ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಬೆಂಗಳೂರು: ರಸ್ತೆ ಮತ್ತು ವಾಯುಯಾನದಲ್ಲಿ ಮೂರು ವರ್ಷಗಳಲ್ಲಿ ಕರ್ನಾಟಕ ದೇಶಕ್ಕೇ ಪ್ರಥಮವಾಗಲಿದೆ - ಜನಾರ್ಧನ ರೆಡ್ಡಿ

ಬೆಂಗಳೂರು: ರಸ್ತೆ ಮತ್ತು ವಾಯುಯಾನದಲ್ಲಿ ಮೂರು ವರ್ಷಗಳಲ್ಲಿ ಕರ್ನಾಟಕ ದೇಶಕ್ಕೇ ಪ್ರಥಮವಾಗಲಿದೆ - ಜನಾರ್ಧನ ರೆಡ್ಡಿ

Tue, 19 Jan 2010 02:58:00  Office Staff   S.O. News Service
ಬೆಂಗಳೂರು, ಜನವರಿ 18:ಮುಂದಿನ ಎರಡು ಮೂರು ವರ್ಷಗಳಲ್ಲಿ ಕರ್ನಾಟಕ ರಸ್ತೆ ಹಾಗೂ ವಿಮಾನ ಸೌಕರ್ಯದ ಲಭ್ಯತೆ ವಿಷಯದಲ್ಲಿ ದೇಶದಲ್ಲೇ ನಂಬರ್ ಒನ್ ರಾಜ್ಯವಾಗಲಿದೆ ಎಂದು ಪ್ರವಾಸೋದ್ಯಮ ಹಾಗೂ ಮೂಲಭೂತ ಸೌಕರ್ಯ ಖಾತೆ ಸಚಿವ ಜಿ.ಜನಾರ್ಧನ ರೆಡ್ಡಿ ಘೋಷಿಸಿದ್ದಾರೆ.

ಖಾಸಗಿ ಸಹಭಾಗಿತ್ವದೊಂದಿಗೆ ಬಿಜಾಪುರದಲ್ಲಿ ವಿಮಾನನಿಲ್ದಾಣ ನಿರ್ಮಿಸುವ ಕುರಿತು ಇಂದಿಲ್ಲಿ ಸರ್ಕಾರ ಹಾಗೂ ಮಾರ್ಗ್ ಸಂಸ್ಥೆ ಮಧ್ಯೆ ಒಪ್ಪಂದ ನಡೆದ ಸಂಧರ್ಭದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಮೂಲಭೂತ ಸೌಕರ್ಯವನ್ನು ಅಭಿವೃದ್ಧಿಪಡಿಸಿ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಲು,ಆರ್ಥಿಕ ಚಟುವಟಿಕೆಗೆ ಉತ್ತೇಜನ ಕೊಡಲು ಬಿಜೆಪಿ ಸರ್ಕಾರ ಪಣ ತೊಟ್ಟಿದ್ದು ಈ ಹಿನ್ನೆಲೆಯಲ್ಲಿ ಪರಿಣಾಮಕಾರಿ ಹೆಜ್ಜೆಗಳನ್ನಿಡಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಹದಿಮೂರು ವಿಮಾನ ನಿಲ್ದಾಣ ಹಾಗೂ ಕೊಳ್ಳೇಗಾಲ,ಕುಶಾಲನಗರ,ರಾಯಚೂರು,ದಾವಣಗೆರೆ,ಉಡುಪಿ,ಗೋಕರ್ಣ ಸೇರಿದಂತೆ ಹತ್ತು ಕಡೆ ವಿಮಾನ ಇಳಿದಾಣಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಇದೇ ರೀತಿ ರಾಜ್ಯದಲ್ಲಿ ೬೩ ಸಹಸ್ರ ಕಿಮಿ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಮುಂದಾಗಿದ್ದು ಈ ಪೈಕಿ ೧೨ ಸಹಸ್ರ ಕಿಮಿ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಇದೇ ಸಂಧರ್ಭದಲ್ಲಿ ಅವರು ಸ್ಪಷ್ಟ ಪಡಿಸಿದರು.

ಮುಂದಿನ ಎರಡು ಮೂರು ವರ್ಷಗಳಲ್ಲಿ ರಸ್ತೆ ಹಾಗೂ ವಿಮಾನ ಸೌಕರ್ಯದ ವಿಷಯದಲ್ಲಿ ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ
ಕರ್ನಾಟಕ ನಂಬರ್ ಒನ್ ರಾಜ್ಯವಾಗುವಂತೆ ಮಾಡುವುದಾಗಿ ಅವರು ಘೋಷಿಸಿದರು.

