಡುವ ಮೂಲಕ ಅವರನ್ನು ಪ್ರಚೂದಿಸಿ ಕೋಮು ಗಲಭೆಗಳನ್ನು ಸೃಷ್ಟಿಸುವ ವ್ಯವಸ್ಥಿತ ಸಂಚು ಕೋಮುವಾದಿ ಸಂಘಟನೆಗಳು ರೂಪಿಸಿವೆ ಎಂದು ಆಪಾದಿಸಿದರು.

ಚುನಾಯಿತ ಸರಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಹೆಸರಿಗೆ ಮಾತ್ರ ಸಂಪೂರ್ಣ ಅಧಿಕಾರದ ನಿಯಂತ್ರಣ ಇರುವುದು ಸಂಘಪರಿವಾರದ ಕೈಯಲ್ಲಿದೆ. ಕೋಮುವಾದಿ ಆರೆಸ್ಸೆಸ್‌ನ ಏಜೆಂಡಾವನ್ನು ಜಾರಿಗೊಳಿಸಲು ಸರಕಾರ ಬದ್ಧವಾಗಿ ನಿಂತಿದೆ ಎಂದು ಸುಬ್ಬಯ್ಯ ದೂಷಿಸಿದರು.

ಬಿಜೆಪಿ ಸರಕಾರದ ಅಟ್ಟಹಾಸಕ್ಕೆ ತಡೆ ಹಾಕುವಲ್ಲಿ ವಿರೋಧ ಪಕ್ಷಗಳು ಸಂಪೂರ್ಣ ವಿಫಲವಾಗಿವೆ. ಕಾಂಗ್ರೆಸ್ ಕೇವಲ ಪತ್ರಿಕೆಗಳಲ್ಲಿ ಮತ್ತು ಹೆಸರಿಗೆ ಮಾತ್ರ ಜಾತ್ಯತೀತ ಪಕ್ಷ. ಕಾಂಗ್ರೆಸ್‌ನ ಬಹಳಷ್ಟು ನಾಯಕರು ಮೃದು ಹಿಂದುತ್ವವಾದಿಗಳಾಗಿದ್ದಾರೆ. ಜೆಡಿ‌ಎಸ್‌ನ್ನು ಒಂದು ರಾಜಕೀಯ ಪಕ್ಷ ಎಂದು ಹೇಳುವಂತಿಲ್ಲ ಅದೊಂದು ಕುಟುಂಬ ವ್ಯವಸ್ಥೆ ಎಂದು ಸುಬ್ಬಯ್ಯ ಅಕ್ರೋಶ ವ್ಯಕ್ತಪಡಿಸಿದರು.

ಪರಿಸ್ಥಿತಿ ಇನ್ನೂ ಕೈ ಮೀರಿ ಹೊಗುವ ಮೊದಲು ಪ್ರಗತಿಪರ ಸಂಘಟನೆಗಳು, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಉಳ್ಳವರು, ಒಗ್ಗಟ್ಟಾಗಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿ ಸಮಾಜದಲ್ಲಿ ಶಾಂತಿ ಸೌಹಾರ್ದತೆಯ ನಿರ್ಮಾಣಕ್ಕೆ ಪ್ರಯತ್ನಿಸಿಬೇಕು ಎಂದು ಅವರು ಕರೆ ನೀಡಿದರು.

ಪತ್ರಿಕಾಗೊಷ್ಠಿಯಲ್ಲಿ ಆಲ್ ಇಂಡಿಯಾ ಕ್ರಿಶ್ಚಿಯನ್ ಕೌನ್ಸಿಲ್‌ನ ಕುಮಾರ್ ಸ್ವಾಮಿ, ಮಾನವ ಹಕ್ಕು ಸಂಘಟನೆಗಳ ರಾಷ್ಟ್ರೀಯ ಒಕ್ಕೂಟದ ಇಲಿಯಾಸ್ ಮಹ್ಮದ್ ಮತ್ತಿತರರು ಉಪಸ್ಥಿತರಿದ್ದರು

Share: