ಪವಿತ್ರ ಕುರ್ಆನ್ ಪೂರ್ಣಗೊಳಿಸಿದ ನಾಲ್ಕು ವರ್ಷದ ಬಾಲಕಿ
ಭಟ್ಕಳ: ೩೦, ಇಲ್ಲಿನ ಮಸ್ಜಿದ್ ಈಮಾನ್ ರಾತ್ರಿ ಶಾಲೆಯಲ್ಲಿ ಕುರ್ಆನ್ ಕಲಿಯುತ್ತಿದ್ದ ನಾಲ್ಕು ವರ್ಷದ ಬಾಲಕಿ ಫಾತಿಮಾ ಸಾನಿಯ ರಾವಿರಾರು ಪುಟಗಳ ಕುರ್ಆನ್ ಗ್ರಂಥವನ್ನು ಓದಿ ಮುಗಿಸಿದ್ದು ಇದಕ್ಕಾಗಿ ಮಸೀದಿ ಕಮಿಟಿಯು ಬಾಲಕಿಯನ್ನು ಅಭಿನಂದಿಸಿ ಬಹುಮಾನವನ್ನು ನೀಡಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಜಾಮಿಯ ಇಸ್ಲಾಮಿಯದ ಉಪನ್ಯಾಸಕ ಮೌಲ್ವಿ ಅಬ್ದುಲ್ ಅಲೀಮ್ ಖತೀಬ್ ನಾಲ್ಕು ವರ್ಷದ ಚಿಕ್ಕ ವಯಸ್ಸಿನಲ್ಲಿ ಸಾವಿರಾರು ಪುಟಗಳ ಗ್ರಂಥವನ್ನು ಓದಿ ಮುಗಿಸಿದ್ದು ಒಂದು ಚಮತ್ಕಾರವೇ ಆಗಿದ್ದು ಇದಕ್ಕಾಗಿ ಅವರು ಬಾಲಕಿಯ ಪಾಲಕರಿಗೆ ಅಭಿನಂದಿಸಿದರು. ಕುರ್ಆನ್ ಗ್ರಂಥವನ್ನು ಯಾರು ಸ್ವಚ್ಚ ಮನಸ್ಸಿನಿಂದ ಓದುತ್ತಾರೋ ಅವರಿಗೆ ಇದು ಸಂಪೂರ್ಣವಾಗಿ ಪ್ರಯೋಜನವನ್ನುಂಟು ಮಾಡುತ್ತದೆ. ಕೇವಲ ಅರಬಿ ಭಾಷೆಯಲ್ಲಿ ಇದನ್ನು ಓದದೆ ತಮ್ಮ ತಮ್ಮ ಮಾತೃಭಾಷೆಯಲ್ಲಿ ಅನುವಾದವನ್ನು ಓದಬೇಕೆಂದು ಸಲಹೆ ನೀಡಿ ದರು.
ಅಬ್ದುಲ್ಲಾ ಖತೀಬ್ ಮಸ್ಜಿದ್ ಕಮಿಟಿಯ ಪರವಾಗಿ ಬಾಲಕಿಯನ್ನು ಕಾಣಿಕೆಯನ್ನು ನೀಡುವುದರೊಂದಿಗೆ ಗೌರವಿಸಿದರು. ಅಲ್-ಈಮಾನ್ ಸ್ಪೋಟ್ಸ್ ಕ್ಲಬ್ ವತಿಯಿಂದ ನಾಹಿದ್ ಕೋಲಾ ಬಂಗಾರದ ಪೆಂಡೆಂಟ್ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಬಾಲಕಿಯನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮೊಹಲ್ಲದ ಪ್ರಮುಖರಾದ ಇಸ್ಮಾಯಿಲ್ ದಾಮುದಿ, ಶಿಂಗೇರಿ ಇಸ್ಮಾಯಿಲ್, ಮಸಿದಿಯ ಇಮಾಮ್ ಮೌಲ್ವಿ ಇಖ್ಬಾಲ್ ಅಬ್ದುಲ್ ಸುಭಾನ್ ಎಸ್.ಜೆ. ಮತ್ತಿತರರು ಉಪಸ್ಥಿತರಿದ್ದರು.