ಈ ಮಧ್ಯೆ ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ರೈಲ್ವೇ ಅಭಿವೃದ್ಧಿ ಪ್ರಮಾಣ ಕಡಿಮೆಯಾಗಿದ್ದು ಇದನ್ನು ಸರಿದೂಗಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದರು.

ಪಕ್ಕದ ರಾಜ್ಯಗಳಲ್ಲಿ ಪ್ರತೀ ಸಾವಿರ ಕಿಮಿಗೆ ಮೂವತ್ತು ಕಿಮಿಯಷ್ಟು ರೈಲ್ವೇ ಮಾರ್ಗಗಳಿದ್ದರೆ,ಇಲ್ಲಿ ಆ ಪ್ರಮಾಣ ಕೇವಲ ಹದಿನೈದು ಕಿಮಿಗಳಷ್ಟೇ ಇದೆ ಎಂದು ಅವರು ವಿಷಾದಿಸಿದರು.

ಇದನ್ನು ಸರಿಪಡಿಸುವ ದೃಷ್ಟಿಯಿಂದಲೇ ಸರ್ಕಾರ ರಾಜ್ಯದಲ್ಲಿ ಆಗಬೇಕಾದ ರೈಲ್ವೇ ಯೋಜನೆಗಳನ್ನು ಪರಿಶೀಲಿಸಲು ಸದನ ಸಮಿತಿಯನ್ನು ರಚಿಸಿದೆ ಎಂದು ವಿವರ ನೀಡಿದರು.

ಇದೇ ಸಂಧರ್ಭದಲ್ಲಿ ಮಾತನಾಡಿದ ಬಿಜಾಪುರ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರ್ಜೋಳ್ ಮಾತನಾಡಿ,ಐತಿಹಾಸಿಕ ಸ್ಥಳಗಳನ್ನು ಹೊಂದಿರುವ ಬಿಜಾಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ವಿಮಾನ ಸಂಚಾರದಿಂದ ಅನುಕೂಲವಾಗಲಿದೆ ಎಂದರು.

ಬಿಜಾಪುರದಲ್ಲಿ ೭೨೭ ಎಕರೆ ಪ್ರದೇಶದಲ್ಲಿ ಸುಮಾರು ೨೬೦ ಕೋಟಿ ರೂ ವೆಚ್ಚದೊಂದಿಗೆ ಮಾರ್ಗ್ ಸಂಸ್ಥೆ ವಿಮಾನ ನಿಲ್ದಾಣವನ್ನು ನಿರ್ಮಿಸಲಿದೆ ಎಂದು ಅವರು ಇದೇ ಸಂಧರ್ಭದಲ್ಲಿ ವಿವರಿಸಿದರು.

ಬಿಜಾಪುರ ಜಿಲ್ಲೆಯಲ್ಲಿ ಕೈಗಾರಿಕೆ ಸೇರಿದಂತೆ ಯಾವುದೇ ಯೋಜನೆ ಬರಲಿ,ಅಗತ್ಯದ ಭೂಮಿ ಹಾಗೂ ನೀರು ಕೊಡುತ್ತೇವೆ ಎಂದ ಅವರು,ಸಧ್ಯದ ಮಟ್ಟಿಗೆ ಬಿಜಾಪುರ ಹಾಗೂ ಬಾಗಲಕೋಟೆ ಜಿಲ್ಲೆಗೆ ಪ್ರತೀ ವರ್ಷ ೨೦ ಸಾವಿರ ವಿದೇಶಿ ಪ್ರವಾಸಿಗರು,ಏಳು ಲಕ್ಷದಷ್ಟು ಸ್ವದೇಶಿ ಪ್ರವಾಸಿಗರು ಬರುತ್ತಿದ್ದಾರೆ.ವಿಮಾನ ನಿಲ್ದಾಣ ಹಾಗೂ ರೈಲ್ವೇ ಬ್ರಾಡ್‌ಗೇಜ್ ನಿರ್ಮಾಣದ ನಂತರ ಈ ಪ್ರಮಾಣ ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದರು.

ಇದೇ ಸಂಧರ್ಭದಲ್ಲಿ ಮಾರ್ಗ್ ಸಂಸ್ಥೆಯ ರೆಡ್ಡಿ ಹಾಗೂ ಸಂಸದ ರಮೇಶ್ ಜಿಗಜಿಣಗಿ ಯೋಜನೆಯ ಅನುಷ್ಟಾನದ ಬಗ್ಗೆ ಮಾತನಾಡಿದರು .

Share: