ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ದಾವಣಗೆರೆ: ಚಳುವಳಿ ನಿರತ ರೈತ-ಕಾರ್ಮಿಕರ ಮೇಲೆ ಬಿಜೆಪಿ ಸರ್ಕಾರದ ದಬ್ಬಾಳಿಕೆ ಹೆಚ್ಚಳ

ದಾವಣಗೆರೆ: ಚಳುವಳಿ ನಿರತ ರೈತ-ಕಾರ್ಮಿಕರ ಮೇಲೆ ಬಿಜೆಪಿ ಸರ್ಕಾರದ ದಬ್ಬಾಳಿಕೆ ಹೆಚ್ಚಳ

Tue, 26 Jan 2010 03:02:00  Office Staff   S.O. News Service

ತಮ್ಮ ಹಕ್ಕುಗಳಿಗಾಗಿ ಚಳುವಳಿ ನಡೆಸುತ್ತಿರುವ ರೈತರು, ಕಾರ್ಮಿಕರು ಮತ್ತಿತರ ಜನ ವಿಭಾಗದ ಮೇಲೆ ಬಿಜೆಪಿ ಸರ್ಕಾರದ ಪೊಲೀಸರ ಹಾಗೂ ಚುನಾಯಿತ ಪ್ರತಿನಿಧಿಗಳ ದಬ್ಬಾಳಿಕೆ ದಿನೇ ದಿನೇ ಹೆಚ್ಚುತ್ತಿದ್ದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)ದ ರಾಜ್ಯ ಕಾರ್ಯದರ್ಶಿ ಮಂಡಳಿ ತೀವ್ರವಾಗಿ ಖಂಡಿಸಿದೆ.

ರೈತರ ಮೇಲೆ :
ದಾವಣಗೆರೆ ಜಿಲ್ಲೆಯ ಭಾತಿ ಗ್ರಾಮದಲ್ಲಿ 180 ಎಕರೆ ಭೂಮಿಯನ್ನು ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರವು ವಶಪಡಿಸಿಕೊಳ್ಳುವುದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ 144 ಜನರನ್ನು ಪೋಲಿಸರು ಬಂಧಿಸಿ ಬಳ್ಳಾರಿ, ಧಾರವಾಡ ಮತ್ತು ಚಿತ್ರದುರ್ಗ ಕಾರಾಗೃಹಕ್ಕೆ ಕಳುಹಿಸಿರುವುದು ಹೇಯ ಕೃತ್ಯವಾಗಿದೆ. ಇದೂ ಸಾಲದೆಂಬಂತೆ ಅನಾರೋಗ್ಯದಿಂದ ಬಳಲುತ್ತಿದ್ದ ರೈತ ರಾಜೇಸಾಬ್ ರವರನ್ನು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಕ್ರಿಮಿನಲ್ ಆಪಾದನೆಗೆ ಒಳಗಾಗಿದ್ದವನೊಂದಿಗೆ ಕೋಳ ತೊಡಿಸಿ ಅವಮಾನ ಮಾಡಲಾಗಿದೆ. ಹಿಂದೆ ಬಿಜೆಪಿ ಸರ್ಕಾರದ ಕೋಮುವಾದಿ ನೀತಿಯನ್ನು ವಿರೋಧಿಸಿದ ಕರಾವಳಿ ಪತ್ರಿಕೆಯ ವ್ಯವಸ್ಥಾಪಕರಾದ ಬಿ.ವಿ.ಸೀತಾರಾಂ ಅವರಿಗೂ ಕೈಕೋಳ ತೊಡಿಸಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು.  ಪ್ರಜಾಸತ್ತಾತ್ಮಕವಾಗಿ ಪ್ರತಿಭಟಿಸುವವರಿಗೆ ಕೈಕೋಳ ತೊಡಿಸುವುದು ಫ್ಯಾಸಿಸ್ಟ್ ನೀತಿಯ ಸಂಕೇತವಾಗಿದೆ.

