ಭಟ್ಕಳ, ಅಕ್ಟೋಬರ್ 11: ಕಾರಾವಾರ ತಾಲ್ಲೂಕಿನಲ್ಲಿ ಇತ್ತೀಚೆಗೆ ನೆರೆಯಿಂದ ಪ್ರಭಾವಿತವಾಗಿರುವ ಪ್ರದೇಶಗಳಿಗೆ ಭಟ್ಕಳದ ಮಜ್ಲಿಸ್ ಎ ಇಸ್ಲಾಹ್ ಸಂಘಟನೆ ಭೇಟಿ ನೀಡಿತು. ಅಧ್ಯಕ್ಷ ಬದರುಲ್ ಹಸನ್ ರವರ ನೇತೃತ್ವದಲ್ಲಿ ಸಂಘಟನೆಯ ಹಲವು ಸದಸ್ಯರು ಸಂತ್ರಸ್ತರನ್ನು ಭೇಟಿಯಾಗಿ ತಮ್ಮ ಸಾಂತ್ವಾನವನ್ನು ಪ್ರಕಟಿಸಿದರು. ಬಳಿಕ ಸಂಘಟನೆ ಇತ್ತೀಚಿಗೆ ಭೂಕುಸಿತದಿಂದ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿತು.

ಸ್ಥಳೀಯರ ಪ್ರಕಾರ ಮಳೆ ಮಾತ್ರ ಈ ವ್ಯಾಪಕ ಭೂಕುಸಿತಕ್ಕೆ ಕಾರಣವಲ್ಲ, ಬದಲಿಗೆ ಮಳೆಯ ಸಂದರ್ಭದಲ್ಲಿ ಸಂಭವಿಸಿದ ಭೂಕಂಪದ ಕಾರಣ ಸುಮಾರು ಒಂಭತ್ತು ಮನೆಗಳ ಮೇಲೆ ಮಣ್ಣು ಕುಸಿದುಬಿದ್ದಿದೆ. ಶುಕ್ರವಾರ ಸಂಜೆ ಈ ಭೂಕಂಪ ಸಂಭವಿಸಿದ್ದು ಇಂಡೋನೇಶಿಯಾದಲ್ಲಿಯೂ ಇದೇ ವೇಳೆಗೆ ಪ್ರಬಲ ಭೂಕಂಪ ಸಂಭವಿಸಿರುವುದು ಕಾಕತಾಳೀಯವಾಗಿದೆ. ಈ ಪ್ರದೇಶದಲ್ಲಿ ಸುಮಾರು ಐವತ್ತು ಮನೆಗಳಿವೆ ಹಾಗೂ ಎಲ್ಲರೂ ಭಯಗ್ರಸ್ತರಾಗಿದ್ದಾರೆ.
ಸಂತ್ರಸ್ತರನ್ನು ಭೇಟಿಯಾದ ತಂಡ ನಾಶಗೊಂಡ ಪ್ರದೇಶಗಳನ್ನು ವೀಕ್ಷಿಸಿ ಬಾಧೆಗೊಳಗಾದ ಸುಮಾರು ಮೂವತ್ತು ಮನೆಗಳಿಗೆ ಹೊದಿಕೆ, ಹಾಸಿಗೆ,ಬಟ್ಟೆ ಹಾಗೂ ಧನಸಹಾಯದ ಮೂಲಕ ತನ್ನ ಸಹಕಾರ ಪ್ರಕಟಿಸಿತು.








ತಂಡದಲ್ಲಿ ಪ್ರಧಾನ ಕಾರ್ಯದರ್ಶಿ ಎಸ್. ಜೆ. ಸೈಯದ್ ಖಲೀಲ್, ಸದಸ್ಯರಾದ ಸೈಯದ್ ಅಬ್ದುಲ್ ಕಾದಿರ್, ಅಬ್ದುಲ್ಲಾ ದಾಮೂದಿ, ಎಸ್.ಎಂ. ಸೈಯದ್ ಪರ್ವೇಜ್, ನಾಯ್ತೆ ಸಾದಿಕ್, ಇರ್ಫಾನ್ ಮೊಹ್ತೆಶಾಮ್, ಜಾಫಲ್ ಅಲಿಯಾಸ್ ತಂಜೀಂ ಜಾಫರ್ ಹಾಗೂ ಇಬ್ಬರು ಛಾಯಾಗ್ರಾಹಕರು ಉಪಸ್ಥಿತರಿದ್ದರು.