ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮಂಗಳೂರು: ರಾಜ್ಯ ಬಿಜೆಪಿ ಆಡಳಿತದಲ್ಲಿ ವಿಫಲ - ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

ಮಂಗಳೂರು: ರಾಜ್ಯ ಬಿಜೆಪಿ ಆಡಳಿತದಲ್ಲಿ ವಿಫಲ - ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

Sat, 03 Oct 2009 02:34:00  Office Staff   S.O. News Service
ಮಂಗಳೂರು, ಅ.2: ರಾಜ್ಯ ಬಿಜೆಪಿ ಸರಕಾರ ಎಲ್ಲ ಹಂತದಲ್ಲೂ ವೈಫಲ್ಯ ಗಳನ್ನು ಕಂಡಿದ್ದು, ಇದರಿಂದ ಜನರು ಭ್ರಮನಿರಸನ ಹೊಂದಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಮಾನಾಥ ರೈ ಹೇಳಿದರು.

ನಗರದ ಪುರಭವನದ ಎದುರಿನ ಗಾಂಧಿ ಪಾರ್ಕ್‌ನಲ್ಲಿ ಜಿಲ್ಲಾ ಕಾಂಗ್ರೆಸ್, ಯುವ ಕಾಂಗ್ರೆಸ್ ಮತ್ತು ಮಹಿಳಾ ಕಾಂಗ್ರೆಸ್ ಸಂಯುಕ್ತವಾಗಿ ರಾಜ್ಯ ಸರಕಾರದ ಜನವಿರೋಧಿ ನೀತಿಯ ವಿರುದ್ಧ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ನಾಗಾರ್ಜುನದಂತಹ ಮಾರಕ ಯೋಜನೆಗಳಿಗೆ ಮಂಗಳೂರು ಮಹಾನಗರ ಪಾಲಿಕೆಯ ನೀರನ್ನು ಬಿಡಲು ನಿರ್ಧರಿಸುವುದರೊಂದಿಗೆ ನಗರದ ಜನರಿಗೆ ರಾಜ್ಯ ಸರಕಾರ ಅನ್ಯಾಯ ಎಸಗಿದೆಯಲ್ಲದೆ, ರಾಜ್ಯದಲ್ಲಿ ತೀವ್ರ ಅತಿವೃಷ್ಟಿ ಉಂಟಾಗಿ ಜನರು ಸಂಕಷ್ಟದಲ್ಲಿರುವಾಗ ರಾಜ್ಯದ ಸಚಿವರು ಯೋಗ, ಧ್ಯಾನದ ಹೆಸರಲ್ಲಿ ಮೋಜು ಮಾಡುತ್ತಿದ್ದಾರೆ. ಇದರ ವಿರುದ್ಧ ಸೊಲ್ಲೆತ್ತಿದರೆ, ಕಾಂಗೆಸ್ ಪಕ್ಷವನ್ನು ಜರಿದು, ಕೇಂದ್ರ  ಸರಕಾರ ತಾರತಮ್ಯ ಮಾಡುತ್ತಿದೆ ಎಂದು ಆಪಾದಿಸುತ್ತಿದ್ದಾರೆ. ರಾಜ್ಯದ ಪ್ರತೀ ಕ್ಷೇತ್ರಕ್ಕೆ ೧.೫೦ ಕೋಟಿ ರೂ.  ಬಿಡುಗಡೆ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಕನಿಷ್ಠ ೨೦ ಲಕ್ಷ ರೂ.ವನ್ನೂ ಬಿಡುಗಡೆ ಮಾಡಿಲ್ಲ ಎಂದು ರಮಾನಾಥ ರೈ ದೂರಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಅರುಣ್ ಕುವೆಲ್ಲೋ, ಮಮತಾ ಗಟ್ಟಿ, ಇಬ್ರಾಹಿಂ ಕೋಡಿಜಾಲ್, ಐವನ್ ಡಿಸೋಜ ಮತ್ತಿತರರು ಪಾಲ್ಗೊಂಡಿದ್ದರು

Share: