ಬೆಂಗಳೂರು, ಡಿ. ೫: ರಾಜ್ಯವನ್ನು ಜ್ಞಾನ ಸಮಾಜವನ್ನಾಗಿ ಪರಿವರ್ತಿಸುವ ಹೆಬ್ಬಯಕೆಯಿಂದ ಪ್ರಾರಂಭಿಸಲಾಗಿರುವ ಕನ್ನಡ ವಿದ್ಯುನ್ಮಾನ ಜ್ಞಾನಕೋಶ ‘ಕಣಜ’ ಎಲ್ಲ ಕನ್ನಡಿಗರನ್ನು ಒಗ್ಗೂಡಿಸಲು ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಶನಿವಾರ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಕನ್ನಡ ವಿದ್ಯುನ್ಮಾನ ಜ್ಞಾನಕೋಶ ‘ಕಣಜ’ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲೆ ಪ್ರಪ್ರಥಮ ಪ್ರಾದೇಶಿಕ ಭಾಷೆಯಲ್ಲಿ ರಾಜ್ಯ ಜ್ಞಾನ ಆಯೋಗ ‘ಕಣಜ’ ಹೊರತಂದಿರುವ ಹೆಮ್ಮೆಯ ಸಂಗತಿ ಎಂದು ಬಣ್ಣಿಸಿದರು.
ಪ್ರಾಚೀನ ಹಲ್ಮಿಡಿ ಶಾಸನದಿಂದ ಆರಂಭವಾಗಿ ಜ್ಞಾನಪೀಠ ಪ್ರಶಸ್ತಿ ಪಡೆದ ಹಿರಿಮೆ ಹೊಂದಿರುವ ಕನ್ನಡ ಭಾಷೆಯ ವಿಕಾಸಕ್ಕೆ ವಿದ್ಯುನ್ಮಾನ ಜ್ಞಾನಕೋಶ ಮಹತ್ವದ ಹೆಜ್ಜೆಯಾಗಿದೆ ಎಂದು ಯಡಿಯೂರಪ್ಪ, ಒಂದು ಕೋಟಿ ಮೂವತ್ತು ಲಕ್ಷ ಕನ್ನಡ ಲೇಖನಗಳನ್ನು ಸೇರಿಸಲು ಅವಕಾಶವಿರುವ ಈ ಜ್ಞಾನಕೋಶವು ವಿಶ್ವದೆಲ್ಲೆಡೆ ಸೇವೆ ಸಲ್ಲಿಸುತ್ತಿರುವ ಕನ್ನಡಿಗರು ಮಾತೃಭಾಷೆಯೊಂದಿಗೆ ನಿರಂತರ ಬಾಂಧವ್ಯ ಬೆಳೆಸಿಕೊಳ್ಳಲು ಪೂರಕವಾಗಲಿದೆ ಎಂದು ಹೇಳದರು.
ಕನ್ನಡ ನುಡಿಯ ಹಿರಿಮೆ, ಸಂಸ್ಕೃತಿಯನ್ನು ಸಂರಕ್ಷಿಸಲು ಪ್ರಸಕ್ತ ಆಯ-ವ್ಯಯದಲ್ಲಿ ಅಗತ್ಯ ನೆರವು ನೀಡಲಾಗಿದೆ. ಕನ್ನಡ ವಿದ್ಯುನ್ಮಾನ ಜ್ಞಾನಕೋಶವನ್ನು ಪ್ರಾರಂಭಕ್ಕೆ ಎರಡು ಕೋಟಿ ರೂ.ಮೀಸಲಿಡಲಾಗಿತ್ತು. ಇದರ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲ ರೀತಿಯ ನೆರವು ಒದಗಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಕನ್ನಡ ಭಾಷೆಯ ಹಿರಿಮೆಯ ವಿದ್ಯುನ್ಮಾನ ಜ್ಞಾನಕೋಶ ‘ಕಣಜ’ದ ಪ್ರಮುಖ ರೂವಾರಿಗಳಾದ ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷ ಡಾ.ಕಸ್ತೂರಿ ರಂಗನ್ ಹಾಗೂ ಎಂ.ಕೆ.ಶ್ರೀಧರ್ ಮತ್ತು ಇತರರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ‘ಕಣಜ’ದಲ್ಲಿ ಲಭ್ಯವಿರುವ ವಿಪುಲ ಮಾಹಿತಿ ಮತ್ತು ಜ್ಞಾನವನ್ನು ನಾಡಿನ ಅಭ್ಯುದಯಕ್ಕೆ ಬಳಸಿಕೊಳ್ಳೋಣ ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷ ಡಾ.ಕಸ್ತೂರಿ ರಂಗನ್ ಮಾತನಾಡಿ, ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಯ ತರುವ ನಿಟ್ಟಿನಲ್ಲಿ ಜ್ಞಾನ ಆಯೋಗದ ೨೬ ಶಿಫಾರಸ್ಸುಗಳನ್ನು ಜಾರಿಗೆ ತರುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಹಾಗೂ ನಾಡೋಜ ದೇ.ಜವರೇಗೌಡ ವಹಿಸಿದ್ದರು. ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ, ಸಂಸದರಾದ ಡಿ.ಬಿ.ಚಂದ್ರೇಗೌಡ, ಪಿ.ಸಿ.ಮೋಹನ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್, ಸರಕಾರ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.