ಭಟ್ಕಳ, ಡಿಸೆಂಬರ್ 21: ಕಳೆದ ವಾರ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀಕಾಂತ್ ಎಲ್. ಘೋಟ್ನೇಕರ್ ೧೪೪೨ ಮತಗಳಿಸಿ ಜಯಗಳಿಸಿದ್ದಾರೆ. ತ್ರೀವ್ರ ಪೈಪೋಟಿ ನೀಡಿದ ಪಕ್ಷೇತರ ಅಭ್ಯರ್ಥಿ ಅನಿಲ್ ಕುಮಾರ್ ೧೦೪೪ ಮತಗಳನ್ನು ಪಡೆದಿದ್ದರೆ ಬಿಜೆಪಿಯ ವಿನೋದ್ ಪ್ರಭು ೫೦೪ ಮತ ಪಡೆದಿದ್ದಾರೆ. ಇನ್ನೋರ್ವ ಪಕ್ಷೇತರ ಅಭ್ಯರ್ಥಿ ಶಶಿಕಾಂತ್ ನಾಯಕ್ ಕೇವಲ ಇಪ್ಪತ್ತೈದು ಮತಗಳನ್ನು ಪಡೆದಿದ್ದಾರೆ.



ಈ ಸಂದರ್ಭದಲ್ಲಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಘೋಟ್ನೇಕರ್ ರವರ ವಿಜಯವನ್ನು ಪಟಾಕಿ ಸಿಡಿಸಿ ಘೋಷಿಸಿದರು. ಸುದ್ದಿ ತಿಳಿಯುತ್ತಿದ್ದಂತೆಯೇ ನಗರದ ಶಂಸುದ್ದೀನ್ ವೃತ್ತ ಹಾಗೂ ಇನ್ನಿತರ ಪ್ರಮುಖ ಪ್ರದೇಶಗಳಲ್ಲಿಯೂ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.
ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಕಾರ್ಯ ಮುಗಿದು, ಕಾಂಗ್ರೆಸ್ ಅಭ್ಯರ್ಥಿ ಎಸ್.ಎಲ್ ಘೋಟ್ನೇಕರ್ ಜಯಗಳಿಸುತ್ತಿದ್ದಂತೆಯೇ ಇಲ್ಲಿಯ ಕಾಂಗ್ರೆಸ್ ಕಾರ್ಯಕರ್ತರು ಸಂಶುದ್ಧೀನ್ ಸರ್ಕಲಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮವನ್ನು ಆಚರಿಸಿದರು. ಕಾಂಗ್ರೆಸ್ ಪಕ್ಷ ಹಾಗೂ ಅಭ್ಯರ್ಥಿ ಪರ ಘೋಷಣೆಗಳನ್ನು ಕೂಗಲಾಯಿತು.
ತಾಲೂಕು ಪಂಚಾಯತ ಸದಸ್ಯ ವಿಠ್ಠಲ್ ನಾಯ್ಕ, ಹೆಬಳೆ ಗ್ರಾಮಪಂಚಾಯತ ಉಪಾಧ್ಯಕ್ಷ ಮಹಾಬಲೇಶ್ವರ ನಾಯ್ಕ, ಟಿ.ಡಿ.ನಾಯ್ಕ, ವೆಂಕಟ್ರಮಣ ನಾಯ್ಕ, ಈಶ್ವರ ನಾಯ್ಕ, ಜಾಲಿ ಗ್ರಾಮಪಂಚಾಯತ ಸದಸ್ಯ ಸುಲೇಮಾನ್ ಮತ್ತಿತರರು ಹರ್ಷಾಚಣೆಯಯಲ್ಲಿ ಪಾಲ್ಗೊಂಡರು.