ಸಕಲೇಶಪುರ, ಜನವರಿ 1: ಅಕಾಲಿಕ ಮಳೆಯಿಂದ ಮಲೆನಾಡು ಭಾಗದ ರೈತರು ಭಾರೀ ಪ್ರಮಾಣದ ಬೆಳೆ ನಷ್ಟ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದ್ದು, ಕೇಂದ್ರ ಸರಕಾರ ಇವರ ನೆರವಿಗೆ ಬರುವಂತೆ ಪಕ್ಷದ ವತಿಯಿಂದ ಮನವಿ ಮಾಡಿಕೊಳ್ಳುವುದಾಗಿ ಕಾಂಗ್ರೆಸ್ ಮುಖಂಡ ಬಿ.ಶಿವರಾಂ ಹೇಳಿದರು.
ತಾಲೂಕಿ ಬಾಗೆ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಪಕ್ಷದ ಕಿಸಾನ್ ಮತ್ತು ಕೃಷಿ ಕಾರ್ಮಿಕ ಸಂಘಟನೆಯ ತಾಲೂಕು ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ಭಾಗದಲ್ಲಿ ತಲೆದೊರಿದ ಅತಿವೃಷ್ಟಿ ಹಾಗೂ ಅನಾವೃಷ್ಟಿ ಪರಿಸ್ಥಿತಿ ಮತ್ತು ಕಾಫಿ ಬೆಲೆ ಕುಸಿತದಿಂದ, ರೈತರು ಹಾಗೂ ಕಾರ್ಮಿಕರು ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಇದರ ಜೊತೆಗೆ ಇತ್ತೀಚೆಗೆ ಬೀಳುತ್ತಿರುವ ಅಕಾಲಿಕ ಮಳೆ ಕೂಡ ಈ ಭಾಗದ ಎಲ್ಲಾ ಬೆಳೆಗಳ ಭಾರೀ ನಷ್ಟ ಉಂಟುಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಜ್ಯ ಸರಕಾರ ಕೂಡಲೆ ಕೃಷಿಕರು ಹಾಗೂ ಕಾರ್ಮಿಕರ ನೆರವಿಗೆ ಬರಬೇಕು. ತಮ್ಮ ಪಕ್ಷದ ಸರಕಾರ ಕೇಂದ್ರದಲ್ಲಿರುವುದರಿಂದ ಈ ಭಾಗದ ಜನರಿಗೆ ಕೇಂದ್ರದಿಂದ ನೆರವು ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು.
ಬಿ.ಬಿ.ನಿಂಗಯ್ಯ ಮಾತನಾಡಿ, ತಾವು ಆಲೂರು-ಸಕಲೇಶಪುರ-ಕಟ್ಟಾಯ ಕ್ಷೇತ್ರದಲ್ಲಿ ಪಕ್ಷದ ಬಲವರ್ಧನೆಗೊಸ್ಕರ ದುಡಿಯಲು ತಾವು ನಿರ್ಧರಿಸಿ ಕಾರ್ಯನಿರ್ವಹಿಸುತ್ತಿದ್ದು, ಪಟ್ಟಣದಲ್ಲಿ ವಾಸ್ತವ್ಯ ಹೂಡಿರುವುದಾಗಿ ಹೇಳಿದರು. ಇನ್ನು ಮುಂದೆ ಇದೇ ಕ್ಷೇತ್ರದ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂಧಿಸಿ ಒಡನಾಟ ಬೆಳೆಸಿಕೊಳ್ಳಲು ನಿರ್ಧರಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ತೆಂಗು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕಬ್ಬಳ್ಳಿ ರಂಗೇಗೌಡ, ಕಿಸಾನ್ ಮತ್ತು ಕೃಷಿ ಕಾರ್ಮಿಕ ಘಟಕದ ಮುನಿಸ್ವಾಮಿ, ಇದೇ ಘಟನಕದ ಜಿಲ್ಲಾ ಅಧ್ಯಕ್ಷ ಶಿವು, ಕಾಫಿ ಮಂಡಳಿ ಸದಸ್ಯ ಬಾಲರಾಜ್, ಪಕ್ಷದ ಮುಖಂಡ ಬಿ.ಎ.ಜಗನ್ನಾಥ್, ಎಚ್.ಪಿ.ಮೋಹನ್, ಕೆ.ಬಿ.ಚಂದ್ರು, ರೆಹಮತ್ತುಲ್ಲಾ, ಶಬ್ಬೀರ್ ಜಾನ್, ಎಚ್.ಕೆ,ಮಹೇಶ್, ಮರ್ಕುಲಿ ಗೊಪಾಲೆಗೌಡ, ವೈ.ಪಿ.ರಾಜೇಗೌಡ ಇನ್ನೂ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.