ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ನವದೆಹಲಿ: ರಾಜ್ಯ ಭಿನ್ನಮತ - ನಾಯಕತ್ವ ಬದಲಾವಣೆಗೆ ಕೇಂದ್ರದ ನಿರಾಸಕ್ತಿ - ಸುಷ್ಮಾ ಸ್ವರಾಜ್ ಆಗಮನ ಸಂಭವ

ನವದೆಹಲಿ: ರಾಜ್ಯ ಭಿನ್ನಮತ - ನಾಯಕತ್ವ ಬದಲಾವಣೆಗೆ ಕೇಂದ್ರದ ನಿರಾಸಕ್ತಿ - ಸುಷ್ಮಾ ಸ್ವರಾಜ್ ಆಗಮನ ಸಂಭವ

Sun, 01 Nov 2009 02:50:00  Office Staff   S.O. News Service
ನವದೆಹಲಿ, ಅಕ್ಟೋಬರ್ ೩೧: ರಾಜ್ಯ ಬಿಜೆಪಿ ಭಿನ್ನಮತೀಯ ಮುಂದಾಳುಗಳಿಗೆ ದೆಹಲಿಯ ವರಿಷ್ಠರು ಸುಲಭವಾಗಿ ಸೊಪ್ಪು ಹಾಕುವ ಸೂಚನೆಗಳು ಕಾಣುತ್ತಿಲ್ಲ. 
ರಾಷ್ಟ್ರಮಟ್ಟದಲ್ಲಿ ಅತ್ಯುನ್ನತ ನಾಯಕತ್ವದ ವಿರುದ್ಧ ಕೂಡ ಸವಾಲುಗಳು, ಭುಗಿಲೆದ್ದಿರುವ ಆಂತರಿಕ ಸಮರಗಳ ಬೆಂಕಿ ಇನ್ನೂ ಹೊಗೆಯಾಡುತ್ತಿರುವ ಸನ್ನಿವೇಶದಲ್ಲಿ ಕರ್ನಾಟಕದ ಈ ಬಂಡಾಯ ಪಕ್ಷದ ದಿಲ್ಲಿ ನಾಯಕತ್ವಕ್ಕೆ ಬಹುವಾಗಿ ಬೇಡವಾಗಿದ್ದ ವಿದ್ಯಮಾನ. ಗಾಯದ ಮೇಲೆ ಬರೆ ಎಳೆದಂತೆ ಚುನಾವಣಾ ಸೋಲುಗಳು, ಆರೆಸ್ಸೆಸ್‌ನ ಕಟು ಟೀಕೆಯಿಂದ ಕಂಗೆಟ್ಟಿರುವ ಪಕ್ಷ ತಿಂಗಳೊಪ್ಪತ್ತಿನಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್‌ಸಿಂಗ್‌ಗೆ ಬದಲಿ ನಾಯಕತ್ವ ಹುಡುಕಬೇಕಿದೆ. ಈ ಎಲ್ಲ ಸಂಕಟ ಸಮಯದ ನಡುವಿನಲ್ಲೇ ದಕ್ಷಿಣ ಭಾರತದ ಮೊಟ್ಟಮೊದಲ ಸರ್ಕಾರವನ್ನು ಉಳಿಸಿಕೊಳ್ಳಬೇಕಿರುವ ಅಗ್ನಿಪರೀಕ್ಷೆ ಎದುರಿಸುತ್ತಿದ್ದಾರೆ ಬಿಜೆಪಿಯ ವರಿಷ್ಠರು. 
 
ಬದಲಾವಣೆ ಪರ ಇಲ್ಲ?:ಬಲ್ಲ ಮೂಲಗಳ ಪ್ರಕಾರ ವರಿಷ್ಠರ ಮನಸ್ಸು ಇನ್ನೂ ನಾಯಕತ್ವ (ಯಡಿಯೂರಪ್ಪ) ಬದಲಾವಣೆಯ ಪರವಾಗಿ ಇಲ್ಲ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ತಂದು ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ಚುನಾವಣಾ ಹೋರಾಟಗಳಿಗೆ ನೀರು ಗೊಬ್ಬರ ಎರೆದ ಯಡಿಯೂರಪ್ಪ ಅವರನ್ನು ಸುಲಭದಲ್ಲಿ ಕೈಬಿಡುವ ಇರಾದೆ ಇಲ್ಲ. 
ರೋಸಿದರೆ ಏನು ಮಾಡಲೂ ತಯಾರಿರುವ ಮುಂಗೋಪಿ ಯಡಿಯೂರಪ್ಪ ಈ ಹಿಂದೆ ಪಕ್ಷ ತೊರೆದು ದೇವೇಗೌಡರ ಜೆಡಿ‌ಎಸ್‌ನತ್ತ ಮುಖ ಮಾಡಿದ್ದರು. ಈಗಲೂ ಸಿ‌ಎಂ ಹುದ್ದೆಯಲ್ಲಿ ನಾನಿದ್ದರೆ ಸರಿ, ಇಲ್ಲವಾದರೆ ಎಲ್ಲ ಮುಳುಗಿ ಹೋಗಲಿ ಎಂಬ ಅವರ ಧೋರಣೆ ವರಿಷ್ಠರಿಗೆ ಅಪರಿಚಿತವೇನಲ್ಲ. 
 
ಉಳಿದ ಬೇಡಿಕೆಗಳತ್ತ: ನಾಯಕತ್ವ ಬದಲಾವಣೆ ಬಿಟ್ಟು ಭಿನ್ನಮತೀಯರ ಉಳಿದ ಬೇಡಿಕೆಗಳಿಗೆ ಯಡಿಯೂರಪ್ಪ ಅವರನ್ನು ಬಗ್ಗಿಸುವುದು ವರಿಷ್ಠರ ಸದ್ಯದ ಮನಸ್ಥಿತಿ. ಜೇಟ್ಲಿ ಜೊತೆಗೆ ಪಕ್ಷದ ಇತರ ವರಿಷ್ಠರ ಸಮ್ಮುಖದಲ್ಲಿ ರೆಡ್ಡಿಗಳು ಮತ್ತು ಶೆಟ್ಟರ್ ಅವರನ್ನು ತಣ್ಣಗೆ ಮಾಡುವುದೇ ಅವರನ್ನು ದಿಲ್ಲಿಗೆ ಕರೆಯಿಸಿಕೊಳ್ಳುತ್ತಿರುವ ಉದ್ದೇಶ. 
 
ತಮ್ಮ ವರ್ತನೆ- ವ್ಯವಹಾರವನ್ನು ಸುಧಾರಿಸಿಕೊಳ್ಳುವ, ಕಾಲ ಕಾಲಕ್ಕೆ ಅಸಮಾಧಾನಿತ ಮಂತ್ರಿ- ಶಾಸಕ ವರ್ಗದ ಜೊತೆ ಸೂಕ್ತ ಸಮಾಲೋಚನೆ, ಏಕಪಕ್ಷೀಯ ವರ್ಗಾವಣೆಗಳನ್ನು ಮಾಡದಿರುವ ಹಾಗೂ ಶೋಭಾ ಕರಂದ್ಲಾಜೆ ಅವರ ರೆಕ್ಕೆ ಪುಕ್ಕ ಕತ್ತರಿಸುವ ವಚನವನ್ನು ಯಡಿಯೂರಪ್ಪ ವರಿಷ್ಠರಿಗೆ ನೀಡಬೇಕಾಗಿ ಬರಬಹುದು. ಈ ನಡುವೆ ಕರ್ನಾಟಕದಲ್ಲಿ ಬಿಜೆಪಿ ಬಿಕ್ಕಟ್ಟು ಒಂದೆರಡು ದಿನಗಳಲ್ಲಿ ಪರಿಹಾರ ಆಗಲಿದೆ ಎಂಬ ವಿಶ್ವಾಸವನ್ನು ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಪ್ರಕಟಿಸಿದ್ದಾರೆ. 
 
ಸುಷ್ಮಾಗೆ ಮಣಿಯುವ ಸಾಧ್ಯತೆ ಹೆಚ್ಚು:ತಾಯಿಯನ್ನು ಕಳೆದುಕೊಂಡಿರುವ ನಮಗೆ ಸುಷ್ಮಾ ಅವರೇ ತಾಯಿ....ಎನ್ನುವ ರೆಡ್ಡಿ ಸೋದರರು ಕಟ್ಟಕಡೆಗೆ ತಮ್ಮ ‘ತಾಯಿ’ಯ ಮಾತಿಗೆ ಶರಣಾಗುವ ಸಾಧ್ಯತೆಯೇ ಹೆಚ್ಚು. ಕರ್ನಾಟಕದ ಬಿಕ್ಕಟ್ಟು ದೆಹಲಿಗೆ ವರ್ಗ ಆಗುತ್ತಿದ್ದಂತೆ ಶನಿವಾರ ಮೊದಲು ಇಲ್ಲಿಗೆ ಬಂದಿಳಿದವರು ಗೃಹಸಚಿವ ವಿ.ಎಸ್. ಆಚಾರ್ಯ ಮತ್ತು ದೆಹಲಿಯ ನಾಯಕತ್ವವನ್ನು ಹತ್ತಿರದಿಂದ ಬಲ್ಲ ಕೇಂದ್ರದ ಮಾಜಿ ಸಚಿವ ವಿ.ಧನಂಜಯಕುಮಾರ್. ಯಡಿಯೂರಪ್ಪ ಪರವಾಗಿರುವ ಇಬ್ಬರೂ ನೇರವಾಗಿ ಕಣಕ್ಕೆ ಧುಮುಕಿದ್ದು ವರಿಷ್ಠರ ಭೇಟಿಗಳಲ್ಲಿ ತೊಡಗಿದರು. ಆದರೆ ಮುಖ್ಯಮಂತ್ರಿಯೇ ಆಗಬೇಕು ಎಂದು ಪಟ್ಟು ಹಿಡಿದಿರುವ ರಾಜ್ಯ ವಿಧಾನಸಭಾಧ್ಯಕ್ಷ ಜಗದೀಶ ಶೆಟ್ಟರ್ ರಾತ್ರಿ ಮತ್ತು ರೆಡ್ಡಿ ಸೋದರರ ಆಗಮನ ಭಾನುವಾರ ಮುಂಜಾನೆ. 

ಜೀವನ ಸವಾಲುಗಳ ಸರಮಾಲೆ. ಅಗ್ನಿ ಪರೀಕ್ಷೆಯಿಂದ ಹೊರಬಂದಿದ್ದೇವೆ. ದೇವರ ದಯೆ, ಜನತೆಯ ಆಶೀರ್ವಾದ ಹಾಗೂ ಹೈಕಮಾಂಡ್ ಸಹಕಾರ ಎಲ್ಲಿಯವರೆಗೆ ಇರುತ್ತೋ ಅಲ್ಲಿಯವರೆಗೆ ಯಾರು ಯಾರನ್ನೂ ಅಲುಗಾಡಿಸಲು ಸಾಧ್ಯವಿಲ್ಲ. ಹತ್ತು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತೇನೆ. -ಬಿ.ಎಸ್.ಯಡಿಯೂರಪ್ಪ 

ಶನಿವಾರ ಬೆಂಗಳೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಿ‌ಎಂ ಯಡಿಯೂರಪ್ಪ ಭಿನ್ನಮತೀಯರನ್ನು ಕುಟುಕಿದ ಪರಿ ಇದು. 

-ಚಾಣಕ್ಯ ತಂತ್ರ ನಮಗೂ ಗೊತ್ತಿದೆ. ಯಾರೂ ಕಲಿಸಿಕೊಡುವ ಅಗತ್ಯವಿಲ್ಲ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಯಾರು ಏನು ಮಾಡುತ್ತಿದ್ದಾರೆ ಎಂಬುದನ್ನು ನೋಡುತ್ತಿದ್ದಾರೆ. ಕಲುಷಿತ ರಾಜಕೀಯ ವಾತಾವರಣವನ್ನು ಶುದ್ಧ ಮಾಡಬೇಕಿದೆ. 

-ಆರಂಭದಲ್ಲಿ ಅನುಭವದ ಕೊರತೆಯಿತ್ತು. ಈಗ ಅನುಭವ ಬಂದಿದೆ. ಜನ ಮೆಚ್ಚುವಂಥ ಆಡಳಿತ ನೀಡಿದ್ದೇವೆ. ಯಾವುದೇ ಹೊಸ ತೆರಿಗೆ ಹಾಕಿಲ್ಲ. ನಾನೇನು ತಪ್ಪು ಮಾಡಿದ್ದೇನೆ? ಒಳ್ಳೆಯ ಕೆಲಸ ಮಾಡುವುದು ತಪ್ಪಾ ಅಂತ ಜನರ ಮುಂದೆ ಹೋಗ್ತೀನಿ. 

-ಕಳೆದ ಒಂದು ವಾರದಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಆದರೂ ಅಭಿವೃದ್ಧಿಯನ್ನು ಮರೆತಿಲ್ಲ. ಪ್ರತಿಕ್ಷಣವೂ ಅಭಿವೃದ್ಧಿ ಕೆಲಸಗಳ ಬಗ್ಗೆ ಗಮನಹರಿಸುತ್ತಿದ್ದೇವೆ. ಇನ್ನೂ ಹತ್ತು ಪಟ್ಟು ಹೆಚ್ಚು ಕೆಲಸ ಮಾಡುತ್ತೇವೆ. 

ಕರುಣಾಕರರೆಡ್ಡಿ, ಜನಾರ್ದನರೆಡ್ಡಿ, ಶ್ರೀರಾಮುಲು ನಮ್ಮ ಸಂಪುಟದ ಹಿರಿಯ ಸಹೋದ್ಯೋಗಿಗಳು. ಈಗಲೂ ನನಗೆ ಭೇದ ಭಾವವಿಲ್ಲ. ಆವೇಶದಿಂದ ಏನಾದರೂ ಮಾಡುತ್ತಿರಬಹುದು. ಅವರು ಜನರಿಗಾಗಿ ತಮ್ಮ ಆಲೋಚನೆ ಬದಲಾಯಿಸಿಕೊಂಡು ಕೈಜೋಡಿಸಬೇಕು.
ಸೌಜನ್ಯ: ಕನ್ನಡಪ್ರಭ


Share: