ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಚಿಕ್ಕಮಗಳೂರು: ವಿಷ್ಣುವರ್ಧನ್ ನಿಧನಕ್ಕೆ ಸಚಿವರ ಸಂತಾಪ

ಚಿಕ್ಕಮಗಳೂರು: ವಿಷ್ಣುವರ್ಧನ್ ನಿಧನಕ್ಕೆ ಸಚಿವರ ಸಂತಾಪ

Wed, 30 Dec 2009 18:02:00  Office Staff   S.O. News Service
ಪ್ರತ್ಯೇಕ ಪ್ರಕರಣ : ನೇಣು ಬಿಗಿದು ಇಬ್ಬರ ಆತ್ಮಹತ್ಯೆ 

ಚಿಕ್ಕಮಗಳೂರು, ಡಿಸೆಂಬರ್ 30: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೂಡಿಗೆರೆ ತಾಲ್ಲೂಕಿನ ಕಳಸದಲ್ಲಿ ಬುಧವಾರ ಸಂಭವಿಸಿದೆ. 
 
ಮೃತನನ್ನು ನಟೇಶ್ (೩೦) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಅತ್ಯಂತ ಬಡತನವಿದ್ದ ಕಾರಣ ಈತ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಸುಬ್ರಮಣ್ಯ ಎಂಬುವರು ಕಳಸ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. 
 
ಮತ್ತೊಂದು ಪ್ರಕರಣದಲ್ಲಿ ಹೆಂಡತಿಗೆ ವಿಪರೀತ ಕಾಯಿಲೆ ಇರುವುದರಿಂದ ಬೇಸರಗೊಂಡ ಪತಿ ದೇವಪ್ಪ (೪೫) ಎಂಬಾತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆಯು ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರು ಎಂಬಲ್ಲಿ ನಡೆದಿದೆ. 
 
ಈ ಕುರಿತು ಆಲ್ದೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದು ತನಿಖೆ ನಡೆಯುತ್ತಿದೆ.

ವಿಷ್ಣುವರ್ಧನ್ ನಿಧನಕ್ಕೆ ಸಚಿವರ ಸಂತಾಪ 

ಕನ್ನಡ ಚಲನ ಚಿತ್ರರಂಗದ ಅಪ್ರತಿಮ ನಟ ಸಾಹಸಸಿಂಹ ಡಾ|| ವಿಷ್ಣುವರ್ಧನ್ ನಿಧನಕ್ಕೆ ಇಂಧನ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಎಸ್.ಈಶ್ವರಪ್ಪ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.
 
ವಂಶವೃಕ್ಷ ಚಿತ್ರದ ಮೂಲಕ ನಾಯಕ ನಟರಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿ ಸುಮಾರು ೧೯೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿ ಜನಮನಸೂರೆಗೊಂಡ ಅಪ್ರತಿಮ ಕಲಾವಿದರಾಗಿದ್ದು ಜೊತೆಗೆ ಸರಳ, ಸಜ್ಜನಿಕೆಯ ವಿನಯವಂತ ಕಲಾವಿದರಾಗಿದ್ದು ಇವರ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಮ್ಮ ಶೋಕ ಸಂದೇಶದಲ್ಲಿ ಸಚಿವರು ತಿಳಿಸಿದ್ದಾರೆ.
 
ಮೃತರ ಅಗಲಿಕೆಯಿಂದಾದ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗದವರಿಗೆ ಭಗವಂತ ಕರುಣಿಸಲೆಂದು ಕೆ.ಎಸ್.ಈಶ್ವರಪ್ಪನವರು ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಜಿಲ್ಲೆಯಲ್ಲಿ ಜನವರಿ ೫ ರಿಂದ ಮಕ್ಕಳ ಗಣತಿ 

ಮುಂದಿನ ಸಾಲಿನ ಸಮಗ್ರ ಮಕ್ಕಳ ಗಣತಿ ಕಾರ್ಯವನ್ನು ಜನವರಿ ೫ ರಿಂದ ೮ರ ವರೆಗೆ ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಈ ಸಂದರ್ಭದಲ್ಲಿ ಪೂರ್ಣ ನಿಖರ ಮಾಹಿತಿ ನೀಡಿ ಸಹಕರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮನವಿ ಮಾಡಿದ್ದಾರೆ.
 
ಗಣತಿ ನಡೆಯುವ ದಿನಗಳಂದು ಸರ್ಕಾರಿ, ಅನುದಾನಿತ, ಅನುದಾನರಹಿತ, ಸಿ.ಬಿ.ಎಸ್.ಸಿ, ನವೋದಯ ಸೇರಿದಂತೆ ಎಲ್ಲಾ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಫ್ರೌಡಶಾಲೆಗಳ ಮಕ್ಕಳಿಗೆ ಕಡ್ಡಾಯವಾಗಿ ರಜೆ ಘೋಷಿಸಲು ಸೂಚಿಸಿದ್ದು ರಜೆ ಘೋಷಿಸದ ಶಾಲೆಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತದೆ. ಗಣತಿ ಕಾರ್ಯದಲ್ಲಿ ಶಿಕ್ಷಕರು ಪಾಲ್ಗೊಳ್ಳಬೇಕು.ಫ್ರೌಡಶಾಲೆ ಪದವಿಪೂರ್ವ ಕಾಲೇಜುಗಳಲ್ಲಿ ತತ್ಸಮಾನ ಸಂಸ್ಥೆಗಳು ಒಳಗೊಂಡಂತೆ ಹುಟ್ಟಿನಿಂದ ೧೮ ವರ್ಷ ವಯೋಮಿತಿಯೊಳಗಿನ ಗಣತಿ ಕಾರ್ಯಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ಶಾಲೆಗಳ ಎಸ್.ಡಿ.ಎಂ.ಸಿಗಳು, ಸಂಘಸಂಸ್ಥೆಗಳು, ಕಂದಾಯ, ಗಣಿ ಮತ್ತು ಭೂವಿeನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅಂಗವಿಕಲ ಕಲ್ಯಾಣ, ನಗರಾಭಿವೃದ್ಧಿ ಇಲಾಖೆ ಹಾಗೂ ಕಾರ್ಮಿಕ ಇಲಾಖೆಗಳು ಗಣತಿ ಕಾರ್ಯದಲ್ಲಿ ಶಿಕ್ಷಕರಿಗೆ ಸಹಕಾರ ನೀಡುವ ಮೂಲಕ ಗಣತಿಕಾರ್ಯವನ್ನು ಯಶಸ್ವಿಗೊಳಿಸುವಂತೆಯೂ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ. 


ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಹುದ್ದೆಗೆ ವೈದ್ಯರ ನೇರ ಸಂದರ್ಶನ 

ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಖಾಲಿ ಇರುವ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ವೈದ್ಯರ ಒಂದು ತಾತ್ಕಲಿಕ ಹುದ್ದೆಗೆ ಆಯ್ಕೆ ಮಾಡುವ ಸಲುವಾಗಿ ಜನವರಿ ೧೨ರಂದು ಬೆಳಿಗ್ಗೆ ೧೦ ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನೇರ ಸಂದರ್ಶನ ಕರೆಯಲಾಗಿದ್ದು ಬಿ.ಎನ್.ವೈ.ಎಸ್ ವಿದ್ಯಾರ್ಹತೆ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಲು ಕೋರಿದೆ.

ತಾತ್ಕಲಿಕವಾಗಿ ಒಂದು ವರ್ಷದ ಅವಧಿಗೆ ಅಥವಾ ಲೋಕಸೇವಾ ಆಯೋಗದಿಂದ ಈ ಹುದ್ದೆ ಭರ್ತಿಯಾಗುವವರೆಗೆ ಇವರೆಡರಲ್ಲಿ ಯಾವುದು ಮೊದಲೊ ಅಲ್ಲಿಯವರೆಗೆ ಗುತ್ತಿಗೆ [ಸಂಚಿತ ವೇತನ] ಆಧಾರದಲ್ಲಿ ಅಭ್ಯರ್ಥಿಗಳು ಕರ್ತವ್ಯ ನಿರ್ವಹಿಸಬೇಕಾಗುತ್ತದೆ.

ಆಸಕ್ತರು ವಿದ್ಯಾರ್ಹತೆ, ಹುಟ್ಟಿದ ದಿನಾಂಕದ ಪ್ರಮಾಣಪತ್ರ, ಭಾವಚಿತ್ರ ಇರುವ ಬಯೋಡೆಟಾ ಮತ್ತು ಅವಶ್ಯ ದಾಖಲೆಗಳ ಮೂಲ ಪ್ರತಿ ಹಾಗೂ ದೃಢೀಕೃತ ಜೆರಾಕ್ಸ್ ಪ್ರತಿಗಳೊಂದಿಗೆ ಹಾಜರಾಗುವಂತೆ ಜಿಲ್ಲಾ ಸರ್ಜನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಜಿಲ್ಲೆಯಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ ಶಿಬಿರಗಳು

ಜಿಲ್ಲಾ ಪ್ರಾದೇಶಿಕ ಸಾರಿಗೆ ಇಲಾಖೆವತಿಯಿಂದ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ೨೦೧೦ ನೇ ಸಾಲಿನಲ್ಲಿ ವಿವಿಧ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಪ್ರತಿ ಮಾಹೆಯಲ್ಲಿ ಶಿಬಿರಗಳನ್ನು ಕೆಳಗಿನಂತೆ ನಿಗದಿಗೊಳಿಸಲಾಗಿದೆ.

ಪ್ರತಿ ತಿಂಗಳ ೨ನೇ ತಾರೀಖಿನಂದು ಕೊಪ್ಪ, ೮ರಂದು ತರೀಕೆರೆ, ೧೨ ಹಾಗೂ ೨೩ರಂದು ಕಡೂರು, ೧೭ರಂದು ಶೃಂಗೇರಿ, ೨೦ ರಂದು ಕಳಸ ಮತ್ತು ಕುದುರೆಮುಖ, ೨೫ರಂದು ಮೂಡಿಗೆರೆಯಲ್ಲಿ ಶಿಬಿರಗಳು ನಡೆಯಲಿವೆ ಹಾಗೂ ಪ್ರತಿ ತಿಂಗಳ 29 ರಂದು ಬೆಳಿಗ್ಗೆ ೧೦ರಿಂದ ೧-೩೦ ಗಂಟೆಯವರೆಗೆ ಎನ್.ಆರ್.ಪುರದಲ್ಲಿ ಮಧ್ಯಾಹ್ನ ೦೨-೩೦ರಿಂದ ೦೫-೩೦ರ ವರೆಗೆ ಬಾಳೆಹೊನ್ನೂರಿನಲ್ಲಿ ನಡೆಯಲಿವೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share: