ಭಟ್ಕಳ, ಫೆಬ್ರವರಿ 3: ‘ಟೋಪಿ’ ಹಾಕಿಸಿಕೊಳ್ಳುವ ವಿವಿಧ ಬಗೆಗಳನ್ನು ಮಾಧ್ಯಮಗಳು ದಿನಕ್ಕೊಂದರಂತೆ ಬಹಿರಂಗಗೊಳಿಸುತ್ತಿದ್ದರೂ ಜನಸಾಮಾನ್ಯರ ಗೋಳಾಟ ಇನ್ನೂ ನಿಂತಿಲ್ಲ. ಇದಕ್ಕೆ
ಉದಾಹರಣೆಯಾಗಿ ಹೊನ್ನಾವರದ ನಿವಾಸಿಯೋರ್ವ ಹೊರ ದೇಶದ ಪೋನ್ ಕರೆಗೆ ಮರುಳಾಗಿ ಸಾವಿರಾರು ರೂಪಾಯಿಯನ್ನು ಕಳೆದುಕೊಂಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಕಳೆದ ಜನೇವರಿ ೪ರಂದು ಹೊನ್ನಾವರದ ಕಾಸರಕೋಡಿನ ನಿವಾಸಿ ಮುಜಾಮಿಲ್ ತಂದೆ ಖಾಸೀಮ್ ಸಾಬ್ ಎಂಬುವವನಿಗೆ ಯುನೈಟೆಡ್ ಕಿಂಗ್ಡಮ್ಮಿನ ಬಿ.ಆರ್.ಮಾರ್ಟಿನ್ ಎನ್ನುವಾತ ಮೊಬೈಲ್ನಿಂದ (ಸಂಖ್ಯೆ ೯೧೬೫೪೩೯೨೦೬೫) ಮೆಸೆಜ್ವೊಂದನ್ನು ರವಾನಿಸಿ, ನೀವು ೧ ಲಕ್ಷ ಗ್ರೇಟ್ ಬ್ರಿಟನ್ ಪೌಂಡ್ಸ ಬಹುಮಾನವನ್ನು ಗೆದ್ದಿರುವುದಾಗಿ ತಿಳಿಸಿದ್ದಾನೆ. ನಂತರ ಕೆಲ ದಿನಗಳಲ್ಲಿಯೇ ಇಂಟರ್ನೆಟ್ ಸಂದೇಶವೂ ಹರಿದಾಡಿವೆ. ನಂತರ ಎರಡನೇಯ ಆರೋಪಿಯ ಪ್ರವೇಶವಾಗಿದೆ. ಆರೋಪಿ ಎಮ್. ಜಾನ್ ಎನ್ನುವಾತ ಅಲ್ಲಿಂದಲೇ ಪೋನ್ ಕರೆ ಮಾಡಿ ಬಹುಮಾನ ತೆಗೆದುಕೊಳ್ಳಲು ದೆಹಲಿಗೆ ಬರುವಂತೆಯೂ, ಇದಕ್ಕೂ ಪೂರ್ವ ಬಹುಮಾನವನ್ನು ಬಿಡಿಸಿಕೊಳ್ಳಲು ಬ್ಯಾಂಕ್ ಎಕೌಂಟ ನಂಬರ್ (ಎಸ್.ಬಿ.) ೩೦೮೯೫೭೮೪೩೯೯ಗೆ ೪೫,೦೦೦ ರೂಪಾಯಿ ಭರಣ ಮಾಡುವಂತೆಯೂ ಸಂದೇಶ ನೀಡಿದ್ದಾನೆ. ಬಹುಮಾನದ ಆಸೆಗೆ ಬಲಿ ಬಿದ್ದ ಮುಜಾಮಿಲ್ ೪೫,೦೦೦ರೂಪಾಯಿ ನೀಡಿ ದೆಹಲಿಗೆ ಪ್ರಯಾಣಿಸಲು ದಿನಗಳನ್ನು ಎಣಿಸಲಾರಂಭಿಸಿದ್ದಾನೆ. ಆದರೆ ಅದು ಅಷ್ಟಕ್ಕೇ ನಿಲ್ಲದೇ ಬಹುಮಾನ ಬೇಕೆಂದರೆ ಮತ್ತೆ ೧೫,೦೦೦ರೂಪಾಯಿ ನೀಡುವಂತೆಯೂ ಜನೇವರಿ ೨೨ ಹಾಗೂ ೨೪ರಂದು ಪೋನ್ ಕರೆ ಗೊಣಗಾಡಿದೆ. ಮುಜಾಮಿಲ್ ಸಾಹೇಬರಿಗೆ ಸಂಶಯ ಬಂದದ್ದೇ ಆಗ. ಕೂಡಲೇ ಹೊನ್ನಾವರದ ಪೊಲೀಸ್ ಠಾಣೆಗೆ ನಡೆದ ಅವರು ತಮ್ಮ ಗೋಳನ್ನು ವಿವರಿಸಿದ್ದಾರೆ. ೪೫,೦೦೦ರೂಪಾಯಿ ಪಂಗನಾಮ ಪ್ರಕರಣವಂತೂ ದಾಖಲಾಗಿದೆ. ಜನಸಾಮಾನ್ಯರು ಇಂತಹ ಕರೆ ಯಾ ಸಂದೇಶ ಬಂದಲ್ಲಿ ಮರುಳಾಗದೇ, ಕೂಡಲೇ ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಡಿವಾಯ್ಎಸ್ಪಿ ಕಚೇರಿಯ ಪ್ರಕಟಣೆ ತಿಳಿಸಿದೆ.