ಭಟ್ಕಳ, ಜನವರಿ 23: ನಗರದ ಲಬ್ಬೈಕ್ ನವಾಯತ್ ಅಸೋಸಿಯೇಶನ್ ಸಂಘಟನೆ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನು ಬೀಫಾ [BIFA (Bhatkal Inter Football Association)] ತಂಡ ಗೆದ್ದುಕೊಂಡಿದೆ.
ರೋಚಕ ಅಂತಿಮಪಂದ್ಯದಲ್ಲಿ ಫಿರ್ದೌಸ್ ತಂಡವನ್ನು ಏಕಮಾತ್ರ ಗೋಲ್ ನೊಂದಿಗೆ ಮಣಿಸಿದ ಬೀಫಾ ೫೫೫೫ ರೂ ನಗದು ಬಹುಮಾನ ಹಾಗೂ ಪಾರಿತೋಷಕವನ್ನು ಪಡೆದುಕೊಂಡಿತು. ಎರಡನೆಯ ಸ್ಥಾನ ಪಡೆದ ಫಿರ್ದೌಸ್ ತಂಡ ೩,೩೩೩ ರೂ. ನಗದು ಬಹುಮಾನ ಪಡೆಯಿತು. ಬೀಫಾ ಬ್ಲೂ ತಂಡ ಮೂರನೆಯ ಸ್ಥಾನಕ್ಕೆ ಹಾಗೂ ಅತಿಥೇಯ ತಂಡ ಲಬ್ಬೈಕ್ ನವಾಯತ್ ನಾಲ್ಕನೆಯ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ಇದೇ ಪ್ರಥಮ ಬಾರಿಗೆ ಪಂದ್ಯಾವಳಿಯನ್ನು ಆಯೋಜಿಸಿರುವ ಲಬ್ಬೈಕ್ ನವಾಯತ್ ಸಂಘಟನೆ ತಾಲ್ಲೂಕಿನ ಒಟ್ಟು ಹದಿನಾರು ತಂಡಗಳನ್ನು ಆಹ್ವಾನಿಸುವಲ್ಲಿ ಯಶಸ್ವಿಯಾಗಿತ್ತು. ಅತೀವ ಕುತೂಹಲ ಕೆರಳಿಸಿದ್ದ ಪಂದ್ಯಾವಳಿಯನ್ನು ವೀಕ್ಷಿಸಲು ನೂರಾರು ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಆಗಮಿಸಿ ಕ್ರೀಡಾಪಟುಗಳನ್ನು ಹುರಿದುಂಬಿಸಿದರು. ನಗರದ ವೈಎಂಎಸ್ ಎ ಕ್ರೀಡಾಂಗಣದಲ್ಲಿ ಆಯೋಜಿತವಾಗಿದ್ದ ಪಂದ್ಯಾವಳಿಯ ಎಲ್ಲಾ ಪಂದ್ಯಗಳು ರೋಚಕವಾಗಿದ್ದರೂ ಅಂತಿಮ ಪಂದ್ಯ ಮಾತ್ರ ರೋಚಕತೆಯ ಉತ್ಕಟತೆಯನ್ನು ದಾಟಿತ್ತು.
ಫಿರ್ದೌಸ್ ತಂಡದ ಫೈಸಲ್ ಇಡಿಯ ಪಂದ್ಯಾವಳಿಯಲ್ಲಿ ಸುಮಾರು ಹತ್ತು ಗೋಲುಗಳನ್ನು ಹೊಡೆದು "ಬೆಸ್ಟ್ ಸ್ಟ್ರೈಕರ್' ಹಾಗೂ ಬೀಫಾ ತಂಡದ ಮಾಶಾಲ್ಲಾ "ಅತ್ಯುತ್ತಮ ಗೋಲ್ ಕೀಪರ್' ಪ್ರಶಸ್ತಿಗೆ ಪಾತ್ರರಾದರು.
ಅಂತಿಮ ಪಂದ್ಯದ ಬಳಿಕ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಭಟ್ಕಳ ಮುಸ್ಲಿಂ ಯುವ ಫೆಡರೇಶನ್ ಅಧ್ಯಕ್ಷರಾದ ಮೌಲಾನಾ ಅನ್ಸಾರ್ ಖತೀಬ್ ಮದನಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಿ ನೆರೆದ ಜನರನ್ನು ಉದ್ದೇಶಿಸಿ ಮಾತನಾಡಿದರು. ಅಲ್ತಾಫ್ ಖರೂರಿಯವರು ಲಬ್ಬೈಕ್ ನವಾಯತ್ ಅಸೋಸಿಯೇಶನ್ ಸಂಘಟನೆಯ ಬಗ್ಗೆ ವಿವರಗಳನ್ನು ನೀಡಿದರು. ಮೌಲಾನಾ ಅಜೀಜುರ್ರಹ್ಮಾನ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಶಮ್ಸ್ ಆಂಗ್ಲ ಮಾಧ್ಯಮದ ಪ್ರಾಂಶುಪಾಲರಾದ ಇನಾಯತುಲ್ಲಾ ಶಾಬಂದರಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಯೀಸ್ ರುಕ್ನುದ್ದೀನ್ ವಂದನಾರ್ಪಣೆ ಅರ್ಪಿಸಿದರು. ಅತೀಖುರ್ರಹ್ಮಾನ್ ರವರು ಕಾರ್ಯಕ್ರಮದ ನಿರೂಪಣೆಯ ಹೊಣೆ ಹೊತ್ತಿದ್ದರು.