ಭಟ್ಕಳ, ಅಕ್ಟೋಬರ್ 5: ಗೋವುಗಳ ಈ ಪರಿಯ ಸಾವು ಇಲ್ಲಿಯವರೆಗೂ ಯಾವೊಬ್ಬ ಗೋರಕ್ಷಕನ ಎದೆಯನ್ನೂ ತಟ್ಟಲಿಲ್ಲ! ಕಟುಕರ ಕೈಯಿಂದ ತಪ್ಪಿಸಿಕೊಂಡು ಬೆಳಕೆ ದೊಡ್ಡಿ ಸೇರಿರುವ ರಾಸುಗಳು ಆಹಾರವಿಲ್ಲದೇ ಸಾಯುತ್ತಿವೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ನಾಲ್ಕಕ್ಕೂ ಹೆಚ್ಚು ಜಾನುವಾರುಗಳು ಸತ್ತು ಮಣ್ಣು ಸೇರಿವೆ. ಉಳಿದವುಗಳು ಸಾವು ಬದುಕಿನ ನಡುವೆ ಹೋರಾಡುತ್ತಿವೆ.

ಮಾಂಸಕ್ಕಾಗಿ ದೂರದ ಹಾವೇರಿ, ಶಿವಮೊಗ್ಗ ಜಿಲ್ಲೆಗಳಿಂದ ಗೋವುಗಳನ್ನು ಭಟ್ಕಳಕ್ಕೆ ಕರೆ ತರುವ ಪ್ರಕ್ರಿಯೆ ಇನ್ನೂ ನಿಂತಿಲ್ಲ. ಇವೆಲ್ಲದರ ರಕ್ಷಣೆಯ ನೆಪ ಹೇಳಿಕೊಂಡು ತಡೆಯುವ ಕಾರ್ಯಾಚರಣೆಗಳು ವಿವಿಧ ಸಂಘಟನೆಗಳ ಕಾರ್ಯಕರ್ತರಿಂದ ಮುಂದುವರೆದುಕೊಂಡು ಹೋಗುತ್ತಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಂತಹ ಗೋವುಗಳನ್ನು ಸಾಗಿಸುತ್ತಿರುವುದು ಬೆಳಕೆ ಹಾಗೂ ಜಾಲಿ ಗ್ರಾಮಪಂಚಾಯತ ಆಡಳಿತ ವ್ಯಾಪ್ತಿಯ ದೊಡ್ಡಿಗಳಿಗೆ. ಆದರೆ ಅಲ್ಲಿ ಕನಿಷ್ಠ ಕೊಟ್ಟಿಗೆಯ ಸೌಕರ್ಯವೂ ಇಲ್ಲದೇ ಗೋವುಗಳ ಪಾಡು ಹೇಳ ತೀರದು. ಬಿದ್ದ ಮಳೆ ಹನಿಗಳೂ ಈ ಗೋವುಗಳನ್ನು ಒದ್ದೆಯಾಗಿಸುತ್ತಿವೆ. ಇವೆಲ್ಲದರ ಜೊತೆಗೆ ಇವುಗಳಿಗೆ ಈಗ ಆಹಾರದ ಬರ ಬಂದಿದೆ. ತಿನ್ನಲು ಒಂದು ಹಿಡಿ ಹುಲ್ಲನ್ನೂ ನೀಡಲು ಹಿಂದೇಟು ಹಾಕುವ ಪಂಚಾಯತನ ಧೋರಣೆಯಿಂದಾಗಿ ಗೋವುಗಳು ಸಾವಿನ ಹಾದಿ ಹಿಡಿಯುತ್ತಿವೆ. ಸೋಮವಾರ ಎಮ್ಮೆಯೊಂದು ಆಹಾರವಿಲ್ಲದೇ ಬೆಳಕೆ ದೊಡ್ಡಿಯಲ್ಲಿ ಸತ್ತು ಹೋಗಿದ್ದು, ಇನ್ನೊಂದು ನೆಲಕ್ಕೊರಗಿ ಏಳುವ ಸ್ಥಿತಿಯನ್ನೂ ಕಳೆದು ಕೊಂಡಿದೆ.


ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಉದಯ ನಾಯ್ಕ ಹೇಳುವ ಪ್ರಕಾರ ದೊಡ್ಡಿ ಗೋವುಗಳ ವಾಸಕ್ಕೆ ಯೋಗ್ಯವಲ್ಲ. ಪಂಚಾಯತ ಕಾರ್ಯದರ್ಶಿಗಳು ಪೊಲೀಸರನ್ನು ಪರಿಪರಿಯಾಗಿ ಕೇಳಿಕೊಂಡರೂ ಅವರು ಕೇಳುವುದಿಲ್ಲವಂತೆ! ಆದರೆ ಪೊಲೀಸರೂ ಈ ಗೋವುಗಳ ಸಾವಿಗೆ ಕಾರಣರಾಗಲು ಸಿದ್ದರಿಲ್ಲ. ಅಮಾಯಕ ರೈತರನ್ನೂ ಬಿಡದೇ ಕಾಡುವ ಇಲ್ಲಿಯ ವಿವಿಧ ಸಂಘಟನೆಗಳ ಮಹಾನ್(?) ಹೋರಾಟಗಾರರಿಗೂ ಇಲ್ಲಿಯ ಗೋವುಗಳ ನಿರಂತರ ಸಾವು ಯಾವ ಪರಿಣಾಮವನ್ನೂ ಬೀರಿಲ್ಲ. ನಾಲ್ಕು ಜನರ ಮುಂದೆ ಎದೆ ಸೆಟೆಸಿ ನಿಂತು ಪೋಸು ಕೊಡುವ ಇವರಿಗೆ ಗೋರಕ್ಷಣೆಯ ಪಾಠ ಈ ಕಾರಣದಿಂದಲಾದರೂ ನಡೆದರೆ ಅದು ನಮ್ಮೆಲ್ಲರ ಪುಣ್ಯ ಎಂಬ ಮಾತು ಸುತ್ತಮುತ್ತಲಿನ ಜನರಿಂದ ಕೇಳಿ ಬರುತ್ತಿದೆ.
-ವಸಂತ ದೇವಾಡಿಗ