ಬೆಂಗಳೂರು,ಜನವರಿ ೨೯:ರಾಜ್ಯದಲ್ಲಿ ಚರ್ಚ್‌ದಾಳಿಯನ್ನು ತಡೆಗಟ್ಟಲು ಬಿಜೆಪಿ ಸರ್ಕಾರ ವಿಫಲವಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿರುವ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಈ ಘಟನೆಗಳ ಹಿಂದೆ ಬಿಜೆಪಿ ಸರ್ಕಾರದ ಕುಮ್ಮಕ್ಕಿದೆ ಎಂದು ನೇರವಾಗಿ ಆರೋಪಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ನಡೆದ ದಾಳಿಗಳನ್ನು ತಡೆಗಟ್ಟಲು ಸಾಧ್ಯವಾಗದಿದ್ದರೆ ಅಧಿಕಾರದಲ್ಲಿ ಯಾಕೆ ಮುಂದುವರೆಯುತ್ತೀರಿ. ರಾಜೀನಾಮೆ ನೀಡಿ ನಿರ್ಗಮಿಸಿ ಎಂದು ಹೇಳಿದ್ದಾರೆ.
ಚಿತ್ರದುರ್ಗದ ಮೊಳಕಾಲ್ಮೂರಿನ ಸಲೇನ ಹಳ್ಳಿ ಹಾಗೂ ಚಳ್ಳಕೆರೆಯಲ್ಲಿ ಚರ್ಚ್ ಹಾಗೂ ಪಾದ್ರಿಯ ಮೇಲೆ ದಾಳಿ ನಡೆಯಲಾಗಿದೆ. ಇಷ್ಟೆಲ್ಲಾ ದಾಳಿಗಳು ನಡೆಯುತ್ತಿದ್ದರೂ ಕೂಡ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದೇ ನಿರ್ಲಕ್ಷ್ಯವಹಿಸಿದೆ ಎಂದು ಆರೋಪಿಸಿದರು.
ಇಂತಹ ದಾಳಿಗಳ ಬಗ್ಗೆ ಸರ್ಕಾರ ಸಮಗ್ರವಾಗಿ ತನಿಖೆ ನಡೆಸಬೇಕು. ತಪ್ಪಿತಸ್ಧರನ್ನು ಬಂಧಿಸಿ ಮೇಲೆ ಮೊಕದ್ದಮೆ ಹೂಡಬೇಕು. ಈ ಬೆಳವಣಿಗೆಗಳಿಂದ ರಾಜ್ಯದ ಘನತೆಗೆ ಚ್ಯುತಿಯಾಗಿದೆ. ಹೊರ ರಾಜ್ಯ ಹೊರ ದೇಶಗಳಲ್ಲಿ ರಾಜ್ಯದ ಘನತೆ ಮಣ್ಣುಪಾಲಾಗಿದೆ. ಇದೇ ಪರಿಸ್ಧಿತಿ ಮುಂದುವರೆಯುತ್ತಿದ್ದರೆ ಭವಿಷ್ಯದಲ್ಲಿ ಹೊಸ ಕೈಗಾರಿಕೆಗಳು ರಾಜ್ಯಕ್ಕೆ ಬರುವುದಿಲ್ಲ. ಕೈಗಾರಿಕಾ ಹಾಗೂ ಆರ್ಥಿಕ ಬೆಳವಣಿಗೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಚರ್ಚ್‌ಗಳ ಮೇಲೆ ದಾಳಿ ತಡೆಯುವುದನ್ನು ಬಿಟ್ಟು ದಾಳಿ ಮಾಡಿದವರ ಕೈಕಡಿಯಿರಿ ಎಂದು ಫರ್ಮಾನು ಹೊರಡಿಸುತ್ತಾರೆ. ಕ್ರಮ ಕೈಗೊಳ್ಳಲು ಕಾನೂನಿನಡಿ ಅವಕಾಶಗಳಿವೆ. ಆದರೆ ಸರ್ಕಾರ ಎಲ್ಲವನ್ನೂ ಮೀರಿ ನಡೆಯುತ್ತಿದೆ. ಅಲ್ಪಸಂಖ್ಯಾತರ ರಕ್ಷಣೆಮಾಡಲಾಗದ ಸರ್ಕಾರ ಕೇವಲ ಅನುಕಂಪದ ಮಾತುಗಳನ್ನಾಡುತ್ತಿದೆ. ಆಷಾಡಭೂತಿತನದ ಮಾತನ್ನಾಡುತ್ತಿದೆ ಎಂದು ದೂರಿದರು.
ಹಂಪಿಯಲ್ಲಿ ನಡೆಯುತ್ತಿರುವ ಶ್ರೀಕೃಷ್ಣದೇವರಾಯರ ೫೦೦ ನೇ ಪಟ್ಟಾಭಿಷೇಕ ಮಹೋತ್ಸವಕ್ಕೆ ಪ್ರತಿಪಕ್ಷಗಳು ಆಹ್ವಾನಿಸುವ ಕನಿಷ್ಠ ಸೌಜನ್ಯವನ್ನೂ ಕೂಡ ಇವರು ಪ್ರದರ್ಶಿಸಿಲ್ಲ. ಈ ಸಮಾರಂಭ ಬಿಜೆಪಿ ಸಮಾರಂಭವಾಗಿ ಮಾರ್ಪಟ್ಟಿದೆ. ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಾದ ತಮಗೆ ಕನಿಷ್ಠ ಪಕ್ಷ ಆಹ್ವಾನ ಪತ್ರಿಕೆ ಕಳುಹಿಸುವ ಗೊಡವೆಗೂ ಕೂಡ ಹೋಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ವಿಚಾರದಲ್ಲಿ ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ನಲ್ಲಿ ನೀಡಿದ ಸ್ಪಷ್ಟೀಕರಣ ಸರಿಯಲ್ಲ. ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಚುನಾವಣೆ ಸದ್ಯಕ್ಕೆ ನಡೆಸಲು ಆಗುವುದಿಲ್ಲ ಎಂದು ಹೇಳಿರುವುದು ತಮ್ಮ ಜವಬ್ದಾರಿಯಿಂದ ಹಿಂದೆ ಸರಿಯುವ ಪ್ರಯತ್ನವಾಗಿದೆ.
ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಕೂಡಲೇ ಚುನಾವಣೆ ನಡೆಸಲು ಕ್ರಮಕೈಗೊಳ್ಳುವಂತೆ ಮನವಿಮಾಡಲಾಗುವುದು. ಮೂರು ವರ್ಷಗಳಿಂದ ಮಹಾನಗರ ಪಾಲಿಕೆಗೆ ಜನಪ್ರತಿನಿಧಿಗಳಿಲ್ಲದೇ ಜನತೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪದೇ ಪದೇ ಚುನಾವಣೆ ಮುಂದಕ್ಕೆ ಹಾಕುತ್ತಿದ್ದರೆ ಅದು ಜನರಿಗೆ ಅವಮಾನ ಮಾಡಿದಂತೆ ಎಂದು ಹೇಳಿದರು.