ಬೆಂಗಳೂರು, ಜನವರಿ 9: ನೈಸ್ ಅಕ್ರಮಗಳ ಬಗ್ಗೆ ಬೀದಿಗಿಳಿದು ಹೋರಾಟ ಆರಂಭಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ನೈಸ್ ವಿಚಾರದಲ್ಲಿ ರಾಜ್ಯ ಸರ್ಕಾರ ಮಾಡುತ್ತಿರುವ ಅಕ್ರಮಗಳ ಬಗ್ಗೆ ಎಲ್ಲಿ ಬೇಕಾದರೂ ಬಹಿರಂಗ ಚರ್ಚೆಮಾಡಲು ಸಿದ್ಧನಿದ್ದೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇಂದಿಲ್ಲಿ ರಣವೀಳ್ಯ ನೀಡಿ ಪಂಥಕ್ಕೆ ಆಹ್ವಾನ ನೀಡಿದ್ದಾರೆ.
ಅದು ಸಂಘಪರಿವಾರದ ಕೇಂದ್ರ ಕಚೇರಿ ಕೇಶವಕೃಪ ಇರಲಿ ಅಥವಾ ಮೈಸೂರು ಅರಸರ ಅರಮನೆ ಅವರಣವೇ ಇರಲಿ. ಯಡಿಯೂರಪ್ಪನವರಿಗೆ ಯಾವುದು ಸುರಕ್ಷಿತ ಅನಿಸಲಿದೆಯೋ ಆ ಸ್ಥಳವನ್ನೇ ಆಯ್ಕೆ ಮಾಡಿಕೊಳ್ಳಲಿ. ಅಲ್ಲಿಗೇ ಹೋಗಿ ಚರ್ಚೆಯಲ್ಲಿ ಭಾಗವಹಿಸಲಿದ್ದೇನೆ. ತಮಗೆ ಯಾವುದೇ ರೀತಿಯ ಹೆದರಿಕೆ ಇಲ್ಲ ಎಂದು ಹೇಳಿದರು.
ತಾವು ನೀಡುತ್ತಿರುವ ಆಹ್ವಾನಕ್ಕೆ ಯಡಿಯೂರಪ್ಪ ಒಪ್ಪಿ ಬರಬೇಕು. ಬಹಿರಂಗ ಸಭೆಯ ಅಧ್ಯಕ್ಷತೆಯನ್ನು ಎಲ್.ಕೆ. ಅಡ್ವಾನಿಯವರಾದರೂ ವಹಿಸಲಿ ಅಥವಾ ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್ ಅವರಾದರೂ ವಹಿಸಲಿ ತಾವು ಸಭೆಯಲ್ಲಿ ನಿಸ್ಸಂಕೋಚವಾಗಿ ಭಾಗವಹಿಸುತ್ತೇನೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡ ಅವರು ನೈಸ್ ಅಕ್ರಮಗಳ ಬಗ್ಗೆ ಚರ್ಚೆ ಮಾಡಲು ಆಹ್ವಾನಿಸಿದ್ದಾರೆ. ಚರ್ಚೆಗೆ ಎಲ್ಲಿ ಸ್ಥಳವನ್ನು ಆಯ್ಕೆ ಮಾಡುತ್ತಾರೋ ಅಲ್ಲಿಗೆ ಹೋಗಿ ಚರ್ಚೆ ಮಾಡುತ್ತೇನೆ. ಆದೆರೆ ಒಂದಂತೂ ಸತ್ಯ ರೈತರ ಕೃಷಿ ಭೂಮಿ ಜಮೀನು ಭೂಗಳ್ಳರ ಪಾಲಾಗಲು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡ ಅವರು ದೊಡ್ಡ ಮಾತಗಳನ್ನಾಡಿದ್ದಾರೆ. ಅವರ ಆರೋಪಗಳಿಗೆ ತಾವು ಉತ್ತ ನೀಡುವುದಿಲ್ಲ. ಬಹಿರಂಗ ಸಭೆಯಲ್ಲಿಯೇ ಅವರಿಗೆ ಉತ್ತರ ನೀಡುತ್ತೇನೆ. ಬಹಿರಂಗ ಚರ್ಚೆಗೆ ವೇದಿಕೆ ಸಿದ್ಧಪಡಿಸಲಿ. ಆಗ ನೋಡಿ ಎಂದು ಸುದ್ದಿಗಾರರಿಗೆ ತಿಳಿಸಿದರು.
೨೦೦೨ ರಿಂದ ಇಲ್ಲಿಯವರಿಗೆ ನೈಸ್ ಯೋಜನೆಯಲ್ಲಿ ಏನೆಲ್ಲಾ ಅಕ್ರಮ ನಡೆದಿದೆ ಎನ್ನುವದರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೈಸ್ ಉಖ್ಯಸ್ಥ ಅಶೋಕಖೇಣಿ ಅವರೊಂದಿಗೆ ಸೇರಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಸುಪ್ರೀಂಕೋರ್ಟ್‌ಗೆ ಅಡ್ವೋಕೇಟ್ ಜನರಲ್ ಅವರು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ದೂರಿದರು.
ಮುಖ್ಯಮಂತ್ರಿಗಳ ಗಮನಕ್ಕೆ ತರದೆ ಅಡ್ವೋಕೇಟ್ ಜನರಲ್ ಅವರು ಸುಪ್ರೀಂ ಕೋರ್ಟ್‌ಗೆ ಸುಳ್ಳು ಮಾಹಿತಿ ನೀಡಿದ್ದರೆ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಿ. ರೈತರ ವಿಷಯದಲ್ಲಿ ನನ್ನ ಜೀವನದುದ್ದಕ್ಕೂ ಹೋರಾಟ ಮಾಡುವುದನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ. ರೈತರೊಂದಿಗೆ ಸೇರಿ ಹೋರಾಟ ಮುಂದುವರೆಸುತ್ತೇನೆ ಎಂದರು.
ತಮ್ಮ ಹೋರಾಟ ವ್ಯಕ್ತಿಗತ ಈರ್ಷೆಗಳಿಂದ ಕೂಡಿಲ್ಲ. ವೈಕ್ತಿಗತ ದ್ವೇಷ ಕೂಡ ಇದರಲ್ಲಿ ಇಲ್ಲ. ಸ್ವಂತ ಹಿತಾಸಕ್ತಿಯೂ ಕೂಡ ಇಲ್ಲಿಲ್ಲ. ಭೂಮಿ ಸ್ವಾಧೀನಪಡಿಸಿಕೊಂಡರೆ ಮುಂದಿನ ಪೀಳಿಗೆಗೆ ಭೂಮಿ ಇಲ್ಲದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.