ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಮಂಗಳೂರು:ಕರಾವಳಿಯ ದಡದಲ್ಲಿ ವಿಶ್ವ ತುಳು ಸಮ್ಮೇಳನ

ಮಂಗಳೂರು:ಕರಾವಳಿಯ ದಡದಲ್ಲಿ ವಿಶ್ವ ತುಳು ಸಮ್ಮೇಳನ

Thu, 10 Dec 2009 02:39:00  Office Staff   S.O. News Service

ತುಳುನಾಡು ಅಲಂಕೃತಗೊಂಡಿದೆ. ಜೊತೆಗೆ ಎಲ್ಲೆಡೆ ಸಂಭ್ರಮ ತುಂಬಿ ತುಳುಕುತ್ತಿದ್ದು, ತುಳುನಾಡಿನ ಅಚ್ಚ ರೂಪವೊಂದು ಜೀವಂತವಿರುವಂತೆ ಕಾಣುತ್ತಿದೆ. ಹಲವಾರು ಕಾತರ, ನಿರೀಕ್ಷೆಗಳೆಡೆಯಲ್ಲಿ ಡಿಸೆಂಬರ್ ೧೦ ರಿಂದ ೧೩ ರವರೆಗೆ ಕರಾವಳಿಯ ಉಜಿರೆಯಲ್ಲಿ ಕೋಡೆ-ಇನಿ-ಎಲ್ಲೆ (ನಿನ್ನೆ-ಇಂದು- ನಾಳೆ) ಎಂಬ ಪರಿಕಲ್ಪನೆಯಲ್ಲಿ ವಿಶ್ವ ತುಳು ಸಮ್ಮೇಳನ ನಡೆಯಲಿದ್ದು, ಈ ಮೂಲಕ ತುಳು ಅಸ್ತಿತ್ವ ಕಳೆದುಕೊಳ್ಳುತ್ತಿರುವ ಆತಂಕದ ನಡುವೆ ಇವತ್ತು ತುಳು ಸಂಸ್ಕೃತಿಯನ್ನು ಜೀವಂತವಾಗಿರಿಸುವ ಪ್ರಯತ್ನ ನಡೆಯುತ್ತಿದೆ ಎನ್ನ ಬಹುದು. ಈ ಪ್ರಯತ್ನದ ಹಿಂದೆ ಹಲವು ಸಮಾನ ಮನಸ್ಸುಗಳ ಪ್ರಾಮಾಣಿಕ ಪ್ರಯತ್ನವೇ ಇವತ್ತು ಈ ವಿಶ್ವ ಸಮ್ಮೇಳನ ನಡೆಯಲು ಕಾರಣ.

DSC_0344.JPG

ಪ್ರಥಮ ಸಮ್ಮೇಳನ
ಇತ್ತೀಚಿಗೆ ಯುನೆಸ್ಕೋ ತುಳು ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವ ಭಾಷೆಯಾಗಿದೆ ಎಂಬ ಆತಂಕಕಾರಿ ವರದಿಯನ್ನು ಗಮನಿಸಿದಾಗ ತುಳು ಭಾಷೆಯು ಆಡು ಭಾಷೆಯಾಗಿ ಉಳಿದಿದ್ದರಿಂದ ಇವತ್ತು ಇದರ ಆಯುಷ್ಯ ಕತ್ತಲಲ್ಲಿದೆ ಎಂಬ ಆತಂಕ ತಲೆದೋರಿದೆ. ಹೀಗಾಗಿ ಈ. ಭಾಷೆಯನ್ನು ಜೀವಂತವಾಗಿರಿಸುವ ಬಗೆ ಹೇಗೆ ಎಂದು ಯೋಚಿಸುವಾಗ ಮುಂದೆ ನಡೆಯಲ್ಪಡುವ ವಿಶ್ವ ತುಳು ಸಮ್ಮೇಳನದಂತಹ ಕಾರ್ಯಕ್ರಮಗಳು ಜನರಲ್ಲಿ ಹೆಚ್ಚಿನ ಕಾಲ ಆಡು ಭಾಷೆಗಳನ್ನು ಜೀವಂತವಾಗಿರಿಸಬಹುದೆಂಬುದು ಮನವರಿಕೆಯಾಗುತ್ತದೆ.

v1.gif

೧೦ ರಿಂದ ನಡೆಯಲ್ಪಡುವ ಸಮ್ಮೇಳನದಲ್ಲಿ ತುಳು ಮಾತ್ರ ಅಲ್ಲ, ನಮ್ಮ ಮುಂದಿರುವ ವಿವಿಧ ಸಂಸ್ಕ್ರತಿಯನ್ನು ಬಿಂಬಿಸುವ, ಅದನ್ನು ಉಳಿಸಿ ಬೆಳೆಸುವಂತಹ ಚಿಂತನೆಗಳ ನಡುವೆ ಚರ್ಚೆಗಳು ನಡೆಯಲಿದೆ. ಇವೆಲ್ಲ ನಮ್ಮ ಗ್ರಾಮೀಣ ಆಡುಭಾಷೆಯ ರಕ್ಷಣೆಗೆ ಪಣ ತೊಡಬೇಕು. ಯಾಕೆಂದರೆ ಇದು ಪ್ರಪ್ರಥಮ ಬಾರಿಗೆ ನಡೆಯುತ್ತಿರುವ ತುಳು ಭಾಷೆಯ ವಿಶ್ವ ಸಮ್ಮೇಳನ.

v2.jpg

ಮತ್ತೊಂದು ವಿಷಯವೇನೆಂದರೆ, ಸಮ್ಮೇಳನದಲ್ಲಿ ತುಳುವಿನೊಟ್ಟಿಗೆ ಕನ್ನಡ ಭಾಷೆಯ ಸಂಬಂಧ, ಭಾಷಾ, ಸಾಹಿತ್ಯ ಸಂಪತ್ತಿನ ಕುರಿತು ಚರ್ಚೆ ನಡೆಯಲಿದೆ. ಗ್ರಾಮ್ಯ ಸೊಗಡಿನ ಮೂಲಕ ಮನರಂಜನೆಯನ್ನು ನೀಡುವುದರ ಜೊತೆಗೆ ಸಾಹಿತ್ಯ ಚರ್ಚೆ ನಡೆಯಲು ವೇದಿಕೆ ಸಿದ್ದಗೊಂಡಿದೆ. ಇದರ ಹಿಂದೆ ಹಲವರ ಪರಿಶ್ರಮವಿದೆ. ಹೀಗಾಗಿ ತುಳು ಸಮ್ಮೇಳನ ಯಶಸ್ವಿಯಾಗುವ ಮುನ್ಸೂಚನೆ ನೀಡಿದೆ.

1.jpg

ತುಳು ನಾಡು, ನುಡಿ, ಸಂಸ್ಕೃತಿಯು ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. ಜೊತೆಗೆ ಸರ್ವಧರ್ಮಗಳ ನೆಲೆಬೀಡು, ಶಾಂತಿ,ಸಾಮರಸ್ಯಗಳಿಗೆ , ಬುದ್ಧಿವಂತರ, ಸಾಹಸಿಗರ, ಶ್ರಮಜೀವಿಗಳ ನಾಡೆಂದೂ ತುಳುನಾಡು ಜನಮನ್ನಣೆ ಗಳಿಸಿದೆ. ಪಂಚ ದ್ರಾವಿಡ ಭಾಷೆಗಳಲ್ಲಿ ಮಾನ್ಯತೆ ಪಡೆದಿರುವ ಈ ಭಾಷೆ ಆತಂಕಕಾರಿ ಸ್ಥಿತಿಯಲ್ಲಿದೆಯೊಂಬುದು ನಿಜ.

11.jpg

ಸುಮಾರು ೧,೨೦೦ ವರ್ಷಗಳ ಕಾಲ ತುಳು ನಾಡಿನ ಆಡಳಿತ ನಡೆಸಿರುವ ಆಳುಪರನ್ನು ಈ ಹೊತ್ತಿಗೆ ನೆನೆಯಬೇಕಾಗುತ್ತದೆ. ಭಾಷೆಗೂ, ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದೆ. ಭಾಷೆ ನಾಶವಾದರೆ, ಸಂಸ್ಕೃತಿಗೂ ಅಸ್ತಿತ್ವವಿಲ್ಲ. . ಈ ಭಾಷೆಯು ತನ್ನದೇ ಆದ ಲಿಪಿಯನ್ನು ಹೊಂದಿದೆ. ವಿಶ್ವದ ವಿವಿಧೆಡೆ ವಾಸಿಸುತ್ತಿರುವ ತುಳು ಭಾಷಿಗರನ್ನು ಉಜಿರೆಯ ವಿಶ್ವ ತುಳು ಸಮ್ಮೇಳನದಲ್ಲಿ ಒಟ್ಟುಗೂಡಿಸುವ ಸಂದರ್ಭವನ್ನು ಸೃಷ್ಟಿಸುವ ಮೂಲಕ ಹೊಸ ಅಧ್ಯಾಯವನ್ನೇ ಬರೆಯುವ ಹೊಸ್ತಿಲಲ್ಲಿದೆ.

111.jpg

ಮುಖ್ಯವಾಗಿ ಯುವಜನತೆಗೆ ತುಳುಭಾಷೆ, ಸಂಸ್ಕೃತಿಯ ಬಗ್ಗೆ ಅರಿವು, ಜಾಗೃತಿ ಮೂಡಿಸಿ ಅದರ ಸೊಗಡನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಯುವಜನತೆಗೆ ತಿಳಿ ಹೇಳುವುದು ಇದರ ಉದ್ದೇಶ.
ಸಾರಥ್ಯ...
ಸಮ್ಮೇಳನವು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸಹಯೋಗದಲ್ಲಿ ನಡೆಯಲಿದ್ದು, ತುಳುನಾಡು, ನುಡಿ, ಸಂಸ್ಕೃತಿಯ ಹುಟ್ಟು, ಬೆಳವಣಿಗೆ , ಅಳಿವು, ಉಳಿವು ಮುಂತಾದವುಗಳ ಬಗ್ಗೆ ಚರ್ಚೆ ನಡೆಯಲಿದೆ.
ಕನ್ನಡ ಹಾಗೂ ಮಲಯಾಳಂ, ಬ್ಯಾರಿಯಲ್ಲಿ ಸಾಮರಸ್ಯ ಹೊಂದಿರುವ ತುಳು ನಾಡಿನ ಕೊಂಕಣಿಗರು, ಕನ್ನಡಿಗರು, ಬ್ಯಾರಿಗಳು, ಮಲೆಯಾಳಿಗಳು, ಗುಜರಾತಿಗರು ಹಾಗೂ ಮರಾಠಿಗರು ಕೂಡ ಸಮ್ಮೇಳನಲ್ಲಿ ಭಾಗವಹಿಸುವ ಜೊತೆಗೆ ಹೊಸ ಕಳೆಯನ್ನೇ ನೀಡಲಿದ್ದಾರೆ.
ಐದು ನೂರು ವರ್ಷಗಳ ಹಿಂದೆ ತುಳು ವಂಶದ ಅರಸ ಶ್ರೀಕೃಷ್ಮ ದೇವರಾಯನ ಪಟ್ಟಾಭಿಷೇಕದ ಐದು ನೂರನೆಯ ವರ್ಷಾಚರಣೆಯ ಸಂದರ್ಭದಲ್ಲಿಯೇ ಈ ಸಮ್ಮೇಳನ ನಡೆಯುತ್ತಿರುವುದು ಮತ್ತೊಂದು ವಿಶೇಷವಾಗಿದೆ.
ಸಮ್ಮೇಳನದಲ್ಲಿ ತುಳು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಒಗಟು, ಅಡುಗೆ ವಿಧಾನ, ದಾಸ್ತಾನು ಪರಿಕರಗಳ ಪ್ರದರ್ಶನ, ಗ್ರಾಮೀಣ ಕುಲಕಸುಬುಗಳ ಮತ್ತು ಗುಡಿಕೈಗಾರಿಕೆಗಳ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ, ಆಭರಣಗಳು, ವೇಷ ಭೂಷಣ, ಯಕ್ಷಗಾನ ಕಲೆ, ನಾಟಿ ವೈದ್ಯ ಪದ್ಧತಿ ಬಗ್ಗೆ ಹಿರಿಯರಿಂದ ಮಾಹಿತಿಯ ಹೂರಣ ನಡೆಯಲಿದೆ. ತುಳುನಾಡಿಗೆ ಲಗ್ಗೆಯಿಟ್ಟಿರುವ ಬೃಹತ್ ಉದ್ಯಮಗಳು, ಪರಿಸರ ಮಾಲಿನ್ಯ ಹಾಗೂ ನೇತ್ರಾವತಿ ನದಿ ತಿರುವು ಯೋಜನೆಯಿಂದಾಗುವ ಹಾನಿಯ ಬಗ್ಗೆಯೂ ಸಮ್ಮೇಳನದಲ್ಲಿ ಚರ್ಚಿಸಲಾಗುವುದು.ಹಾಗೂ ಸಂಧಿ-ಪಾಡ್ದನ, ಗಾದೆಗಳು, ಎದುರು ಕತೆ, ಕುಲಕಸುಬುಗಳು, ಭೂತಾರಾಧನೆ. ನಾಗಾರಾಧನೆ, ಯಕ್ಷಗಾನ, ನಾಟಿ ವೈದ್ಯ ಪದ್ಧತಿ, ನಾಗಮಂಡಲ, ನಾಗತಂಬಿಲ, ಗೋಪೂಜೆ, ಅಂಕ-ಆಯನಗಳು, ಕಂಬಳ, ಚೆನ್ನೆಮಣೆ ಆಟ, ಆಯುಧಪೂಜೆ, ಹೊಸ‌ಅಕ್ಕಿ ಊಟ, ಪತತಿನಾಜೆ, ದೀಪಾವಳಿ ಆಚರಣೆ, ಕೆಡ್ಡೆಸ, ನಂಬಿಕೆ - ನಡವಳಿಕೆಗಳು ಆನಾವರಣಗೊಳ್ಳಲಿದೆ.
ಜಾನಪದ ಮಹಾಕಾವ್ಯಗಳು ತುಳು ಭಾಷೆಯಲ್ಲಿ ಸಂಧಿ-ಪಾಡ್ದನಗಳ ಶೈಲಿಯಲ್ಲಿ ರಚನೆಯಾಗಿದೆ. ವಿವಿಧ ಧರ್ಮೀಯರನ್ನೊಳಗೊಂಡ ಇಪ್ಪತ್ತೈದಿ‌ಉ ಲಕ್ಷ ಜನರು ಇವತ್ತು ತುಳು ಮಾತನಾಡುತ್ತಾರೆಂದರೆ ಆಶ್ಚರ್ಯವಾಗುವುದಿಲ್ಲವೇ?

1111.JPG

ತುಳುನಾಡಿನ ಸಂಪತ್ತು
ಜಗತ್ತಿನಲ್ಲಿ ಒಟ್ಟು ೧.೨೫ ಕೋಟಿ ತುಳುವರಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ೭೫ ಲಕ್ಷ ಇದ್ದಾರೆ. ತುಳು ಪ್ರಾಚೀನ ಭಾಷೆ ಎಂಬ ನಾಣ್ಣುಡಿ ಕೂಡಾ ಇದೆ. ಕರ್ನಾಟಕ, ಕೇರಳದಲ್ಲಿ ತುಳು ಸಾಹಿತ್ಯ ಆಕಾಡಮಿ ಹಾಗೂ ಕುಪ್ಪಂ ದ್ರಾವಿಡ ವಿ.ವಿ.ಯಲ್ಲಿ ತುಳು ಅಧ್ಯಯನ ವಿಭಾಗ ಸಹ ಇದೆ.
ವಿವಿಧ ಪ್ರಕಾರಗಳಲ್ಲಿ ಸಾಕಷ್ಟು ಸಾಹಿತ್ಯ ರಚನೆ ಆಗಿದೆ. ಅಧ್ಯಯನ ಸಂಶೋಧನೆ ಕೂಡ ನಡೆದಿದೆ. ಕುಪ್ಪಂನಲ್ಲಿರುವ ದ್ರಾವಿಡ ವಿಶ್ವವಿದ್ಯಾಲಯದಲ್ಲಿ ತುಳು ಅಧ್ಯಯನ ವಿಭಾಗ ಪ್ರಾರಂಭವಾಗಿದೆ. ಕರ್ನಾಟಕದಲ್ಲಿ ಇರುವಂತೆಯೇ ಕೇರಳದಲ್ಲಿಯೂ ತುಳು ಸಾಹಿತ್ಯ ಅಕಾಡೆಮಿ ಸ್ಥಾಪನೆಗೊಂಡಿದೆ.

ದ್ರಾವಿಡರು ತುಳುನಾಡಿನ ಮೂಲನಿವಾಸಿಗಳು.ನಂತರ ಬಂದಂತಹ ದ್ರಾವಿಡೇತರರು ತುಳುವರಾಗಿ ಬದುಕಿರುವುದು ಈ ನಾಡಿನ ವಿಶೇಷವಾಗಿದೆ. ಈ ಮೊದಲು ೧೯೭೦,೧೯೭೩ರಲ್ಲಿ ಒಂದೊಂದು ದೀನದ ತುಳು ಸಮ್ಮೇಳನವನ್ನು ತುಳುಕೂಟ ನಡೆಸಿತ್ತು. ೧೯೮೩ರಲ್ಲಿ ಬೆಂಗಳೂರಿನ ತುಳುಕೂಟದ ಆಶ್ರಯದಲ್ಲಿ ಪ್ರೊ.ಕು.ಶಿ.ಹರಿದಾಸ ಭಟ್ಟರ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ತುಳು ಸಮ್ಮೇಳನ ನಡೆಯಿತು. ೧೯೮೯ರಲ್ಲಿ ಕುಡ್ಲ ತುಳುಕೂಟ ಮೂಲ್ಕಿಯಲ್ಲಿ ಪ್ರೊ.ಅಮೃತ ಸೋಮೇಶ್ವರರ ಅಧ್ಯಕ್ಷತೆಯಲ್ಲಿ ನಡೆದಿತ್ತು.
ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಸಮೃದ್ದವಾಗಿರುವ ತುಳುನಾಡಿನಲ್ಲಿ ಹಲವು ಸಾಹಿತ್ಯ ರಚನೆಗಳು, ಸಾಹಿತಿಗಳು ಸೃಷ್ಟಿಯಾಗಿದ್ದಾರೆ.
ಸಮ್ಮೇಳನದ ಪೂರ್ವಭಾವಿಯಾಗಿ ಈಗಾಗಲೇ ದಕ್ಷಿಣ ಕನ್ನಡ, ಉಡುಪಿಚ ಕಾಸರಗೋಡು ಜಿಲ್ಲೆಗಳಲ್ಲಿ ವಿಭಾUಯ ಮಟ್ಟದಲ್ಲಿ ತುಳುಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆಯುತ್ತಿದ್ದು, ಈ ಮೂಲಕ ಕರಾವಳಿಯಲ್ಲಿ ವರ್ಷದ ಅದಿಭಾಗದಲ್ಲಿ ಸಂಭ್ರಮ ತಲೆದೋರಿದೆ.
ವಿಶೇಷತೆಗಳು....
ವಿಚಾರ ಸಂಕಿರಣ, ನಾಟಿ ಪದ್ದತಿ, ಜಾನಪದ ಆಟೋಟಗಳು, ತುಳುನಾಡಿನ ನಲಿಕೆಗಳು, ತುಳುನಾಡಿನ ವೈಭವವನ್ನು ಬಿಂಬಿಸುವ ಕಾರ್ಯಕ್ರಮಗಳು ಪೂರ್ವಭಾವಿಯಾಗಿ ನಡೆದಿದೆ.ಉಜಿರೆಯಲ್ಲಿ ಕುಸಿತಿ ಪಂದ್ಯಾಟ ,ವಸ್ತು ಪ್ರದರ್ಶನದಲ್ಲಿ ಜಾನಪದ ವೈವಿಧ್ಯದ ಅಪೂರ್ವ ವಸ್ತುಗಳ ಪ್ರದರ್ಶನ ಕೂಡಾ ನಡೆದಿದೆ.ಜಾನಪದ ಕ್ರೀಡೆಗಳಾದ ಲಗೋರಿ, ಕುಟ್ಟಿದೊಣ್ಣೆ, ಬೆರ್ಚೆಂಡು, ಟೊಂಕ, ಜಿಬಿಲಿ, ಚೆನ್ನೆಮಣೆ ಆಟ, ಕೊತತಿಲಿಗೆ ಕ್ರಿಕೆಟ್ ಸರ್ಧೆಗಳನ್ನು ನಡೆಸಲಾಗಿದೆ.
೧೫ ವರ್ಷಗಳ ಬಳಿಕ ನಡೆಯುತ್ತಿರುವ ಈ ಅಪೂರ್ವ ಸಂಭ್ರಮದ ಸಮ್ಮೇಳನದಲ್ಲಿ ನೆಂಪು ಸ್ಮರಣ ಸಂಚಿಕೆ ಹಾಗೂ ೫೧ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ, ತುಳು ನಾಡಿನ ಪ್ರಾಚೀನ ಪದ್ಧತಿಯ ಆಹಾರ ಮೇಳ, ಬೆಳ್ತಂಗಡಿ, ಉಡುಪಿ, ಪುತ್ತೂರು, ಮೂಡುಬಿದಿರೆ ಮತ್ತು ಉಜಿರೆಯಲ್ಲಿ ಒಂದು ವಾರ ಕಾಲ ತುಳು ಚಲನಚಿತ್ರಗಳನ್ನು ಪ್ರದರ್ಶಿಸಲಾಗಿದೆ.
ತುಳುಗ್ರಾಮ
ಮತ್ತೊಂದು ವಿಶೇಷವೆನೆಂದರೆ ಆರುವತ್ತು ವರ್ಷದ ಹಿಂದಿನ ಕಲ್ಪನೆಯನ್ನು ನೆನಪಿಸುವ ತುಳು ಗ್ರಾಮ ಉಜಿರೆಯಲ್ಲಿ ಸಮ್ಮೇಳನದ ಪ್ರಧಾನ ವೇದಿಕೆಯ ಬಳಿ ಮೂರು ಎಕರೆ ಪ್ರದೇಶದಲ್ಲಿ ಮಾದರಿ ತುಳು ಗ್ರಾಮವನ್ನು ಡಾ.ಹೆಗ್ಗಡೆ ಹಾಗೂ ಹೇಮಾವತಿ ವಿ.ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರೂಪಿಸಲಾಗಿದೆ. ಖ್ಯಾತ ಕಲಾವಿದ ಜಗದೀಶ್‌ರ ನೇತೃತ್ವದಲ್ಲಿ ಮೈಸೂರು, ಮಂಗಳೂರಿನ ಕಲಾವಿದರು, ತಂತ್ರಜ್ಞರ ನೆರವಿನಿಂದ ನಿರ್ಮಾಣವಾಗಿದೆ.
ಗತ್ತಿನ ಮನೆ, ದೈವದ ಗುಡಿ, ಶಾಲೆ, ಅರಮನೆ, ಕ್ಷೌರದಂಗಡಿ, ಕುಂಬಾರಿಕೆ, ಮುಟ್ಟಾಳೆ ತಯಾರಿ, ಎತ್ತಿನ ಗಾಡಿ, ದೊಂದಿ ಬೆಳಕಿನಲ್ಲಿ ಯಕ್ಷಗಾನ ಪ್ರದರ್ಶನ ಇತ್ಯಾದಿ ಗ್ರಾಮೀಣ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲೆಗಾರಿಕೆ ಇಲ್ಲಿದೆ ಹೀಗಾಗಿ ನೀವು ಇಲ್ಲಿಗೆ ಭೇಟಿ ನೀಡಲೇಬೇಕು.
ಸಮ್ಮೇಳನದ ಯಶಸ್ವಿಗೆ ೨೩ ಉಪ ಸಮಿತಿಗಳು ಕಾರ್ಯನಿರತವಾಗಿದೆ. ಡಿ. ೧೦ರಂದು ಗುರುವಾರ ಸಂಜೆ ೫ ಗಂಟೆಗೆ ವಿಶ್ವ ತುಳು ಸಮ್ಮೇಳನವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ.
ಡಿ.೧೩ ರಂದು ನಡೆಯುವ ಸಾಂಸ್ಕೃತಿಕ ಹಾಗೂ ಸಮಾರೋಪ ಸಮಾರಂಭದಲ್ಲಿ ವಿಶ್ವಸುಂದರಿ ಐಶ್ವರ್ಯ ರೈ, ಅಭಿಷೇಕ್ ಬಚ್ಚನ್, ಶಿಲ್ಪಾಶೆಟ್ಟಿ, ಡಾ.ಜಯಮಾಲಾ ಹಾಗೂ ಅನೇಕ ಚಲನಚಿತ್ರ ತಾರೆಗಳು ಹಾಗೂ ದುಬೈ ಉದ್ಯಮಿ ಬಿ.ಆರ್ ಶೆಟ್ಟಿ ಭಾಗವಹಿಸಲಿದ್ದಾರೆ.
ಸಮ್ಮೇಳನದಲ್ಲಿ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವಂತೆ ನಿರ್ಣಯವನ್ನು ಕೈಗೊಳ್ಳುವ ಬಗ್ಗೆ, ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳಲ್ಲಿ ತುಳುವನ್ನು ಐಚ್ಛಿಕ ಭಾಷೆಯನ್ನಾಗಿ ಕಲಿಸುವ ಬಗ್ಗೆ , ತುಳು ಭಾಷೆಗೆ ವಿಶೇಷ ಸ್ಥಾನ-ಮಾನ ಮತ್ತು ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರವನ್ನು ಕೋರುವ ಬಗ್ಗೆ ಹಾಗೂ ಸಮ್ಮೇಳನದ ನಿರ್ಣಯಗಳನ್ನು ಅನುಷ್ಠಾನಗೊಳಿಸುವಂತೆ ಮುಂದೆ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರವನ್ನು ಒತ್ತಾಯಿಸುವ ಬಗ್ಗೆ ಚರ್ಚೆ ನಡೆಸಲಾಗುವುದು. ಹೀಗೆ ಮೂರು ದಿನ ನಡೆಯಲ್ಪಡುವ ವಿಶ್ವ ತುಳು ಸಮ್ಮೇಳನ ತುಳು ನಾಡಿನಲ್ಲಿ ತುಳು ಭಾಷಿಗರನ್ನು ಒಟ್ಟುಗೂಡಿಸುವ ಮೂಲಕ ವಿಶ್ವ ಮಟ್ಟದಲ್ಲಿ ತುಳು ಭಾಷೆಯ ಕಹಳೆ ಮೊಳಗುವಂತೆ ಮಾಡುತ್ತದೆ.
edit2.jpg?width=183&height=183&crop=1%3A1
- ಶಂಶೀರ್, ಬುಡೋಳಿ


Share: