ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು:ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆಗೆ ಭಾರಧ್ವಜ್ ಕರೆ

ಬೆಂಗಳೂರು:ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆಗೆ ಭಾರಧ್ವಜ್ ಕರೆ

Tue, 26 Jan 2010 16:51:00  Office Staff   S.O. News Service

ಬೆಂಗಳೂರು, ಜ.26: ಮೈಸೂರು ಮತ್ತು ಭಟ್ಕಳದ ಚರ್ಚ್ ಗಳ ಮೇಲೆ ದಾಳಿ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅರವತ್ತೊಂದನೇ ಗಣರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಹೇಳಿದರು.

 

ಬೆಂಗಳೂರಿನ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕೋಮು ಸೌಹಾರ್ದತೆ ಮತ್ತು ಸಾಮರಸ್ಯವನ್ನು ಹಾಳು ಮಾಡುತ್ತಿರುವ ದುಷ್ಟಶಕ್ತಿಗಳ ದುಷ್ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ಶಕ್ತಿಗಳನ್ನು ಮಟ್ಟಹಾಕಬೇಕೆಂದು ರಾಜ್ಯಪಾಲರು ಸರಕಾರಕ್ಕೆ ಸೂಚನೆ ನೀಡಿದರು.

 

ಕೋಮ ಸೌಹಾರ್ದವನ್ನು ಹಾಳು ಮಾಡುವ ದುಷ್ಟ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕಾಗಿರುವುದು ಎಲ್ಲ ಸರಕಾರಗಳ ಸಂವಿಧಾನಬದ್ಧ ಕರ್ತವ್ಯ. ನಮ್ಮ ಸಂವಿಧಾನವು ಸರ್ವಧರ್ಮ ಸಮಭಾವದಿಂದ ಕೂಡಿದೆ. ಸಂವಿಧಾನದ ತತ್ವಗಳನ್ನು ಎಲ್ಲರೂ ಕರಾರುವಕ್ಕಾಗಿ ಪಾಲಿಸಬೇಕು ಎಂದು ಭಾರದ್ವಾಜ್ ಕರೆ ನೀಡಿದರು.

 

ಎಲ್ಲಾ ಧರ್ಮ, ಜನಾಂಗದ ಜನರು ತಮ್ಮ ಧರ್ಮಗಳನ್ನು ಅನುಸರಿಸಲು ಅವಕಾಶ ದೊರಕಬೇಕೆಂಬ ರಾಷ್ಟ್ರಪಿತರ ಮಹತ್ವಾಕಾಂಕ್ಷೆಗೆ ಧಕ್ಕೆಯಾಗಬಾರದು. ಪ್ರಜಾಪ್ರಭುತ್ವದಲ್ಲಿನ ಮೂಲಭೂತ ತತ್ವಗಳನ್ನು ಉಲ್ಲಂಘಿಸಲು ಅವಕಾಶವಿಲ್ಲ. ಇದನ್ನು ಎಲ್ಲರೂ ಪಾಲಿಸಬೇಕು ಎಂದು ರಾಜ್ಯಪಾಲರು ಒತ್ತಿ ಹೇಳಿದರು.

 

ರಾಜ್ಯದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು, ಸಿಖ್,ಜೈನ ಸರ್ವಧರ್ಮೀಯರು ಸುರಕ್ಷಿತವಾಗಿದ್ದಾರೆ. ಅವರ ಜೀವಕ್ಕೆ, ಆಸ್ತಿಪಾಸ್ತಿ, ಧರ್ಮಾಚರಣೆ ಸಂರಕ್ಷಣೆಗೆ ಕಂಕಣ ಬದ್ಧರಾಗಿದ್ದೇವೆ. ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ರಾಜ್ಯಪಾಲರು ಭರವಸೆ ನೀಡಿದರು.

 

ಚರ್ಚ್ ದಾಳಿ ವ್ಯವಸ್ಥಿತ ಪಿತೂರಿ: ಸಿಎಂ

ಬಿಜೆಪಿ ಸರಕಾರದ ವರ್ಚಸ್ಸಿಗೆ ಧಕ್ಕೆ ತರಲು ಈ ಕೃತ್ಯ ಎಸಗಲಾಗಿದೆ. ರಾಜ್ಯದಲ್ಲಿ ಆದ ಚರ್ಚ್ ಮೇಲಿನ ದಾಳಿ ವ್ಯವಸ್ಥಿತ ಪಿತೂರಿ. ತಪ್ಪಿತಸ್ಥರನ್ನು ಶೀಘ್ರದಲ್ಲೇ ಬಂಧಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.

 

ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಮಾತನಾಡುತ್ತಿದ್ದರು. ಗಣರಾಜ್ಯೋತ್ಸವದ ಹಿಂದಿನ ದಿನ ಈ ಘಟನೆ ನಡೆದಿರುವ ಹಿಂದೆ ಕೆಲವು ಸಂಘಟನೆಗಳ ಕೈವಾಡವಿದೆ. ಸರಕಾರಕ್ಕೆ ಕೆಟ್ಟ ಹೆಸರು ತರಲು ಕೆಲವು ದುಷ್ಟ ಶಕ್ತಿಗಳು ವ್ಯವಸ್ಥಿತ ಪಿತೂರಿ ನಡೆಸಿವೆ ಎಂದು ದೂರಿದರು.

 

ಚರ್ಚ್ ಮೇಲಿನ ದಾಳಿಯ ತನಿಖೆ ನಡೆಸಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

 

ಈ ಹಿಂದೆ ಚರ್ಚ್ ಮೇಲೆ ದಾಳಿ ಮಾಡಿದ ಆರೋಪಿಗಳನ್ನು ಸರಕಾರ ಬಂಧಿಸಿತ್ತು. ಈಗಲೂ ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುತ್ತದೆ. ರಾಜ್ಯ ಸರಕಾರ ಅಲ್ಪ ಸಂಖ್ಯಾತರ ರಕ್ಷಣೆಗೆ ಬದ್ಧವಾಗಿದೆ. ಅವರ ಮೇಲೆ ದಾಳಿ ನಡೆಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಯಡಿಯೂರಪ್ಪ ಪುನರುಚ್ಚರಿಸಿದರು.


Share: