ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ತುಮಕೂರು: ಮಹಾನಗರಪಾಲಿಕೆಯಾಗಿ ತುಮಕೂರು ಮುನಿಸಿಪಾಲಿಟಿ - 2011 ಮಾರ್ಚ್ ವರೆಗೆ ಕಾರ್ಯಾಚರಣೆ ಸ್ತಬ್ಧ

ತುಮಕೂರು: ಮಹಾನಗರಪಾಲಿಕೆಯಾಗಿ ತುಮಕೂರು ಮುನಿಸಿಪಾಲಿಟಿ - 2011 ಮಾರ್ಚ್ ವರೆಗೆ ಕಾರ್ಯಾಚರಣೆ ಸ್ತಬ್ಧ

Tue, 19 Jan 2010 02:26:00  Office Staff   S.O. News Service
ತುಮಕೂರು,ಜನವರಿ 19: ಬಹುನಿರೀಕ್ಷಿತ ತುಮಕೂರು ನಗರಸಭೆ ಮಹಾನಗರ ಪಾಲಿಕೆಯಾಗಿ ಪರಿವರ್ತನೆಯಾಗುವ ತ್ವರಿತ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ತಣ್ಣೀರೆರಚಿದ್ದು, ಇದಕ್ಕಾಗಿ ಬರುವ 2011 ರ ಮಾರ್ಚ್ ಅಂತ್ಯದವರೆಗೆ ಕಾಯಬೇಕಾದ ಅನಿವಾರ್ಯ ಪರಿಸ್ಧಿತಿ ಸೃಷ್ಟಿಯಾಗಿದೆ.

ರಾಜ್ಯ ಸರ್ಕಾರ ತರಾತುರಿಯಲ್ಲಿ ಗ್ರಾಮೀಣ ಪಂಚಾಯತ್‌ಗಳನ್ನು ಕಡಿಮೆಗೊಳಿಸಿ ನಗರ ಸ್ಧಳೀಯ ಸಂಸ್ಧೆಗಳನ್ನು ಹೆಚ್ಚಿಸಲು ಹೊರಟಿದ್ದ ಎಲ್ಲಾ ಕಾರ್ಯಗಳಿಗೂ ಇನ್ನೊಂದು ವರ್ಷ ಕೇಂದ್ರ ಸರ್ಕಾರ ವಿರಾಮ ಹಾಕಿದೆ. ಹಾಗಾಗಿ ಅಲ್ಲಿಯವರೆವಿಗೆ ಗ್ರಾಮಗಳು ಗ್ರಾಮಗಳಾಗಿ, ನಗರ ಪ್ರದೇಶಗಳು ನಗರ ಪ್ರದೇಶಗಳಾಗಿಯೇ ಉಳಿಯಲಿವೆ. 

ಗ್ರಾಮ ಪಂಚಾಯತ್‌ಗಳನ್ನು ಪಟ್ಟಣ ಪಂಚಾಯತ್‌ಗಳನ್ನಾಗಿ, ಪಟ್ಟಣ ಪಂಚಾಯತ್‌ಗಳನ್ನು ಪುರಸಭೆಗಳನ್ನಾಗಿ, ಪುರಸಭೆಗಳನ್ನು ನಗರಸಭೆಗಳನ್ನಾಗಿ ಮಾರ್ಪಡಿಸುವ ಪ್ರಕ್ರಿಯೆಯ ಜೊತೆಗೆ ಹೊಸ ಜಿಲ್ಲೆ, ತಾಲ್ಲೂಕುಗಳ ರಚನೆ, ಉಪವಿಭಾಗಗಳ ವಿಂಗಡಣಾ ಪ್ರಕ್ರಿಯೆಗೂ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ. 

ಇದಕ್ಕೇಲ್ಲಾ ಮೂಲ ಕಾರಣ, ಹೊಸದಾಗಿ ನಡೆಸಬೇಕಿರುವ ಜನಗಣತಿ ಅಡ್ಡಿಯಾಗಿದೆ. ಬರುವ ೨೦೧೧ ರ ಜನಗಣತಿ ಪೂರ್ಣಗೊಳ್ಳುವವರೆಗೆ ರಾಜ್ಯದ ಯಾವುದೇ ನಗರ ಸ್ಧಳೀಯ ಸಂಸ್ಧೆಗಳು, ಗ್ರಾಮ ಪಂಚಾಯತ್‌ಗಳು, ಜಿಲ್ಲೆ, ತಾಲ್ಲೂಕುಗಳ ವಿಂಗಡಣೆಯನ್ನೂ ನಡೆಸುವಂತಿಲ್ಲ ಎಂದು ಕೇಂದ್ರ ಗೃಹ ವ್ಯವಹಾರಗಳ ರಿಜಿಸ್ಟಾರ್ ಜನರಲ್ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ನಿರ್ದೇಶನ ನೀಡಿದ್ದಾರೆ. 

ಕಳೆದ ವರ್ಷದ ಸೆಪ್ಟಂಬರ್ ೨೨ ರಂದೇ ರಿಜಿಸ್ಟಾರ್ ಜನರಲ್ ಅವರು ರಾಜ್ಯದ ಮುಖ್ಯಕಾರ್ಯದರ್ಶಿ ಹಾಗೂ ರಾಜ್ಯದಲ್ಲಿ ಜನಗಣತಿ ನಡೆಸುವ ಜನಗಣತಿ ನಿರ್ದೇಶಕರಿಗೆ ಈ ಸಂಬಂಧ ಸೂಚನೆ ನೀಡಿದ್ದಾರೆ. ಆ ನಂತರ ರಾಜ್ಯದ ಮುಖ್ಯಕಾರ್ಯದರ್ಶಿ ಅಕ್ಟೋಬರ್ ೧೫ ರಂದು ಜನಗಣತಿ ನಿರ್ದೇಶಕರು ಸೇರಿದಂತೆ ಕಂದಾಯ, ನಗರಾಭಿವೃದ್ಧಿ ಸೇರಿದಂತೆ ಎಲ್ಲಾ ಇಲಾಖೆಗಳಿಗೂ ಈ ಕುರಿತು ಸೂಚನೆ ರವಾನಿಸಿದ್ದಾರೆ. 

ಕೇಂದ್ರದ ನಿರ್ದೇಶನದಂತೆ ೨೦೦೯ ರ ಡಿಸೆಂಬರ್ ೩೧ ಕ್ಕೆ ಅನ್ವಯವಾಗುವಂತೆ ರಾಜ್ಯದ ಯಾವುದೇ ಪ್ರದೇಶಗಳ ಗಡಿಯನ್ನು ಬದಲಿಸುವಂತಿಲ್ಲ. ೨೦೧೦ ರ ಜನವರಿ ಒಂದರಿಂದ ಯಥಾಸ್ಧಿತಿ ಕಾಪಾಡಬೇಕಿದೆ. ಸೀಮಾರೇಖೆ ಬದಲಾವಣೆ ಮಾಡುವಂತಿದ್ದರೆ ಅದು ಬರುವ ೨೦೧೧ ರ ಮಾರ್ಚ್ ನಂತರವೇ ಎಂದು ಸ್ಪಷ್ಟವಾಗಿ ಹೇಳಿದೆ. 

ಇದೇ ಉದ್ದೇಶದಿಂದಲೇ ರಾಜ್ಯ ಸರ್ಕಾರ ತರಾತುರಿಯಲ್ಲಿ ಗುಲ್ಬರ್ಗಾ ಜಿಲ್ಲೆಯನ್ನು ವಿಭಜಿಸಿ ಯಾದಗೀರ್ ಜಿಲ್ಲೆಯನ್ನು ರಚಿಸಿತು. ಹಾಗಾಗಿ ಡಿಸೆಂಬರ್‌ಗೆ ಮುನ್ನವೇ ಯಾದಗೀರ್ ಜಿಲ್ಲೆ ರಚನೆಯಾಗಿ ಅಸ್ಧಿತ್ವಕ್ಕೂ ಕೂಡ ಬಂತು. ಜಿಲ್ಲಾ ಕೇಂದ್ರ ಈಗ ಆರಂಭವನ್ನೂ ಮಾಡಿದೆ ಎಂಬುದು ಉಲ್ಲೇಖನೀಯ. 

ಈಗ ಯಾದಗೀರ್ ಜಿಲ್ಲೆ ಹೊರತುಪಡಿಸಿ ಬೇರೆ ಯಾವುದೇ ಬದಲಾವಣೆ ಸದ್ಯಕ್ಕಿಲ್ಲ. ತುಮಕೂರು ನಗರ ಸಭೆ  ಮುಂದಿನ ಮೂರು ತಿಂಗಳ ಅವಧಿಯಲ್ಲಿ ಅಸ್ಧಿತ್ವಕ್ಕೆ ತರಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆಯಾದರೂ ಅದು ಸಾಕಾರಗೊಳ್ಳಲು ಕಾಯಲೇಬೇಕು. 

ರಾಜ್ಯ ಸಚಿವ ಸಂಪುಟದಲ್ಲಿ ಕೈಗೊಂಡ ನಿರ್ಧಾರ ಬರುವ ಮಾರ್ಚ್ ಅಂತ್ಯದ ವರೆವಿಗೂ ಕಾಗದದಲ್ಲೇ ಉಳಿಯಲಿದೆ. ಮಹಾನಗರ ಪಾಲಿಕೆಯಾಗಿ ಪರಿವರ್ತನೆಯಾದರೆ ತಮ್ಮ ಅವಧಿಗೆ ಸಂಚಾಕಾರ ಬರಲಿದೆ ಎಂಬ ತುಮಕೂರು ನಗರ ಸಭೆ ಸದಸ್ಯರ ಆತಂಕವೂ ಕೂಡ ಇದೀಗ ಇದರಿಂದಾಗಿ ದೂರಾಗಿದೆ. ಇನ್ನೊಂದು ವರ್ಷ ಅವರ ಸದಸ್ಯತ್ವಕ್ಕೆ ಯಾವುದೇ ರೀತಿಯಲ್ಲೂ ಬಾಧಕವಿಲ್ಲ ಎಂದು ನಗರಾಭಿವೃದ್ಧಿ ಇಲಾಖೆಯ ಮೂಲಗಳು ಸ್ಪಷ್ಟಪಡಿಸಿದೆ. 

ರಾಜ್ಯದ ಯಾವುದೇ ಗಡಿಯನ್ನು ಬದಲಿಸಬಾರದು ಎಂದು ರಾಜ್ಯದ ಕಂದಾಯ ಇಲಾಖೆ ೨೦೦೯ ರ ಡಿಸೆಂಬರ್ ೨೪ ರಂದು ಆದೇಶ ಹೊರಡಿಸಿ ಯಥಾಸ್ಧಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ. ಇದರಿಂದಾಗಿ ಎಲ್ಲಾ ಪ್ರಕ್ರಿಯೆಗಳು ನೆನೆಗುದಿಗೆ ಬೀಳುವಂತಾಗಿದೆ. 

ತುಮಕೂರು ನಗರ ಸಭೆ ವ್ಯಾಪ್ತಿಗೆ ಗ್ರಾಮ ಪಂಚಾಯತ್‌ಗಳನ್ನೂ ಕೂಡ  ಸೇರಿಸಲು ಇದು ಅಡ್ಡಿಯಾಗಿ ಪರಿಣಮಿಸಿದೆ. ಮಹಾನಗರ ಪಾಲಿಕೆಯ ವಾರ್ಡ್‌ಗಳ ವಿಂಗಡಣೆ ಕೂಡ ಸಾಧ್ಯವಿಲ್ಲ ಎನ್ನುವಂತಾಗಿದೆ. 

ಅಲ್ಲದೇ ತುಮಕೂರು ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಪರಿವರ್ತಿಸಲು ಕನಿಷ್ಠ ೩ ಲಕ್ಷ ಜನಸಂಖ್ಯೆಯಿರಬೇಕು. ಆದರೆ ಇದನ್ನು ಅಳೆಯಬೇಕಾದ ಮಾನದಂಡ ಕೂಡ ಪ್ರಶ್ನಾರ್ಥಕವಾಗಿದೆ. ಬರುವ ವರ್ಷದ ಜನಗಣತಿ ಆದ ನಂತರವೇ ಮಹಾನಗರ ಪಾಲಿಕೆಯನ್ನಾಗಿ ಮಾಡುವ ಪ್ರಕ್ರಿಯೆ ನಡೆಸಬೇಕೆಂದು ನಗರಾಭಿವೃದ್ಧಿ ಇಲಾಖೆಯೂ ಕೂಡ ಸರ್ಕಾರಕ್ಕೆ ಸಲಹೆ ನೀಡಿತ್ತು. ಆದರೂ ಸರ್ಕಾರ ತರಾತುರಿಯಲ್ಲಿ ತೀರ್ಮಾನ ಕೈಗೊಂಡಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. 

ಇದರ ಜೊತೆಗೆ ರಾಜ್ಯದ ೯೪ ಸ್ಧಳೀಯ ಸಂಸ್ಧೆಗಳನ್ನು ಮೇಲ್ದರ್ಜೆಗೇರಿಸಲು ಪ್ರಕ್ರಿಯೆಯನ್ನು ಬಹುತೇಕ ಅಂತಿಮಗೊಳಿಸಿತ್ತು. ಇದರಲ್ಲಿ ಗ್ರಾಮ ಪಂಚಾಯತ್‌ಗಳನ್ನು ಪಟ್ಟಣ ಪಂಚಾಯತ್‌ಗಳನ್ನಾಗಿ, ಪಟ್ಟಣ ಪಂಚಾಯತ್‌ಗಳನ್ನು ಪುರಸಭೆಗಳನ್ನಾಗಿ ಮಾರ್ಪಡಿಸಲು ಸರ್ಕಾರ ಪಟ್ಟಿಯನ್ನೂ ಕೂಡ ಸಿದ್ಧಪಡಿಸಿ ಅಂತಿಮ ರೂಪ ನೀಡಲು ಸಿದ್ಧತೆ ನಡೆಸಿತ್ತು. ಇದಕ್ಕೂ ಈಗ ಕಾರ್ಮೋಡ ಕವಿದಿದೆ. 

ಹೊಸದಾಗಿ ತಾಲ್ಲೂಕುಗಳನ್ನು ರಚಿಸುವ ಕೆಲಸ ಹೆಚ್ಚು ಕಡಿಮೆ ಪೂರ್ಣಗೊಂಡಿತ್ತು. ಆದರೆ ಇದಕ್ಕೆ ವ್ಯಕ್ತವಾದ ತೀವ್ರ ವಿರೋಧದಿಂದಾಗಿ ಸರ್ಕಾರ ಮೀನಾಮೇಷ ಎಣಿಸುತ್ತಿತ್ತು. ಇದಕ್ಕಾಗಿ ಸಮಿತಿಯನ್ನೂ ಕೂಡ ಸರ್ಕಾರ ರಚಿಸಿತ್ತು. 

ಆಡಳಿತದ ಹಿತದೃಷ್ಟಿಯಿಂದ ಪರಸ್ಪರ ಒಮ್ಮತಾಭಿಪ್ರಾಯ ಮೂಡಿಸಿ ಹೊಸ ತಾಲ್ಲೂಕಗಳನ್ನು ರಚಿಸಲು ಸರ್ಕಾರಕ್ಕೆ ಇನ್ನೂ ಒಂದು ವರ್ಷ ಕಾಲಾವಕಾಶ ದೊರೆತಿದೆ. ಇದೇ ರೀತಿ ಉಪವಿಭಾಗಗಳ ವಿಂಗಡಣೆಯೂ ಸದ್ಯಕ್ಕಿಲ್ಲ ಎನ್ನುವಂತಾಗಿದೆ. 















Share: