ಬೆಂಗಳೂರು,ಏಪ್ರಿಲ್,೩೦-ತೀವ್ರ ಸ್ವರೂಪದ ವಿದ್ಯುತ್ ಕೊರತೆಯನ್ನು ಎದುರಿಸುತ್ತಿರುವ ಕರ್ನಾಟಕಕ್ಕೆ ಕೇಂದ್ರದ ವಿದ್ಯುತ್ ಸ್ಥಾವರಗಳಿಂದ ಕನಿಷ್ಟ ೨೨೦೦ ಮೆಗಾವ್ಯಾಟ್ ವಿದ್ಯುತ್ನ್ನು ಒದಗಿಸುವಂತೆ ರಾಜ್ಯ ಸರ್ಕಾರ ಕೇಂದ್ರವನ್ನು ಒತ್ತಾಯಿಸಿದೆ.
ಇಂದಿಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ಧಿಗಾರರ ಜತೆ ಮಾತನಾಡಿದ ಗೃಹ ಸಚಿವ ಡಾ||ವಿ.ಎಸ್.ಆಚಾರ್ಯ,ಇತ್ತೀಚೆಗೆ ದೆಹಲಿಯಲ್ಲಿ ಕೇಂದ್ರದ ವಿದ್ಯುತ್ ಸಚಿವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಒತ್ತಾಯ ಮಾಡಲಾಗಿದೆ ಎಂದು ಹೇಳಿದರು.
ಕೇಂದ್ರದ ವಿದ್ಯುತ್ ಸ್ಥಾವರಗಳಿಂದ ರಾಜ್ಯಕ್ಕೆ ಒದಗಿಸುತ್ತಿರುವ ವಿದ್ಯುತ್ ಪ್ರಮಾಣ ಕಡಿಮೆ.ಈ ಪೈಕಿ ನಿಗದಿ ಮಾಡಿದ ೧೫೪೩ ಮೆಗಾವ್ಯಾಟ್ ವಿದ್ಯುತ್ ಪೈಕಿ ಇನ್ನೂರೈವತ್ತರಿಂದ ನಾಲ್ಕು ನೂರು ಮೆಗಾವ್ಯಾಟ್ನಷ್ಟು ವಿದ್ಯುತ್ ಕಡಿಮೆ ಸಿಗುತ್ತಿದೆ ಎಂದು ವಿವರಿಸಿದ್ದೇವೆ ಅಂತ ಹೇಳಿದರು.
ಈ ಮಧ್ಯೆ ಕೇಂದ್ರ ಸರ್ಕಾರ ರಾಜ್ಯಕ್ಕೆ ನಿಗದಿ ಪಡಿಸಿದ ವಿದ್ಯುತ್ ಪಾಲನ್ನು ಹೆಚ್ಚಿಸಿ ಕನಿಷ್ಟ ೨೨೦೦ ಮೆಗಾವ್ಯಾಟ್ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದ್ದೇವೆ ಎಂದು ವಿವರಿಸಿದರು.
ರಾಜ್ಯದ ವಿದ್ಯುತ್ ಬೇಡಿಕೆ ಪ್ರಮಾಣ ೭೭೮೭ ಮೆಗಾವ್ಯಾಟ್ನಷ್ಟಿದ್ದರೆ,ಲಭ್ಯವಿರುವ ವಿದ್ಯುತ್ ಪ್ರಮಾಣ ೬೧೦೦ ಮೆಗಾವ್ಯಾಟ್ಗಳಷ್ಟಿದೆ.ಕೊರತೆ ಪ್ರಮಾಣ ಶೇಕಡಾ ೨೨ ರಷ್ಟಿದ್ದು ಇದನ್ನು ಸರಿಪಡಿಸಿಕೊಳ್ಳಲು ಹಲವು ಯೋಜನೆಗಳನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.
ನೆನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತಲಾ ಏಳುನೂರು ಮೆಗಾವ್ಯಾಟ್ ಸಾಮರ್ಥ್ಯದ ಮೂರು ವಿದ್ಯುತ್ ಸ್ಥಾವರಗಳನ್ನು ಖಾಸಗಿಯವರು ಮತ್ತು ೨೦೦೦ ಮೆಗಾವ್ಯಾಟ್ ಸಾಮರ್ಥ್ಯದ ಘಟಕವನ್ನು ಕೆಪಿಸಿ ವತಿಯಿಂದ ಸ್ಥಾಪಿಸಲು ಗ್ರೀನ್ ಸಿಗ್ನಲ್ ನೀಡಲಾಗಿದೆ.
ಆದರೆ ಇದಕ್ಕೆ ಗ್ಯಾಸ್ನ್ನು ಒದಗಿಸಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು,ಕೃಷ್ಣಾ-ಗೋದಾವರಿ ನದಿ ಪಾತ್ರದಿಂದ ಈ ಗ್ಯಾಸ್ ಸಿಗಬೇಕಿದ್ದು ಕೇಂದ್ರ ಸರ್ಕಾರ ಈ ಬಗ್ಗೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಈ ಮಧ್ಯೆ ಬ್ರೆಜಿಲ್ನ ಕಂಪನಿಯೊಂದು ರಾಜ್ಯಕ್ಕೆ ವಿದ್ಯುತ್ ಉತ್ಪಾದನೆಗೆ ಅಗತ್ಯವಿರುವ ಗ್ಯಾಸ್ನ್ನು ಒದಗಿಸುವುದಾಗಿ ಮುಂದೆ ಬಂದಿದ್ದು ಇದೂ ಸೇರಿದಂತೆ ವಿವಿಧ ಪ್ರಸ್ತಾಪಗಳ ಜತೆ ಸಧ್ಯದಲ್ಲೇ ಮುಖ್ಯಮಂತ್ರಿಗಳ ಜತೆಗೂಡಿ ಕೇಂದ್ರ ವಿದ್ಯುತ್ ಸಚಿವರನ್ನು ಭೇಟಿ ಮಾಡುವುದಾಗಿ ಅವರು ವಿವರಿಸಿದರು.
ಇದರ ಜತೆ ಕೊಡಗಿ,ಯಡ್ನಾಪುರ,ಯರಮರಸು,ಗುಲ್ಬರ್ಗ,ಬಳ್ಳಾರಿ ಎರಡು ಹಾಗೂ ಮೂರನೇ ಘಟಕಗಳ ಸ್ಥಾಪನೆ ಕಾರ್ಯ ನಡೆಯುತ್ತಿದ್ದು ಇದಕ್ಕೆ ಅಗತ್ಯವಾದ ಕಲ್ಲಿದ್ದಲನ್ನು ಒದಗಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು.
ಹಾಗೆಯೇ ಅಸಾಂಪ್ರದಾಯಕ ಇಂಧನ ಮೂಲಗಳನ್ನು ಬಳಸಿ ನೂರು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಕೇಂದ್ರ ಸರಕಾರ ರಾಜ್ಯಕ್ಕೆ ಸಬ್ಸಿಡಿ ಕೊಡಬೇಕು.
ಈ ವಿಷಯದ ಕುರಿತಂತೆಯೂ ನಾವು ದೆಹಲಿಗೆ ಹೋದಾಗ ಕೇಂದ್ರದ ವಿದ್ಯುತ್ ಸಚಿವರ ಜತೆ ಚರ್ಚೆ ನಡೆಸುವುದಾಗಿ ನುಡಿದ ಅವರು,ಏನೇ ಆದರೂ ಮುಂದಿನ ವರ್ಷಗಳಲ್ಲಿ ಕರ್ನಾಟಕ ವಿದ್ಯುತ್ ಕೊರತೆ ಎದುರಿಸುತ್ತಿರುವ ರಾಜ್ಯ ಎಂಬುದರ ಬದಲು,ಹೆಚ್ಚುವರಿ ವಿದ್ಯುತ್ ಉತ್ಪಾದಿಸುತ್ತಿರುವ ರಾಜ್ಯ ಎಂಬ ಸ್ಥಿತಿಗೆ ಬರಬೇಕು ಎಂದವರು ಹೇಳಿದರು.
ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ಕಲ್ಲಿದ್ದಲಿನ ಮೇಲೇ ಹೆಚ್ಚಿನ ಅವಲಂಬನೆ ಅನಿವಾರ್ಯ ಎಂದ ಅವರು,ಸೋಲಾರ್ ವಿದ್ಯುತ್ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆಯಾದರೂ ಅದಕ್ಕಾಗಿ ಬಳಸುವ ಯಂತ್ರೋಪಕರಣಗಳ ಬೆಲೆ ಹೆಚ್ಚು.
ನೀರಿನಿಂದ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ನಾಲ್ಕು ಕೋಟಿ ರೂಪಾಯಿ ಬೇಕಾದರೆ,ಕಲ್ಲಿದ್ದಲಿನಿಂದ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಐದು ಕೋಟಿ ರೂಪಾಯಿ ಬೇಕು.ಆದರೆ ಸೋಲಾರ್ ಮೂಲಕ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಮೂವತ್ತು ಕೋಟಿ ರೂಪಾಯಿ ಬೇಕು ಎಂದು ವಿವರಿಸಿದರು.
ಹನ್ನೊಂದನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ೭೮,೦೦೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿತ್ತಾದರೂ ೬೨,೦೦೦ ಮೆಗಾವ್ಯಾಟ್ ವಿದ್ಯುತ್ನ್ನಷ್ಟೇ ಉತ್ಪಾದಿಸಲು ಸಾಧ್ಯವಾಗಿದೆ.
ಹೀಗಾಗಿ ಕೇಂದ್ರ ಸರ್ಕಾರ ವಿದ್ಯುತ್ ಉತ್ಪಾದನೆಯ ಕಡೆ ಹೆಚ್ಚಿನ ಗಮನ ಕೊಡುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆಯೆಂದವರು ಹೇಳಿದರು.