ಇದಲ್ಲದೆ ಬೆಂಗಳೂರಿನಲ್ಲಿ ಖಾಸಗಿ ನೈಸ್ ರಸ್ತೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರಕ್ಕಾಗಿ ಹೋರಾಟ ನಿರತರ ಮೇಲೆ ಲಾಠಿ ಪ್ರಹಾರ ಮಾಡಲಾಗಿದೆ. ಸಿಪಿಐ(ಎಂ)ನ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಹಾಗೂ ಕೆಪಿಆರ್ ಎಸ್ ಮುಖಂಡ ವೆಂಕಟಾಚಲಯ್ಯ ಹಾಗೂ ಕೆಪಿಆರ್ ಎಸ್ ಮತ್ತು ಜೆಡಿ(ಎಸ್) ಗೆ ಸೇರಿದ ಹಲವರು ಬಂಧಿಸಲ್ಪಟ್ಟಿದ್ದಾರೆ. ಬಳ್ಳಾರಿ ಜಿಲ್ಲೆಯ ಚಾಗನೂರು-ಸಿರಿವಾರ ಪ್ರದೇಶದಲ್ಲಿ 1000 ಎಕರೆ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳಲು ಪ್ರತಿಭಟಿಸುತ್ತಿದ್ದ ರೈತರ ಮೇಲೆ ಇತ್ತೀಚೆಗಷ್ಟೆ ಪೋಲಿಸ್ ಮೊಕದ್ದಮೆಗಳು, ಬಂಧನಗಳು ನಡೆದಿವೆ. ಚಾಮರಾಜನಗರದಲ್ಲಿ ಕಬ್ಬಿನ ಬೆಳೆಗೆ ಸೂಕ್ತ ಬೆಲೆ ನೀಡಬೇಕೆಂದು ಒತ್ತಾಯಿಸುತ್ತಿದ್ದ ರೈತರ ಮೇಲೆ ಸ್ವತಃ ಜಿಲ್ಲಾಧಿಕಾರಿಯೇ ಲಾಠಿ ಹಿಡಿದು ನಿಂತು ಪೋಲಿಸರಿಂದ ಲಾಠಿ ಚಾರ್ಜ್ ಮಾಡಿಸಿದ್ದಾರೆ.

ಕಾರ್ಮಿಕರ ಮೇಲೆ : ಸೆಪ್ಟಂಬರ್ ತಿಂಗಳಲ್ಲಿ ಸಿಐಟಿಯು ನೇತೃತ್ವದ ಅಸಂಘಟಿತ ಕಾರ್ಮಿಕರ ಮೇಲೆ ಗುಲ್ಬರ್ಗ, ರಾಯಚೂರು, ಹಾಸನಗಳಲ್ಲಿ ಪೋಲಿಸ್ ದೌರ್ಜನ್ಯ ನಡೆಸಿದ ಬಿಜೆಪಿ ಸರ್ಕಾರ ಕನಿಷ್ಟ ವೇತನವನ್ನು ಇನ್ನೂ ನಿಗದಿಗೊಳಿಸಿಲ್ಲ. 06.01.2010 ರಂದು ಬೆಂಗಳೂರಿನಲ್ಲಿ ಕಾರ್ಖಾನೆ ಮುಚ್ಚಿರುವುದರ ವಿರುದ್ಧ ಧರಣಿ ನಡೆಸುತ್ತಿದ್ದ ಕೊನೆಗಾ ಇಂಟರ್ ನ್ಯಾಷನಲ್ನ ಮಹಿಳಾ ಕಾರ್ಮಿಕರನ್ನು ಬಂಧಿಸಲಾಗಿದೆ. ಆಶ್ಚರ್ಯವೆಂದರೆ, ಸ್ವತಃ ಕಾರ್ಮಿಕ ಮಂತ್ರಿ ಬಚ್ಚೇಗೌಡರೇ ಮಾತುಕತೆಗೆ ಕರೆದಿದ್ದು, ನಂತರ ಮಾತುಕತೆ ನಡೆಸದೇ ಏಕಾಏಕಿ ಮಹಿಳಾ ಕಾರ್ಮಿಕರನ್ನು ಬಂಧಿಸಿದ್ದು ತೀರಾ ಖಂಡನೀಯ.

ಮುಚ್ಚಿರುವ ಕೊನೆಗಾ ಇಂಟರ್ ನ್ಯಾಷನಲ್ ಕಾರ್ಖಾನೆಯನ್ನು ತೆರೆಯಬೇಕು ಹಾಗೂ 4-5 ತಿಂಗಳುಗಳಿಂದ ವೇತನವಿಲ್ಲದ ನೌಕರರಿಗೆ ಪರಿಹಾರ ನೀಡಬೇಕೆಂದು ಸಿಪಿಐ(ಎಂ) ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ.

ಗುಲ್ಬರ್ಗದಲ್ಲಿ ಸಿಐಟಿಯುಗೆ ಸಂಯೋಜಿತಗೊಂಡಿರುವ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಮುಖಂಡರಾದ ಈರಮ್ಮ, ಮಾನಂದ ಮೊದಲಾದ ಮಹಿಳೆಯರ ಮೇಲೆ ಮಹಿಳಾ ಬಿಜೆಪಿಗೆ ಸೇರಿದ ಕಾರ್ಪೋರೇಟರ್ ಜಯಶ್ರೀ ವಾಡೇಕರ್ ಹಾಗೂ ಆಕೆಯ ಗಂಡ ಮಹೇಶ್ ವಾಡೇಕರ್ ತೀವ್ರವಾಗಿ ಥಳಿಸಿದ್ದು ಮಾತ್ರವಲ್ಲದೆ, ಪೋಲಿಸರಿಗೆ ದೂರು ನೀಡಲು ಅವಕಾಶ ನೀಡಲಿಲ್ಲ ಬದಲಾಗಿ ಅಸ್ಪೃಶ್ಯತಾ ಕಾಯಿದೆಯಡಿ ಪ್ರತಿದೂರನ್ನು ನೀಡಿರುತ್ತಾರೆ.

ವಿದ್ಯಾರ್ಥಿಗಳ ಮೇಲೆ : ಹಾವೇರಿ ಜಿಲ್ಲೆಯಲ್ಲಿ ದಲಿತ, ಹಿಂದುಳಿದ ಹಾಸ್ಟೆಲ್ಗಳಲ್ಲಿರುವ ವಿದ್ಯಾರ್ಥಿಗಳು ಊಟ ಹಾಗೂ ಇತರೆ ಸೌಲಭ್ಯಗಳಿಂದ ವಂಚಿತರಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರಿಂದ ಸಿಟ್ಟುಗೊಂಡು ಬಿಜೆಪಿ ಶಾಸಕ ನೆಹರು ಓಲೆಕಾರ್ 22.12.2009 ರಂದು ವಿದ್ಯಾರ್ಥಿ ಮುಖಂಡರನ್ನು `ಮಾತುಕತೆಗೆ ಬನ್ನಿ' ಎಂದು ಮನೆಗೆ ಕರೆಸಿ ಅವರ ಮಗ ಮಂಜುನಾಥರೊಂದಿಗೆ ಸೇರಿ ಚೆನ್ನಾಗಿ ಥಳಿಸಿದ್ದು ಮಾತ್ರವಲ್ಲದೆ, ಹಾಸ್ಟೇಲ್ ವಾರ್ಡನ್ ಆಗಿರುವ ಮಹಿಳೆಯಿಂದ 3 ಜನ ವಿದ್ಯಾರ್ಥಿನಿಯರೂ ಸೇರಿದಂತೆ ವಿದ್ಯಾರ್ಥಿ ಮುಖಂಡರ ಮೇಲೆ `ಅಟ್ರಾಸಿಟಿ' ಕೇಸನ್ನು ಹಾಕಿಸಿರುತ್ತಾರೆ. ವಿಧಾನ ಸಭಾ ಅಧಿವೇಶನ ಆ ದಿನ ನಡೆಯುತ್ತಿದ್ದರೂ ಅದರಲ್ಲಿ ಭಾಗವಹಿಸುವುದನ್ನು ಬಿಟ್ಟು ವಿದ್ಯಾರ್ಥಿ ಮುಖಂಡರ ಮೇಲೆ ದಬ್ಬಾಳಿಕೆ ನಡೆಸಿರುತ್ತಾರೆ.

ಮಂಗಳೂರಿನ ಉಳ್ಳಾಲದಲ್ಲಿ ಮುಸ್ಲಿಂ ಯುವಕ- ಹಿಂದೂ ಯುವತಿ ಪರಸ್ಪರ ಪ್ರೀತಿಸಿದ ಘಟನೆಯಲ್ಲಿ ಸ್ಥಳೀಯ ಕೋಮುವಾದಿ ಸಂಘಟನೆ ರಾಮಸೇನೆಯೊಂದಿಗೆ ಷಾಮೀಲಾದ ಉಳ್ಳಾಲದ ಪೋಲಿಸರು, ಯುವಕ-ಯುವತಿಯರ ರಕ್ಷಣೆ ನಿಂತ ಯುವಜನ ಸಂಘಟನೆಯ ಕಾರ್ಯಕರ್ತರನ್ನು ಬಂದಿಸಿ 12 ದಿನ ಜೈಲಿನಲ್ಲಿಟ್ಟಿದ್ದರು.
ಸಾಮಾನ್ಯ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸಲು ಮುಂದಾದ ಪೋಲಿಸರಿಂದ/ಗೂಂಡಾಗಳಿಂದ ಸಿಪಿಐ(ಎಂ) ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆದಿದೆ. ಇದು ಖಂಡನೀಯ.

ಸಮರ್ಪಕ ರೇಷನ್ ವ್ಯವಸ್ಥೆ ಇಲ್ಲ : ಬಿಜೆಪಿ ತನ್ನ ಚುನಾವಣೆ ಘೋಷಣೆಯಲ್ಲಿ ಕೆ.ಜಿ.ಗೆ ರೂ.2 ರಂತೆ ಆಹಾರ ದಾನ್ಯಗಳನ್ನು ರೇಷನ್ ಮೂಲಕ ನೀಡುವುದಾಗಿ ಮತ್ತು ಆದಾಯ ಮಿತಿಯನ್ನು ರೂ.30000ಕ್ಕೆ ಹೆಚ್ಚಿಸುವುದಾಗಿ ಹೇಳಿತ್ತು. ಅಧಿಕಾರಕ್ಕೆ ಬಂದು 20 ತಿಂಗಳೂ ಕಳೆದರೂ ಈ ಕುರಿತು ಯಾವುದೇ ಮುತುವರ್ಜಿ ವಹಿಸಿಲ್ಲ. ಬೆಲೆ ಏರಿಕೆಯಿಂದ ಬಡ ಮತ್ತು ಮಧ್ಯಮ ವರ್ಗದ ಜನರು ಬಳಲುತ್ತಿದ್ದಾರೆ. ಸಿಪಿಐ(ಎಂ) ಸೇರಿದಂತೆ ಎಡ ಪಕ್ಷಗಳ ನೇತೃತ್ವದಲ್ಲಿ ನವೆಂಬರ್ 25 ರಂದು ಬೆಂಗಳೂರಿನಲ್ಲಿ ಬೆಲೆ ಏರಿಕೆ ವಿರುದ್ಧ, ರೂ.2.00 ದರಲ್ಲಿ 35 ಕೆ.ಜಿ. ಆಹಾರ ಧಾನ್ಯ ನೀಡಬೇಕೆಂದು ರ್ಯಾಲಿ ನಡೆಸಿದಾಗ ಸರ್ಕಾರದ ಪರವಾಗಿ ಅಲ್ಲಿಗೆ ಬಂದು ಮನವಿ ಸ್ವೀಕರಿಸಿದ ಸಹಕಾರ ಸಚಿವ ಲಕ್ಷಣ ಸವದಿಯವರು ನವೆಂಬರ್ 28ಕ್ಕೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದ್ದರು ಆದರೆ ಇದುವರೆಗೂ ಯಾವುದೇ ಕ್ರಮವನ್ನು ಸರ್ಕಾರ ಕೈಗೊಳ್ಳಲಿಲ್ಲ.
ಈ ಹಿನ್ನೆಲೆಯಲ್ಲಿ ಜನವರಿ 11 ರಿಂದ 13 ರವರೆಗೆ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ತಹಶೀಲ್ದಾರ ಕಛೇರಿಯ ಮುಂದೆ ಧರಣಿ ನಡೆಸಲು ಎಡಪಕ್ಷಗಳು ನಿರ್ಧರಿಸಿವೆ.

ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ಬೇಡ : 1964ರ ಗೋಹತ್ಯೆ ನಿಯಂತ್ರಣ ಕಾಯಿದೆಗೆ ತಿದ್ದುಪಡಿ ತಂದು ಗೋಹತ್ಯೆ ನಿಷೇಧಿಸಬೇಕೆಂಬ ಬಿಜೆಪಿ ಸರ್ಕಾರದ ವರ್ತನೆ ಬಡ ಜನರ ಆಹಾರದ ಹಕ್ಕಿನ ಮೇಲೆ ದೊಡ್ಡ ಹೊಡೆತ ಎಂದು ಸಿಪಿಐ(ಎಂ) ಭಾವಿಸಿದೆ. ರಾಜ್ಯದ ದಲಿತರು, ಮುಸ್ಲಿಂರು, ಕ್ರಿಶ್ಚಿಯನ್ರು ಹಾಗೂ ಇನ್ನೀತರ ಜನ ವಿಭಾಗಗಳಿಗೆ ಸೇರಿದ ಕನಿಷ್ಟ 1.5 ಕೋಟಿ ಜನರು ಕಡಿಮೆದರದ, ಪೌಷ್ಠಿಕಾಂಸವುಳ್ಳ `ಬೀಫ್' ಮಾಂಸದ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ಸಂಘಪರಿವಾರದ ಸಂಸ್ಥೆಗಳು ಬೇರೆ ಬೇರೆ ಕಾರಣ ನೀಡಿ ಖಸಾಯಿಖಾನೆಗಳನ್ನು ಬಂದ್ ಮಾಡಿಸುತ್ತಿದ್ದಾರೆ. ಇದರಿಂದ ಈ ವೃತ್ತಿಯ ಮೇಲೆ ಅವಲಂಬಿತರಾದ(ವಿಶೇಷವಾಗಿ ಮುಸ್ಲಿಂರು) ಉದ್ಯೋಗದಿಂದ, ಆದಾಯದಿಂದ ವಂಚಿತರಾಗಿದ್ದಾರೆ.

ಸಂವಿಧಾನದ ಕಲಂ 19(1)ರ ಅಡಿಯಲ್ಲಿ ಭಾರತದ ಯಾವುದೇ ಪ್ರಜೆಯ ತನಗೆ ಇಷ್ಟವಾದ ವೃತ್ತಿಯಲ್ಲಿ ತೊಡಗುವ ಸ್ವಾತಂತ್ರ್ಯ ಇದೆ. ಇದಕ್ಕೆ ಅಡ್ಡಿ ಪಡಿಸುವುದು ಸರಿಯಲ್ಲ.  ಕಳೆದ ಬಕ್ರೀದ್ ಹಬ್ಬದ ಸಂದರ್ಭದಲ್ಲಿ `ಗೋಹತ್ಯೆ' ಯನ್ನು ನೆಪ ಮಾಡಿ ಹತ್ತಾರು ಕೇಂದ್ರಗಳಲ್ಲಿ ಕೋಮು ಸಂಘರ್ಷ ನಡೆಸಲು ಪ್ರಯತ್ನಿಸಲಾಗಿದೆ.
ಬಿಜೆಪಿ ಮತ್ತು ಸಂಘ ಪರಿವಾರದ ಜನವಿರೋಧಿ ನೀತಿಯನ್ನು ಖಂಡಿಸಲು, ಜನರ ಆಹಾರದ ಹಕ್ಕನ್ನು ಉಳಿಸಲು ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಸಿಪಿಐ(ಎಂ) ನಿರ್ಧರಿಸಿದೆ.


Share: